ನಾವು ಬಹಳಷ್ಟು ಮಂದಿ ಪ್ರತಿನಿತ್ಯ ವೃತ್ತಿ ನಿಮಿತ್ತ ಲ್ಯಾಪ್‌ಟಾಪ್ ಮುಂದೆ ಕನಿಷ್ಟ ಎಂಟು ಗಂಟೆ ಕಳೆಯುತ್ತೇವೆ. ಮಧ್ಯೆ ಮಧ್ಯೆ ವಿಶ್ರಾಂತಿ ಎಂದು ಒಂದೈದು ಹತ್ತು ನಿಮಿಷಗಳ ಬ್ರೇಕ್ ಸಿಕ್ಕರೂ, ಲ್ಯಾಪ್‌ಟಾಪ್‌ನಿಂದ ಕಣ್ಣು ತೆಗೆದು ಮೊಬೈಲ್ ಮೇಲೆ ಕಣ್ಣಾಡಿಸುತ್ತೇವೆ. ಕೆಲಸ ಮುಗಿದ ನಂತರ ಮನೆಗೆ ತೆರಳುವಾಗ ಮೆಟ್ರೋನಲ್ಲಿ, ಬಸ್ಸು ಕಾರು ಆಟೋದಲ್ಲಿ ಪಯಣಿಸುವಾಗಲೂ ಮೊಬೈಲ್ ಕಣ್ಣೆದುರು ಹಿಡಿಯುತ್ತೇವೆ. ಮನೆಗೆ ಮರಳುವಷ್ಟರಲ್ಲಿ ದೇಹಕ್ಕೆ ಆದ ಸುಸ್ತಿಗಿಂದತೂ ಮನಸ್ಸಿಗೆ ಆದ ಸುಸ್ತೇ ಹೆಚ್ಚಿರುತ್ತದೆ.
ಇಂದು ಸಾಮಾಜಿಕ ಜಾಲತಾಣಗಳು, ವಿಡಿಯೋ ಕಾಲ್‌ಗಳು, ನೆಟ್‌ಫ್ಲಿಕ್ಸು, ಪ್ರೈಮು ಅಂತೆಲ್ಲಾ ಸಿನಿಮಾ, ಸೀರೀಸುಗಳನ್ನು ಮೊಬೈಲಿನಲ್ಲೇ ವೀಕ್ಷಣೆ ಮಾಡುತ್ತಾ ತೆಗೆದುಕೊಳ್ಳುವ ಬ್ರೇಕ್‌ಗಳು ನಿಜಕ್ಕೂ ನಮಗೆ ಎಷ್ಟರಮಟ್ಟಿಗಿನ ಬ್ರೇಕ್ ಕೊಡುತ್ತಿದೆ ಎಂದು ಯೋಚಿಸುತ್ತೇವಾ? ಸಿನಿಮಾ ವೀಕ್ಷಣೆ, ಚಾಟಿಂಗ್, ಸಾಮಾಜಿಕ ಜಾಲತಾಣಗಳು ಎಂಬ ಕೆಲ ಗಂಟೆಗಳ ವಿಶ್ರಾಂತಿ ನಮಗೆ ನಿಜಕ್ಕೂ ಬೇಕಾಗಿರುವ ವಿಶ್ರಾಂತಿ ನೀಡುತ್ತಿವೆಯಾ ಎಂದು ಯೋಚಿಸಿದ್ದೇವೆಯೇ? ವೃತ್ತಿ ನಿಮಿತ್ತ ಇರುವ ಸ್ಕ್ರೀನ್‌ಟೈಮ್ ಮುಗಿದ ಮೇಲೂ ನಮ್ಮ ಮನರಂಜನೆಗೆ ನಾವು ತೆಗೆದುಕೊಳ್ಳುವ ಬ್ರೇಕ್‌ಗಳೂ ಕೂಡಾ ನಮ್ಮ ದಿನನಿತ್ಯದ ಸ್ಕ್ರೀನ್‌ಟೈಮನ್ನಷ್ಟೇ ಹೆಚ್ಚಿಸುತ್ತದೆಯೇ ವಿನಃ, ನಮಗೆ ಯಾವ ರೀತಿಯಲ್ಲೂ ವಿಶ್ರಾಂತಿ ನೀಡುತ್ತಿಲ್ಲ ಎಂಬುದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.
ಸ್ಮಾರ್ಟ್ ಫೋನ್‌ಗಳು ಬರುವುದಕ್ಕೂ ಮೊದಲು ಜನರು ಹೆಚ್ಚು ದೈಹಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು. ವಾಕಿಂಗ್, ಆಟೋಟ ಇತ್ಯಾದಿಗಳ ಮೂಲಕ ಜನರ ದಿನನಿತ್ಯದ ಚಟುವಟಿಕೆಗಳಲ್ಲೊಂದು ಸಮತೋಲನ ಇರುತ್ತಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ, ವಾಕಿಂಗ್‌ನಂತಹ ಚಟುವಟಿಕೆಯ ಸಂದರ್ಭವೂ ಫೋನ್ ಅದರ ಪಾಡಿಗೆ ಕೆಲಸ ಮಾಡುತ್ತಿರುತ್ತದೆ. ವಾಕಿಂಗ್ ಸಂದರ್ಭವೂ ಜನರು ಫೋನ್ ಬಿಟ್ಟಿರಲು ಇಷ್ಟ ಪಡುವುದಿಲ್ಲ.
ಕೊರೋನಾ ಕಾಲಘಟ್ಟದಲ್ಲಿ ಅನಿವಾರ್ಯಾಗಿ ಹೆಚ್ಚಿದ ಸ್ಕ್ರೀನ್‌ಟೈಮ್ ಇಂದು ಅಬಾಲವೃದ್ಧರಾದಿಯಾಗಿ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಿದೆ. ಮಕ್ಕಳ ಆನ್‌ಲೈನ್ ಶಾಲೆಯಿಂದ ಎಳವೆಯಲ್ಲೇ ಮೊಬೈಲು, ಲ್ಯಾಪ್‌ಟಾಪು ಗ್ಯಾಜೆಟ್ಟುಗಳ ಗೀಳು ಮಕ್ಕಳಲ್ಲೂ ಹೆಚ್ಚಾಗಿದೆ. ಒಂದು ಗಂಟೆಗಿಂತ ಹೆಚ್ಚು ಕಾಲ ನೋಡಬಾರದ ವಯಸ್ಸಿಗೆ ಮಕ್ಕಳು ಗಂಟೆಗಟ್ಟಲೆ ಟಿವಿ, ಮೊಬೈಲು, ಟ್ಯಾಬ್ಲೆಟ್ಟು ಎಂದು ಸಮಯ ವ್ಯಯಿಸುತ್ತಿದ್ದಾರೆ. ತಜ್ಞರ ಪ್ರಕಾರ ವಯಸ್ಕರು ತಮ್ಮ ವೃತ್ತಿಯನ್ನು ಹೊರತುಪಡಿಸಿ ಇಂತಹ ಸ್ಕ್ರೀನ್‌ಟೈಮ್ ಒಂದೆರಡು ಗಂಟೆಗಿಂತ ಹೆಚ್ಚಿರಬಾರದು. ಆದರೆ, ಬಹುತೇಕರ ಸ್ಕ್ರೀನ್‌ಟೈಮ್ ಈ ಮಿತಿಯನ್ನು ದಾಟಿ ಹೋಗಿರುವುದರಿಂದಲೇ ಇಂದು ಬಹಳಷ್ಟು ಮಂದಿ ಅನೇಕ ಆರೋಗ್ಯದ ತೊಂದರೆಗಳನ್ನೂ ಅನುಭವಿಸುತ್ತಿದ್ದಾರೆ.
೧. ನಿದ್ದೆ ಸರಿಯಾಗಿ ಬರುವುದಿಲ್ಲ: ಹೆಚ್ಚಿದ ಸ್ರ್ಕೀನ್‌ಟೈಮ್‌ನಿಂದಾಗಿಯೇ ಇಂದು ಬಹಳಷ್ಟು ಮಂದಿಗೆ ನಿದ್ದೆ ಸಮಸ್ಯೆ ಕಂಡು ಬರುತ್ತಿದೆ. ನೀಲಿ ಬಣ್ಣದ ಬೆಳಕನ್ನು ಹೊರಬಿಡುವ ಇಂತಹ ಗ್ಯಾಜೆಟ್ಟುಗಳಿಂದ ಮಿದುಳು ಹೆಚ್ಚು ಹೊತ್ತು ಎಚ್ಚರದ ಸ್ಥಿತಿಯಲ್ಲೇ ಇದ್ದುಬಿಡುತ್ತದೆ. ದಿನವಿಡೀ ಇದೇ ಸಂದೇಶವನ್ನು ಹೆಚ್ಚು ಗ್ರಹಿಸುವ ಮಿದುಳು ರಾತ್ರಿಯ ಹೊತ್ತು ವಿಶ್ರಾಂತಿ ತೆಗೆದುಕೊಳ್ಳುವಲ್ಲಿ ಕಷ್ಟ ಪಡುತ್ತದೆ. ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ.
೨. ತಲೆನೋವು ಹಾಗೂ ಕಣ್ಣು ನೋವು: ಬಹಳಷ್ಟು ಮಂದಿ ಈ ಸಮಸ್ಯೆ ಅನುಭವಿಸಿರುತ್ತೇವೆ. ದಿನವಿಡೀ ಕಚೇರಿಯಲ್ಲಿ ಒತ್ತಡದಿಂದ ಲ್ಯಾಪ್‌ಟಾಪ್ ಮುಂದೆ ಕೂತು, ಬೇರೆ ಯಾವ ವಿಚಾರಕ್ಕೂ ಸಮಯವಿಲ್ಲದಂತೆ ಹೆಚ್ಚು ಹೊತ್ತು ಕೆಲಸ ಮಾಡಿದರೆ, ಹಾಗೂ ಪದೇ ಪದೇ ಇದೇ ವೇಳಾಪಟ್ಟಿ ಮುಂದುವರಿಯುತ್ತಿದ್ದರೆ, ಕಣ್ಣುರಿ, ಕಣ್ಣು ನೋವು, ತಲೆನೋವು ಹಾಗೂ ಸುಸ್ತಿನಂತಹ ಅನುಭವವಾಗುತ್ತದೆ. ಬಹಳ ಹೊತ್ತು ನೀಲಿ ಬೆಳಕನ್ನೇ ನೋಡುತ್ತಾ ಕೆಲಸ ಮಾಡಬೇಕಾಗಿ ಬಂದಾಗ ಹೀಗೆ ಆಗುವುದು ಸಹಜ.
೩. ಬೆನ್ನು, ಕುತ್ತಿಗೆ, ಸೊಂಟನೋವು: ಒಂದೇ ಭಂಗಿಯಲ್ಲಿ ಕೂತು ಲ್ಯಾಪ್‌ಟಾಪ್ ಮುಂದೆ ಎಡೆಬಿಡದೆ ಕೆಲಸ ಮಾಡುವುದು, ಮನೆಯಲ್ಲಿ ಸರಿಯಾದ ಭಂಗಿಯಲ್ಲಿ ಕೂರದೆ ಲ್ಯಾಪ್‌ಟಾಪ್ ತೊಡೆಯ ಮೇಲಿಟ್ಟು ಕೆಲಸ ಮಾಡುವುದು, ರಾತ್ರಿ ಬೆಡ್ ಮೇಲೆ ಮಲಗಿ ಮೊಬೈಲ್ ಹಿಡಿದು ಗಂಟೆಗಟ್ಟಲೆ ಸಿನಿಮಾ ನೋಡುವುದು, ಕಿವಿಗೆ ಸದಾ ಈಯರ್ ಫೋನ್ ಸಿಕ್ಕಿಸಿ ಹಾಡು ಕೇಳುತ್ತಿರುವುದು ಅಥವಾ ಫೋನ್ ಸಂಭಾಷಣೆ, ಮೀಟಿಂಗ್‌ನಲ್ಲಿ ಭಾಗಿಯಾಗುವುದು ಇತ್ಯಾದಿಗಳಿಂದ ಬೆನ್ನುನೋವು, ಕುತ್ತಿಗೆ ನೋವು ಭುಜ ಹಾಗೂ ಸೊಂಟ ನೋವಿನಂಥ ತೊಂದರೆ ಕಂಡುಬರುತ್ತದೆ.
೪. ಫೋನ್ ಎಂಬ ಚಟ: ಪೋನ್ ಬಳಕೆ ಎಂಬುದೇ ಚಟವಾಗಿ ಬಿಟ್ಟಿರುವುದೂ ಒಂದು ಆರೋಗ್ಯ ಸಮಸ್ಯೆಯೇ. ಕೆಲಸ ಮುಗಿಸಿ ಸುಮ್ಮನೆ ಕೂತಿರುವಾಗಲೂ ನಮಗೇ ಅರಿವಿಲ್ಲದೆ ನಮ್ಮ ಕೈ ಫೋನ್ ಹುಡುಕುತ್ತದೆ. ಯಾರ ಬಳಿಯೋ ಮಾತನಾಡುತ್ತಿರುವಾಗಲೂ ಫೋನ್ ಹುಡುಕುತ್ತೇವೆ. ಒಬ್ಬರ ಮಾತು ಕೇಳಿಸಿಕೊಳ್ಳುವಷ್ಟು ತಾಳ್ಮೆ ವ್ಯವಧಾನ ಇಲ್ಲದಿರುವುದು, ಫೋನ್ ಪಕ್ಕದಲ್ಲಿಲ್ಲದಿದ್ದರೆ ವಿಪರೀತ ಅಸಹನೆಯಾಗುವುದು, ಆಗಾಗ ಸಾಮಾಜಿಕ ಜಾಲತಾಣಗಳನ್ನು ಚೆಕ್ ಮಾಡುತ್ತಿರುವುದು, ದಿನವಿಡೀ ಆನ್‌ಲೈನಿನಲ್ಲೇ ಇರುವುದು ಇತ್ಯಾದಿಗಳೆಲ್ಲವೂ ಮಾನಸಿಕ ಸಮಸ್ಯೆಯೇ. ಇದರಿಂದ ಡಿಪ್ರೆಶನ್‌ನಂತಹ ಮಾನಸಿಕ ಸಮಸ್ಯೆಯಲ್ಲಿಯೂ ಸಿಲಕುವ ಅಪಾಯವಿದೆ. ಮಕ್ಕಳಲ್ಲಿ, ಹದಿಹರೆಯದವರಲ್ಲಿ ವ್ಯಾಪಕವಾಗಿ ಕಾಣುತ್ತಿರುವ ಸಮಸ್ಯೆ ಇಂದು ಇದೇ.
ಇಂತಹ ಸಮಸ್ಯೆಗಳು ಕಾಣುತ್ತಿರುವಾಗಲೇ ಪ್ರತಿಯೊಬ್ಬರೂ ಪ್ರಜ್ಞಾಪೂರ್ವಕವಾಗಿ ತಮ್ಮ ಆರೋಗ್ಯದತ್ತ ಗಮನ ಹರಿಸಿದರೆ ಈ ಚಟದಿಂದ ಹೊರಬರಲು ಸಾಧ್ಯವಿದೆ. ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಆರೋಗ್ಯದಲ್ಲಿ ವ್ಯಾಪಕ ಸುಧಾರಣೆಯನ್ನೂ ಕಾಣಬಹುದು ಎಂಬುದನ್ನು ನೆನಪಿಡಿ. ಮುಖ್ಯವಾಗಿ ಮಾಡುವ ಮನಸ್ಸಿರಬೇಕು ಅಷ್ಟೇ.
ಇದನ್ನೂ ಓದಿ | Eye Care | ಕಣ್ಣುಗಳ ಆರೋಗ್ಯದ ಕುರಿತು ವಿಶೇಷ ಕಾಳಜಿ ಹೀಗಿರಲಿ
೧. ಟೈಮರ್ ಸೆಟ್ ಮಾಡಿ: ಒಂದು ನಿರ್ಧಿಷ್ಟ ಸಮಯವನ್ನು ಸೆಟ್ ಮಾಡಿಕೊಳ್ಳಿ. ಆ ಸಮಯದಲ್ಲಿ ಮಾತ್ರ ಫೋನ್ ಬಳಸಿ. ಟಿವಿ ನೋಡುತ್ತಿದ್ದರೆ, ಯಾವುದೋ ಸಿನಿಮಾ ವೀಕ್ಷಣೆ ಮಾಡುತ್ತಿದ್ದರೆ ಒಂದು ನಿಗದಿತ ಸಮಯಕ್ಕೆ ಟೈಮರ್ ಸೆಟ್ ಮಾಡಿ. ಟೈಮರ್ ಶಬ್ದ ಮಾಡಿದ ಕೂಡಲೇ ಆಫ್ ಡಿ, ಬೇರೆ ದೈಹಿಕ ಚಟುವಟಿಕೆಯತ್ತ ಗಮನ ಹರಿಸಬಹುದು.
೨. ನೋಟಿಫಿಕೇಶನ್ ಆಫ್ ಮಾಡಿ: ಮೊಬೈಲ್ ಆಗಾಗ ಟಣ್ ಎಂದು ಸದ್ದು ಮಾಡುತ್ತಿದ್ದರೆ, ಹೀಗೆ ಬರುವ ಅಲರ್ಟ್‌ಗಳಿಂದ ಆಗಾಗ ಮೊಬೈಲ್ ನೋಡಬೇಕೆನ್ನುವ ಸೆಳೆತ ಹೆಚ್ಚಾದರೆ ಅದಕ್ಕಾಗಿ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳಲು ನೋಟಿಫಿಕೇಶನ್ ಸೆಟ್ಟಿಂಗ್ ಆಫ್ ಮಾಡಿಕೊಳ್ಳಬಹುದು. ಒಂದು ನಿಗದಿತ ಸಮಯದಲ್ಲಿ ಮೊಬೈಲ್ ನೋಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.
೩. ಫೋನ್ ಬೇರೆ ಕೋಣೆಯಲ್ಲಿಡಿ: ರಾತ್ರಿ ಮಲಗಿದ ಮೇಳೆ ಗಂಟೆಗಟ್ಟಲೆ ಫೋನ್ ನೋಡುವ ಚಟ ಬಹುತೇಕರಿಗೆ ಅಭ್ಯಾಸವಾಗಿ ಬಿಟ್ಟಿರುತ್ತದೆ. ಇದರ ಚಕ್ರವ್ಯೂಹದ ಸುಳಿಯಲ್ಲಿ ಸಿಲುಕಿದ ಮಂದಿಗೆ ಹೊರಬರುವ ಮಾರ್ಗ ತಿಳಿದಿರುವುದಿಲ್ಲ. ಅದಕ್ಕಾಗಿ ರಾತ್ರಿ ಮಲಗುವ ಸಮಯಕ್ಕೆ ಮುಂಚಿತವಾಗಿ ಫೋನನ್ನು ಬೇರೆ ಕೋಣೆಯಲ್ಲಿರಿಸಿಬಿಡಿ. ಬೆಳಗಿನ ಅಲರಾಂಗೆ ಹಳೆಯ ಕಾಲದ ಅಲರಾಂ ಗಡಿಯಾರವನ್ನು ನೆಚ್ಚಿಕೊಳ್ಳುವುದು ಒಳ್ಳೆಯದು. ಇದರಿಂದ ಕೆಲ ದಿನಗಳಲ್ಲೇ ನಿದ್ದೆಯಲ್ಲಿ ವ್ಯಾಪಕ ಸುಧಾರಣೆಯನ್ನು ನೀವೇ ಕಂಡುಕೊಳ್ಳಬಹುದು.
ಇದನ್ನೂ ಓದಿ | Kangaroo care | ಅವಧಿಪೂರ್ವದಲ್ಲಿ ಜನಿಸಿದ ಮಗುವಿಗೆ ಬೆಚ್ಚಗಿನ ಅಪ್ಪುಗೆ: ವಿಶ್ವ ಆರೋಗ್ಯ ಸಂಸ್ಥೆ ಸೂಚನೆ