ಸಾಮಾನ್ಯವಾಗಿ ಬಹುತೇಕ ಎಲ್ಲರೂ ನಿತ್ಯವೂ ತಿನ್ನುವ ಹಣ್ಣು ಎಂದರೆ ಬಾಳೆಹಣ್ಣು. ಸಾಮಾನ್ಯರ ಕೈಗೆಟಕುವ ಬಾಳೆಹಣ್ಣು ಎಷ್ಟೋ ಬಾರಿ ಹಸಿದಿರುವವರ ಮಂದಿಯ ಇಡೀ ದಿನವ ಊಟವೂ ಆಗುವ ತಾಕತ್ತಿದೆ. ಒಂದು ಬಾಳೆಹಣ್ಣು ಸುಲಿದು ತಿಂದರೆ, ನಿಃಶಕ್ತಿಯೆಲ್ಲ ಮಾಯ. ಹಸಿದ ಹೊಟ್ಟೆಯೂ ಒಮ್ಮೆಗೆ ಸಮಾಧಾನ ಪಟ್ಟುಕೊಳ್ಳುತ್ತದೆ. ಯಾಕೆಂದರೆ ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿವೆ. ಹೀಗಾಗಿ, ಹೊಟ್ಟೆಗೇನೂ ಸಿಗದಿದ್ದರೂ ಬಾಳೆಹಣ್ಣು ತಿಂದರೂ ಬದುಕಲು ಸಾಕಾಗುತ್ತದೆ. ಇಂಥ ಬಾಳೆಹಣ್ಣು ಎಂಬ ಅನಾಥ ರಕ್ಷಕ ಹಣ್ಣನ್ನು ಬಹುಬೇಗನೆ ಹಾಳಾಗದಂತೆ ಸಂರಕ್ಷಿಸಿ ಕೆಲದಿನಗಳ ಕಾಲ ಇಡುವುದು ಮಾತ್ರ ಕಠಿಣವಾದ ಕೆಲಸ. ಒಮ್ಮೆ ಬಾಳೆಹಣ್ಣು ಹಣ್ಣಾಗಿಬಿಟ್ಟರೆ ಒಂದೆರಡು ದಿನಗಳು ಕಳೆಯುವಷ್ಟರಲ್ಲಿ ಸಿಪ್ಪೆ ಕಪ್ಪಾಗಿಬಿಡುತ್ತದೆ. ಆಮೇಲೆ ಕೊಳೆಯಲು ಶುರುವಾಗುತ್ತದೆ. ಹೀಗಾಗಿ ಹೆಚ್ಚು ಬಾಳೆಹಣ್ಣು ಇದ್ದರೆ ಅವುಗಳನ್ನು ಶೇಖರಿಸಿ ಕೆಲದಿನಗಳ ಇಡುವುದೆಂದರೆ ದೊಡ್ಡ ಸಮಸ್ಯೆ. ಹಾಗಾದರೆ ಬನ್ನಿ, ಬಾಳೆಹಣ್ಣನ್ನು ಬೇಗ ಕಪ್ಪಾಗದಂತೆ ಯಾವೆಲ್ಲ ವಿಧಾನಗಳಿಂದ (How To Preserve Bananas) ಸಂರಕ್ಷಿಸಿ ಕೆಲದಿನಗಳವರೆಗೆ ಇಡಬಹುದು ಎಂಬುದನ್ನು ನೋಡೋಣ.
ಖರೀದಿಸುವಾಗ ಇದು ತಿಳಿದಿರಲಿ
ಬಾಳೆಹಣ್ಣನ್ನು ಖರೀದಿಸುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮುಖ್ಯವಾಗಿ ನಿಮಗೆ ಯಾವಾಗ ಹಣ್ಣಾಗಬೇಕು ಎಂಬ ಬಗ್ಗೆ ಯೋಚನೆಯಿರಲಿ. ನಿಮಗೆ ಕೂಡಲೇ ತಿನ್ನಲು ಬಾಳೆಹಣ್ಣು ಬೇಕಿದ್ದರೆ ಸರಿಯಾಗಿ ಹಳದಿ ಬಣ್ಣಕ್ಕೆ ತಿರುಗಿರುವ ಬಾಳೆಹಣ್ಣು ಖರೀದಿಸಿ. ಎರಡು ದಿನಗಳ ನಂತರ ತಿನ್ನುವ ಯೋಚನೆಯಿದ್ದರೆ, ಇನ್ನೂ ಪೂರ್ತಿಯಾಗಿ ಹಣ್ಣಾಗದ, ಹಳದಿ ಬಣ್ಣಕ್ಕೆ ತಿರುಗಲು ಆರಂಭವಾದ, ಆದರೆ ಅಲ್ಲಲ್ಲಿ ಹಸಿರು ಬಣ್ಣದ ಕುರುಹುಗಳೂ ಇರುವ ಹಣ್ಣನ್ನು ಆಯ್ಕೆ ಮಾಡಿ. ಇವು ಎರಡು ಮೂರು ದಿನಗಳೊಳಗೆ ಚೆನ್ನಾಗಿ ಹಣ್ಣಾಗುತ್ತವೆ. ಹೀಗೆ ಬಾಳೆಹಣ್ಣು ಖರೀದಿಸುವ ಮುನ್ನ ಸರಿಯಾಗಿ ಯೋಚಿಸಿ ಖರೀದಿಸಿ.
ಖರೀದಿಸಿದ ತಕ್ಷಣ ಸಂರಕ್ಷಿಸಿ
ಬಾಳೆಹಣ್ಣು ಒಮ್ಮೆ ಹಣ್ಣಾಗಲು ಆರಂಭವಾಯಿತೆಂದಾದಲ್ಲಿ ಬಹುಬೇಗನೆ ಹಣ್ಣಾಗಿಬಿಡುತ್ತದೆ. ಹೀಗಾಗಿ ಬಾಳೆಹಣ್ಣನ್ನು ಖರೀದಿಸಿದ ತಕ್ಷಣ ಸಂರಕ್ಷಿಸಿಡಿ. ಮುಖ್ಯವಾಗಿ, ಬಾಳೆಹಣ್ಣನ್ನು ಬೇರೆಲ್ಲ ಹಣ್ಣುಗಳಿಂದ ದೂರ ಇಡಿ. ಸರಿಯಾಗಿ ಗಾಳಿಯಾಡುವ ಬೌಲ್‌ನಲ್ಲಿ ಹಾಕಿಡಿ. ಸರಿಯಾಗಿ ಗಾಳಿಯಾಡುವಂತಿದ್ದರೆ ಬಹುಬೇಗನೆ ಹಣ್ಣಾಗುವುದಿಲ್ಲ.
ಹೆಚ್ಚು ಬಾಳೆಹಣ್ಣು ಇದ್ದರೆ ಹೀಗೆ ಮಾಡಿ
ಕೆಲವೊಮ್ಮೆ ಏನಾಗುತ್ತದೆ ಎಂದರೆ, ಒಂದೇ ಸಲ, ನಾನಾ ಕಾರಣಗಳಿಂದಾಗಿ ಸಿಕ್ಕಾಪಟ್ಟೆ ಬಾಳೆಹಣ್ಣು ಸಿಕ್ಕಿಬಿಡುತ್ತವೆ. ಯಾರೋ ಮನೆಗೆ ಬಂದಾಗ ತಂದರು, ಅಥವಾ ತೋಟದಲ್ಲಿ ಒಂದೇ ಸಲ ಹಲವು ಗೊನೆಗಳು ಬಿಟ್ಟ್ವು ಅಥವಾ ದೇವಸ್ಥಾನ ಭೇಟಿ, ಪೂಜೆ ಇತ್ಯಾದಿಗಳ ಕಾರಣದಿಂದ ಒಂದೇ ಬಾರಿಗೆ ರಾಶಿ ಬಾಳೆಹಣ್ಣು ಒಟ್ಟು ಸೇರಿದಾಗ, ಒಮ್ಮೆಲೆ ಮುಗಿಸಲು ಸಾಧ್ಯವಾಗುವುದಿಲ್ಲ. ಹೀಗಾದಾಗ ಬಾಳೆಹಣ್ಣನ್ನು ಶೇಖರಿಸಿಡುವುದು ಹೇಗೆ ಎಂಬ ಗೊಂದಲಗಳಾಗುವುದು ಸಹಜ. ಆದರೆ ಬಾಳೆಹಣ್ಣನ್ನು ಸಿಪ್ಪೆ ಸುಲಿದು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಫ್ರೀಜರ್‌ನಲ್ಲಿಡಬಹುದು. ಇವು ತಿಂಗಳುಗಳ ಕಾಲ ಹಾಗೆಯೇ ಇರುತ್ತವೆ. ಸ್ಮೂದಿಗಳು, ಬೇಕಿಂಗ್ ಮತ್ತಿತರ ಸಂದರ್ಭಗಳಲ್ಲಿ ಇವನ್ನು ಬಳಸಬಹುದು, ಅಥವಾ ಹಾಗೆಯೇ ಫ್ರೋಝನ್ ಹಣ್ಣನ್ನು ಬೇರೆ ಬೇರೆ ಮಾದರಿಯಲ್ಲಿ ಅಲಂಕರಿಸಿ ತಿನ್ನಬಹುದು.
ತಾಜಾ ಆಗಿರಲು ಹೀಗೆ ಮಾಡಿ
ಬಾಳೆಹಣ್ಣಿನ ತೊಟ್ಟನ್ನು ಅಲ್ಯೂಮಿನಿಯಂ ಫಾಯಿಲ್ ಅಥವಾ ಪ್ಲಾಸ್ಟಿಕ್ ಕವರ್‌ನಿಂದ ಸುತ್ತಿಡಿ. ಹೀಗೆ ಮಾಡುವುದರಿಂದಲೂ ಬಾಳೆಹಣ್ಣು ಬೇಗನೆ ಹಣ್ಣಾಗಿ ಹಾಳಾಗದು. ಹೆಚ್ಚು ಕಾಲ ಹಣ್ಣು ತಾಜಾ ಆಗಿ ಉಳಿಯುತ್ತದೆ ಕೂಡಾ.
ಕೂಡಲೇ ಫ್ರಿಡ್ಜ್ ನಲ್ಲಿಡಿ
ಬಾಳೆಹಣ್ಣು ತುಂಬ ಇದ್ದರೆ, ಒಂದೆರಡು ದಿನಗಳಿಗೆ ಬೇಕಾಗುವಷ್ಟು ಬಾಳೆಹಣ್ಣನ್ನು ತೆಗೆದಿಟ್ಟು ಉಳಿದ ಹಣ್ಣುಗಳನ್ನು ಕೂಡಲೇ ಫ್ರಿಡ್ಜ್‌ನಲ್ಲಿಡಿ. ಹೀಗೆ ಇಟ್ಟರೆ, ಹಣ್ಣಾಗಲು ಹೆಚ್ಚು ಕಾಲ ಹಿಡಿಯುತ್ತದೆ. ಅಷ್ಟೇ ಅಲ್ಲ, ಈಗಾಗಲೇ ಹಣ್ಣಾಗಿದ್ದರೆ, ಹೊರಗಿನ ಹಣ್ಣುಗಳಿಗಿಂತ ಹೆಚ್ಚು ಕಾಲ ಹಾಗೆಯೇ ಉಳಿಯುತ್ತದೆ. ಹೀಗೆ ಇಡುವುದರಿಂದ ಹಣ್ಣಿನ ಹೊರಮೈಯ ಬಣ್ಣ ಬದಲಾದರೂ, ಒಳಗಿನ ಹಣ್ಣು ಕೆಡದೆ ಹಾಗೆಯೇ ಇರುತ್ತದೆ. ಆದಷ್ಟೂ ಫ್ರಿಡ್ಜ್‌ನಲ್ಲಿ ತುಂಬ ತಂಪಿರುವ ಜಾಗದಲ್ಲಿಡಿ.
ಇದನ್ನೂ ಓದಿ: Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ