ಹೋಳಿ (Holi 2024) ಹಬ್ಬದಂದು ಬಣ್ಣಗಳಲ್ಲಿ ಮಿಂದೇಳುವ ಬಯಕೆಯನ್ನು ಹತ್ತಿಕ್ಕುವುದು ಕಷ್ಟ. ವರ್ಷಕ್ಕೊಮ್ಮೆ ಬರುವ ರಂಗಿನಾಟ ನೀಡುವ ಖುಷಿಯೇ ಅಂಥದ್ದು. ಹಾಗೆಂದು ಬಣ್ಣಗಳಲ್ಲಿ ತೋಯ್ದ ಮೇಲೆ, ಆ ಬಣ್ಣಗಳಿಂದ ತ್ವಚೆ, ಕೂದಲುಗಳಿಗೆ ಆಗುವ ಹಾನಿಯನ್ನು ಸರಿ ಮಾಡಿಕೊಳ್ಳುವುದು ಇನ್ನೂ ಕಷ್ಟ. ಕೂದಲುಗಳಿಂದ ಬಣ್ಣ ತೆಗೆಯುವುದು, ತಲೆಯ ಚರ್ಮ ಒಣಗಿದಂತಾಗುವುದು, ಹೊಟ್ಟಾಗುವುದು, ತುರಿಕೆಯಂಥ ಕಿರಿಕಿರಿಗಳೇ ಮುಗಿಯುವುದಿಲ್ಲ.
ಇವುಗಳನ್ನೆಲ್ಲ ನಿವಾರಿಸುವುದಾಗಿ ಭರವಸೆ ನೀಡುವಂಥ ಹಲವಾರು ಉತ್ಪನ್ನಗಳು ಮಾರುಕಟ್ಟೆಯಲ್ಲಿ ದೊರೆಯಬಹುದು. ಆದರೆ ಇಂಥ ಎಷ್ಟೋ ಉತ್ಪನ್ನಗಳಲ್ಲಿರುವ ರಾಸಾಯನಿಕಗಳು ಕೂದಲಿಗೆ ಆರೈಕೆ ಮಾಡುವ ಬದಲು ಹಾನಿ ಮಾಡುವ ಸಂದರ್ಭಗಳೇ ಹೆಚ್ಚು. ಹಾಗಾದರೆ ರಂಗಿನಾಟ ಬೇಡ ಎನ್ನುವುದೇ? ಅಗತ್ಯವಿಲ್ಲ! ಹಬ್ಬಕ್ಕೆ ಪೂರ್ವದಲ್ಲೇ ಕೆಲವು ಸಿದ್ಧತೆಗಳನ್ನು ಮಾಡಿಕೊಳ್ಳುವುದು ಅಗತ್ಯ. ಬಣ್ಣದಾಟದ ನಂತರ ಇನ್ನಷ್ಟು ಆರೈಕೆ ಮಾಡಿದರೆ, ಕೂದಲಿಗೆ ಹಾನಿಯಾಗಿ ಉದುರದಂತೆ ಕಾಪಾಡಿಕೊಳ್ಳಬಹುದು. ಹೋಳಿಯಲ್ಲಿ ರಂಗಿನಾಟ ಆಡಿದಾಗ ಕೂದಲಿಗೆ ಹಾನಿಯಾಗದಂತೆ (Hair care tips for Holi) ಏನು ಮಾಡಬೇಕು?
ಪೂರ್ವ ತಯಾರಿ
ಹಬ್ಬಕ್ಕೆ ಒಂದು ವಾರ ಮೊದಲಿನಿಂದಲೇ ಕೂದಲಿಗೆ ಆರೈಕೆ ಬೇಕು. ಮೊದಲಿನಿಂದಲೂ ಹೋಳಿ ಆಡುವಾಗ ದೇಹಕ್ಕೆಲ್ಲಾ ಚೆನ್ನಾಗಿ ಎಣ್ಣೆ ಲೇಪಿಸಿದ್ದರೆ ಬಣ್ಣ ಅಷ್ಟಾಗಿ ಅಂಟುವುದಿಲ್ಲ; ಒಂದೊಮ್ಮೆ ಅಂಟಿದರೂ ತೊಳೆಯುವುದು ಸುಲಭ ಎಂಬ ಮಾತಿದೆ. ಇದು ನಿಜಕ್ಕೂ ಹೌದು. ಕೂದಲಿಗೆ ಪ್ರತಿ ದಿನ ತಪ್ಪದಂತೆ ಕೊಬ್ಬರಿ ಎಣ್ಣೆ ಲೇಪಿಸಿ. ಸಾಧ್ಯವಾದರೆ ಬುಡಕ್ಕೆಲ್ಲ ಭೃಂಗರಾಜದ ತೈಲ ಲೇಪಿಸಿದರೆ ಇನ್ನೂ ಒಳ್ಳೆಯದು. ಒರಟಾಗಿ ನೆತ್ತಿಯನ್ನಷ್ಟೇ ಉಜ್ಜದೆ, ನವಿರಾಗಿ ತಲೆಯಿಡೀ ಮಸಾಜ್ ಮಾಡಿ. ಇಡೀ ತಲೆಯೂ ಭೃಂಗರಾಜದ ಸದ್ಗುಣಗಳಲ್ಲಿ ನೆನೆಯಲಿ. ಇದರಿಂದ ಬಣ್ಣ ಮತ್ತು ತಲೆಯ ಚರ್ಮದ ನಡುವೆ ರಕ್ಷಾ ಕವಚವೊಂದು ರೂಪುಗೊಳ್ಳುತ್ತದೆ. ಈ ರೀತಿಯಲ್ಲಿ ತಲೆಯ ಚರ್ಮಕ್ಕೆ ಹಾನಿಯಾಗುವುದನ್ನು ತಪ್ಪಿಸಬಹುದು. ಜೊತೆಗೆ ಕೂದಲಿನ ಬುಡವನ್ನೂ ಬಲಗೊಳಿಸಬಹುದು.
ರಂಗಿನಾಟದ ನಂತರ
ಬಣ್ಣವನ್ನು ದೀರ್ಘ ಕಾಲ ಕೂದಲಿನಲ್ಲಿ ಒಣಗಲು ಬಿಡಬೇಡಿ. ಇದರಿಂದ ರಂಗು ತೊಳೆಯುವಾಗ ಉಜ್ಜಬೇಕಾಗಬಹುದು. ಕೂದಲಿಗೆ ಹಾನಿ ಇಲ್ಲಿಂದಲೂ ಆಗಬಹುದು. ತಲೆ ಸ್ನಾನ ಮಾಡುವಾಗ ಆದಷ್ಟೂ ರಾಸಾಯನಿಕಗಳಿಲ್ಲದ ಮೃದುವಾಗ ಶಾಂಪೂದಿಂದ ರಂಗು ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲ ಬುಡದಲ್ಲಿರುವ ನೈಸರ್ಗಿಕವಾದ ತೈಲದಂಶ ಹೊರಟುಹೋಗದಂತೆ ಕಾಪಾಡಿಕೊಳ್ಳಬಹುದು. ಸ್ನಾನದ ನಂತರ ಕೂದಲನ್ನು ಟವೆಲ್‌ನಿಂದ ಒರಟಾಗಿ ಉಜ್ಜಬೇಡಿ. ಕೆಲವು ನಿಮಿಷಗಳ ಕಾಲ ಬಿಸಿಲಲ್ಲಿ ಒಣಗಿಸಬಹುದು ಅಥವಾ ಗಾಳಿಯಲ್ಲೂ ಆರಿಸಿಕೊಳ್ಳಬಹುದು.
ಹೇರ್ ಮಾಸ್ಕ್
ಕೂದಲಿಗೆ ಒಳ್ಳೆಯ ಹೇರ್‌ಮಾಸ್ಕ್ ಹಾಕುವುದು ಹೆಚ್ಚಿನ ಪೋಷಣೆಯನ್ನು ನೀಡಿ, ರಂಗಿನಾಟದಿಂದ ಹಾನಿ ಆಗಿದ್ದರೆ, ಅದನ್ನು ಸರಿಪಡಿಸುತ್ತದೆ. ಮೊಸರು, ಮೆಂತೆಯ ಪೇಸ್ಟ್ ಸೇರಿಸಿದ ಹೇರ್ ಮಾಸ್ಕ್ ಬಳಸಬಹುದು. ಅದಿಲ್ಲದಿದ್ದರೆ, ತೆಂಗಿನಹಾಲಿಗೆ ನಾಲ್ಕಾರು ಚಮಚದಷ್ಟು ಭೃಂಗರಾಜದ ರಸ ಸೇರಿಸಿ ಕೂದಲಿಗೆ ಹಚ್ಚಬಹುದು. ಒಂದೊಮ್ಮೆ ತಾಜಾ ಭೃಂಗರಾಜ ದೊರೆಯದಿದ್ದರೆ ಒಂದು ಚಮಚದಷ್ಟು ಭೃಂಗದ ಎಣ್ಣೆಯನ್ನೇ ಉಪಯೋಗಿಸಬಹುದು. 20-30 ನಿಮಿಷಗಳ ನಂತರ ಉಗುರು ಬಿಸಿ ನೀರಿನಲ್ಲಿ ತಲೆಸ್ನಾನ ಮಾಡಿದರೆ ಸಾಕಾಗುತ್ತದೆ.
ತಲೆಸ್ನಾನಕ್ಕೆ ಕಠೋರವಾದ ಶಾಂಪೂ ಅಥವಾ ಕ್ಲೆನ್ಸರ್‌ಗಳ ಬಳಕೆ ಯೋಗ್ಯವಲ್ಲ. ಮೃದುವಾದ, ರಾಸಾಯನಿಕಗಳಿಲ್ಲದ ಶಾಂಪೂ ಒಳ್ಳೆಯದು. ಅಂಟುವಾಳಕಾಯಿ ಅಥವಾ ಸೀಗೆಕಾಯಿ ದೊರೆಯುವಂತಿದ್ದರೆ, ಅದನ್ನು ಹಿಂದಿನ ರಾತ್ರಿ ನೀರಿಗೆ ಹಾಕಿದ್ದರೆ ಸಾಕು. ಮಾರನೇದಿನ ಅದೇ ನೀರನ್ನು ಶಾಂಪೂ ಆಗಿ ಬಳಸಬಹುದು. ಜೊತೆಗೆ ದಾಸವಾಳ ಸೊಪ್ಪಿನ ಲೋಳೆಯಂಥ ರಸವನ್ನೂ ಸೇರಿಸಿಕೊಂಡರೆ, ನೈಸರ್ಗಿಕ ಕಂಡೀಶನರ್ ಸಹ ಕೂದಲಿಗೆ ದೊರೆಯುತ್ತದೆ.
ನಿಯಮಿತ ಮಸಾಜ್
ತಲೆಗೂದಲಿಗೆ ನಿಯಮಿತವಾಗಿ ಆರೈಕೆ ಅಗತ್ಯವಿದೆ. ಇಲ್ಲದಿದ್ದರೆ ಕೂದಲು ಉದುರುವುದು, ತುಂಡಾಗುವುದು, ಬೇಗನೇ ಬಿಳಿಯಾಗುವುದು- ಇಂಥವನ್ನು ತಡೆಯಲು ಸಾಧ್ಯವಿಲ್ಲ. ಕಹಿಬೇವು, ಲೋಳೆಸರದ ರಸಗಳನ್ನು ವಾರಕ್ಕೊಮ್ಮೆ ಕೂದಲ ಬುಡಕ್ಕೆ ಮಸಾಜ್ ಮಾಡಿ, ಕೆಲ ಸಮಯದ ನಂತರ ತೊಳೆಯಬಹುದು. ಭೃಂಗರಾಜ ಮತ್ತು ಮದರಂಗಿ ಪುಡಿಗಳನ್ನು ಮೊಸರಿನಲ್ಲಿ ಸೇರಿಸಿ ಹೇರ್‌ಮಾಸ್ಕ್ ಮಾಡಬಹುದು. ಇಂಥ ಕ್ರಮಗಳಿಂದ ಕೂದಲ ಬುಡ ಭದ್ರವಾಗುತ್ತದೆ. ಹೋಳಿಯಲ್ಲಿ ರಂಗಿನಾಟ ಆಡುವಾಗ ಕೂದಲ ಗತಿಯೇನು ಎಂಬ ಚಿಂತೆಯೂ ದೂರವಾಗುತ್ತದೆ.
ಇದನ್ನೂ ಓದಿ: Holi 2024: ಹೋಳಿ ಆಡಿ, ಆ ಬಳಿಕ ನಿಮ್ಮ ಚರ್ಮವನ್ನು ಹೀಗೆ ಕಾಪಾಡಿ