Site icon Vistara News

Boost Gut Health In Kids: ಮಕ್ಕಳಲ್ಲಿ ಹೊಟ್ಟೆಯ ಆರೋಗ್ಯ ಕಾಪಾಡುವುದು ಹೇಗೆ?

Boost Gut Health In Kids

ಮಕ್ಕಳಲ್ಲಿ ಹೊಟ್ಟೆಯ ಆರೋಗ್ಯ ಕಾಪಾಡುವುದು ಸಣ್ಣ ಕೆಲಸವಲ್ಲ. ಜಂಕ್‌, ಚಾಕಲೇಟ್‌, ಸಕ್ಕರೆಭರಿತ ತಿನಿಸುಗಳಂಥ ಬೇಡದ್ದನ್ನೇ ಹೆಚ್ಚು ಇಷ್ಟಪಟ್ಟು ತಿಂದು, ಅಮ್ಮ ಕೊಟ್ಟ ಒಳ್ಳೆಯ ಆಹಾರಗಳತ್ತ ಮುಖ ಕಿವುಚುವ ಮಕ್ಕಳೇ ಹೆಚ್ಚು. ಇದರಿಂದ ಸಮಸ್ಯೆಯಾಗುವುದು ಹೊಟ್ಟೆಯಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಗಳ ಸಮತೋಲನದಲ್ಲಿ. ಹೆತ್ತವರು ಎಷ್ಟೇ ಒದ್ದಾಡಿ ಆ ಮಕ್ಕಳಿಗೆ ಆರೋಗ್ಯಕರ ಆಹಾರವನ್ನೇ ತಿನ್ನಿಸಿದರೂ, ಹೊಟ್ಟೆನೋವು, ಜ್ವರ, ಶೀತ ಮುಂತಾದ ಸೋಂಕುಗಳು ತಪ್ಪುವುದಿಲ್ಲ; ಬೆಳವಣಿಗೆ ಸಾಕಷ್ಟು ಇರುವುದಿಲ್ಲ (Boost Gut Health in Kids). ಇವೆಲ್ಲ ಹೀಗೇಕೆ ಎಂಬುದು ಪಾಲಕರಿಗೆ ಅರ್ಥವಾಗುವುದಿಲ್ಲ. ನಿಜಕ್ಕೂ ಹೀಗೇಕೆ?
ಮಕ್ಕಳು ದೊಡ್ಡವರು ಎಂಬ ಭೇದವಿಲ್ಲದಂತೆ, ಕರುಳಿನ ಬ್ಯಾಕ್ಟೀರಿಯಗಳ ಸಮತೋಲನವನ್ನು ಕಾಯ್ದುಕೊಳ್ಳುವುದು ಅಗತ್ಯ. ರೋಗ ನಿರೋಧಕ ಶಕ್ತಿ ಪೂರ್ಣ ಪ್ರಮಾಣದಲ್ಲಿ ಬಲಿಯದ ಮಕ್ಕಳಲ್ಲಿ ಈ ಅಗತ್ಯ ಇನ್ನೂ ಹೆಚ್ಚು. ಮಕ್ಕಳ ಚಯಾಪಚಯ ಸರಿ ಇರುವುದಕ್ಕೆ, ಮೂಡ್‌ ಚೆನ್ನಾಗಿರಲು, ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ, ಪ್ರತಿರೋಧಕತೆಯ ಅಭಿವೃದ್ಧಿಗೆ- ಇಂಥ ಎಲ್ಲ ವಿಷಯಗಳಲ್ಲಿ ಹೊಟ್ಟೆಯ ಬ್ಯಾಕ್ಟೀರಿಯಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಮಾತ್ರವಲ್ಲ, ಈ ನಿಟ್ಟಿನಲ್ಲಿ ಎಳವೆಯಲ್ಲೇ ಮಾಡಿಸುವ ಅಭ್ಯಾಸಗಳು ಬದುಕಿನ ದೀರ್ಘಕಾಲದವರೆಗೆ ಚಾಲ್ತಿಯಲ್ಲಿ ಇರುತ್ತವೆ. ಹಾಗಾದರೆ ಏನು ಮಾಡಬೇಕು?

ನಾರುಭರಿತ ಆಹಾರ

ಚಿಕ್ಕಂದಿನಲ್ಲೇ ಮಾಡಿಸುವ ಇಂಥ ಅಭ್ಯಾಸಗಳು ಬದುಕಿನ ಬಹುದೂರದವರೆಗೆ ಅವರನ್ನು ಕಾಯುತ್ತವೆ. ಹಣ್ಣು-ತರಕಾರಿಗಳು, ಮೊಳಕೆ ಕಾಳುಗಳು, ಇಡಿ ಧಾನ್ಯಗಳು, ಸೊಪ್ಪುಗಳಂಥ ನಾರುಭರಿತ ಆಹಾರಗಳು ಮಕ್ಕಳಿಗೆ ಬೇಕು. ಅವುಗಳನ್ನು ತಿನ್ನಿಸುವುದು ಹೇಗೆ ಎಂಬ ಸವಾಲು ಇದ್ದಾಗಲೂ, ಈ ಸವಾಲನ್ನು ಮೀರುವ ಅಗತ್ಯವೂ ಹೆತ್ತವರಿಗಿದೆ. ಒಂದೇ ವಿಧದ ಆಹಾರಕ್ಕೆ ಅಂಟಿಕೊಳ್ಳದೆ ವೈವಿಧ್ಯಮಯ ಆಹಾರಗಳನ್ನು ನೀಡುವುದರಿಂದ ತರಹೇವಾರಿ ಬ್ಯಾಕ್ಟೀರಿಯಗಳು ಕರುಳಿಗೆ ದೊರೆಯುತ್ತವೆ. ತರಹೇವಾರಿ ಸೋಂಕುಗಳನ್ನೂ ದೇಹ ತಡೆಯುತ್ತದೆ.

ಪ್ರೊಬಯಾಟಿಕ್

ಇವೆಲ್ಲ ಮೊಸರು, ಮಜ್ಜಿಗೆಯಂಥ ಹುದುಗು ಬಂದಂಥ ಆಹಾರಗಳು. ಜೀರ್ಣಾಂಗಗಳ ಯೋಗಕ್ಷೇಮವನ್ನು ರಕ್ಷಿಸುವ ಹೊಣೆ ಇವುಗಳದ್ದು. ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ, ಸತ್ವಗಳು ಹೀರಿಕೊಳ್ಳುವಂತೆ ಮಾಡುವ ಸಾಧ್ಯತೆ ಇವುಗಳಿಗಿದೆ. ಇವುಗಳಲ್ಲಿ ಆಹಾರಗಳಲ್ಲಿ ಹಲವು ರೀತಿಯಲ್ಲಿ ಬಳಸಿಕೊಳ್ಳಬಹುದು. ಈರುಳ್ಳಿ, ಬೆಳ್ಳುಳ್ಳಿ, ಬಾಳೆಹಣ್ಣು ಮುಂತಾದ ಪ್ರೀಬಯಾಟಿಕ್‌ ಆಹಾರಗಳು ಸಹ ಉಪಕಾರ ಮಾಡುತ್ತವೆ.

ಸಕ್ಕರೆ, ಸಂಸ್ಕರಣೆ ಬೇಡ

ನಮ್ಮ ಕರುಳಿಗೊಂದು ವಿಚಿತ್ರ ಗುಣವಿದೆ. ಯಾವ ಆಹಾರವನ್ನು ನಾವು ಹೆಚ್ಚು ನೀಡುತ್ತೇವೆಯೋ ಅದನ್ನೇ ನಮ್ಮ ನಾಲಿಗೆ ಮತ್ತೆ ಬೇಡುತ್ತದೆ. ಸಕ್ಕರೆಭರಿತ, ಕರಿದ, ಸಂಸ್ಕರಿತ ಆಹಾರಗಳನ್ನು ತಿನ್ನುತ್ತಾ ಬಂದರೆ, ನಮ್ಮ ಕರುಳಿನಲ್ಲಿ ಇಂಥವನ್ನು ಬೇಡುವಂಥ ಬ್ಯಾಕ್ಟೀರಿಯಾಗಳೇ ತುಂಬಿಕೊಳ್ಳುತ್ತವೆ. ಒಳ್ಳೆಯ ಬ್ಯಾಕ್ಟೀರಿಯಾಗಳು ಒಳ್ಳೆಯ ಆಹಾರ ದೊರೆಯದೆ ನಶಿಸುತ್ತಾ ಹೋಗುತ್ತವೆ. ಹಾಗಾಗಿ ಒಳ್ಳೆಯ ಸೂಕ್ಷ್ಮಾಣುಗಳ ಸಂಖ್ಯೆ ಹೆಚ್ಚಬೇಕೆಂದಿದ್ದರೆ, ದೇಹಕ್ಕೆ ಕೆಟ್ಟ ಆಹಾರಗಳನ್ನು ಕೊಡಬೇಡಿ. ಮೊದಲಿಗೆ ಮಕ್ಕಳು ಹಠ ಮಾಡಿದರೂ, ಕ್ರಮೇಣ ಅರಿತು ನಡೆಯಬಹುದೆಂಬ ವಿಶ್ವಾಸ ಹೊಂದಿ.

ದೈಹಿಕ ಚಟುವಟಿಕೆ

ಮಕ್ಕಳು ಆಟವಾಡಲೇಬೇಕು. ಆಟವನ್ನು ಆದಷ್ಟೂ ಉತ್ತೇಜಿಸಿ. ಮೊಬೈಲಲ್ಲಿ ಗೆಳೆಯರೊಟ್ಟಿಗೆ ಆಡುವುದಕ್ಕಿಂತ ಮನೆಯಿಂದ ಹೊರಗೆ ಹೋಗಿ, ಮಿತ್ರದೊಂದಿಗೆ ಕಲೆತು ಆಡುವುದಕ್ಕೆ ಪ್ರೋತ್ಸಾಹ ನೀಡಿ. ಅವರ ಕೈಕೆಸರಾಗಲಿ, ಮೈ ಮಣ್ಣಾಗಲಿ… ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಗಳ ಸಂಖ್ಯೆ ಹೆಚ್ಚುತ್ತದೆ! ಇದನ್ನು ಅಧ್ಯಯನಗಳು ದೃಢಪಡಿಸಿವೆ. ತಿಂದಿದ್ದು ಜೀರ್ಣವಾಗಿ, ಮತ್ತೆ ಹಸಿವಾಗುತ್ತದೆ. ನಮಗೆ ಬೇಕಾಗಿದ್ದೂ ಅದೇ ತಾನೆ.

ನೀರು

ಶಾಲೆಗೆ ದೊಡ್ಡ ಬಾಟಲಿಯಲ್ಲಿ ನೀರು ಕಳಿಸಿದರೂ ಅರ್ಧಕ್ಕರ್ಧ ಮರಳಿ ಬಂದಿರುತ್ತದೆ. ಆಡೀಆಡಿ ಗಂಟಲು ಪಸೆ ಆರಿದಾಗಲೇ ಅವರಿಗೆ ನೀರಡಿಕೆಯಾಗಿದೆ ಎಂಬುದು ತಿಳಿಯುವುದು. ಹಾಗಾಗಿ ಮಕ್ಕಳು ಕುಡಿಯುವ ನೀರಿನ ಪ್ರಮಾಣ ಹೆಚ್ಚಿಸಲು ಏನೆಲ್ಲಾ ಮಾಡುವುದಕ್ಕೆ ಸಾಧ್ಯ ಎಂಬುದನ್ನು ಗಮನಿಸಿ. ರಸಭರಿತ ಹಣ್ಣು-ತರಕಾರಿಗಳು, ನೈಸರ್ಗಿಕ ಸಿಹಿ ಹೊಂದಿದ ಪಾನಕ, ಜ್ಯೂಸ್‌ಗಳು, ಮಸಾಲೆ ಮಜ್ಜಿಗೆಗಳು… ಇಂಥವೆಲ್ಲ ಮಕ್ಕಳಲ್ಲಿ ಮಲಬದ್ಧತೆ ದೂರ ಮಾಡಿ, ಪಚನಾಂಗಗಳ ಸಾಮರ್ಥ್ಯ ಹೆಚ್ಚಿಸುತ್ತವೆ.

ಪ್ರತಿಜೈವಿಕ ಮಿತಗೊಳಿಸಿ

ಮಗುವಿಗೆ ಮೈ ಬಿಸಿಯಾಗುತ್ತಿದ್ದಂತೆ ಆಂಟಿಬಯಾಟಿಕ್‌ ಔಷಧಿ ಹಾಕುವ ಪಾಲಕರು ಲೆಕ್ಕವಿಲ್ಲದಷ್ಟಿದ್ದಾರೆ. ಮೊದಲು ವೈದ್ಯರನ್ನು ಕೇಳಿ, ಅಗತ್ಯವಿದ್ದರೆ ಅವರೇ ಹೇಳುತ್ತಾರೆ. ಪ್ರತಿಜೈವಿಕ ಔಷಧಿಗಳು ಹೊಟ್ಟೆಯ ಬ್ಯಾಕ್ಟೀರಿಯಗಳ ಸಮತೋಲವನ್ನು ನಿಶ್ಚಿತವಾಗಿ ಏರುಪೇರು ಮಾಡುತ್ತವೆ. ಹಾಗಾಗಿ ಅನಗತ್ಯ ಔಷಧಿ ಕೊಡಬೇಡಿ.

ಇದನ್ನೂ ಓದಿ: Skin Care in Summer: ಬೇಸಿಗೆಯಲ್ಲಿ ಚರ್ಮದ ಆರೈಕೆ ಮಾಡಿಕೊಳ್ಳೋದು ಹೇಗೆ?

Exit mobile version