ಸಿಕ್ಕಾಪಟ್ಟೆ ಚಹಾದ ಚಟಕ್ಕೆ ಬಿದ್ದಿದ್ದೀರಾ? ಚಹಾದ ಒಂದು ಲೋಟ ಕೈಯಲ್ಲಿ ಹಿಡಿಯದಿದ್ದರೆ ಕಚೇರಿಯಲ್ಲಿ ಕೆಲಸ ಮುಂದೆ ಸಾಗುವುದಿಲ್ಲವೇ? ಚಹಾವಿಲ್ಲದಿದ್ದರೆ ಬೆಳಗು ಬೆಳಗಿನಂತೆಯೇ ಅನಿಸುವುದಿಲ್ಲವೇ? ಎದ್ದ ಕೂಡಲೇ ಉತ್ಸಾಹ ಬರಲು ಕೈಗೊಂದು ಕಪ್ ಸಹಾ ಸಿಗದಿದ್ದರೆ ಎದ್ದದ್ದೇ ವೇಸ್ಟ್ ಎಂಬ ಭಾವನೆ ಬರುತ್ತಿದೆಯಾ? ಅಥವಾ ಹಿತವಾದ ಚಳಿಯಲ್ಲಿ ಚಹಾವಿಲ್ಲದಿದ್ದರೆ ಈ ಬದುಕೂ ಒಂದು ಬದುಕಾ ಎಂದು ಎಂದು ಡೈಲಾಗ್ ಹೊಡೆಯುತ್ತೀರಾ? ಆದರೆ, ಇಷ್ಟೆಲ್ಲ ಚಹಾ ಕುಡಿಯುವುದು ಒಳ್ಳೆಯದಲ್ಲ ಎಂಬುದು ಗೊತ್ತಿದ್ದೂ ಬಿಡಲು ಕಷ್ಟವಾಗುತ್ತಿದೆಯಾ? ಹಾಗಾದರೆ ನೀವು ನಿಜವಾಗಿಯೂ ಚಹಾ ಕಡಿಮೆ ಕುಡಿಯಬೇಕೆಂದು ಅಂದುಕೊಂಡು ಚಹಾಕ್ಕೆ ಪರ್ಯಾಯ ಹುಡುಕುತ್ತಿದ್ದೀರೆಂದಾದಲ್ಲಿ, ಕೆಫಿನ್ ಇಲ್ಲದ ಕೆಲವು ಚಹಾಗಳನ್ನು ನೀವು ಪರ್ಯಾಯವಾಗಿ ಕುಡಿಯಬಹುದು. ಆರೋಗ್ಯಕ್ಕೂ ಒಳ್ಳೆಯದನ್ನೇ ಬಯಸುವ ಈ ಚಹಾಗಳು ಯಾವುವು ಎಂಬುದನ್ನು ನೋಡೋಣ.
೧. ನಿಂಬೆಹುಲ್ಲಿನ ಚಹಾ: ಲೆಮೆನ್‌ಗ್ರಾಸ್ ಅಥವಾ ನಿಂಬೆಹುಲ್ಲು ನಿಂಬೆಯ ಪರಿಮಳದ ಒಂದು ಬಗೆಯ ಹುಲ್ಲು. ಮನೆಯಲ್ಲೂ ಸುಲಭವಾಗಿ ಬೆಳೆಯಬಹುದಾದ ಗಿಡ ಇದಾಗಿದ್ದು, ಇದನ್ನು ನೀರಿಗೆ ಹಾಕಿ ಕುದಿಸಿ ಮಾಡಿದ ಚಹಾ ಅದ್ಭುತ ಪರಿಮಳವೂ ಹೌದು. ಈ ಹುಲ್ಲನ್ನು ಬಳಸಿ ಮಾಡಿದ ಚಹಾ ಅದ್ಭುತ ಸ್ವಾದದ ಜೊತೆಗೆ, ಶೀತ, ನೆಗಡಿಯಂತಹ ತೊಂದರೆಗಳನ್ನೂ ದೂರ ಓಡಿಸುತ್ತದೆ. ಜೀರ್ಣಕ್ರಿಯೆಗೆ, ಒಂದು ಮನಶಾಂತಿಯ ಅನುಭವ ನೀಡಲು ಈ ಚಹಾ ಅತ್ಯುತ್ತಮ.
೨. ಚಾಮೋಮೈಲ್ ಚಹಾ: ಮುದ್ದಾದ ಹಳದಿ ಕುಸುಮದ ಪುಟಾಣಿ ಬಿಳಿ ಹೂಗಳಾದ ಚಾಮೊಮೈಲ್ ಬಳಸಿ ಮಾಡಿದ ಚಹಾ ಕೂಡಾ ಇನ್ನೊಂದು ಅದ್ಭುತ. ಉತ್ತಮ ನಿದ್ದೆ ಬರಲು ನಿದ್ದೆಗೆ ಹೋಗುವ ಮುನ್ನ ಇದನ್ನು ಕುಡಿಯಬಹುದು. ಒತ್ತಡ ನಿವಾರಣೆಗೆ ಈ ಚಹಾವನ್ನು ಕುಡಿಯಬಹುದು.
೩. ಶುಂಠಿ ಚಹಾ: ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಮಾಡುವ ಸಾಮಾನ್ಯ ಚಹಾವಿದು. ಶೀತ, ನೆಗಡಿ, ಕೆಮ್ಮು, ಗಂಟಲು ನೋವಿನಂಥಾ ಸಮಸ್ಯೆ ಬಂದಾಗ ಶುಂಠಿ ಲ್ಲರ ಮನೆಗಳಲ್ಲೂ ಚಹಾ ಪ್ರತ್ಯಕ್ಷ. ಕೆಲವು ಶುಂಠಿಯ ತುಣುಕುಗಳನ್ನು ನೀರಿಗೆ ಹಾಕಿ ಕುದಿಸಿ ಮಾಡಿದ ಈ ಚಹಾ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಹಿಳೆಯರಿಗೆ ಋತುಚಕ್ರ ಸಂಬಂಧೀ ನೋವುಗಳನ್ನೂ ಶಮನ ಮಾಡುವ ತಾಕತ್ತು ಇದರಲ್ಲಿದೆ. ಇದಕ್ಕೆ ನಿಂಬೆಹಣ್ಣು, ಜೇನುತುಪ್ಪ ಸೇರಿಸಿಯೂ ನಿಂಬೆ ಚಹಾ ಮಾಡಿ ಕುಡಿಯಬಹುದು.
೪. ಗುಲಾಬಿ ಚಹಾ: ಚಂದನೆಯ ಪನ್ನೀರು ಗುಲಾಬಿ ನಿಮ್ಮನೆಯ ಅಂಗಳದಲ್ಲಿ ಅರಳಿ ನಂತಿದೆಯೇ? ಹೂ ತಂದಿದ್ದು ಫ್ರಿಡ್ಜ್‌ನಲ್ಲಿ ಹಾಗೆಯೇ ಕುಳಿತಿದೆಯೇ? ಹಾಗಿದ್ದರೆ ಅದನ್ನು ಚಹಾ ಕೂಡಾ ಮಾಡಬಹುದು. ಒಂದಿಷ್ಟು ಗುಲಾಬಿಯ ಪಕಳೆಗಳನ್ನು ಆರಿಸಿ ಒಣಗಿಸಿಟ್ಟರೆ ಬೇಕಾದಾಗ ಚಾಃ ಮಾಡಿ ಕುಡಿಯುವ ಸ್ವಾತಂತ್ರ್ಯ ನಿಮಗಿದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಶೀತ ನೆಗಡಿಯಿದ್ದರೂಈ ಚಹಾ ರಿಲ್ಯಾಕ್ಸ್ ಮಾಡಿಸಬಹುದು.
ಇದನ್ನೂ ಓದಿ | Shankhapushpi Tea | ಬಹೂಪಯೋಗಿ ಶಂಖಪುಷ್ಪ ಹೂವಿನ ಚಹಾ
೫. ಪುದಿನ ಚಹಾ: ಮನೆಯ ಪುಟ್ಟದೊಂದು ಬಾಲ್ಕನಿಯ ಪುಟಾಣಿ ಹೂಕುಂಡದಲ್ಲಿ ಬೆಳೆಸಿದ ಪುದಿನ ಗಿಡದಿಂದ ನಾಲ್ಕೇ ನಾಲ್ಕು ಎಲೆ ಚಿವುಟಿ ಬಂದು ಬಿಸಿ ನೀರು ಒಲೆಯ ಮೇಲಿಟ್ಟು ಈ ಪುದಿನ ಎಲೆಗಳನ್ನು ಅದಕ್ಕೆ ಹಾಕಿ ಕುದಿಸಿ ಚಹಾ ಮಾಡಿ ಹಬೆಯಾಡುವ ಆ ಚಹಾವನ್ನು ಬಾಯಿಗಿಟ್ಟರೆ ಸಿಗುವ ಸ್ವರ್ಗ ಸುಖವೇ ಬೇರೆ. ಇದು ಹೊಟ್ಟೆಯನ್ನು ನಿರಾಳ ಮಾಡಿ ಮಾನಸಿಕ ಒತ್ತಡವನ್ನೂ ತೊಡೆದು ಹಾಕುತ್ತದೆ.
ಸುಲಭವಾಗಿ ಮಾಡಬಹುದುದಾದ ಕೆಫಿನ್‌ಮುಕ್ತವಾದ ಈ ಚಹಾಗಳು ದೇಹಾರೋಗ್ಯಕ್ಕೂ ಒಳ್ಳೆಯದು. ಆಗಾಗ ಚಹಾ ಬೇಕೆನ್ನುವ ಮನಸ್ಸಿಗೆ ಇಂತಹ ಚಹಾಗಳು ದೊರೆತರೆ ಚಿಂತೆಯೇ ಇಲ್ಲ. ಯಾವುದೇ ಚಹಾವೂ ಮಿತಿಗಿಂತ ಅತಿಯಾದರೆ ಕೆಟ್ಟದ್ದೇ. ಇದನ್ನರಿತು ಮುನ್ನಡೆಯುವುದು ಆರೋಗ್ಯಕ್ಕೂ ಹಿತ.
ಇದನ್ನೂ ಓದಿ | Hair care | ಕಾಫಿ, ಚಹಾ, ಕೋಲಾಗಳಿಗೆ ಗುಡ್ ಬೈ ಹೇಳಿ: ಇಲ್ಲಿವೆ ಬೊಕ್ಕತಲೆಗೆ ಐದು ಸೂಪರ್‌ಫುಡ್!