ಸಸ್ಯಾದಿಗಳಿಂದ ತೈಲಗಳನ್ನು ತಯಾರಿಸುವ ಕ್ರಮ ಶತಮಾನಗಳಿಂದ ನಡೆದುಬಂದಿದೆ. ಇವುಗಳನ್ನು ಸಾರಸತ್ವ ತೈಲಗಳು, ಸಾರಭೂತ ತೈಲಗಳು ಅಥವಾ ಎಸೆನ್ಶಿಯಲ್ ಆಯಿಲ್ ಎಂದು ಕರೆಯಲಾಗುತ್ತದೆ. ಸುವಾಸನೆಯುಳ್ಳ ಸಸ್ಯಗಳನ್ನು ಡಿಸ್ಟಿಲ್ ಮಾಡಿಯೊ ಅಥವಾ ಗಾಣದಲ್ಲಿ ಮಾಡುವ ಕೋಲ್ಡ್ ಪ್ರೆಸ್ ರೀತಿಯಲ್ಲೋ ಸತ್ವವನ್ನು ಹಿಡಿದಿರಿಸಲಾಗುತ್ತದೆ. ಅಂದರೆ, ಆಯಾ ಸಸ್ಯಗಳ, ಗುಣ, ಘಮಗಳು ಈ ತೈಲದಲ್ಲಿ ಅಡಕವಾಗಿರುತ್ತವೆ. ಉದಾ, ಡಿಸ್ಟಿಲ್ ಮಾಡುವ ಕ್ರಮದಿಂದ ತೆಗೆಯಲಾಗುವ ದಾಲ್ಚಿನ್ನಿ ತೈಲದಲ್ಲಿ ಆ ಚಕ್ಕೆಯ ಪರಿಮಳ ಅತ್ಯಂತ ಗಾಢವಾಗಿದ್ದು, ಹಲವು ಔಷಧೀಯ ಉಪಯೋಗಗಳನ್ನು ಹೊಂದಿದೆ. ಅಂದಹಾಗೆ, ಇಂದು ಅಂತಾರಾಷ್ಟ್ರೀಯ ಸಾರಸತ್ವ ತೈಲಗಳ ದಿನ (International Essential Oils Day). ಯಾವುದೆಲ್ಲ ಕಾರಣಗಳಿಗಾಗಿ ಎಸೆನ್ಶಿಯಲ್ ತೈಲಗಳನ್ನು ಉಪಯೋಗಿಸಲಾಗುತ್ತದೆ? ಸುವಾಸನೆಯೇ ಮುಖ್ಯ ಔಷಧಿಯಾಗಿರುವ ಅರೋಮಾ ಥೆರಪಿಯಲ್ಲಿ, ಚರ್ಮ ಮತ್ತು ಕೂದಲುಗಳ ಆರೈಕೆಯಲ್ಲಿ, ಮಾನಸಿಕ ಒತ್ತಡ ನಿವಾರಣೆಗೆ… ಹೀಗೆ ಹಲವು ಉದ್ದೇಶಗಳು ಇದರ ಬಳಕೆಯ ಹಿಂದಿವೆ. ಕೆಲವು ಉದಾಹರಣೆಗಳನ್ನು ನೀಡುವುದಾದರೆ, ಮನಸ್ಸಿನ ಒತ್ತಡ ಶಮನ ಮಾಡಿ, ಮೈಗ್ರೇನ್ ತಲೆನೋವು ಕಡಿಮೆ ಮಾಡುವ ಗುಣ ಲ್ಯಾವೆಂಡರ್ ತೈಲಕ್ಕಿದೆ. ಕೂದಲಿನಲ್ಲಿರುವ ಹೊಟ್ಟು ಮತ್ತು ಸೋಂಕುಗಳನ್ನು ಕಡಿಮೆ ಮಾಡಲು ಟೀಟ್ರೀ ತೈಲ ಬಲು ಉಪಯುಕ್ತ. ಕೂದಲು ಬೆಳೆಯಬೇಕೆಂದರೆ ರೋಸ್‌ಮೆರಿ ತೈಲದ ಮೊರೆ ಹೋಗಬೇಕು. ನೋವುಗಳ ನಿವಾರಣೆಗೆ ದಾಲ್ಚಿನ್ನಿ ತೈಲ ಅಥವಾ ಸಿನ್ನಮನ್ ತೈಲ ನೆರವಾಗುತ್ತದೆ. ಆದರೆ ನೆನಪಿಡಿ, ಈ ಯಾವುದೇ ತೈಲಗಳನ್ನೂ ನೇರವಾಗಿ ಉಪಯೋಗಿಸುವಂತಿಲ್ಲ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆ, ಬಾದಾಮಿ ಎಣ್ಣೆ ಮುಂತಾದ ಇನ್ನಾವುದಾದರೂ ಎಣ್ಣೆಯೊಂದಿಗೆ ಸೇರಿಸಿ ಉಪಯೋಗಿಸಬೇಕು.
ಚರ್ಮದ ಆರೈಕೆಗೆ
ತ್ವಚೆಯ ಆರೈಕೆಯಲ್ಲಿ ಮೊದಲಿಗೆ ಕೇಳಿ ಬರುವುದು ಲ್ಯಾವೆಂಡರ್ ತೈಲದ ಹೆಸರು. ಚರ್ಮ ಕೆಂಪಾಗಿದ್ದರೆ, ಮೊಡವೆ ಇದ್ದಲ್ಲಿ ಈ ತೈಲ ನೆರವಾದೀತು. ಆದರೆ ನೇರವಾಗಿ ಚರ್ಮಕ್ಕೆ ಬಳಸುವುದು ಸರಿಯಲ್ಲ. ಬೇರಾವುದಾದರೂ ತೈಲದೊಂದಿಗೆ ಸೇರಿಸಬಹುದು ಅಥವಾ ನಿಮ್ಮ ಮಾಮೂಲಿ ಕ್ರೀಮ್‌ಗಳ ಜೊತೆಗೆ ಒಂದೆರಡು ಹನಿ ಇದನ್ನು ಹಾಕಬಹುದು. ಟೀಟ್ರೀ ತೈಲವೂ ಈ ಕೆಲಸದಲ್ಲಿ ಸಹಕಾರಿ. ಇದರ ಬ್ಯಾಕ್ಟೀರಿಯ ನಿರೋಧಕ ಮತ್ತು ಉರಿಯೂತ ಶಾಮಕ ಗುಣಗಳು ಮೊಡವೆ ನಿವಾರಣೆಗೆ ಉಪಯುಕ್ತ. ರೋಸ್ಹಿಪ್ ತೈಲ ಮತ್ತು ಫ್ರಾಂಕಿಂಸೆನ್ಸ್ ತೈಲಗಳು ಚರ್ಮದ ಮೇಲಿನ ಸೂಕ್ಷ್ಮ ನೆರಿಗೆಗಳನ್ನು ಕಡಿಮೆ ಮಾಡಿ, ತಾರುಣ್ಯಭರಿತ ತ್ವಚೆಯನ್ನು ನೀಡುತ್ತವೆ.
ಕೂದಲಿನ ಆರೈಕೆಗೆ
ಇದಕ್ಕೆ ಹಲವು ತೈಲಗಳು ಉಪಯುಕ್ತವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಟೀಟ್ರೀ ತೈಲ ಹೊಟ್ಟು ನಿವಾರಣೆಗೆ ಪರಿಣಾಮಕಾರಿ ಔಷಧಿ ಎನಿಸಿದೆ. ಯೀಸ್ಟ್ ಮತ್ತು ಶಿಲೀಂಧ್ರಗಳ ಸೋಂಕಿನಿಂದ ಹೊಟ್ಟು ಉಂಟಾಗಿದ್ದರೆ, ಅದನ್ನು ನಿವಾರಣೆ ಮಾಡಿ ತಲೆಯ ಚರ್ಮವನ್ನು ಆರೋಗ್ಯಪೂರ್ಣವಾಗಿ ಇರಿಸುತ್ತದೆ. ತಲೆಹೊಟ್ಟಿನ ನಿವಾರಣೆಗೆ ಪೆಪ್ಪರ್‌ಮಿಂಟ್ ತೈಲವನ್ನೂ ಬಳಸಬಹುದು. ಕೂದಲು ಒಣಗಿದಂತಾಗಿ ಗಂಟುಗಂಟಾಗಿದ್ದರೆ ಅಂಥ ಕೇಶಗಳನ್ನು ಬಾಚುವಾಗ ಬುಡವೇ ಕಿತ್ತು ಬರುತ್ತದೆ. ಇಂಥವುಗಳಿಗೆ ಲ್ಯಾವೆಂಡರ್ ತೈಲ ಒಳ್ಳೆಯದು. ಕೂದಲ ಬುಡವನ್ನು ಸದೃಢವಾಗಿಸಿ, ಕೂದಲಿನ ಒರಟುತನವನ್ನು ಕಡಿಮೆ ಮಾಡುತ್ತದೆ. ತಲೆಯ ಚರ್ಮದ ಆರೋಗ್ಯ ವೃದ್ಧಿಸಿ, ಕೂದಲು ಬೆಳೆಯುವಂತೆ ಮಾಡುವಲ್ಲಿ ರೋಸ್‌ಮೆರಿ ತೈಲವನ್ನು ನೆಚ್ಚಿಕೊಳ್ಳಬಹುದು. ತಲೆಹೊಟ್ಟು ನಿವಾರಣೆಯಲ್ಲಿ ಥೈಮ್ ತೈಲ, ನಿಂಬೆಹುಲ್ಲಿನ ತೈಲಗಳು ಸಹ ಬಳಕೆಯಲ್ಲಿವೆ. ಇವುಗಳಿಗೆ ಇರುವಂಥ ಉರಿಯೂತ ಶಾಮಕ ಗುಣಗಳಿಂದಾಗಿ ತಲೆಯ ಚರ್ಮ ಆರೋಗ್ಯಪೂರ್ಣವಾಗುತ್ತದೆ.
ಇದನ್ನೂ ಓದಿ: Seedling Potatoes: ಮೊಳಕೆ ಬಂದ ಆಲೂಗಡ್ಡೆಯನ್ನು ತಿನ್ನೋದು ಒಳ್ಳೆಯದಲ್ಲ, ಯಾಕೆ ಗೊತ್ತೇ?
ಬಳಸುವುದು ಹೇಗೆ?
ಈ ತೈಲಗಳನ್ನು ಬಳಸಿದರೆ ತ್ವಚೆಯ ಮತ್ತು ಕೂದಲಿನ ಆರೋಗ್ಯ ಹೆಚ್ಚುತ್ತದೆ ಎನ್ನುವುದು ಸರಿ. ಆದರೆ ಬಳಸುವುದು ಹೇಗೆ? ನೇರವಾಗಿ ಈ ತೈಲವನ್ನೇ ಎಲ್ಲಿಗೂ ಲೇಪಿಸುವಂತಿಲ್ಲ, ಮತ್ತೇನು ಮಾಡಬೇಕು? ಇನ್ನೊಂದು ಎಣ್ಣೆಯೊಂದಿಗೆ ಬೆರೆಸಿ ಬಳಸುವುದು ಒಂದು ಕ್ರಮ. ಅದಿಲ್ಲದಿದ್ದರೆ ನಿತ್ಯ ಬಳಕೆಯ ಕ್ರೀಮ್‌ಗಳ ಜೊತೆ ಸೇರಿಸಿಕೊಳ್ಳಬಹುದು. ಕೂದಲಿಗೂ ಹಾಗೆಯೆ, ಶಾಂಪೂ ಜೊತೆಗೆ ಬೆರೆಸಿಕೊಳ್ಳಬಹುದು. ಇದನ್ನು ಹೆಚ್ಚು ಕಾಲ ಕೂದಲಲ್ಲಿ ಬಿಡಬೇಕೆಂದರೆ, ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಯ ಜೊತೆಗೆ ಸ್ವಲ್ಪವೇ ಸೇರಿಸಿ ತಲೆಗೆ ಮಸಾಜ್ ಮಾಡಿ. ಬೆಳಗ್ಗೆ ತಲೆಸ್ನಾನ ಮಾಡಿ.