Site icon Vistara News

Afternoon nap | ತೂಕಡಿಸಿ ತೂಕಡಿಸಿ ಬೀಳದಿರಿ: ಮಧ್ಯಾಹ್ನದ ನಿದ್ದೆಯಿಂದ ಮುಕ್ತಿ ಹೇಗೆ?

Afternoon nap

ಮಧ್ಯಾಹ್ನ ನಿದ್ದೆ ಬರುತ್ತಿದೆಯೇ? ಎಷ್ಟೋ ಬಾರಿ ಮಧ್ಯಾಹ್ನ ನಿದ್ದೆ ಮಾಡಬಾರದೆಂದು ಅಂದುಕೊಂಡರೂ ತೂಕಡಿಸಿ ತೂಕಡಿಸಿ ಒಂದು ಸಣ್ಣ ನಿದ್ದೆಯಾದರೂ ಮಾಡಿಬಿಡುವ ಅನಿಸುತ್ತಿದೆಯೋ? ಮಧ್ಯಾಹ್ನದ ಊಟವಾದ ತಕ್ಷಣ ಹಾಸಿಗೆಯ ಕಡೆಗೇ ಮನಸ್ಸು ಹೊರಳುತ್ತದೋ? ಅಥವಾ ಮಧ್ಯಾಹ್ನದ ನಿದ್ದೆ ಸಿಗದಿದ್ದರೆ ಯರ್ರಾಬಿರ್ರಿ ಹತಾಶೆ, ದುಃಖ, ಸಿಟ್ಟು ಬರುತ್ತದೆಯೋ? ಇವಿಷ್ಟೂ ಆಗದಿದ್ದರೂ, ಇವುಗಳಲ್ಲಿ ಒಂದೆರಡು ನಿಮ್ಮ ಅನುಭವವಾಗಿದ್ದರೂ ಸಾಕು, ನೀವು ಮಧ್ಯಾಹ್ನದ ನಿದ್ದೆಯ ಚಟಕ್ಕೆ ಬಿದ್ದಿದ್ದೀರಿ ಎಂದೇ ಅರ್ಥ.

ಎಷ್ಟೋ ಬಾರಿ ಒಂದೆರಡು ಸಾರಿ ಮನೆಯಿಂದಲೇ ಕೆಲಸ ಮಾಡುತ್ತಲೋ, ಅಥವಾ ರಜೆಯ ದಿನಗಳಲ್ಲೋ, ಮಧ್ಯಾಹ್ನದ ನಿದ್ದೆ ಮಾಡಿ ಅದರ ಸಿಹಿ ಅನುಭವಿಸಿದ ಮಂದಿ ಮಧ್ಯಾಹ್ನದ ನಿದ್ದೆಯ ಅಮಲೇರಿಸಿಕೊಂಡವರು ಬಹಳ. ಇನ್ನೂ ಕೆಲವೊಮ್ಮೆ ಭಾನುವಾರ ಮನೆಯಲ್ಲಿ ಮಧ್ಯಾಹ್ನ ಮಲಗಿ, ಸೋಮವಾರ ಬಂದಾಗ ಎಯ್ಯೋ ಅನಿಸಿ, ಆಫೀಸಿನಲ್ಲಿ ಮಧ್ಯಾಹ್ನದೂಟ ಮುಗಿಸಿ ನಿದ್ದೆ ತೂಗುವ, ತೂಕಡಿಸುತ್ತಾ ಕೆಲಸ ಮಾಡುವ ಒಂದಿಷ್ಟು ಮಂದಿ ಸಾಮಾನ್ಯ. ಇದರಿಂದಾಗಿ ಕೆಲಸದ ಮೇಲೆ ಗಮನ, ಆಗಬೇಕಾದ ಕೆಲಸ ಪೂರ್ಣ ಪ್ರಮಾಣದಲ್ಲಿ ಆಗದೆ ಇರುವುದು ಸೇರಿದಂತೆ ಹಲವು ಪರಿಣಾಮಗಳು ಎದುರಿಸಲೇ ಬೇಕಾಗುತ್ತದೆ.

ಹಾಗಾದರೆ, ಮಧ್ಯಾಹ್ನದ ನಿದ್ದೆ ದೈಹಿಕವಾಗಿ ಹೇಗೆ ಒಳ್ಳೆಯದಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆದರೂ ಇದನ್ನು ಗೆಲ್ಲುವುದು ಸ್ವಲ್ಪ ಕಷ್ಟವೇ. ಆದರೂ ಆಗದ ಚಾಲೆಂಜೇನಲ್ಲ. ಆದರೆ, ಅದಕ್ಕೆ ಕೆಲವು ಉಪಾಯಗಳಂತೂ ಬೇಕೇ ಬೇಕು. ವರ್ಕ್‌ಔಟ್‌ ಆಗಬಹುದಾದ ಉಪಾಯಗಳು ಯಾವುವು ಎಂಬುದನ್ನು ನೋಡೋಣ.

೧. ಸರಿಯಾದುದನ್ನು ತಿನ್ನಿ: ನಾವೊಂದು ಗಾಡಿ ಕೊಂಡರೆ ಅದನ್ನು ಸರಿಯಾಗಿ ಪಾಲನೆ ಮಾಡುವುದನ್ನೂ ಕಲಿತುಕೊಳ್ಳುತ್ತೇವೆ. ಕಾಲಕಾಲಕ್ಕೆ ಅದಕ್ಕೆ ಸರ್ವೀಸ್‌ ಮಾಡಿಸಿ, ತೊಂದರೆಗಳಿದ್ದರೆ ರಿಪೇರಿ ಮಾಡಿಸಿ, ಆಯಿಲ್‌ ಬದಲಾಯಿಸಿ ಸರಿಯಾಗಿ ಓಡುವಂತೆ ನೋಡಿಕೊಳ್ಳುತ್ತೇವೆ. ಏನಾದರೂ ವ್ಯತ್ಯಾಸವಿದ್ದರೆ ಕೂಡಲೇ ಅದನ್ನು ರಿಪೇರಿ ಮಾಡಿಸುವತ್ತ ಗಮನ ಕೊಡುತ್ತೇವೆ. ನಮ್ಮ ದೇಹಕ್ಕೂ ಈ ಗಾಡಿಯ ಯಂತ್ರಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಜೀವವಿರುವ ಎಂಜಿನ್‌ ಹೊಂದಿರುವ ಈ ದೇಹಕ್ಕೆ ಬೇಕಾದವುಗಳನ್ನು ನಾವು ಮಾಡಲೇಬೇಕು. ಪೋಷಕಾಂಶಯುಕ್ತ ಆಹಾರದಿಂದ ಹಿಡಿದು ವ್ಯಾಯಾಮದವರೆಗೆ ಎಲ್ಲವೂ ಬೇಕು. ಹಾಗಾಗಿ ಏನು ತಿನ್ನುತ್ತಿದ್ದೀರಿ ಎಂಬುದರ ಬಗ್ಗೆ ಗಮನ ಕೊಡಿ. ಬಾಯಿಗೆ ರುಚಿ ಎಂಬು ಕಾರ್ಬೋಹೈಡ್ರೇಟ್‌ ಹಾಗೂ ಕೊಬ್ಬಿನಿಂದ ಶ್ರೀಮಂತವಾಗಿರುವ ಎಲ್ಲಾ ಆಹಾರಗಳನ್ನು ತಿನ್ನುತ್ತಾ ಇದ್ದರೆ ಖಂಡಿತ ನಿದ್ದೆ ಬರದೇ ಇರದು. ಹಾಗಾಗಿ ಪ್ರೊಟೀನ್‌ಯುಕ್ತ, ಎಲ್ಲ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಊಟದತ್ತ ಗಮನ ಹರಿಸಿ. ಹೊಟ್ಟೆ ಬಿರಿಯುವಂಥ ಊಟ ಮಾಡಿದರೆ, ಸಿಹಿಯನ್ನು ಹೆಚ್ಚಾಗಿ ತಿಂದರೆ, ಸಹಜವಾಗಿಯೇ ಕಣ್ಣು ಕೂರಲು ಆರಂಭವಾಗುತ್ತದೆ.

೨. ಹೆಚ್ಚು ನೀರು ಕುಡಿಯಿರಿ: ದೇಹಕ್ಕೆ ನೀರು ಬೇಕು. ದೇಹಕ್ಕೆ ಆಗಾಗ ತಾಜಾ ನೀರಿನ ಪೂರೈಕೆ ಮಾಡುತ್ತಾ ಬಂದಲ್ಲಿ, ದೇಹ ಹೆಚ್ಚು ಚುರುಕಾಗುತ್ತದೆ. ಆಗಾಗ ಕಾಫಿಯೋ ಚಹಾವೋ ಕುಡಿದರೆ ಒಮ್ಮೆ ಎನರ್ಜಿ ಬಂದಂತಾಗಿ ನಿದ್ದೆ ಕಡಿಮೆಯಾದಂತೆನಿಸಬಹುದು. ಆದರೆ, ಇದು ದೇಹವನ್ನು ನಿರ್ಜಲೀಕರಣದತ್ತ ಕೊಂಡೊಯ್ಯುತ್ತದೆ. ರಾತ್ರಿ ಹೆಚ್ಚು ನಿದ್ದೆ ಬರದಂತೆ ಮಾಡುತ್ತದೆ. ಆದರೆ ನೀವು ನಿಮ್ಮ ಕೆಲಸ ಮಾಡುವ ಜಾಗದಲ್ಲಿ ನೀರಿನ ಬಾಟಲಿಯಿಟ್ಟುಕೊಂಡು ಆಗಾಗ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ತೂಕಡಿಕೆ ಖಂಡಿತಾ ಬಾರದು. ದಿನದಲ್ಲಿ ಎಂಟರಿಂದ ೧೦ ಲೋಟ ನೀರಾದರೂ ನಿಮ್ಮ ಹೊಟ್ಟೆ ಸೇರಲಿ.

೩. ವ್ಯಾಯಾಮ ಮಾಡಿ: ನಿದ್ದೆ ಬರುತ್ತಿದೆ ಎಂದರೆ ಸಣ್ಣ ಸ್ಟ್ರೆಚ್ಚಿಂಗ್‌ ಮಾಡಿ. ದೇಹದ ಕೈಕಾಲನ್ನು ಅಲ್ಲಾಡಿಸಿ, ಒಂದು ಹತ್ತು ನಿಮಿಷ ಕೂತಲ್ಲೇ, ನಿಂತಲ್ಲೇ ವ್ಯಾಯಾಮ ಮಾಡಿ. ಪ್ರತಿ ಬೆಳಗನ್ನು ಚುರುಕಾಗಿ, ವಾಕಿಂಗೋ, ವ್ಯಾಯಾಮದಿಂದಲೋ ಶುರು ಮಾಡಿದರೆ ನಿದ್ದೆ ಬಾರದು.

ಇದನ್ನೂ ಓದಿ | Good sleep | ಪ್ರತಿ ಮಧ್ಯರಾತ್ರಿ ಒಂದೇ ಸಮಯಕ್ಕೆ ಎಚ್ಚರಾಗೋದು ಯಾಕೆ?!

೪. ನಿಸರ್ಗದ ಜೊತೆ ಸಮಯ ಕಳೆಯಿರಿ: ದಿನವೂ ಪ್ರಕೃತಿಯ ಒಡನಾಟ ಮನುಷ್ಯನಿಗೆ ಬಹಳ ಅಗತ್ಯ. ಕಚೇರಿಯಲ್ಲಿ ಒಂದು ನಿರ್ಧಿಷ್ಟ ಸಮಯದಲ್ಲಿ ನಿದ್ದೆ ನಿಮ್ಮನ್ನು ತೊಂದರೆ ಮಾಡುತ್ತಿದೆ ಎಂದರೆ, ಒಂದಿಷ್ಟು ಸಮಯ ಪ್ರಕೃತಿ ಜೊತೆ ಕಳೆಯಿರಿ. ಕಚೇರಿಯಲ್ಲೇ ಪುಟ್ಟ ಹಸಿರು ಜಾಗವಿದ್ದರೆ ಅಲ್ಲಿ ೧೦ ನಿಮಿಷ ಅಡ್ಡಾಡಿ ಬರಬಹುದು. ಒಂದ್ಹತ್ತು ನಿಮಿಷ ಎದ್ದು ಹೋಗಿ ಒಂದು ನಡೆದಾಡಿ ಬರಬಹುದು. ಒಂದೇ ಜಾಗದಲ್ಲಿ ಕೂತಿದ್ದರೆ ತೂಕಡಿಕೆ ಜಾಸ್ತಿಯಾಗುತ್ತದೆ.

೫. ಪವರ್‌ ನ್ಯಾಪ್‌ ತೆಗೆದುಕೊಳ್ಳಿ: ಏನೇ ಮಾಡಿದರೂ ನಿದ್ದೆ ಬರುವುದು ತಡೆಯಲಾಗುತ್ತಿಲ್ಲವೇ? ಹಾಗಾದರೆ, ಕೆಲಸದ ಮಧ್ಯೆ ೧೫ ನಿಮಿಷ ಅಲ್ಲೇ ಕುರ್ಚಿಯಲ್ಲಿ ಅಡ್ಡಾಗಿ ೧೫ ನಿಮಿಷದ ಟೈಮರ್‌ ಇಟ್ಟು ಕಣ್ಣು ಮುಚ್ಚಿ. ಇಂತಹ ಪವರ್‌ ನ್ಯಾಪ್‌ ಎಷ್ಟೋ ಬಾರಿ ವರ್ಕ್‌ಔಟ್‌ ಆಗುತ್ತದೆ. ನಿದ್ದೆ ಓಡಿ ಹೋಗಿ ಕೆಲಸಕ್ಕೆ ಮತ್ತೆ ಚುರುಕು ಬರುತ್ತದೆ. ಆದರೆ ಟೈಮರ್‌ ಇಡಲು ಮರೆತು ಹಂಗೇ ಅಡ್ಡಾಗಿ ಗಂಟೆಗಟ್ಟಲೆ ನಿದ್ದೆ ಮಾತ್ರ ಮಾಡದಿರಿ!

೬. ನಿಮ್ಮದೇ ಆದ ನಿದ್ದೆಯ ವೈಖರಿಯಿರಲಿ: ಇಂತಹ ಸಮಯ ಏನೇ ಕಷ್ಟಗಳಿದ್ದರೂ ನಿದ್ದೆ ಮಾಡುತ್ತೇನೆ ಹಾಗೂ ಇಷ್ಟು ಹೊತ್ತಿಗೆ ಪ್ರತಿದಿನವೂ ಏಳುತ್ತೇನೆ ಎಂಬ ನಿಯಮ ಸೆಟ್‌ ಮಾಡಿಟ್ಟುಕೊಳ್ಳಿ ಹಾಗೂ ಅದನ್ನು ಆದಷ್ಟೂ ಪಾಲಿಸಲು ಪ್ರಯತ್ನಿಸಿ. ಆಗೀಗ ತಪ್ಪುವ ನಿದ್ದೆಯಿಂದಾಗಿ ಎಷ್ಟೋ ಬಾರಿ ಬೇರೆ ಸಮಯದಲ್ಲಿ ನಿದ್ದೆ ಬರುತ್ತದೆ. ರಾತ್ರಿಯ ನಿದ್ದೆ ಪೂರ್ಣ ಆದರೆ, ಹಗಲಿನ ನಿದ್ದೆಯ ಚಿಂತೆಯೇ ಇರುವುದಿಲ್ಲ.

ಇದನ್ನೂ ಓದಿ | Sleep tips | ಚಳಿಗಾಲದಲ್ಲಿ ನಿದ್ದೆ ಬೇಕೆಂದರೆ ಈ ಏಳು ಸೂತ್ರಗಳನ್ನು ಮರೆಯದಿರಿ!

Exit mobile version