Site icon Vistara News

Yoga Day 2022 | ಜೀವನನ್ನು ಶಿವನನ್ನಾಗಿ ಮಾಡುವ ಮಹಾ ಮಾರ್ಗವೇ ಈ ಯೋಗ

Yoga Day 2022

ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ,
ಪಂಚಮಸಾಲಿ ಜಗದ್ಗುರು ಪೀಠ, ಹರಿಹರ

ಇದು ಬಹಳ ವರ್ಷಗಳ ಹಿಂದಿನ ಮಾತು. ನಮ್ಮನ್ನು ಭೇಟಿಯಾಗಲು ಒಬ್ಬ ಹದಿಹರೆಯದ ಹುಡುಗ ಬಂದಿದ್ದ. ಆತನಲ್ಲಿ ಯೋಗದ ಬಗ್ಗೆ ಇದ್ದ ಆಸಕ್ತಿಗಿಂತ ಕುತೂಹಲವೇ ಹೆಚ್ಚಿತ್ತು. “ಬುದ್ಧಿ ನೀವು ಯೋಗ ಮಾಡ್ತೀರಲ್ರಿ, ಅದ್ನ ಯಾಕ್ ಮಾಡಬೇಕು?ʼʼ ಅಂತ ಅತ್ಯಂತ ಮುಗ್ಧತೆಯಿಂದ ಪ್ರಶ್ನೆ ಮಾಡಿದ್ದ.

ನಾವು ಹೇಳಿದ್ದೆವು. “ಯೋಗವೆನ್ನುವುದು ಒಂದು ಬೆಳಕಿದ್ದ ಹಾಗೆ. ಅದು ನಮ್ಮೊಳಗೆ ಪ್ರವಹಿಸಿ ಆತ್ಮಶುದ್ಧಿ ಮಾಡುತ್ತದೆ. ಯೋಗದ ಬೆಳಕಲ್ಲಿ ನಡೆದರೆ ದೇಹ ಮತ್ತು ಮನಸ್ಸು ಎರಡೂ ಶುದ್ಧಿಯಾಗುತ್ತದೆ, ಆನಂದ ಪಡೆಯುತ್ತದೆʼʼ. ನಮ್ಮ ಮಾತು ಕೇಳಿ ಹುಡುಗನ ಕಣ್ಣಲ್ಲಿ ಸಣ್ಣ ಬೆಳಕೊಂದು ಪ್ರಜ್ವಲಿಸಿದಂತೆ ಕಂಡಿತ್ತು. ಅದಾಗಿ ಎಷ್ಟೋ ವರ್ಷಗಳ ನಂತರ ಆ ಹುಡುಗ ಮತ್ತೆ ಬಂದಿದ್ದ. ಈಗ ಆತನ ದೇಹದಲ್ಲಿ ʼಯೋಗಸೂರ್ಯʼ ನೆಲೆಸಿದ್ದ. ಮುಖದಲ್ಲಿ ಅರಿವಿನ ಬಿಂಬವಿತ್ತು.

ಯೋಗವೆಂದರೆ ವಿವೇಕ. ಅರಿವು ಅಂತ ನಾವು ಬಿಡಿಸಿ ಹೇಳಬೇಕಾಗಿಲ್ಲ. ಯೋಗ ನಮ್ಮೊಳಗಿನ ಗುರುವಾಗಬೇಕು. ಯೋಗ ಎಂದರೆ ಸ್ವಯಂ ವೈದ್ಯನಾಗುವುದು. ಅಂದರೆ ನಮ್ಮ ಶರೀರಕ್ಕೆ ನಾವೇ ಮಾಸ್ಟರ್. ಇದನ್ನೇ ಬುದ್ಧ ʼನಿನಗೆ ನೀನೇ ಬೆಳಕುʼ ಎಂದು ಹೇಳಿದ್ದು. ಅಂದರೆ ಯೋಗ ಮತ್ತು ಧ್ಯಾನದ ಮೂಲಕ ಅಂತರಂಗದ ಬೆಳಕನ್ನು ನಾವೇ ಕಂಡುಕೊಳ್ಳಬೇಕು.

ಯೋಗಕ್ಕಿದೆ ಸಾವಿರಾರು ವರ್ಷಗಳ ಇತಿಹಾಸ

ಯೋಗ ವಿನಾಕಾರಣ ಹುಟ್ಟಿದ್ದಲ್ಲ. ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪರಂಪರೆ ಇದೆ. ಭರತಖಂಡವೆಂಬ ಪರಮಪವಿತ್ರವಾದ ನಾಡಿನಲ್ಲಿ ನಡೆದಾಡಿದ್ದ ಋಷಿಮುನಿಗಳ ತಪಸ್ಸಿನಿಂದ ಆವಿಷ್ಕಾರಗೊಂಡದ್ದೇ ಯೋಗ. ಯೋಗ ಮತ್ತು ಧ್ಯಾನದ ಅಂತಃಸತ್ವ ಉಸಿರಿನ ಏರಿಳಿತದ ಮೇಲೆ ನಿಂತಿದೆ. ನಮ್ಮ ಆಯಸ್ಸನ್ನು ತೀರ್ಮಾನಿಸುವುದೂ ಉಸಿರಾಟವೆ. ನಾವು ಹೆಚ್ಚುಬಾರಿ ಉಸಿರಾಡುತ್ತೇವೆ. ಬಹಳಬೇಗ ಮಣ್ಣಿಗೆ ಸೇರುತ್ತೇವೆ. ಮೊಸಳೆ ನಿಮಿಷಕ್ಕೆ ನಾಲ್ಕುಸಲ ಮಾತ್ರ ಉಸಿರಾಡಿ ಮುನ್ನೂರು ವರ್ಷ ಬದುಕುತ್ತದೆ. ಆಮೆ ನಿಮಿಷಕ್ಕೆ ಮೂರು ಸಲ ಉಸಿರಾಡಿ ನಾಲ್ಕುನೂರು ವರ್ಷ ಬದುಕಿದ್ದಕ್ಕೆ ಉದಾಹರಣೆಗಳಿವೆ.

ಆದ್ರೆ ಶ್ವಾನ ಹಾಗಲ್ಲ. ಅದು ಬಾಯಿ ಮೂಲಕ ಹೆಚ್ಚು ಉಸಿರಾಡುತ್ತದೆ. ಅದರ ಜೀವಿತಾವಧಿ ಕಡಿಮೆ. ಇದನ್ನೆಲ್ಲಾ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಋಷಿವರ್ಯರು ಅರಿತಿದ್ದರು. ಯಾವುದೇ ಒತ್ತಡವಿಲ್ಲದೆ ನಿರುಮ್ಮಳವಾಗಿ ಬದುಕುವ ಪ್ರಾಣಿ ಪಕ್ಷಿಗಳ ಜೀವನಕ್ರಮವನ್ನು ಕುತೂಹಲದಿಂದ ಗಮನಿಸಿದ್ದರು. ಯಾವ ಪ್ರಾಣಿಗೂ ಬೆನ್ನು ನೋವು ಬರಲ್ಲ. ಯಾವ ಪ್ರಾಣಿಗೂ ರಕ್ತದೊತ್ತಡ ಇರಲ್ಲ, ಮಧುಮೇಹ ಇರಲ್ಲ, ಕ್ಯಾನ್ಸರ್‌ ಇರಲ್ಲ. ಹಾಗಿದ್ದಮೇಲೆ ಮನುಷ್ಯನಿಗೆ ಏಕೆ ಈ ಎಲ್ಲಾ ಕಾಯಿಲೆಗಳು ಆವರಿಸಿಕೊಳ್ಳುತ್ತವೆ ಅಂತ ಚಿಂತಿಸಿದ್ದರು.

ಜಗತ್ತಿಗೆ ನಾವು ನೀಡಿದ ಕೊಡುಗೆಯಲ್ಲಿ ʼಯೋಗʼವೊಂದು ಮಹಾನ್‌ ಕೊಡುಗೆ. ಅದನ್ನು ವಿಶ್ವವೇ ಈಗ ಅನುಸರಿಸುತ್ತಿದೆ.

ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ | ಪಂಚಮಸಾಲಿ ಜಗದ್ಗುರು ಪೀಠ, ಹರಿಹರ

ಜಗತ್ತಿಗೆ ನಾವು ನೀಡಿದ ಕೊಡುಗೆಯಲ್ಲಿ ʼಯೋಗʼವೊಂದು ಮಹಾನ್‌ ಕೊಡುಗೆ. ಅದನ್ನು ವಿಶ್ವವೇ ಈಗ ಅನುಸರಿಸುತ್ತಿದೆ. ನಾವು ಮಾತ್ರ ಅನುಸರಿಸುತ್ತಿಲ್ಲ. ಹೇಳಬೇಕೆಂದರೆ ನಮಗಿಂತ ಯೋಗವನ್ನು ಪಾಶ್ಚಿಮಾತ್ಯರು ಹೆಚ್ಚು ಅಪ್ಪಿಕೊಂಡಿದ್ದಾರೆ. ನೀವು ನಂಬಲ್ಲ, ಅಮೆರಿಕದಲ್ಲಿ ಪ್ರತಿ ಹತ್ತು ಕಿಲೋಮೀಟರ್‌ ಗೆ ಒಂದು ಯೋಗ ಸೆಂಟರ್ ಇದೆ. ಚೀನಾದಲ್ಲಿ ನಮ್ಮ ಹತ್ತು ಸಾವಿರ ಯೋಗ ಶಿಕ್ಷಕರು ಯೋಗ ಪ್ರಸರಣದಲ್ಲಿ ನಿತರಾಗಿದ್ದಾರೆ. ಯೋಗ ಪಾಶ್ಚಿಮಾತ್ಯರ ಹೊಸ ಪ್ಯಾಷನ್ ಆಗಿ, ಆರೋಗ್ಯದ ಟ್ರೆಂಡ್‌ ಆಗಿ ತುಂಬಾ ದಿನಗಳಾದವು. ನಾವು ಮಾತ್ರ ಯೋಗವನ್ನು ಇನ್ನೂ ಪೂರ್ತಿಯಾಗಿ ಅನುಸರಿಸುತ್ತಿಲ್ಲ. ಇದಕ್ಕೆ ನಮ್ಮ ನಿರ್ಲಕ್ಷ್ಯವೋ ಉದಾಸೀನವೋ ಕಾರಣವಾಗಿದೆ ಅಂದರೆ ತಪ್ಪಲ್ಲ .

ಪ್ರತಿದಿನ ಅಭ್ಯಾಸ ಮಾಡಿದರೆ ಆರೋಗ್ಯ

ಯೋಗದ ಬಗೆಗಿನ ಈ ಉದಾಸೀನವನ್ನು ನಿವಾರಿಸಲೆಂದೇ ನಾವು ಬೆಂಗಳೂರಿನಲ್ಲಿ ಶ್ವಾಸಯೋಗ ಕೇಂದ್ರವನ್ನು ಸ್ಥಾಪಿಸಿ ಆ ಮೂಲಕ ಯೋಗವನ್ನು ಜನಪ್ರಿಯಗೊಳಿಸಲು ಶುರು ಮಾಡಿದೆವು. ಮೊದಲ ಸಲ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿದೆವು. ಎಲೆಮರೆಕಾಯಿಯಂತಿದ್ದ ದೇಶದ ಹಲವು ಹಿರಿಯ ಯೋಗ ಮಾಸ್ಟರ್‌ ಗಳಿಗೆ ಯೋಗರತ್ನ ಪುರಸ್ಕಾರ ನೀಡಿ ಗೌರವಿಸಿದೆವು. ಹಲವಾರು ದೇಶಗಳಲ್ಲಿ ಸಂಚರಿಸಿ ಅಲ್ಲಿನ ಜನರಿಗೆ ಯೋಗದ ಪರಿಚಯ ಮಾಡಿಸಿದೆವು. ನಮ್ಮ ಪ್ರಕಾರ ಬಡವ-ಶ್ರೀಮಂತನೆನ್ನದೆ ಪ್ರತಿಯೊಬ್ಬರೂ ಯೋಗವನ್ನು ಪ್ರತಿದಿನ ಅಭ್ಯಾಸ ಮಾಡಬೇಕು. ಆಗ ಮಾತ್ರ ದೇಶ ಆರೋಗ್ಯವಾಗಿರಲು ಸಾಧ್ಯ.

ಯೋಗವನ್ನು ದೇಶದ ಪ್ರತಿಯೊಬ್ಬರೂ ಅನುರಿಸಬೇಕು ಅನ್ನೋದು ನಮ್ಮ ಸಲಹೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಯೋಗ ಮತ್ತು ಧ್ಯಾನವನ್ನು ಪಾಲಿಸಿದರೆ ದೇಶದ ತುಂಬಾ ಆರೋಗ್ಯಕರ ಮನಸುಗಳಿರುತ್ತವೆ. ಆರೋಗ್ಯಕರ ಮನಸಿದ್ದಲ್ಲಿ ಹೊಸ ಕನಸುಗಳು, ಹೊಸ ಆಶಯಗಳು ಚಿಗುರೊಡೆಯುತ್ತವೆ. ದೇಶ ಅಭಿವೃದ್ಧಿಪಥದಲ್ಲಿ ಸಾಗುತ್ತದೆ. ಅಂದರೆ ನಮ್ಮ ಆರೋಗ್ಯದ ಮೇಲೆ ದೇಶದ ಆರೋಗ್ಯ ನಿಂತಿದೆ. ಆದರೆ ಎಲ್ಲರೂ ಯೋಗ ಮಾಡಿ ಧ್ಯಾನ ಮಾಡಿ ಎಂದು ಸರ್ಕಾರ ಕಾನೂನು ಮಾಡಲು ಸಾಧ್ಯವಿಲ್ಲ. ಯೋಗ ಮತ್ತು ಧ್ಯಾನದ ಬಯಕೆ ನಮ್ಮೊಳಗೇ ಹುಟ್ಟಬೇಕು. ಅದು ಜೀವನದ ಒಂದು ಭಾಗವಾಗಬೇಕು.

ವಾರದಲ್ಲಿ ಒಂದು ದಿನ ಯೋಗ ಮಾಡಿದರೆ ನಿಮ್ಮ ಮನಸ್ಸು ಬದಲಾಗುತ್ತದೆ. ವಾರದಲ್ಲಿ ಎರಡು ಬಾರಿ ಯೋಗ ಮಾಡಿದರೆ ದೇಹದ ಸ್ಥಿತಿಯೇ ಬದಲಾಗುತ್ತದೆ. ಪ್ರತಿನಿತ್ಯ ಯೋಗ ಮಾಡಿದರೆ ಅದು ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ ಅನ್ನೋದು ನಾವು ತಿಳಿದುಕೊಂಡ ಸತ್ಯ.

ವ್ಯಾಯಾಮಕ್ಕೂ ಯೋಗಕ್ಕೂ ವ್ಯತ್ಯಾಸವಿದೆ

ಈ ದೇಶದ ಆತ್ಮ ಮಹಾತ್ಮ ಗಾಂಧಿ ಒಮ್ಮೆ ಹೇಳಿದ್ದರು, “ಶರೀರದ, ಮನಸ್ಸಿನ ಮತ್ತು ಆತ್ಮದ ಸರ್ವಶಕ್ತಿಗಳನ್ನೂ ಭಗವಂತನೊಡನೆ ಬೆಸೆಯುವುದೇ ಯೋಗʼʼ ಎಂದು. ದುರಂತವೆಂದರೆ ಯೋಗದ ಸಾರ ನಮ್ಮ ಜನರಿಗೇ ಇನ್ನೂ ಅಷ್ಟಾಗಿ ತಿಳಿದಿಲ್ಲ. ಬಹುತೇಕ ಜನ ವ್ಯಾಯಾಮವನ್ನೇ ಯೋಗ ಎಂದು ಭಾವಿಸಿಕೊಂಡಿದ್ದಾರೆ ಅಥವಾ ಹಣಕ್ಕಾಗಿ ಹಾಗೆ ಕೆಲವರು ನಂಬಿಸಿದ್ದಾರೆ. ಅದು ತಪ್ಪು. ಯಾಕೆಂದ್ರೆ ವ್ಯಾಯಾಮ ದೈಹಿಕ ಕಸರತ್ತು ಅಷ್ಟೆ. ಆದರೆ ಗೊತ್ತಿರಲಿ ಯೋಗ ಮತ್ತು ಧ್ಯಾನ ನಿಮ್ಮನ್ನು ದೈವತ್ವದೆಡೆಗೆ ಸಾಗಲು ಪ್ರೇರೇಪಿಸುತ್ತದೆ.

ಯೋಗ ಮತ್ತು ಧ್ಯಾನದ ಶಕ್ತಿ ಏನು ಅನ್ನುವುದಕ್ಕೆ ನಿಮಗೊಂದು ಉದಾಹರಣೆ ಕೊಡಲು ನಾವು ಬಯಸುತ್ತೇವೆ.
ಇತ್ತೀಚೆಗೆ ಒಂದು ಮಹತ್ವದ ಅಧ್ಯಯನ ನಡೆಯಿತು. ಅಂತರಿಕ್ಷ ಯಾನ ಮಾಡುವ ಗಗನಯಾತ್ರಿಗಳಿಗೆ ಅನ್ಯಗ್ರಹದಲ್ಲಿ ಇಳಿಯಬೇಕಾದರೆ ಹಲವು ಚಾಲೆಂಜಸ್‌ ಎದುರಾಗುತ್ತದೆ. ರಕ್ತದೊತ್ತಡ, ಮಾನಸಿಕ ಸ್ಥಿಮಿತದ ಏರುಪೇರು ಇತ್ಯಾದಿ. ಅಲ್ಲಿ ಏಕಾಗ್ರತೆ ಕೂಡ ಇನ್ನೊಂದು ಚಾಲೆಂಜ್. ಹೀಗಾಗಿ ರಷ್ಯಾದ ವಿಜ್ಞಾನಿಗಳು ಬೌದ್ಧ ಬಿಕ್ಕುಗಳ ಧ್ಯಾನ ಪದ್ಧತಿಯನ್ನು ಅವ್ಯಾಹತವಾಗಿ ಅಭ್ಯಾಸ ಮಾಡ್ತಿದ್ದಾರೆ. ಯೋಗ ಮಾಡಿದಾಗ ಮತ್ತು ಧ್ಯಾನದಲ್ಲಿ ಕುಳಿತಾಗ ಅವರ ಮನಸ್ಸಿನಲ್ಲಿ ಏಳುವ ತರಂಗಗಳೇನು? ಸತತ ಹಲವು ದಿನಗಳ ಕಾಲ ಅನ್ನಾಹಾರ ಸೇವಿಸದೆ ಹೇಗೆ ಬೌದ್ಧ ಬಿಕ್ಕುಗಳು ಧ್ಯಾನ ಮಾಡಬಲ್ಲರು? ಸುಪ್ತಾವಸ್ಥೆಗೆ ಅವರು ಹೇಗೆ ಜಾರುತ್ತಾರೆ ಅನ್ನೋದನ್ನೆಲ್ಲಾ ಸ್ಟಡಿ ಮಾಡಿದ್ದಾರೆ. ಅಂದ್ರೆ ನಮ್ಮ ಪರಂಪರಾಗತ ಯೋಗದಲ್ಲೇ ಧ್ಯಾನದಲ್ಲೇ ವಿಸ್ಮಯಕಾರಿ ಸತ್ಯ ಅಡಗಿದೆ. ಅದನ್ನು ಮೊದಲು ನಾವು ಅರಿತುಕೊಳ್ಳಬೇಕು ಅಷ್ಟೆ.

ಇಂದು ಭಾರತದ ಆಧ್ಯಾತ್ಮಕ್ಕೆ ವಿಶ್ವವೇ ತಲೆಬಾಗಿನಿಂತಿದೆ.ಜೂನ್ 21ರಂದು ವಿಶ್ವದ 172 ದೇಶಗಳು ಸೂರ್ಯನೆಡೆಗೆ ಮುಖಮಾಡಿ “ಅಂತಾರಾಷ್ಟ್ರೀಯ ಯೋಗ ದಿನ” ಆಚರಿಸುತ್ತಿವೆ. ಇದು ಭಾರತಕ್ಕೆ ಲಭಿಸಿರುವ ಬಹುದೊಡ್ಡ ಗೌರವವಾಗಿದೆ.

ಭಾರತದ ಹೃದಯದಂತಿರುವ “ಯೋಗ-ಆಯುರ್ವೇದ ದರ್ಶನಗಳು”ಈ ದೇಶದ ಬಹುದೊಡ್ಡ ಸಂಪತ್ತು. ಇದೊಂದು ವರವಿದ್ಯೆ.ಇಲ್ಲಿ ಅಣು-ಅಣುವಿನಿಂದ ಅನಂತದವರೆಗೆ, ಭಾವದಿಂದ ಅನುಭಾವದವರೆಗೆ, ಮೃತ್ಯುವಿನಿಂದ-ಅಮೃತತ್ತ್ವದೆಡೆಗೆ ಕರೆದೊಯ್ದು, ಜೀವನನ್ನು ಶಿವನನ್ನಾಗಿ ಮಾಡುವ ಮಹಾ ಮಾರ್ಗವೇ ಈ ಯೋಗ ಪ್ರಕ್ರಿಯೆ.

ಎಲ್ಲರಿಗೂ ವಿಶ್ವ ಯೋಗ ದಿನದ ಶುಭಾಶಯಗಳು

ಇದನ್ನೂ ಓದಿ | yoga day 2022 | ಸಾಂಸ್ಕೃತಿಕ ನಗರಿ ಮೈಸೂರು ಯೋಗ ನಗರಿಯಾಗಿದ್ದು ಹೇಗೆ?

Exit mobile version