Site icon Vistara News

Hernia Prevention: ಹೀಗೆ ಜಾಗೃತೆ ವಹಿಸಿದರೆ ಹರ್ನಿಯಾದ ಅಪಾಯ ದೂರ!

Hernia Prevention

ಇತ್ತೀಚಿನ ದಿನಗಳಲ್ಲಿ ಹಲವರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಹರ್ನಿಯ (Hernia Prevention) ಸಹ ಒಂದು. ಹೊಟ್ಟೆಯೊಳಗಿನ ಕರುಳಿನ ಒಂದು ಭಾಗ ಅಥವಾ ಅಂಗಾಂಶಗಳು ಕಿಬ್ಬೊಟ್ಟೆಯ ಮೃದು ಭಾಗದಲ್ಲಿ ಒತ್ತರಿಸಿಕೊಂಡು ಬರುತ್ತವೆ. ಸಾಮಾನ್ಯವಾಗಿ ಕಿಬ್ಬೊಟ್ಟೆಯ ಭಾಗದಲ್ಲಿ ಮುಂದೆ ಬರುವ ಅಂಗಾಂಶಗಳು ಕೆಲವೊಮ್ಮೆ ಮೇಲ್ತೊಡೆಯ ಭಾಗದಲ್ಲೂ ಒತ್ತರಿಸಬಹುದು. ಈ ಲಕ್ಷಣಗಳನ್ನು ಹರ್ನಿಯ ಎನ್ನಲಾಗುತ್ತದೆ.
ಕರುಳು ಅಥವಾ ಹೊಟ್ಟೆಯೊಳಗಿನ ಅಂಗಗಳ ಮೇಲೆ ಒತ್ತಡ ಹೆಚ್ಚಿದಂತೆ ಹೀಗೆ ಕೆಳಗೆ ಒತ್ತರಿಸುವ ಸಾಧ್ಯತೆಗಳು ಹೆಚ್ಚುತ್ತವೆ. ವಯಸ್ಸಾದಂತೆ ಈ ಪ್ರಮಾಣ ಹೆಚ್ಚು. ಸಾಮಾನ್ಯವಾಗಿ ನಾಲ್ಕು ರೀತಿಯ ಹರ್ನಿಯಾಗಳನ್ನು ಗುರುತಿಸಲಾಗುತ್ತದೆ. ವಯಸ್ಸು, ಗರ್ಭಾವಸ್ಥೆ, ಬೊಜ್ಜು, ವಿಪರೀತ ಭಾರ ಎತ್ತುವುದು, ಧೂಮಪಾನ, ಹಳೆಯ ಗಾಯ ಮುಂತಾದವು ಹರ್ನಿಯ ಉಂಟಾಗುವುದಕ್ಕೆ ಮೂಲವಾಗುತ್ತವೆ. ಕೆಲವೊಮ್ಮೆ ಆರಂಭಿಕ ಲಕ್ಷಣಗಳು ಅಷ್ಟಾಗಿ ಕಾಣದೆ, ಚಿಕಿತ್ಸೆ ತಡವಾಗುವ ಸಾಧ್ಯತೆಯೂ ಇದೆ. ಶಸ್ತ್ರಚಿಕಿತ್ಸೆಯ ಮೂಲಕ ಈ ತೊಡಕನ್ನು ಸರಿಪಡಿಸಲಾಗುತ್ತದೆ. ಹರ್ನಿಯ ಇರುವವರು ತೆಗೆದುಕೊಳ್ಳಬೇಕಾದ ಎಚ್ಚರಿಕೆಯೇನು?

ವ್ಯಾಯಾಮ

ಲಘು ವ್ಯಾಯಾಮದಿಂದ ಶರೀರವನ್ನು ಚಟುವಟಿಕೆಯಿಂದ ಇರಿಸಿಕೊಳ್ಳಬೇಕು. ಆದರೆ ಕಠಿಣ ವ್ಯಾಯಾಮ ಮಾಡುವುದು ಮತ್ತು ಭಾರ ಎತ್ತುವುದು ಸಲ್ಲದು. ಮುಖ್ಯವಾಗಿ, ಹೊಟ್ಟೆಯ ಮೇಲೆ ಒತ್ತಡ ಬೀಳುವಂಥ ಯಾವುದೇ ವ್ಯಾಯಾಮ ಸರಿಯಲ್ಲ. ಹರ್ನಿಯ ಇರುವವರು ಮಾಡಬೇಕಾದ ಮತ್ತು ಮಾಡಬಹುದಾದ ಚಟುವಟಿಕೆಗಳೇನು ಎಂಬ ಬಗ್ಗೆ ವೈದ್ಯರು ಸರಿಯಾದ ಮಾರ್ಗದರ್ಶನ ನೀಡಬಲ್ಲರು.

ತೂಕ ಇಳಿಸಿ

ಅತಿ ತೂಕ ಹಲವು ಸಮಸ್ಯೆಗಳಿಗೆ ಮೂಲ. ಹರ್ನಿಯ ಶಸ್ತ್ರಚಿಕಿತ್ಸೆ ಮಾಡಿದಾಗಲೂ ಬೇಗ ಗುಣವಾಗುವುದಕ್ಕೆ ಬೊಜ್ಜು ಅಡ್ಡಿ ಮಾಡುತ್ತದೆ. ಹಾಗಾಗಿ ತೂಕ ನಿಯಂತ್ರಣ ಮಹತ್ವದ್ದು. ಯಾವೆಲ್ಲ ಚಟುವಟಿಕೆಗಳ ಮೂಲಕ ತೂಕ ಇಳಿಸಿಕೊಳ್ಳಬಹುದು ಎಂಬುದಕ್ಕೆ ತಜ್ಞರ ಸಲಹೆ ಅಗತ್ಯ.

ಆರೋಗ್ಯಕರ ಆಹಾರ

ಸಮತೋಲಿತ ಆಹಾರ ಸೇವಿಸುವುದು ಮುಖ್ಯ. ಒಂದೊಮ್ಮೆ ಆಹಾರದಲ್ಲಿ ನಾರಿನಂಶ ಸಾಕಾಗದಿದ್ದರೆ ಅಥವಾ ಕುಡಿಯುವ ನೀರು ಕಡಿಮೆಯಾದರೆ ಮಲಬದ್ಧತೆ ಉಂಟಾಗಬಹುದು. ಆಗ ಇದರ ನೇರ ಪರಿಣಾಮ ಆಗುವುದು ಹರ್ನಿಯ ಮೇಲೆ. ಜೊತೆಗೆ, ಆಹಾರದಲ್ಲಿ ಪೌಷ್ಟಿಕಾಂಶಗಳು ಸರಿಯಾದ ಪ್ರಮಾಣದಲ್ಲಿದ್ದರೆ ತೂಕ ನಿಯಂತ್ರಣಕ್ಕೂ ಅನುಕೂಲ. ಹಾಗಾಗಿ ಸಮತೋಲಿತ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ.

ಭಾರ ಎತ್ತಬೇಡಿ

ಭಾರ ಎತ್ತುವುದಂತೂ ಕಡ್ಡಾಯವಾಗಿ ಬೇಡ. ಇದರಿಂದ ಹರ್ನಿಯ ಸಮಸ್ಯೆ ಉಲ್ಭಣಿಸುತ್ತದೆ. ಶಸ್ತ್ರಚಿಕಿತ್ಸೆ ಆಗಿದ್ದರೆ, ಗುಣವಾಗುವ ಬದಲು ಸಮಸ್ಯೆ ಹೆಚ್ಚಬಹುದು. ಹೊಟ್ಟೆ ಮೇಲೆ ಒತ್ತಡ ಹಾಕುವುದು ಯಾವುದೇ ರೀತಿಯಲ್ಲೂ ಸೂಕ್ತವಲ್ಲ.

ಧೂಮಪಾನ ಬೇಡ

ಧೂಮಪಾನದಿಂದ ಕೆಮ್ಮು ಕಾಣಿಸಿಕೊಳ್ಳುತ್ತದೆ. ಹರ್ನಿಯ ಇದ್ದಾಗಲೂ ಅಥವಾ ಶಸ್ತ್ರಚಿಕಿತ್ಸೆ ಆಗಿದ್ದರೂ, ಕೆಮ್ಮು ಶುರುವಾದರೆ ಸಮಸ್ಯೆ ದುಪ್ಪಟ್ಟಾಗುತ್ತದೆ. ಹಾಗಾಗಿ ಕೆಮ್ಮು ಶುರುವಾಗುವ ಯಾವುದೇ ಕಾರಣಗಳಿಂದ (ಅಲರ್ಜಿಗಳಿದ್ದರೆ ಔಷಧಿಗಳಿಂದ ನಿಯಂತ್ರಣದಲ್ಲಿರಿಸಿ) ದೂರ ಇರಲೇಬೇಕು.

ಊಟಕ್ಕೆ ಮಿತಿ ಇರಲಿ

ಒಮ್ಮೆಲೇ ಹೊಟ್ಟೆ ಬಿರಿ ಉಣ್ಣುವುದಕ್ಕಿಂತ, ಊಟ ಕಿರಿದಾಗಿಸಿ. ಅಗತ್ಯವಿದ್ದರೆ ನಡುವೆ ಉಪಾಹಾರ ಇರಲಿ. ಇದರಿಂದ ಜೀರ್ಣಾಂಗಗಳ ಮೇಲಿನ ಒತ್ತಡ ಕಡಿಮೆ ಮಾಡಬಹುದು. ಹರ್ನಿಯ ಇರುವಲ್ಲಿ ನೋವು ಹೆಚ್ಚಾದರೆ, ಕೆಮ್ಮು ಶುರುವಾದರೆ, ಪ್ರಾಸ್ಟೇಟ್‌ ಸಮಸ್ಯೆಯಿದ್ದರೆ ಮೊದಲು ವೈದ್ಯರನ್ನು ಕಾಣಿ. ಒಂದೊಮ್ಮೆ ತಾಯ್ತನದ ಯೋಜನೆಯಿದ್ದರೆ, ಶಸ್ತ್ರಚಿಕಿತ್ಸೆಯ ನಂತರ ಎಷ್ಟು ಸಮಯ ಬೇಕು ಗುಣವಾಗುವುದಕ್ಕೆ ಎಂಬ ಬಗ್ಗೆ ವೈದ್ಯರಲ್ಲಿ ಚರ್ಚಿಸಿ.

ಇದನ್ನೂ ಓದಿ: Health Tips: ತಡರಾತ್ರಿಯವರೆಗಿನ ಅಧ್ಯಯನ ಮಿದುಳಿನ ಆರೋಗ್ಯಕ್ಕೆ ಒಳ್ಳೆಯದೇ ಕೆಟ್ಟದ್ದೇ?

Exit mobile version