Site icon Vistara News

Inflammation: ದೇಹ ಉಬ್ಬರಿಸಿ ಉರಿಯೂತವೇ? ಈ ಆಹಾರಗಳೇ ನಿಮಗೆ ಆಪದ್ಭಾಂಧವ!

Inflammation

ಕೆಲವೊಮ್ಮೆ ದೇಹ ಕೊಂಚ ಉಬ್ಬಿದಂತೆ, ನೀರು ತುಂಬಿದಂತೆ ಅನಿಸುವುದುಂಟು. ಹೆಚ್ಚು ಹೊತ್ತು ಒಂದೇ ಜಾಗದಲ್ಲಿ ಕೂತರೆ, ಕಾರಿನಲ್ಲಿ ಗಂಟೆಗಟ್ಟಲೆ ಪ್ರಯಾಣಿಸಿದರೆ ಪಾದದಲ್ಲಿ ನೀರು ತುಂಬಿಕೊಂಡತೆ ಅನಿಸುವುದಿಲ್ಲವೇ? ಹಾಗೆ, ದೇಹದಲ್ಲಿ ಕೆಲವೊಮ್ಮೆ ಅನವಶ್ಯಕ ನೀರು ತುಂಬಿಕೊಳ್ಳುವುದುಂಟು. ಅಗತ್ಯಕ್ಕಿಂತ ಹೆಚ್ಚಿನ ನೀರಿನ ಸೇವನೆ, ಹಾಗೂ ಕೆಲವು ಅಂತಹ ಆಹಾರಗಳಿಂದ ಈ ಸಮಸ್ಯೆ ಉಂಟಾಗಬಹುದು. ಹಾಗಾದರೆ, ಈ ನೀರನ್ನು ಹೊರಗೆ ಕಳುಹಿಸುವುದು ಹೇಗೆ? ದೇಹ ಮತ್ತೆ ಯಥಾಸ್ಥಿತಿಗೆ ಬರುವುದು ಹೇಗೆ ಎಂಬ ಯೋಚನೆಯೇ? ಹಾಗಿದ್ದರೆ ಇಲ್ಲಿವೆ ಕೆಲವು ಆಹಾರಗಳು. ಇವುಗಳ ಸೇವನೆಯಿಂದ ನಿಮ್ಮ ದೇಹದಲ್ಲಿ ನೀರು ತುಂಬಿಕೊಳ್ಳುವಂಥ ಉರಿಯೂತಗಳು (Inflammation) ಹತೋಟಿಗೆ ಬರಬಹುದು.

ಅರಿಶಿನ

ಅರಿಶಿನದಲ್ಲಿ ಕರ್‌ಕ್ಯುಮಿನ್‌ ಎಂಬ ವಸ್ತುವಿದ್ದು ಇದರಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳನ್ನು ಹೊಂದಿದೆ. ಇದು ಉರಿಯೂತದಂತಹ ಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಅರಿಶಿನವನ್ನು ನಿತ್ಯವೂ ನಮ್ಮ ಆಹಾರದ ಜೊತೆಗೆ ಮಸಾಲೆಗಳ ಜೊತೆಗೆ ಸೇವಿಸುವುದು ಅತ್ಯಂತ ಒಳ್ಳೆಯದು. ಅಥವಾ ಪ್ರತ್ಯೇಕವಾಗಿ ಅರಿಶಿನವನ್ನು ಸೇವಿಸುವ ಮೂಲಕವೂ ಇದರ ಉಪಯೋಗವನ್ನು ಪಡೆಯಹುದು.

ಶುಂಠಿ

ಶುಂಠಿಯಲ್ಲಿ ಜಿಂಜರಾಲ್‌ ಎಂಬ ವಸ್ತುವಿದ್ದು ಇದರಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳಿವೆ. ಅಷ್ಟೇ ಅಲ್ಲ ಇದು ಆಂಟಿ ಆಕ್ಸಿಡೆಂಟ್‌ ಕೂಡಾ. ಹೀಗಾಗಿ ಇದು ದೇಹದಲ್ಲಿ ಎಲ್ಲೇ ಉರಿಯೂತವಿದ್ದರೂ ಅದನ್ನು ಸುಗಮಗೊಳಿಸಿ ದೇಹ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಶುಂಠಿ ಚಹಾ ಮಾಡಿ ಕುಡಿಯುವ ಮೂಲಕ ಹೆಚ್ಚು ಪ್ರಯೋಜನವನ್ನು ಪಡೆಯಬಹುದು.

ಮೀನು

ಸಾಲ್ಮನ್‌, ಮಕರೇಲ್‌, ಸಾರ್ಡಿ ಮೊದಲಾದ ಒಮೆಗಾ ೩ ಫ್ಯಾಟಿ ಆಸಿಡ್‌ಗಳಿಂದ ಸಂಪದ್ಭರಿತವಾದ ಮೀನುಗಳು ದೇಹದ ಉರಿಯೂತಕ್ಕೆ ಬೆಸ್ಟ್‌. ಇವುಗಳಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳಿದ್ದು, ಇವು ದೇಹದಲ್ಲಿ ಹೆಚ್ಚಿನ ನೀರಿನ ಪ್ರಮಾಣವಿದ್ದರೆ ಅವನ್ನು ದೇಹದಿಂದ ಹೊರಕ್ಕೆ ಕಳುಹಿಸುವಲ್ಲಿ ನೆರವಾಗುತ್ತದೆ. ಆದರೆ, ಇಂತಹ ಮೀನುಗಳನ್ನು ವಾರಕ್ಕೆ ಹೆಚ್ಚೆಂದರೆ ಎರಡು ಬಾರಿ ತಿನ್ನಬಹುದು.

ಹಸಿರು ತರಕಾರಿಗಳು

ಬಸಳೆ, ಪಾಲಕ್‌ ಸೇರಿದಂತೆ ಹಸಿರು ಬಣ್ಣದ ಸೊಪ್ಪು ತರಕಾರಿಗಳು ಮುಖ್ಯವಾಗಿ ಹೆಚ್ಚು ಆಂಟಿ ಆಕ್ಸಿಡೆಂಟ್‌, ಖನಿಜಾಂಶ ಹಾಗೂ ವಿಟಮಿನ್‌ಗಳನ್ನು ಹೊಂದಿರುವುದರಿಂದ ಇದರ ಸೇವನೆ ಅತ್ಯಂತ ಒಳ್ಳೆಯದು. ಇದು ಯಾವುದೇ ಹೆಚ್ಚಿನ ಪ್ರಮಾಣದ ನೀರನ್ನು ದೇಹದಲ್ಲಿ ಇರಗೊಡುವುದಿಲ್ಲ. ದೇಹದಲ್ಲಿನ ಕಶ್ಮಲಗಳನ್ನೂ ಹೊರಹಾಕುತ್ತವೆ.

Green Tea Weight Loss Drink

ಆಲಿವ್‌ ಆಯಿಲ್

ಎಕ್ಸ್‌ಟ್ರಾ ವರ್ಜಿನ್‌ ಆಲಿವ್‌ ಆಯಿಲ್‌ ಅನ್ನು ನೀವು ಬಳಕೆ ಮಾಡುವ ಅಭ್ಯಾಸ ಇಲ್ಲದಿದ್ದರೆ, ಕೆಲವು ಅಡುಗೆಗಳಿಗಾದರೂ ಬಳಸಿ ನೋಡಿ. ಆಲಿವ್‌ ಆಯಿಲ್‌ನಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳಿವೆ. ಸಲಾಡ್‌ಗಳಿಗೆ ಡ್ರೆಸ್ಸಿಂಗ್‌ ಮಾಡಲು ಸೇರಿದಂತೆ, ಹಲವು ಸಂದರ್ಭಗಳಲ್ಲಿ ಇದು ಅತ್ಯುತ್ತಮ ರೀತಿಯಲ್ಲಿ ಬಳಕೆಗೆ ಬರುತ್ತದೆ.

ಬೆರ್ರಿ

ಬ್ಲೂಬೆರ್ರಿ, ಸ್ಟ್ರಾಬೆರ್ರಿ, ಬ್ಲ್ಯಾಕ್‌ಬೆರ್ರಿ ಇತ್ಯಾದಿ ಬೆರ್ರಿ ಜಾತಿಗೆ ಸೇರಿದ ಹಣ್ಣುಗಳೂ ಕೂಡಾ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳ್ನು ಹೊಂದಿವೆ. ಅಷ್ಟೇ ಅಲ್ಲ, ಇವುಗಳಲ್ಲಿ ಆಂಥೋಸಯನಿನ್‌ಗಳೂ ಇರುವುದರಿಂದ ಇವು ಉರಿಯೂತಕ್ಕೆ ಬಹಳ ಒಳ್ಳೆಯದು.

ಟೊಮೆಟೋ

ಟೊಮೆಟೋ ಹಣ್ಣಿನಲ್ಲಿನಲೈಕೋಪೀನ್‌ ಎಂಬ ವಸ್ತು ಅತ್ಯಂತ ಶ್ರೀಮಂತವಾಗಿದೆ. ಇದೊಂದು ಅತ್ಯಂತ ಶಕ್ತಿಯುತವಾದ ಆಂಟಿ ಆಕ್ಸಿಡೆಂಟ್‌ ಆಗಿದ್ದು, ಇದು ಆಂಟಿ ಇನ್‌ಫ್ಲಮೇಟರಿ ಗುಣಗಳಿಂದ ಕೂಡಿದೆ. ಹಾಗಾಗಿ ಆಗಾಗ ಟೊಮೇಟೋ ಸೇವನೆ ಒಳ್ಳೆಯದು. ಸ್ವಲ್ಪವೇ ಸ್ವಲ್ಪ ಆಲಿವ್‌ ಎಣ್ಣೆಯನ್ನು ಟೊಮೇಟೋ ಜೊತೆ ಸೇರಿಸಿ ಸೇವಿಸಿದರೆ, ಲೈಕೋಪೀನ್‌ ಹೀರಿಕೊಳ್ಳಲು ನೆರವಾಗುತ್ತದೆ.

ಬೀಜಗಳು

ಬಾದಾಮಿ, ವಾಲ್ನಟ್‌, ಫ್ಲಾಕ್‌ಸೀಡ್‌ ಮತ್ತಿತರ ಬೀಜಗಳ ಸೇವನೆಯೂ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಇವುಗಳ ನಿತ್ಯ ಸೇವನೆಯಿಂದ ದೇಹ ಆಂಟಿ ಇನ್‌ಫ್ಲಮೇಟರಿ ಗುಣಗಳನ್ನು ಬೆಳೆಸಿಕೊಳ್ಳುವುದರಿಂದ ಇಂತಹ ಸಂದರ್ಭ ಬರದು. ದೇಹ ಆರೋಗ್ಯವಾಗಿ ಸಮತೋಲನ ಕಾಯ್ದುಕೊಳ್ಳುತ್ತದೆ.

ಗ್ರೀನ್‌ ಟೀ

ಗ್ರೀನ್‌ಟೀಯಲ್ಲಿ ಆಂಟಿ ಆಕ್ಸಿಡೆಂಟ್‌ಗಳೂ, ಆಂಟಿ ಇನ್‌ಫ್ಲಮೇಟರಿ ಗುಣಗಳೂ ಹೆಚ್ಚಿರುವುದರಿಂದ ಉರಿಯೂತದಂತ ಸಮಸ್ಯೆಗಳು ಬರದಂತೆ ತಡೆಯುತ್ತದೆ. ಇದರ ಮಿತವಾದ ನಿಯಮಿತ ಸೇವನೆ ಒಳ್ಳೆಯದು.

Exit mobile version