Site icon Vistara News

Skin Care Secrets In winter: ಚಳಿಗಾಲದಲ್ಲಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Skin Care

ಭಾರತ ದೇಶದಲ್ಲಿ ಹಲವು ರೀತಿಯ ಚಳಿಗಾಲಗಳಿವೆ. ಅಂದರೆ, ಶಿಮ್ಲಾ, ಕುಲು, ಮನಾಲಿ ಮತ್ತು ಕಾಶ್ಮೀರದ ಕಡೆಗೆ ಮೂಳೆ ಕೊರೆಯುವ ಚಳಿಯೊಂದಿಗೆ ಹಿಮ ಸುರಿಯುತ್ತದೆ. ಉತ್ತರ ಭಾರತದ ಕೆಲವೆಡೆಗಳಲ್ಲಿ ಅತೀವ ಚಳಿಯಿದ್ದರೂ ಹಿಮ ಸುರಿಯುವ ಸ್ಥಳಗಳು ಕಡಿಮೆಯೆ. ದಕ್ಷಿಣಕ್ಕೆ ಬಂದರೆ, ಉತ್ತರ ಭಾರತದಕ್ಕೆ ಹೋಲಿಸಿದರೆ ಚಳಿಗಾಲ ಅಷ್ಟೇನೂ ತೀವ್ರವಾಗಿರುವುದಿಲ್ಲ. ದಕ್ಷಿಣ ಕರಾವಳಿಗಳಲ್ಲಿ ಚಳಿಗಾಲದಲ್ಲೊಂದು ಸೆಕೆ ಇರುವುದಿಲ್ಲ! ಹೀಗೆ ದೇಶ ಒಂದೇ ಆದರೂ, ಪಾರಿಸಾರಿಕ ವೈವಿಧ್ಯತೆಗಳು ಹಲವು. ಒಂದೊಂದು ಪ್ರದೇಶಕ್ಕೂ ಭಿನ್ನವಾಗಿರುವ ಹವಾಮಾನಕ್ಕೆ ಪ್ರತ್ಯೇಕವಾಗಿಯೇ (Skin care secrets in winter) ತ್ವಚೆಯ ಕಾಳಜಿಯ ಅಭ್ಯಾಸ ಬೆಳೆಸಿಕೊಳ್ಳಬೇಕಾದ್ದು ಸಹಜ.

ಶುಷ್ಕ ಚರ್ಮ ಹೊಂದಿದವರಿಗೆ ದುರಿತ ಕಾಲವಿದು. ಚರ್ಮ ಇನ್ನಷ್ಟು ಒಣಗಿದಂತಾಗಿ, ತುರಿಕೆ, ಉರಿ, ಕೆಂಪಾಗುವುದು ಮುಂತಾದ ಹಲವು ಸಮಸ್ಯೆಗಳು ಗಂಟುಬೀಳುತ್ತವೆ. ಈ ಎಲ್ಲವುಗಳ ನಡುವೆ ಚರ್ಮವನ್ನು ತೇವವಾಗಿರಿಸಿಕೊಂಡು, ಕಾಂತಿಯನ್ನು ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲು. ಆದರೆ ಚಳಿಗಾಲ ಹೇಗೇ ಇದ್ದರೂ, ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ಎಲ್ಲಾ ಕಾಲಕ್ಕೂ ಹೊಂದುವಂಥ ನಳನಳಿಸುವ ತ್ವಚೆಯನ್ನು ಹೊಂದಲು ಸಾಧ್ಯ.

ನೀರು ಸಾಕಷ್ಟಿರಲಿ

ಚರ್ಮ ತನ್ನ ತೇವ ಕಳೆದುಕೊಳ್ಳುವುದು ಚಳಿಗಾಲದಲ್ಲಿ ತ್ವಚೆ ಎದುರಿಸುವ ದೊಡ್ಡ ಸಮಸ್ಯೆಗಳಲ್ಲಿ ಒಂದು. ತೀರಾ ಚಳಿಯಿರುವ ಪ್ರದೇಶಗಳಲ್ಲಿ ಹೊರಗಿನ ವಾತಾವರಣದ ಜೊತೆಗೆ, ಮನೆಯೊಳಗೆ ಉಪಯೋಗಿಸುವ ಹೀಟರ್‌ಗಳು ಸಹ ಚರ್ಮದಲ್ಲಿನ ತೇವವನ್ನು ಕಳೆದು ಶುಷ್ಕತೆ ಹೆಚ್ಚಿಸುತ್ತವೆ. ಹಾಗಾಗಿ ನಿಯಮಿತವಾಗಿ ಸಾಂದ್ರವಾದ ಮಾಯಿಶ್ಚರೈಸರ್‌ ಉಪಯೋಗಿಸುವುದು ಆವಶ್ಯಕ ಮತ್ತು ಅನಿವಾರ್ಯ. ತೇವವನ್ನು ಉಳಿಸಿಕೊಳ್ಳುವ ಸೀರಂಗಳು ಸಹ ನೆರವಾಗಬಲ್ಲವು.

ಲಘುವಾದ ಕ್ಲೆನ್ಸರ್‌

ಚರ್ಮವನ್ನು ಶುದ್ಧಗೊಳಿಸುವ ಭರದಲ್ಲಿ ಕಟುವಾದ ಕ್ಲೆನ್ಸರ್‌ಗಳನ್ನು ಉಪಯೋಗಿಸುವುದು ಸರಿಯಲ್ಲ. ಇದರಿಂದ ಚರ್ಮದಲ್ಲಿರುವ ನೈಸರ್ಗಿಕ ತೈಲದಂಶವನ್ನೂ ಕಳೆದುಕೊಳ್ಲಬೇಕಾಗುತ್ತದೆ. ಹಾಗಾದರೆ ಸಮಸ್ಯೆಗಳಿಗೆ ಆಹ್ವಾನ ಕೊಟ್ಟಂತೆಯೇ. ಹಾಗಾಗಿ ಲಘುವಾದ, ಮೃದುವಾದ ಕ್ಲೆನ್ಸರ್‌ ಬಳಸಿ. ಗ್ಲಿಸರಿನ್‌ ಅಥವಾ ಹ್ಯಾಲುರೋನಿಕ್‌ ಆಮ್ಲವಿರುವ ಕ್ಲೆನ್ಸರ್‌ಗಳು ಉತ್ತಮ ಆಯ್ಕೆಗಳು.

ಜಾಗ್ರತೆ ಮಾಡಿ

ಹಳೆಯ ಕೋಶಗಳ ಪೊರೆ ಕಳಚುವ ಎಕ್ಸ್‌ಫೋಲಿಯೇಶನ್‌ ಕ್ರಿಯೆಗಳು ಚರ್ಮದ ಕಾಳಜಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗೆಂದು ಈ ಕೆಲಸವನ್ನು ಹಿಗ್ಗಾಮುಗ್ಗಾ ಮಾಡಬೇಡಿ. ವಾರಕ್ಕೊಮ್ಮೆ ಮಾಡಿದರೆ ಸಾಕು. ಇಲ್ಲದಿದ್ದರೆ ಚರ್ಮದ ನೈಸರ್ಗಿಕ ತೈಲದಂಶವೆಲ್ಲ ಹೋಗಿ ರೂಕ್ಷತೆಗೆ ದಾರಿಯಾಗುತ್ತದೆ. ಚರ್ಮ ಅಷ್ಟೆಲ್ಲ ಹಾಳಾದರೆ ಕಾಂತಿ-ಗೀಂತಿ ಎಲ್ಲಾ ಭ್ರಾಂತಿಯೇ!

ರಾತ್ರಿ ರಿಪೇರಿಯ ಕ್ರೀಮುಗಳು

ರಾತ್ರಿ ಮಲಗುವಾಗ ಲೇಪಿಸಬಹುದಾದ ಕೆಲವು ನೈಟ್‌ ಕ್ರೀಮುಗಳು ನಿಜಕ್ಕೂ ತ್ವಚೆಯನ್ನು ದುರಸ್ತಿ ಮಾಡಬಲ್ಲವು. ಹ್ಯಾಲುರೊನಿಕ್‌ ಆಮ್ಲದ ಸೀರಂಗಳು, ವಿಟಮಿನ್‌ ಇ ಕ್ರೀಮುಗಳು ಚರ್ಮದ ಆರೋಗ್ಯವನ್ನು ಹೆಚ್ಚಿಸಬಲ್ಲವು. ಮಲಗುವ ಮುನ್ನ ಮುಖವನ್ನೆಲ್ಲಾ ಶುಚಿಗೊಳಿಸಿ, ಇಂಥ ಸೀರಂಗಳನ್ನು ಹಚ್ಚಿದರೆ ಹೆಚ್ಚಿನ ಪರಿಣಾಮ ಕಾಣಬಹುದು.

ಆಹಾರದಲ್ಲಿ ಸಮತೋಲನ

ಗುಜರಿ ಆಹಾರದ ಅಭ್ಯಾಸವಿರುವವರ ಚರ್ಮ ಮುದುಡಲು ಹೆಚ್ಚು ವರ್ಷಗಳು ಬೇಡ. ಸರಿಯಾದ ಪ್ರಮಾಣದಲ್ಲಿ ಪಿಷ್ಟ, ಪ್ರೊಟೀನ್‌, ಕೊಬ್ಬು, ನಾರು, ಖನಿಜಗಳು, ನೀರು ದೇಹಕ್ಕೆ ದೊರೆತರೆ, ಅದು ತ್ವಚೆಯ ಆಹಾರದ ಮೇಲೂ ಪ್ರತಿಫಲಿಸುತ್ತದೆ. ಉತ್ಕರ್ಷಣ ನಿರೋಧಕಗಳು ಆಹಾರದಲ್ಲಿ ಇದ್ದಷ್ಟೂ ಚರ್ಮದ ಆರೋಗ್ಯವೂ ಸುಧಾರಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಚರ್ಮದ ಆರೈಕೆ ಕೇವಲ ಮೇಲ್ಮೈಯಲ್ಲಿ ನಡೆಯುವಂಥದ್ದಲ್ಲ. ಜೊತೆಗೆ ದೇಹದೊಳಗಿನಿಂದಲೂ ಪೋಷಕಾಂಶಗಳು ದೊರೆಯಬೇಕಾಗುತ್ತದೆ.

ಇದನ್ನೂ ಓದಿ: Health Care Of Women After Thirty: ಮೂವತ್ತರ ನಂತರ ಮಹಿಳೆಯರ ಆರೋಗ್ಯ ಕಾಳಜಿ ಹೀಗಿರಲಿ

Exit mobile version