Site icon Vistara News

Healthy Breakfast: ಬೆಳಗಿನ ಉಪಾಹಾರಕ್ಕೆ ಇಡ್ಲಿ, ದೋಸೆಗಳೇ ಬೆಸ್ಟ್;‌ ಏಕೆ ಗೊತ್ತೆ?

Healthy Breakfast

ಬೆಳಗ್ಗಿನ ಉಪಾಹಾರ (Healthy Breakfast) ಎಂಬುದು ಪ್ರತಿದಿನದ ಅತ್ಯಂತ ಅಗತ್ಯದ ಆಹಾರ. ಯಾಕೆಂದರೆ, ಇಡೀ ದಿನಕ್ಕೆ ಶಕ್ತಿ ಚೈತನ್ಯ ಹಾಗೂ ಸಾಮರ್ಥ್ಯ ನೀಡುವ ಇದೇ. ರಾತ್ರಿ ಬಹಳ ಹೊತ್ತು ಹೊಟ್ಟೆ ಖಾಲಿಯಾಗಿದ್ದಾಗ, ಮತ್ತೆ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಚಾಲನೆ ಮಾಡುವ ಆಹಾರಕ್ರಮ. ಹಾಗಾಗಿ ಬೆಳಗ್ಗೆ ಎದ್ದ ಕೂಡಲೇ ಏನು ಸೇವಿಸುತ್ತೇವೆ ಎಂಬುದು ಬಹಳ ಮುಖ್ಯ. ಆರೋಗ್ಯಕರ ಆಹಾರ ಸೇವಿಸದಿದ್ದರೆ ಖಂಡಿತ ಅದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಹಾಗೂ ನಮ್ಮ ಸಂಪೂರ್ಣ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಬ್ರೆಡ್‌, ಜ್ಯಾಂ, ಜ್ಯೂಸ್‌ ಯಾಕೆ?

ಕೆಲವೊಮ್ಮೆ ಆರೋಗ್ಯಕರ ಎಂದುಕೊಂಡು ಅನಾರೋಗ್ಯಕರ ಮಾದರಿಯಲ್ಲಿ ಆಹಾರವನ್ನು ಸೇವಿಸುವುದೂ ಕೂಡ ಈಗ ಅಭ್ಯಾಸವಾಗಿದೆ. ಟ್ರೆಂಡ್‌ ಕೂಡಾ ಆಗುತ್ತಿದೆ. ನಮ್ಮ ಹಿರಿಯರು ಸೇವಿಸುತ್ತಿದ್ದ ಮಾದರಿಯ ಇಡ್ಲಿ, ಉಪ್ಪಿಟ್ಟು, ಬಗೆಬಗೆಯ ದೋಸೆಗಳು, ರೊಟ್ಟಿ ಮತ್ತಿತರ ತಿಂಡಿಗಳನ್ನೆಲ್ಲ ಬಿಟ್ಟು ನಾವು ಆರೋಗ್ಯಕರ ಎಂಬ ಹಣೆಪಟ್ಟಿಯಡಿ, ಹಣ್ಣಿನ ಜ್ಯೂಸ್‌, ಬ್ರೆಡ್‌ ಜೊತೆ ಜ್ಯಾಮ್‌, ಚಾಕೋಲೇಟ್‌ ಸ್ಪ್ರೆಡ್‌ ಹಾಕಿದ ಬ್ರೆಡ್‌, ಸಿರಿಯಲ್‌ಗಳು ಇತ್ಯಾದಿಗಳನ್ನೆಲ್ಲ ತಿನ್ನುತ್ತೇವೆ. ಆದರೆ, ಬೆಳ್ಳಂಬೆಳಗ್ಗೆ ಹೀಗೆ ಸಿಹಿಯಾದ ಬ್ರೇಕ್‌ಫಾಸ್ಟ್‌ ಖಂಡಿತವಾಗಿಯೂ ನಮ್ಮ ದೇಹಕ್ಕೆ ಒಳ್ಳೆಯದನ್ನು ಮಾಡುತ್ತವೆಯೋ ಎಂಬ ಬಗ್ಗೆ ನಾವು ಹೆಚ್ಚು ಕೂಲಂಕುಷ ವಿಮರ್ಶೆ ಮಾಡಿ ನೋಡುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಹಲವರು ಮಾಡಿದ ಕ್ರಮವನ್ನೇ ನಾವೂ ಕೂಡಾ ಅನುಸರಿಸುತ್ತೇವೆ. ಆದರೆ, ನೈಸರ್ಗಿಕ ಹಣ್ಣಿನ ರಸವೇ ಆದರೂ, ಇದು ಖಂಡಿತವಾಗಿಯೂ ಬೆಳಗಿನ ಹೊತ್ತು ಸೇವಿಸುವುದರಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ಏರಲು ಇದು ಕಾರಣವಾಗುತ್ತದೆ. ಮಧುಮೇಹ ಇಲ್ಲದೆ ಇರುವ ಮಂದಿಗಾದರೂ, ದೇಹದಲ್ಲಿ ಅನವಶ್ಯಕ ಸಕ್ಕರೆಯ ಏರಿಕೆಗೆ ಇದು ಕಾರಣವಾಗಿತ್ತದೆ. ಜ್ಯಾಮ್‌, ಚಾಕೋಲೇಟ್‌ ಸ್ಪ್ರೆಡ್‌ ಮತ್ತಿತರ ತಿನಿಸುಗಳಲ್ಲಿ ಮೊದಲೇ ಸಕ್ಕರೆ ಇರುವುದರಿಂದ ಇವೂ ಖಂಡಿತವಾಗಿಯೂ ಒಳ್ಳೆಯದು ಮಾಡಲಾರವು.

ಸಿಹಿ ಪದಾರ್ಥ ಕಡಿಮೆ ಮಾಡಿ

ಕೆಲವು ಅಧ್ಯಯನಗಳ ಪ್ರಕಾರ, ಹೀಗೆ ಸಿಹಿಯಾದ ಆಹಾರವನ್ನು ಬೆಳಗಿನ ಹೊತ್ತು ಸೇವಿಸುವುದರಿಂದ ದೇಹದಲ್ಲಿ ಗ್ಲುಕೋಸ್‌ ದಿಡೀರನೇ ಏರುತ್ತದೆ. ಇದರಿಂದ ನಿಮಗೆ ಹೂಡಲೇ ಶಕ್ತಿ ಸಾಮರ್ಥ್ಯ ದೊರೆತಂತಾದರೂ, ಬಹುಬಗನೆ ದೇಹ ಶಕ್ತಿ ಕಳೆದುಕೊಂಡು ಮತ್ತೆ ಹಸಿವಿಗೆ ಕಾರಣವಾಗುತ್ತದೆ. ಹಾಗಾಗಿ ಇವೆಲ್ಲ ದೇಹಕ್ಕೆ ಹೆಚ್ಚು ಹೊತ್ತು ಹಸಿವಾಗದಂತೆ ಇರಬಲ್ಲ ಆಹಾರಗಳ ಆಯ್ಕೆಯಲ್ಲ.
ನಮ್ಮ ದೇಹದ ಅಂಗಾಂಶಗಳಲ್ಲಿ ಮೈಟೋಕಾಂಡ್ರಿಯಾ ಎಂಬ ಪುಟ್ಟ ಕಾರ್ಖಾನೆಗಳಿವೆ. ಈ ಮೈಟೋಕಾಂಡ್ರಿಯಾಗಳು ಶಕ್ತಿ ಉತ್ಪಾದನೆಯ ಕೇಂದ್ರಗಳು. ಬೆಳಗ್ಗೆಯೇ ಸಿಹಿಯುಕ್ತ ಬ್ರೇಕ್‌ಫಾಸ್ಟ್‌ ತಿನ್ನುವುದರಿಂದ ಈ ಶಕ್ತಿ ಉತ್ಪಾದನೆ ಮಾಡುವ ನಮ್ಮ ದೇಹದ ಕಾರ್ಖಾನೆಗಳಿಗೆ ನಾವು ತೊಂದರೆ ಮಾಡುತ್ತೇವೆ. ಹಾಗಾಗಿ, ಅವುಗಳಿಗೆ ನಾವು ಶಕ್ತಿ ಉತ್ಪಾದಿಸಲು ಸರಿಯಾದ ಆಹಾರವನ್ನು ನೀಡಬೇಕು. ಬಹುಬೇಗನೆ ಶಕ್ತಿ ಉತ್ಪಾದಿಸುವ ಆಹಾರ ನೀಡಬಾರದು ಎನ್ನುತ್ತಾರೆ ತಜ್ಞರು.

Ghee roast Dosa and Idli

ಇಡ್ಲಿ, ದೋಸೆಗಳೇ ಒಳ್ಳೆಯದು!

ಧಾನ್ಯಗಳು, ಬೇಳೆಕಾಳುಗಳಿಂದ ಮಾಡಿದ ತಿಂಡಿಗಳು, ಮೊಸರು, ಮೊಟ್ಟೆ, ಮೀನು ಇತ್ಯಾದಿಗಳನ್ನು ಹೊಂದಿರುವ ಬೆಳಗಿನ ಉಪಾಹಾರ ಒಳ್ಳೆಯದು ಎನ್ನುತ್ತವೆ ಈ ವರದಿಗಳು. ಪ್ರೊಟೀನ್‌ಯುಕ್ತ ಆಹಾರಗಳು, ಆರೋಗ್ಯಕರ ಕೊಬ್ಬನ್ನು ಹೊಂದಿರುವ ಬೆಣ್ಣೆ ಹಣ್ಣು, ಆಲಿವ್‌ ಏಣ್ಣೆ, ಬೆಣ್ಣೆ, ಚೀಸ್‌ ಇವೆಲ್ಲ ಬೆಳಗಿನ ಸಮಯದಲ್ಲಿ ತಿನ್ನಬಹುದು. ಕೆಲವು ತರಕಾರಿಗಳನ್ನೂ ನೀವು ಸೇವಿಸಬಹುದು.
ಹಾಗಾಗಿ, ಭಾರತೀಯರ ಬೆಳಗಿನ ಆಹಾರ ಪದ್ಧತಿ, ಆರೋಗ್ಯಕರ ಮಾದರಿಯಲ್ಲೇ ಇದೆ. ಅದರಲ್ಲೂ ದಕ್ಷಿಣ ಭಾರತೀಯರ ಬೆಳಗಿನ ಆಹಾರಕ್ರಮದಲ್ಲಿ, ಬೇಳೆಕಾಳುಗಳು, ಧಾನ್ಯಗಳು ಹೇರಳವಾಗಿ ಬಳಸಲ್ಪಡುವುದರಿಂದ ಪ್ರೊಟೀನ್‌ ಹಾಗೂ ಇತರ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿ ದೇಹ ಸೇರುತ್ತವೆ. ಹೀಗಾಗಿ, ನಮ್ಮ ಆಹಾರ ಪದ್ಧತಿಗಳನ್ನು ಟ್ರೆಂಡ್‌ಗಳಿಗನುಸಾರವಾಗಿ ಬದಲಿಸುವ ಮುನ್ನ ಯೋಚಿಸಿ.

Exit mobile version