Site icon Vistara News

International Nurses’s Day: ಇಂದು ನರ್ಸ್‌ಗಳ ದಿನ; ಈ ದಿನಾಚರಣೆ ಹಿನ್ನೆಲೆ ಏನು?

International Nurses’s Day

ಸಮಾಜದ ಸ್ವಾಸ್ಥ್ಯ ಕಾಪಾಡುವುದಕ್ಕೆ ನರ್ಸ್‌ಗಳು (International Nurses’s Day) ಅಥವಾ ವೈದ್ಯಕೀಯ ಶುಶ್ರೂಷಕಿಯರು ನೀಡುತ್ತಿರುವ ಕೊಡುಗೆ ದೊಡ್ಡದು. ಆಸ್ಪತ್ರೆ ಸಣ್ಣದೇ ಇರಲಿ, ದೊಡ್ಡದೇ ಇರಲಿ. ಶುಶ್ರೂಷಕರಿಲ್ಲದೆ ಕೆಲಸ ನಡೆಯುವುದಿಲ್ಲ. ಇಂದು ಸರಳ ಅಂದಾಜಿನ ಪ್ರಕಾರ, 12 ತಾಸಿನ ಪಾಳಿಯೊಂದರಲ್ಲಿ, ನರ್ಸ್‌ಗಳು ಸುಮಾರು 5-6 ಮೈಲುಗಳಷ್ಟು ದೂರ ನಡೆಯುತ್ತಾರೆ. ಕೋವಿಡ್‌ ಸಮಯದಲ್ಲಿ ನರ್ಸ್‌ಗಳು ಮಾಡಿದ ಕೆಲಸಕ್ಕೆ ಇಡೀ ಲೋಕ ಸಾಕ್ಷಿಯಾಗಿದೆ. ಆದರೂ ಇಂಥ ವೃತ್ತಿಯ ಬಗ್ಗೆ ಇರಬೇಕಾದ ಗೌರವ ಇಲ್ಲ ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಮಾತ್ರ ಸಾಕ್ಷಿಗಳು ಬೇಕಿಲ್ಲ. ಪ್ರತಿ ವರ್ಷ ಮೇ ತಿಂಗಳ 12ನೇ ದಿನವನ್ನು ʻಅಂತಾರಾಷ್ಟ್ರೀಯ ಶುಶ್ರೂಷಕರ ದಿನʼ ಎಂದು ಗುರುತಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.

ಅಂದೇ ಏಕೆ

ಆಧುನಿಕ ಕಾಲದಲ್ಲಿ ಶುಶ್ರೂಷಕರ ವೃತ್ತಿಗೆ ಹೊಸ ಭಾಷ್ಯ ಬರೆದ ಫ್ಲಾರೆನ್ಸ್‌ ನೈಟಿಂಗೇಲ್‌ ಅವರ ಜನ್ಮ ದಿನದ ನೆನಪಿಗಾಗಿ ಮೇ 12ರಂದು ಈ ದಿನವನ್ನು ಆಚರಿಸಲಾಗುತ್ತಿದೆ. 1850ರ ಯುದ್ಧ ಕಾಲದಲ್ಲಿ ಗಾಯಗೊಂಡಿದ್ದ ಬ್ರಿಟನ್‌ ಸೈನಿಕರನ್ನು ನೈಟಿಂಗೇಲ್‌ ಮತ್ತು ಆಕೆಯ ತಂಡ ಆರೈಕೆ ಮಾಡಿದ್ದ ರೀತಿ ಇಂದಿಗೂ ಚರಿತ್ರೆಯ ಭಾಗವಾಗಿ ನಿಂತಿದೆ. ಮೊದಲಿಗೆ ಆಕೆ ಆಸ್ಪತ್ರೆಗೆ ಆಗಮಿಸಿದಾಗ ಅಲ್ಲಿನ ಸ್ಥಿತಿಗತಿಯನ್ನು ನೋಡಿ ಹೌಹಾರಿದ್ದಳು. ಇಡೀ ಸ್ಥಳ ಕೊಳಕು ಕೂಪದಂತೆ ಕಾಣುತ್ತಿತ್ತು. ಆ ಸ್ಥಳವನ್ನೆಲ್ಲ ಸ್ವಚ್ಛಗೊಳಿಸಿ, ಅಲ್ಲಿ ಅಗತ್ಯವಿದ್ದಷ್ಟು ಆಹಾರ ಮತ್ತು ಔಷಧಿಗಳನ್ನು ತರಿಸಿಕೊಂಡಳು. 1860ರಲ್ಲಿ ಲಂಡನ್‌ನಲ್ಲಿ ನರ್ಸಿಂಗ್‌ ಶಾಲೆಯೊಂದನ್ನು ತೆರೆದಳು. ಆನಂತರದಿಂದ ವಿಶ್ವದ ಹಲವೆಡೆಗಳನ್ನು ನರ್ಸಿಂಗ್‌ಗಾಗಿ ಪ್ರತ್ಯೇಕ ಶಾಲೆಗಳು, ಕೋರ್ಸ್‌ಗಳು ಅಗತ್ಯವೆನ್ನುವ ಅರಿವು ಹೆಚ್ಚಿತು. ಹಾಗಾಗಿ ಈ ಮೇರು ವ್ಯಕ್ತಿಯನ್ನು ಸಹ ಮೇ 12ರಂದು ನೆನಪಿಸಿಕೊಳ್ಳಲಾಗುತ್ತದೆ.
ಆಸ್ಟ್ರೇಲಿಯ, ಕೆನಡಾ, ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವಾರು ದೇಶಗಳಲ್ಲಿ ಇಡೀ ವಾರವನ್ನೇ ಶುಶ್ರೂಷಕರ ಸಪ್ತಾಹವೆಂದು ಆಚರಿಸುವ ಕ್ರಮವಿದೆ. ಇದಕ್ಕಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ತಮಗೆ ಆರೈಕೆ ಮಾಡಿದ ನರ್ಸ್‌ಗಳಿಗೆ ಧನ್ಯವಾದದ ರೂಪವಾಗಿ ಉಡುಗೊರೆಗಳನ್ನೂ ನೀಡಲಾಗುತ್ತದೆ. ಮಾತ್ರವಲ್ಲ, ನರ್ಸಿಂಗ್‌ ವೃತ್ತಿಯ ಬಗ್ಗೆ ಸಮಾಜದಲ್ಲಿರುವ ತರತಮದ ಭಾವಗಳನ್ನು ಹೋಗಲಾಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಳ್ಳಲಾಗುತ್ತದೆ.

ಸವಾಲುಗಳೇನು?

ಈ ಬಾರಿಯ ಶುಶ್ರೂಷಕರ ದಿನದ ಘೋಷವಾಕ್ಯ- “ನಮ್ಮ ಶುಶ್ರೂಷಕರು; ನಮ್ಮ ಭವಿಷ್ಯ. ಆರೈಕೆಯ ಹಿಂದಿನ ಆರ್ಥಿಕ ಶಕ್ತಿ”. ಈ ವೃತ್ತಿಯಲ್ಲಿರುವಂಥ ಅವಕಾಶಗಳು, ಇದಕ್ಕಿರುವ ಘನತೆ, ಬಡವ-ಬಲ್ಲಿದನೆಂಬ ಭೇದವಿಲ್ಲದಂತೆ ಸೇವೆ ಮಾಡುವ ಮನೋಭಾವ, ಸಹನೆಯಂಥ ಘನ ಗುಣಗಳನ್ನು ಹೆಚ್ಚಾಗಿ ಪ್ರಚುರ ಪಡಿಸುವುದರಿಂದ ಆರೈಕೆಗೆ ಆರ್ಥಿಕ ಬಲವೂ ಲಭ್ಯವಾಗಲು ಸಾಧ್ಯವಿದೆ. ಯುದ್ಧ, ನೈಸರ್ಗಿಕ ಪ್ರಕೋಪಗಳು, ಕೋವಿಡ್‌ನಂಥ ಮಹಾಮಾರಿ- ಹೀಗೆ ಯಾವುದೇ ಸಂದರ್ಭದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಎದುರಾದರೂ, ಇದರ ಒತ್ತಡ ಬೀಳುವುದು ಶುಶ್ರೂಷಕರ ಮೇಲೆ. ರೋಗಿಗಳ ನೋವು, ಅಸಹಾಯಕತೆ; ತಮ್ಮವರನ್ನು ಕಳೆದುಕೊಂಡವರ ಕೋಪ-ತಾಪಗಳೆಲ್ಲ ಕೆಲವೊಮ್ಮೆ ತಿರುಗುವು ಶುಶ್ರೂಷಕರ ಮೇಲೆ. ಅಂಥ ಸಂದರ್ಭದಲ್ಲೂ ಕರುಣೆಯಿಂದಲೇ ವರ್ತಿಸಿ, ಅವರನ್ನು ಆರೈಕೆ ಮಾಡುವುದು, ಸಮಾಧಾನ ಮಾಡುವುದು ಅತ್ಯಂತ ಕಷ್ಟದ ಕೆಲಸ. ಆದರೆ ಅದನ್ನಾದರೂ ನರ್ಸ್‌ಗಳು ಧೃತಿಗೆಡದಂತೆ ಮಾಡುತ್ತಾರೆ. ಹಾಗಾಗಿ ಅವರಿಗೆ ಧನ್ಯವಾದ ಹೇಳುವಂಥ ನಿಮ್ಮಿಷ್ಟದ ಸಣ್ಣ, ಸರಳ ಕೆಲಸ ಯಾವುದನ್ನಾದರೂ ಮಾಡಬಹುದು.

Exit mobile version