Site icon Vistara News

In Vitro Fertilization: ಐವಿಎಫ್ ವಿಧಾನದಿಂದ ಮಕ್ಕಳಾಗುವುದು ಹೇಗೆ? ಇದಕ್ಕೆ ಎಷ್ಟು ವೆಚ್ಚವಾಗುತ್ತದೆ?

In Vitro Fertilization

ತಾಯಿಯಾಗಬೇಕು (Motherhood) ಎನ್ನುವ ಕನಸು ಎಲ್ಲ ಮಹಿಳೆಯರಲ್ಲೂ ಇರುತ್ತದೆ. ಆದರೆ ಕೆಲವು ತೊಂದೆರೆಗಳಿಂದ ಕೆಲವು ಮಹಿಳೆಯರಿಗೆ ಈ ಸೌಭಾಗ್ಯ ಪ್ರಾಪ್ತವಾಗುವುದಿಲ್ಲ. ಆದರೆ ಈಗ ಬೆಳೆದಿರುವ ತಂತ್ರಜ್ಞಾನ ಬಂಜೆತನದ (Infertility) ಸವಾಲುಗಳನ್ನು ಎದುರಿಸುತ್ತಿರುವ ಮಹಿಳೆಯರಿಗೆ ಆಶಾಕಿರಣವಾಗಿದೆ. ಇನ್ ವಿಟ್ರೋ ಫರ್ಟಿಲೈಸೇಶನ್ (In Vitro Fertilization) ಇತ್ತೀಚಿನ ದಿನಗಳಲ್ಲಿ ಪೋಷಕರಾಗ ಬಯಸುವ ದಂಪತಿಗೆ ವರದಾನವಾಗಿದೆ.

ಗರ್ಭಧಾರಣೆಯ ತೊಂದರೆಗಳನ್ನು ಎದುರಿಸುತ್ತಿರುವವರಿಗೆ ವೈದ್ಯಕೀಯ ತಂತ್ರಜ್ಞಾನದಲ್ಲಿ ನಡೆದಿರುವ ಈ ಬೆಳವಣಿಗೆಯು ಜಾಗತಿಕ ಮರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಿದೆ. ಜಾಗತಿಕವಾಗಿ ಐವಿಎಫ್ ಮಾರುಕಟ್ಟೆಯು 2026 ರ ವೇಳೆಗೆ 36.2 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಯಿದೆ.

ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ಐವಿಎಫ್ ವಲಯವು ಗಮನಾರ್ಹವಾಗಿ ಬೆಳವಣಿಗೆ ಕಾಣುತ್ತಿದೆ. ಭಾರತದಲ್ಲಿ ಐವಿಎಫ್ ಚಿಕಿತ್ಸೆಗೆ ಕನಿಷ್ಠ ಸರಾಸರಿ 2 ಲಕ್ಷ ರೂ. ನಿಂದ 6 ಲಕ್ಷ ರೂ. ವರೆಗೆ ವೆಚ್ಚವಾಗುತ್ತದೆ. ಆದರೆ ಆಸ್ಪತ್ರೆಯ ಖ್ಯಾತಿ, ವೈದ್ಯರ ಅರ್ಹತೆ ಮತ್ತು ಬಂಜೆತನದ ತೀವ್ರತೆಯಂತಹ ಅಂಶಗಳ ಆಧಾರದ ಮೇಲೆ ಬದಲಾಗುತ್ತದೆ.

ಭಾರತದಲ್ಲಿ ಪ್ರಸ್ತುತ ಈ ಚಿಕಿತ್ಸೆಗೆ ಗರಿಷ್ಠ ಸರಿಸುಮಾರು 5- 6 ಲಕ್ಷ ರೂ. ವೆಚ್ಚವಾಗುತ್ತಿದ್ದು, ಇದರ ಮಾರುಕಟ್ಟೆ ಮೌಲ್ಯವು 2030 ರ ವೇಳೆಗೆ 66.37 ಕೋಟಿ ರೂ. ಗಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ.


ಭಾರತದಲ್ಲಿ ಯಶಸ್ಸಿನ ಪ್ರಮಾಣ ಎಷ್ಟು?

ಪ್ರಸ್ತುತ ಭಾರತದಲ್ಲಿ ಇದರ ಯಶಸ್ಸಿನ ಪ್ರಮಾಣ ಸುಧಾರಿಸುತ್ತಿದೆ. ಪೋಷಕರ ವಯಸ್ಸನ್ನು ಆಧರಿಸಿ ಜನನ ದರಗಳು ಶೇ. 30ರಿಂದ ಶೇ. 35ರಷ್ಟಿದೆ.

ಐವಿಎಫ್ ಎಂದರೇನು?

ಐವಿಎಫ್ ಅಥವಾ ಇನ್ ವಿಟ್ರೊ ಫರ್ಟಿಲೈಸೇಶನ್ ಬಂಜೆತನದಿಂದ ಹೋರಾಡುತ್ತಿರುವ ವ್ಯಕ್ತಿಗಳು ಅಥವಾ ದಂಪತಿ ಮಗುವನ್ನು ಪಡೆಯಲು ಸಹಾಯ ಮಾಡುವ ವೈದ್ಯಕೀಯ ವಿಧಾನವಾಗಿದೆ. ಇದು ಮಹಿಳೆಯ ಅಂಡಾಶಯದಿಂದ ಮೊಟ್ಟೆಗಳನ್ನು ಪಡೆದು ಪ್ರಯೋಗಾಲಯದ ವ್ಯವಸ್ಥೆಯಲ್ಲಿ ವೀರ್ಯದೊಂದಿಗೆ ಅವುಗಳನ್ನು ಫಲವತ್ತಾಗಿಸಿ ಅನಂತರ ಭ್ರೂಣವನ್ನಾಗಿ ಮಾಡಿ ಗರ್ಭಾಶಯಕ್ಕೆ ವರ್ಗಾಯಿಸಲಾಗುತ್ತದೆ. ಈ ಪ್ರಕ್ರಿಯೆಯು ವಿವಿಧ ಫಲವತ್ತತೆಯ ಅಡೆತಡೆಗಳನ್ನು ತಡೆಯುತ್ತದೆ.

ಹೇಗಿರುತ್ತದೆ ಐವಿಎಫ್ ಪ್ರಕ್ರಿಯೆ?

ಐವಿಎಫ್ ಪ್ರಕ್ರಿಯೆಯು ಹಲವಾರು ಹಂತಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಹಂತವೂ ಚಿಕಿತ್ಸೆಯ ಯಶಸ್ಸಿಗೆ ನಿರ್ಣಾಯಕವಾಗಿರುತ್ತದೆ. ಆರಂಭಿಕ ಹಾರ್ಮೋನ್ ಪ್ರಚೋದನೆಯಿಂದ ಅಂತಿಮ ಗರ್ಭಧಾರಣೆಯ ಪರೀಕ್ಷೆಯವರೆಗೆ ಪೋಷಕರಾಗಬೇಕು ಎಂದು ಬಯಸುವ ದಂಪತಿ ಅದನ್ನು ಅರ್ಥಮಾಡಿಕೊಳ್ಳುವುದು, ತಾಳ್ಮೆಯಿಂದ ಕಾಯುವುದು ಬಹುಮುಖ್ಯವಾಗಿರುತ್ತದೆ.

ಇದರಲ್ಲಿ ಮುಖ್ಯವಾಗಿ ಆರಂಭಿಕ ಸಮಾಲೋಚನೆ, ರೋಗನಿರ್ಣಯ ಪರೀಕ್ಷೆಗಳು, ಚಿಕಿತ್ಸೆಯ ಯೋಜನೆ, ಅಂಡಾಶಯದ ಪ್ರಚೋದನೆ, ಟ್ರಿಗ್ಗರ್ ಚುಚ್ಚುಮದ್ದು, ಮೊಟ್ಟೆ ಮರುಪಡೆಯುವಿಕೆ, ವೀರ್ಯಾಣು ಸಂಗ್ರಹ, ಫಲೀಕರಣ, ಭ್ರೂಣ ಬೆಳವಣಿಗೆ, ಪೂರ್ವನಿಯೋಜಿತ ಜೆನೆಟಿಕ್ ಟೆಸ್ಟಿಂಗ್ (PGT), ಪ್ರೆಗ್ನೆನ್ಸಿ ಟೆಸ್ಟ್ ಮೊದಲಾದವುಗಳನ್ನು ಮಾಡಲಾಗುತ್ತದೆ. ಈ ಪ್ರಕ್ರಿಯೆಯ ಉದ್ದಕ್ಕೂ ವೈದ್ಯಕೀಯ ತಂಡವು ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುತ್ತದೆ. ಐವಿಎಫ್ ನ ಸಂಕೀರ್ಣವೆಂದು ತೋರುತ್ತದೆಯಾದರೂ ತಜ್ಞರು ಇದನ್ನು ಪೋಷಕರಾಗ ಬಯಸುವ ದಂಪತಿಗೆ ಸಾಧ್ಯವಾದಷ್ಟು ಸುಲಭವಾಗುವಂತೆ, ಅರ್ಥವಾಗುವಂತೆ ವಿವರಿಸುತ್ತಾರೆ.


ತಿಳಿದಿರಲಿ

ಐವಿಎಫ್ ಪ್ರಕ್ರಿಯೆಗೆ ಒಳಗಾಗ ಬಯಸುವವರು ಐವಿಎಫ್ ಪ್ರಕ್ರಿಯೆ, ಸಂಭಾವ್ಯ ಅಪಾಯಗಳು ಮತ್ತು ಯಶಸ್ಸಿನ ದರಗಳನ್ನು ಮೊದಲು ತಿಳಿದುಕೊಳ್ಳಬೇಕು. ಇದಕ್ಕಾಗಿ ತಜ್ಞರನ್ನು ಸಂಪರ್ಕಿಸಿ.

ಸರಿಯಾದ ಚಿಕಿತ್ಸೆ ಎಲ್ಲಿ ದೊರೆಯುತ್ತದೆ ಎಂಬುದನ್ನು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಕೊಳ್ಳಿ. ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವುದು ಬಹುಮುಖ್ಯವಾಗಿದೆ.

ವೈದ್ಯರು ಸೂಚಿಸುವ ಔಷಧಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಿ. ಅಗತ್ಯವಿದ್ದಾಗ ಭಾವನಾತ್ಮಕವಾಗಿ ಬೆಂಬಲ ಪಡೆಯಲು ಸಿದ್ದರಾಗಿರಿ.

ಇದನ್ನೂ ಓದಿ: Ear Infections During Monsoon: ಮಳೆಗಾಲದಲ್ಲಿ ಕಾಡುವ ಕಿವಿನೋವಿನಿಂದ ಮುಕ್ತರಾಗಲು ಸರಳ ಉಪಾಯ ಇಲ್ಲಿದೆ

ನಿರ್ಲಕ್ಷಿಸಬೇಡಿ

ಐವಿಎಫ್ ಚಿಕಿತ್ಸೆಯ ಕುರಿತು ಏನೇ ಸವಾಲುಗಳಿದ್ದರೂ ತಜ್ಞರೊಂದಿಗೆ ಮುಕ್ತವಾಗಿ ಚರ್ಚಿಸಿ. ಯಾವುದೇ ಭಾವನೆಗಳನ್ನು ಮನದೊಳಗೆ ಇಟ್ಟುಕೊಳ್ಳಬೇಡಿ. ನಿಗ್ರಹಿಸಬೇಡಿ.

ಚಿಕಿತ್ಸೆಯ ಸಮಯದಲ್ಲಿ ದೇಹದ ಮೇಲೆ ಹೆಚ್ಚಿನ ಒತ್ತಡ ಹೇರಬೇಡಿ. ಶ್ರಮದಾಯಕ ವ್ಯಾಯಾಮ ಅಥವಾ ಚಟುವಟಿಕೆಗಳನ್ನು ತಪ್ಪಿಸಿ.

ಚಿಕಿತ್ಸೆಯ ವೇಳೆ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ತಕ್ಷಣವೇ ವೈದ್ಯರ ಗಮನಕ್ಕೆ ತನ್ನಿ.

ಸಕಾರಾತ್ಮಕ ಮನಸ್ಥಿತಿಯಲ್ಲಿ ಈ ಚಿಕಿತ್ಸೆ ಪಡೆಯಲು ಸಿದ್ಧರಾಗಿ. ಪ್ರತಿಯೊಂದು ಹಂತದಲ್ಲೂ ಭರವಸೆ ಇಟ್ಟಿರಿ.

ಎಷ್ಟು ವೆಚ್ಚವಾಗುತ್ತದೆ?

ಈ ವಿಧಾನದಿಂದ ಮಕ್ಕಳನ್ನು ಪಡೆಯಲು ಭಾರತದ ಆಸ್ಪತ್ರೆಗಳಲ್ಲಿ ಸುಮಾರು 1 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೂ ಶುಲ್ಕ ವಿಧಿಸಲಾಗುತ್ತದೆ. ಈ ವೆಚ್ವ ನುರಿತ ವೈದ್ಯರು ಮತ್ತು ಆಸ್ಪತ್ರೆಯ ಸೌಲಭ್ಯವನ್ನು ಆಧರಿಸಿದೆ.

Exit mobile version