Site icon Vistara News

Health Tips For Monsoon: ಮಳೆಗಾಲದಲ್ಲಿ ಕಾಡುವ ಶೀತ-ಜ್ವರವನ್ನು ದೂರ ಇರಿಸುವುದು ಹೇಗೆ?

Monsoon Health Tips

How to keep cold and fever away during monsoon season?

ಮಳೆಗಾಲದಲ್ಲಿ ಹವಾಮಾನ ಬದಲಾಗುವುದು ಹೊರಗೆ ಮಾತ್ರವಲ್ಲ. ದೇಹದ ಒಳಗೂ ಹೌದಲ್ಲ. ಇದ್ದಕ್ಕಿದ್ದಂತೆ ವಾತಾವರಣದಲ್ಲಿ ಹೆಚ್ಚುವ ಶೀತ, ಥಂಡಿ ಒಂದೆಡೆಯಾದರೆ ಮಳೆಯಲ್ಲಿ ನೆನೆಯಬೇಕೆಂಬ ಬಯಕೆ, ಅನಿವಾರ್ಯತೆ ಇನ್ನೊಂದೆಡೆ. ಮಾತ್ರವಲ್ಲದೆ, ಗಾಳಿಯಲ್ಲಿ ಹರಡುವ ಸೋಂಕುಗಳ ಅಬ್ಬರ. ಈ ಎಲ್ಲದರ ಪರಿಣಾಮವೆಂದರೆ ಆಗಾಗ ಕಾಡುವ ನೆಗಡಿ-ಜ್ವರ. ಮಳೆಗಾಲದಲ್ಲಿ ಕಾಡುವ ನೆಗಡಿ-ಜ್ವರದ ಬಾಧೆಯಿಂದ ಮತ್ತು ಗಾಳಿಯ ಮೂಲಕ ದಾಳಿಯಿಡುವ ಸೋಂಕುಗಳನ್ನು (Health tips for monsoon) ದೂರ ಅಟ್ಟುವುದು ಹೇಗೆ?

ನಿದ್ದೆ: ಇದೆಂಥಾ ಮದ್ದು ಎಂದು ಹುಬ್ಬೇರಿಸಬೇಡಿ. ದಿನಕ್ಕೆ ಎಂಟು ತಾಸು ಕಣ್ತುಂಬಾ ನಿದ್ರೆ ಮಾಡಿದರೆ ದೇಹದ ರೋಗ ನಿರೋಧಕ ಶಕ್ತಿ ಚೆನ್ನಾಗಿರುತ್ತದೆ. ದೀರ್ಘಕಾಲ ನಿದ್ದೆಯಲ್ಲಿರುವಾಗ ತನಗಾದ ಹಾನಿಯನ್ನು ದುರಸ್ತಿ ಮಾಡಿಕೊಳ್ಳುವ ಕೆಲಸವನ್ನು ದೇಹ ಕೈಗೊಳ್ಳುತ್ತದೆ. ಜೊತೆಗೆ, ನಿದ್ದೆಯಲ್ಲಿ ಬಿಡುಗಡೆಯಾಗುವ ಸೈಟೋಕಿನ್‌ಗಳು ದೇಹಕ್ಕೆ ಅವಶ್ಯಕ. ದೇಹದ ಪ್ರತಿರೋಧಕ ಶಕ್ತಿಯನ್ನು ಬಲಗೊಳಿಸುವ ಪ್ರೊಟೀನ್‌ಗಳಿವು.

ವ್ಯಾಯಾಮ: ದೇವರ ತಲೆಯ ಮೇಲೆ ಹೂವಿಡುವಷ್ಟೇ ನಿಯತ್ತಿಂದ ವ್ಯಾಯಾಮ ಮಾಡಿ, ತಪ್ಪಿಸಬೇಡಿ. ಅದಕ್ಕೆಂದು ಜಿಮ್‌ ಸೇರಿಕೊಂಡು ಮೂಟೆಗಟ್ಟಲೆ ಭಾರವನ್ನು ಎತ್ತಬೇಕೆಂದಿಲ್ಲ. ಸರಳ ನಡಿಗೆಯೂ ಆದೀತು. ವಾರದಲ್ಲಿ ಐದು ದಿನ ಮತ್ತು ದಿನಕ್ಕೆ ೩೦ ನಿಮಿಷ ವಾಕಿಂಗ್‌ ಮಾಡಿದರೂ ಸಹ ಆರೋಗ್ಯ ವೃದ್ಧಿಸುತ್ತದೆ. ಮಳೆಗಾಲದ ಜಡ ವಾತಾವರಣದಲ್ಲಿ ತಿಂದಿದ್ದೂ ಪಚನವಾಗುತ್ತದೆ.

ವಿಟಮಿನ್‌ ಡಿ: ಮಳೆಗಾಲದ ಮೋಡ ಮುಸುಕಿದ ವಾತಾವರಣದ ಕಾರಣದಿಂದ ಬಿಸಿಲು ಕಡಿಮೆ. ಆದರೆ ಎಂದಾದರೂ ಬಿಸಿಲಿದ್ದಾಗ ಕೊಂಚ ಮೈಯೊಡ್ಡಿಕೊಳ್ಳಿ. ಇದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್‌ ಡಿ ದೊರೆಯುತ್ತದೆ. ಮನಸ್ಸಿನ ಮಬ್ಬು ಕಳೆದು ಚೈತನ್ಯ ಆವರಿಸುತ್ತದೆ. ವಿಟಮಿನ್‌ ಡಿ ಕೊರತೆಯಿಂದಲೂ ದೇಹದ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳಬಹುದು. ಹಾಗಾಗಿ ಚೀಸ್‌, ಕೊಬ್ಬು ಹೆಚ್ಚಿರುವ ಮೀನುಗಳು, ಮೊಟ್ಟೆಯ ಹಳದಿ ಭಾಗಗಳಿಂದಲೂ ದೊರೆಯುವ ಡಿ ಜೀವಸತ್ವವನ್ನು ದೇಹಕ್ಕೆ ಒದಗಿಸಿ.

ಅರಿಶಿನದ ಕಷಾಯ: ಪ್ರಬಲವಾದ ಉತ್ಕರ್ಷಣ ನಿರೋಧಕಗಳಿಂದ ಕೂಡಿದ ಅರಿಶಿನವನ್ನು ಹಾಲಿಗೆ ಹಾಕಿಕೊಂಡು ಅಥವಾ ಕಷಾಯದೊಂದಿಗೆ ಸೇವಿಸುವುದು ಒಳ್ಳೆಯದು. ಕರಿಮೆಣಸಿನ ಪುಡಿಯೂ ಇದರೊಂದಿಗೆ ಹಿತ. ಮಾಮೂಲಿ ಚಹಾದ ಬದಲು ಯಾವುದೇ ರೀತಿಯ ಗ್ರೀನ್‌ ಟೀಯನ್ನೂ ಈ ದಿನಗಳಲ್ಲಿ ಬಳಸುವುದು ಹಿತವಾಗುತ್ತದೆ.

ಆಹಾರ: ಆದಷ್ಟೂ ಮನೆಯೂಟವೇ ಇರಲಿ. ಹೊತ್ತಿಂದ ಹೊತ್ತಿಗೆ ಬಿಸಿಯಾಗಿ, ಶುಚಿಯಾಗಿ ಆಹಾರ ಸೇವಿಸುವುದರಿಂದ ಅರ್ಧಕ್ಕರ್ಧ ಆರೋಗ್ಯ ಸಮಸ್ಯೆಗಳು ಬಳಿಗೆ ಸುಳಿಯುವುದಿಲ್ಲ. ಹೊರಗಿನ ಆಹಾರದಲ್ಲಿ ಶುಚಿತ್ವದ ಸಮಸ್ಯೆಯಿದ್ದರೆ ಸೋಂಕುಗಳಿ ಬೆನ್ನು ಬೀಳುತ್ತವೆ. ಸಾಕಷ್ಟು ಪ್ರಮಾಣದಲ್ಲಿ ಬೆಚ್ಚಗಿನ ನೀರು ಕುಡಿಯಿರಿ. ಆದರೆ ಸಿಕ್ಕಾಪಟ್ಟೆ ಬಿಸಿನೀರು ಕುಡಿದು ಗಂಟಲು ಸುಟ್ಟುಕೊಳ್ಳುವ ಅಗತ್ಯವಿಲ್ಲ. ಆಹಾರದಲ್ಲಿ ವಿಟಮಿನ್‌ ಸಿ ಹೆಚ್ಚಿಸಿಕೊಳ್ಳುವುದು ಸಹ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಇನ್ನೊಂದು ವಿಧಾನ.

ಬೆಚ್ಚಗಿರಿ: ಮಳೆಯಲ್ಲಿ ನೆನೆದರೆ ಮೊದಲು ತಣ್ಣಗಿನ ವಸ್ತ್ರಗಳನ್ನು ತೆಗೆದಿರಿಸಿ, ಬೆಚ್ಚಗಿನ ವಸ್ತ್ರಗಳನ್ನು ಧರಿಸಿ. ಬಿಸಿಯಾಗಿ ಕಾಫಿ, ಕಷಾಯ ಅಥವಾ ಗ್ರೀನ್‌ ಟೀ ಕುಡಿಯುವುದು ಲಾಭದಾಯಕ. ಗ್ರೀನ್‌ ಟೀ ಜೊತೆಗೆ ನಾಲ್ಕಾರು ಹನಿ ನಿಂಬೆರಸ ಬೆರೆಸಿಕೊಂಡರೆ ವಿಟಮಿನ್‌ ಸಿ ಸಹ ದೇಹಕ್ಕೆ ದೊರೆಯುತ್ತದೆ. ಕೈಕಾಲುಗಳನ್ನು ಶುಚಿಯಾಗಿ ಇರಿಸಿಕೊಳ್ಳಿ. ಮಳೆಗಾಲದ ದಿನಗಳಲ್ಲಿ ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳುವುದು ಮಹತ್ವದ್ದೆನಿಸುತ್ತದೆ.

ದೂರವಿರಿ: ಯಾರಿಗಾದರೂ ನೆಗಡಿ, ಜ್ವರದಂಥ ಲಕ್ಷಣಗಳಿದ್ದರೆ ಅವರಿಂದ ದೂರವಿರಿ. ಮಕ್ಕಳನ್ನೂ ಅಂಥವರ ಸಮೀಪ ಬಿಡಬೇಡಿ. ಒಂದೊಮ್ಮೆ ಗೊತ್ತಿಲ್ಲದೆಯೇ ಸೋಂಕಿತರೊಂದಿಗೆ ಹತ್ತಿರದಲ್ಲಿದ್ದಿರಿ ಎಂದಾದರೆ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಕಣ್ಣು, ಮೂಗು, ಬಾಯಿಗಳನ್ನು ಮುಟ್ಟಿಕೊಳ್ಳಬೇಡಿ. ಹೊರಗಿನಿಂದ ಮನೆಯೊಳಗೆ ಬರುತ್ತಿದ್ದಂತೆ ಕೈಕಾಲುಗಳನ್ನು ಮೊದಲು ಶುಚಿ ಮಾಡಿಕೊಳ್ಳಿ.

ಇದನ್ನೂ ಓದಿ: Monsoon Travel: ಮಳೆ ಇಷ್ಟಪಡುವ ಮಂದಿ ಮಳೆಗಾಲದಲ್ಲಿ ಈ ಬೆಟ್ಟದೂರುಗಳಿಗೆ ಹೋಗಬೇಕು!

ಇಷ್ಟಾಗಿಯೂ ನೆಗಡಿ, ಗಂಟಲುರಿ, ತಲೆಭಾರ ಮುಂತಾದ ಫ್ಲೂ ಲಕ್ಷಣಗಳು ಕಾಣಿಸಿಕೊಂಡರೆ- ನಿಮ್ಮನ್ನು ಉಳಿದವರಿಂದ ಬೇರ್ಪಡಿಸಿಕೊಳ್ಳಿ. (Health tips for monsoon) ಕೆಮ್ಮುವಾಗ, ಸೀನುವಾಗ ಮೂಗು-ಬಾಯಿ ಮುಚ್ಚಿಕೊಳ್ಳುವುದು ಅಗತ್ಯ. ಅರಿಶಿನದ ಕಷಾಯ ಅಥವಾ ಶುಂಠಿ ಕಷಾಯಗಳು ನೆರವಾಗಬಹುದು. ಬಿಸಿ ಆವಿ ತೆಗೆದುಕೊಳ್ಳುವುದು ಗಂಟಲುರಿ ಮತ್ತು ಕಟ್ಟಿದ ಮೂಗಿನ ಪರಿಣಾಮಕಾರಿಯಾಗ ಉಪಶಮನ ನೀಡುತ್ತದೆ. ಕೆಮ್ಮು ಹೆಚ್ಚಾದರೆ ಜೇನುತುಪ್ಪದಲ್ಲಿ ಅತಿಮಧುರ ಅಥವಾ ಜೇಷ್ಠಮಧುವಿನ ಪುಡಿಯನ್ನು ತೆಗೆದುಕೊಳ್ಳುವುದು ಅನುಕೂಲ ಎನಿಸಬಹುದು. ಅಡುಗೆಯಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ-ಬೆಳ್ಳಿಳ್ಳಿ ಬಳಸುವುದೂ ಲಾಭದಾಯಕ. ಆಹಾರವನ್ನು ಬಿಸಿಯಿರುವಾಗಲೇ ಸೇವಿಸಿ. ಸಾಕಷ್ಟು ದ್ರಾವಾಹಾರವನ್ನು ಸೇವಿಸಿ, ಮಿಶ್ರಾಂತಿ ಪಡೆಯಿರಿ. ಒಂದೆರಡು ದಿನಗಳಲ್ಲಿ ಜ್ವರ ಮತ್ತಿತರ ಲಕ್ಷಣಗಳು ನಿಯಂತ್ರಣಕ್ಕೆ ಬಾರದಿದ್ದರೆ ವೈದ್ಯರ ಸಲಹೆ ಪಡೆಯಿರಿ.

Exit mobile version