Site icon Vistara News

ICMR Dietary Guidelines: ಊಟದ ಮೊದಲು, ಊಟದ ನಂತರ ಚಹಾ, ಕಾಫಿ ಕುಡಿದರೆ ಏನಾಗುತ್ತದೆ?

ICMR Dietary Guidelines

ಊಟದ ಮೊದಲು ಮತ್ತು ಅನಂತರ (Before And After Meals) ಚಹಾ (tea) ಅಥವಾ ಕಾಫಿಯನ್ನು (coffee) ಸೇವಿಸಲೇಬಾರದು ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ತನ್ನ ಆರೋಗ್ಯಕರ ಜೀವನಕ್ಕಾಗಿ ಆಹಾರ ಕ್ರಮದ ಕುರಿತಾಗಿ ಪ್ರಕಟಿಸಿರುವ ಮಾರ್ಗಸೂಚಿಯಲ್ಲಿ (ICMR Dietary Guidelines) ಹೇಳಿದೆ. ಟೀ ಮತ್ತು ಕಾಫಿಯಲ್ಲಿ ಇರುವ ಕೆಫೀನ್ (caffeine) ಕೇಂದ್ರ ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಕಾಫಿ, ಟೀ ಮೇಲಿನ ಅವಲಂಬನೆಯನ್ನು ಹೆಚ್ಚಿಸುತ್ತದೆ ಎಂದು ಐಸಿಎಂಆರ್ ಸಂಶೋಧಕರು ತಿಳಿಸಿದ್ದಾರೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಂಶೋಧಕರು ಚಹಾ ಮತ್ತು ಕಾಫಿ ಸೇವನೆಯಲ್ಲಿ ಮಿತವಾಗಿರುವಂತೆ ಸಲಹೆ ನೀಡಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ಈ ಎರಡು ಪಾನೀಯಗಳು ಆರೋಗ್ಯಕರ ಅಭ್ಯಾಸವಲ್ಲ ಎಂದು ತಿಳಿಸಿದ್ದಾರೆ.

ವೈದ್ಯಕೀಯ ಸಂಸ್ಥೆಯು ಇತ್ತೀಚೆಗೆ 17 ಹೊಸ ಆಹಾರ ಮಾರ್ಗಸೂಚಿಗಳನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) ಸಹಭಾಗಿತ್ವದಲ್ಲಿ ಪರಿಚಯಿಸಿದೆ. ಇದು ಭಾರತದಾದ್ಯಂತ ಆರೋಗ್ಯಕರ ಆಹಾರ ಪದ್ಧತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಮಾರ್ಗಸೂಚಿಗಳು ವೈವಿಧ್ಯಮಯ ಆಹಾರ ಮತ್ತು ಸಕ್ರಿಯ ಜೀವನಶೈಲಿಯ ಮಹತ್ವವನ್ನು ಒತ್ತಿಹೇಳುತ್ತವೆ.

ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಗುರುತಿಸುವಾಗ, ವೈದ್ಯಕೀಯ ತಜ್ಞರು ಸಂಭಾವ್ಯ ಆರೋಗ್ಯದ ಕಾಳಜಿಯಿಂದಾಗಿ ಚಹಾ ಮತ್ತು ಕಾಫಿಯ ಅತಿಯಾದ ಸೇವನೆಯ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

ಯಾಕೆ ಒಳ್ಳೆಯದಲ್ಲ?

ಐಸಿಎಂಆರ್ ಸಂಶೋಧಕರು ಟೀ ಮತ್ತು ಕಾಫಿಯು ಕೆಫೀನ್ ಅನ್ನು ಒಳಗೊಂಡಿರುತ್ತದೆ, ಇದು ಕೇಂದ್ರ ನರಮಂಡಲವನ್ನು ಉತ್ತೇಜಿಸುತ್ತದೆ ಮತ್ತು ಶಾರೀರಿಕ ಅವಲಂಬನೆಯನ್ನು ಪ್ರೇರೇಪಿಸುತ್ತದೆ ಎಂದು ವಿವರಿಸಿದ್ದಾರೆ.

ಮಾರ್ಗಸೂಚಿಗಳು ಜನಪ್ರಿಯ ಪಾನೀಯಗಳ ಕೆಫೀನ್ ಅಂಶದ ಮೇಲೆ ಬೆಳಕು ಚೆಲ್ಲಿದೆ. 150 ಮಿಲಿ ಕಪ್ ಕುದಿಸಿದ ಕಾಫಿಯು 80 – 120 ಮಿಲಿ ಗ್ರಾಂ ಕೆಫೀನ್ ಅನ್ನು ಹೊಂದಿರುತ್ತದೆ. ಇನ್ ಸ್ಟೆಂಟ್ ಕಾಫಿ 50 – 65 ಮಿಲಿ ಗ್ರಾಂ ಮತ್ತು ಚಹಾವು 30 – 65 ಮಿಲಿ ಗ್ರಾಂ ಕೆಫೀನ್ ಹೊಂದಿರುತ್ತದೆ ಎಂದು ಐಸಿಎಂಆರ್ ತಿಳಿಸಿದೆ.


ಎಷ್ಟು ಸೇವಿಸಬಹುದು?

ಐಸಿಎಂಆರ್ ಪ್ರತಿದಿನ ಕೇವಲ 300 ಮಿಲಿ ಗ್ರಾಂ ಕೆಫೀನ್ ಸೇವನೆ ಮಾಡಬಹುದು ಎಂದು ಹೇಳಿದೆ. ಟೀ, ಕಾಫಿಯಲ್ಲಿರುವ ಕೆಫೀನ್ ಅಂಶ ದೇಹದಲ್ಲಿ ಕಬ್ಬಿಣವನ್ನು ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುವ ಕಾರಣ ಊಟಕ್ಕೆ ಮೊದಲು ಮತ್ತು ಅನಂತರ ಕನಿಷ್ಠ ಒಂದು ಗಂಟೆ ಚಹಾ ಅಥವಾ ಕಾಫಿಯನ್ನು ತ್ಯಜಿಸಲು ವೈದ್ಯಕೀಯ ಸಂಸ್ಥೆ ಸಲಹೆ ನೀಡಿದೆ.

ಕೆಫೀನ್‌ಗಳು ಹೊಟ್ಟೆಯಲ್ಲಿ ಕಬ್ಬಿಣವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ದೇಹಕ್ಕೆ ಕಬ್ಬಿಣವನ್ನು ಸರಿಯಾಗಿ ಹೀರಿಕೊಳ್ಳಲು ಕಷ್ಟವಾಗುತ್ತದೆ. ಇದು ಕಬ್ಬಿಣದ ಕೊರತೆ ಮತ್ತು ರಕ್ತಹೀನತೆಯಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅತಿಯಾದ ಕಾಫಿ ಸೇವನೆಯು ಅಧಿಕ ರಕ್ತದೊತ್ತಡ ಮತ್ತು ಹೃದಯದ ಆರೋಗ್ಯಕ್ಕೂ ಒಳ್ಳೆಯದಲ್ಲ ಎಂದು ಹೇಳಿದೆ.

ಇದನ್ನೂ ಓದಿ: ICMR Dietary Guidelines: ನಿಮ್ಮ ಆರೋಗ್ಯ ಚೆನ್ನಾಗಿರಬೇಕೆ? ತಜ್ಞ ಸಮಿತಿಯ ಈ ಆಹಾರ ಸಲಹೆ ಪಾಲಿಸಿ

ಬ್ಲ್ಯಾಕ್‌ ಚಹಾದಿಂದ ಪ್ರಯೋಜನ

ಹಾಲು ಇಲ್ಲದೆ ಚಹಾವನ್ನು ಕುಡಿಯುವುದರಿಂದ ರಕ್ತ ಪರಿಚಲನೆಯಲ್ಲಿ ಸುಧಾರಣೆ, ರಕ್ತನಾಳಗಳ ಸಮಸ್ಯೆ ಮತ್ತು ಹೊಟ್ಟೆಯ ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಐಸಿಎಂಆರ್ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಆಹಾರದಲ್ಲಿ ಏನಿರಬೇಕು?

ಆಹಾರಗಳಲ್ಲಿ ಹಣ್ಣು, ತರಕಾರಿ, ಧಾನ್ಯ, ನೇರ ಮಾಂಸ ಮತ್ತು ಸಮುದ್ರಾಹಾರವನ್ನು ಶಿಫಾರಸು ಮಾಡಿರುವ ಐಸಿಎಂಆರ್ ಸಂಶೋಧಕರು ತೈಲ, ಸಕ್ಕರೆ ಮತ್ತು ಉಪ್ಪಿನ ಸೇವನೆಯನ್ನು ಸೀಮಿತಗೊಳಿಸುವಂತೆ ಸೂಚಿಸಿದ್ದಾರೆ.

Exit mobile version