ತಾಯ್ತನ ಪ್ರತಿ ಮಹಿಳೆಯ (Pregnancy beauty Care) ಬದುಕಿನಲ್ಲೂ ಬರುವ ಮಹತ್ವದ ಘಟ್ಟ, ಹಾಗೆಯೇ ಸುಂದರವಾದ ಅಧ್ಯಾಯ. ಮಗುವನ್ನು ಹೊತ್ತಿರುವ 9 ತಿಂಗಳ ಅವಧಿಯಿಂದಲೇ ಆಂತರಿಕವಾಗಿ ಹಾಗೂ ಬಾಹ್ಯವಾಗಿ ಮಹಿಳೆಯ ದೇಹ ಹಲವಾರು ಬದಲಾವಣೆಗಳಿಗೆ ಒಡ್ಡಿಕೊಳ್ಳುವ ಕಾಲ ಇದು. ಹಾರ್ಮೋನುಗಳ ವೈಪರೀತ್ಯದಿಂದಾಗಿ ಚರ್ಮವೂ ಈ ಸಂದರ್ಭ ಸಾಕಷ್ಟು ಬದಲಾವಣೆಯನ್ನು ಕಾಣುತ್ತದೆ. ಇದ್ದಕ್ಕಿದ್ದಂತೆ ಆಗುವ ಈ ಬದಲಾವಣೆಗಳೆಲ್ಲವೂ ಮಹಿಳೆಯನ್ನು ಕಳವಳಕ್ಕೀಡುಮಾಡುತ್ತದೆ. ಹಾಗಾಗಿ ಗರ್ಭಿಣಿ ಸ್ತ್ರೀಯರಲ್ಲಿ ಕಂಡು ಬರುವ ಚರ್ಮದ ತೊಂದರೆಗಳು ಹಾಗೂ ಅವುಗಳ ಪರಿಹಾರೋಪಾಯಗಳು ಇಲ್ಲಿವೆ.
ಸ್ಟ್ರೆಚ್ ಮಾರ್ಕ್
ಶೇಕಡಾ 90ರಷ್ಟು ಮಹಿಳೆಯರು ತಮ್ಮ ತಾಯ್ತನದ ಸಂದರ್ಭ ಅನುಭವಿಸುವ ಸಮಸ್ಯೆ ಇದು. ಕೆಂಪಗಿನ, ನೇರಳೆಯ ಉದ್ದುದ್ದ ಕಲೆಗಳು ಗರ್ಭಿಣಿ ಸ್ತ್ರೀಯ ಚರ್ಮದ ಮೇಲೆ ಕಾಣಿಸಿಕೊಳ್ಳಲಾರಂಭಿಸುತ್ತದೆ. ಚರ್ಮ ಹಿಗ್ಗುವಾಗ ಆಗುವ ಸಮಸ್ಯೆಯಿದು. ಮುಖ್ಯವಾಗಿ ಹೊಟ್ಟೆ ತನ್ನ ಗಾತ್ರವನ್ನು ಹೆಚ್ಚು ಮಾಡುತ್ತಾ ಹೋದಂತೆ ಈ ಕಲೆಗಳು ಅಧಿಕವಾಗುತ್ತಾ ಹೋಗುತ್ತದೆ. ಹೆರಿಗೆಯ ನಂತರ ಈ ಕಲೆಗಳು ಬಿಳಿಯ ಬಣ್ಣಕ್ಕೆ ತಿರುಗಿದರೂ ಅಷ್ಟು ಸುಲಭವಾಗಿ ಹಲವು ವರ್ಷಗಳೇ ಕಳೆದರೂ ಮಾಸುವುದಿಲ್ಲ.
- ಸಮಸ್ಯೆ ಶುರುವಾಗುವ ಮೊದಲೇ ತಡೆದರೆ ಸಮಸ್ಯೆ ಅಷ್ಟು ದೊಡ್ಡದಾಗಿರುವುದಿಲ್ಲ ಎಂಬುದು ಅರಿತವರ ಮಾತು. ಹಾಗಾಗಿ, ಗರ್ಭಿಣಿ ಸ್ತ್ರೀಯರು ಪ್ರತಿದಿನವೂ ಕೋಕೋ ಬಟರ್ ಹಾಗೂ ಶಿಯಾ ಬಟರ್ಯುಕ್ತ ಮಾಯ್ಶ್ಚರೈಸರ್ ಹಚ್ಚುತ್ತಿದ್ದರೆ ಈ ಸಮಸ್ಯೆಗೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬಹುದು. ಗರ್ಭಿಣಿಯಾಗಿದ್ದಾಗಲೂ, ಹೆರಿಗೆಯ ನಂತರವೂ ಹಚ್ಚುವುದು ಬಹಳ ಮುಖ್ಯ.
- ಮಸಾಜ್ ಕೂಡಾ ಇದಕ್ಕೆ ಅತ್ಯುತ್ತಮ ಪರಿಹಾರ. ಆದರೆ, ಮೃದುವಾಗಿ ಮಾಡಿ. ಹೆಚ್ಚು ಒತ್ತಡ ಬೇಡ.
- ಆರಂಭದಲ್ಲಿ ಈ ಸ್ಟ್ರೆಚ್ ಮಾರ್ಕ್ಗಳು ಕೆಂಬಣ್ಣದಲ್ಲಿ ಗೋಚರಿಕೊಳ್ಳುವಾಗಲೇ ಇದರ ಮೇಲೆ ಗಮನ ನೀಡಿದರೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.
- ಮುಂದಿನ ದಿನಗಳಲ್ಲಿ ಚರ್ಮದ ತಜ್ಞರನ್ನು ಸಂಪರ್ಕಿಸಿ ಪಿಆರ್ಪಿ, ಮೈಕ್ರೋನೀಡಲಿಂಗ್ ಮತ್ತಿತರ ಕಾಸ್ಮೆಟಿಕ್ ಚಿಕಿತ್ಸೆಗಳ ಮೂಲಕ ಕಲೆಗಳನ್ನು ಕಡಿಮೆಗೊಳಿಸಬಹುದು.
ಮೊಡವೆ
ಮೊಡವೆ ಸಮಸ್ಯೆಯೂ ಕೂಡ ಗರ್ಭಿಣಿ ಸ್ತ್ರೀಯರಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ. ಕೆಲವರಿಗೆ ಮೊಡವೆಯ ತೊಂದರೆ ಗರ್ಭಿಣಿಯಾದ ಮೇಲೆ ಕಡಿಮೆಯಾದರೆ, ಇನ್ನೂ ಕೆಲವರಿಗೆ ಇದು ಉಲ್ಬಣಿಸುತ್ತದೆ. ಇದು ಹಾರ್ಮೋನುಗಳಲ್ಲಿ ಬದಾಲವಣೆಯೇ ಈ ಸಮಸ್ಯೆಯ ಮೂಲ ಕಾರಣ.
- ಹೆಚ್ಚು ಹೆಚ್ಚು ನೀರು ಕುಡಿಯಿರಿ. ಇದರಿಂದ ಕಲ್ಮಶಗಳು ದೇಹದಿಂದ ಹೊರತಳ್ಳಲ್ಪಡುತ್ತದೆ.
- ಮೇಕಪ್ ಮಾಡಿದ್ದರೆ, ಮಲಗುವ ಮುನ್ನ ಅವನ್ನು ಸಂಪೂರ್ಣವಾಗಿ ತೆಗೆಯಿರಿ, ಚರ್ಮವನ್ನು ಸ್ವಚ್ಛವಾಗಿಡಿ. ಪದೇ ಪದೇ ಮುಖವನ್ನು ಮುಟ್ಟುತ್ತಿರಬೇಡಿ.
- ಬೆಂಜೋಯಿಲ್ ಪೆರಾಕ್ಸೈಡ್ ಇರುವ ಸೌಂದರ್ಯವರ್ಧಕ ಬಳಸಿ. ಇದು ಮುಖದ ಸೂಕ್ಷ್ಮ ರಂಧ್ರಗಳಲ್ಲಿರುವ ಕೊಳೆಯನ್ನು ತೆಗೆದುಹಾಕುತ್ತದೆ.
- ರೆಟಿನಾಲ್ ಇರುವ ಸೌಂದರ್ಯ ವರ್ಧಕಗಳು ಮೊಡವೆಗೆ ಒಳ್ಳೆಯದಾದರೂ, ಗರ್ಭಿಣಿಯರಿಗೆ ಹಾಗೂ ಹಾಲುಣಿಸುವ ತಾಯಂದಿರಿಗೆ ಇದು ಒಳ್ಳೆಯದಲ್ಲ.
ಗರ್ಭಿಣಿ ಸ್ತ್ರೀಯರು ಸೌಂದರ್ಯದ ವಿಚಾರದಲ್ಲಿ ಅನುಭವಿಸುವ ಇನ್ನೊಂದು ಸಾಮಾನ್ಯ ತೊಂದರೆ ಎಂದರೆ ಮುಖದ ಮೇಲಿನ ಕಪ್ಪು ಚುಕ್ಕೆಗಳು. ಅನುವಂಶಿಕವಾಗಿಯೋ, ಬಿಸಿಲಿನ ಪರಿಣಾಮವೋ ಚರ್ಮದ ಮೇಲೆ ಚುಕ್ಕೆಗಳು ಈ ಸಂದರ್ಭ ಹೆಚ್ಚು ಗೋಚರಿಸಲಾರಂಭಿಸುತ್ತವೆ. ಹಣೆಯ ಮೇಲೆ, ಕೆನ್ನೆ, ಮೂಗು ಮತ್ತಿತರ ಭಾಗಗಳಲ್ಲಿ ಇವುಗಳ ಸಮಸ್ಯೆ ಇನ್ನೂ ಹೆಚ್ಚಿರುತ್ತದೆ.
- ಬಿಸಿಲಿನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯವಾದದ್ದು. ಇದು ನಿಮ್ಮ ಈ ತೊಂದರೆಯನ್ನು ಇನ್ನಷ್ಟು ಹೆಚ್ಚಾಗಿಸುತ್ತದೆ. ಬಿಸಿಲಲ್ಲಿ ಹೊರಹೋಗಬೇಕಾಗಿ ಬಂದಾಗ ಛತ್ರಿ, ಸ್ಕಾರ್ಫ್ ಧರಿಸಿಕೊಳ್ಳಿ.
- ಹೊರಗೆ ಬಿಸಿಲಿನಲ್ಲಿ ಕಾಲಿಡುವ 15 ನಿಮಿಷಕ್ಕೂ ಮೊದಲು ಎಸ್ಪಿಎಫ್ 30ಕ್ಕೂ ಹೆಚ್ಚಿನ ಪ್ರಮಾಣವನ್ನು ಹೊಂದಿದ ಸನ್ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಿ. ಬಿಸಿಲುಗಾಲದಲ್ಲಿ ಹೊರಗೆ ಕಾಲಿಡುವಾಗ ಮಾತ್ರವಲ್ಲ. ಮನೆಯ ಒಳಗೂ ಹಚ್ಚಿಕೊಳ್ಳುವುದು ಒಳ್ಳೆಯದು.
- ವಿಟಮಿನ್ ಸಿ, ಇ ಮತ್ತು ಎ ಇರುವ ಸ್ಕಿನ್ ಲೈಟನಿಂಗ್ ಲೋಷನ್ ಹಚ್ಚಿಕೊಳ್ಳುವುದರಿಂದ ಈ ಸಮಸ್ಯೆಗೆ ಕೊಂಚ ಮಟ್ಟಿನ ಪರಿಹಾರ ಸಿಗಬಹುದು.
ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…