Site icon Vistara News

International Yoga Day 2024: ವಿಶ್ವಕ್ಕೆ ಯೋಗವನ್ನು ಪರಿಚಯಿಸಿದವರು ಕನ್ನಡಿಗ ಬಿಕೆಎಸ್ ಅಯ್ಯಂಗಾರ್!

International Yoga Day 2024

ವಿಶ್ವದಾದ್ಯಂತ ಇಂದು (ಜೂನ್ 21) ಯೋಗ ದಿನವನ್ನು (International Yoga Day 2024) ಆಚರಿಸಲಾಗುತ್ತಿದೆ. ಯೋಗದ (yoga) ಕುರಿತಾಗಿ ಜಾಗತಿಕ ಅರಿವು ಮೂಡಿಸುವುದು, ದೈಹಿಕ ಮತ್ತು ಮಾನಸಿಕ ಯೋಗಕ್ಷೇಮಕ್ಕಾಗಿ (physical and mental well-being) ಅದರ ಬಹುಮುಖಿ ಪ್ರಯೋಜನಗಳನ್ನು ತಿಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ವಿದೇಶಿಯರು, ಸೆಲೆಬ್ರಿಟಿಗಳಲ್ಲಿ ಯೋಗವು ಸಾಕಷ್ಟು ಜನಪ್ರಿಯವಾಗಿದೆ. ಜಾಗತಿಕವಾಗಿ ಯೋಗದ ಕುರಿತು ಅರಿವು ಮೂಡಿಸುವಲ್ಲಿ ಭಾರತೀಯ ಯೋಗ ಗುರು ಬಿಕೆಎಸ್ ಅಯ್ಯಂಗಾರ್ (BKS Iyengar) ಅವರ ಪ್ರಮುಖ ಪಾತ್ರವಿದೆ.

“ಆಧುನಿಕ ಯೋಗದ ಪಿತಾಮಹ” ಎಂದು ಕರೆಯಲ್ಪಡುವ ಅಯ್ಯಂಗಾರ್ ಅವರು ಪೂರ್ವದಿಂದ ಪಶ್ಚಿಮಕ್ಕೆ ಯೋಗದ ಸಂದೇಶವನ್ನು ಸಾಗಿಸಿದರು. ಸುಮಾರು 60 ದೇಶಗಳಿಗೆ ಯೋಗದ ಪ್ರಯೋಜನಗಳನ್ನು ತಿಳಿಸಿ ಅಭ್ಯಾಸ ಮಾಡಲು ಪ್ರೇರೇಪಣೆ ನೀಡಿದ ಕೀರ್ತಿ ಇವರದ್ದಾಗಿದೆ.

2002ರಲ್ಲಿ ನ್ಯೂಯಾರ್ಕ್ ಟೈಮ್ಸ್ ಒಂದು ಲೇಖನದಲ್ಲಿ ಹೀಗೆ ಬರೆದಿದೆ: ಪ್ರಾಯಶಃ ಯೋಗವನ್ನು ಪಶ್ಚಿಮಕ್ಕೆ ತರಲು ಅಯ್ಯಂಗಾರ್ ಅವರಿಗಿಂತ ಹೆಚ್ಚಿನದನ್ನು ಯಾರೂ ಮಾಡಿಲ್ಲ. ಅಯ್ಯಂಗಾರ್ ಅವರು ಅಮೆರಿಕನ್ನರಿಗೆ ಜಗತ್ತಿನ ಇತರರ ಜೊತೆ ಆಸನಗಳು ಮತ್ತು ಉಸಿರಾಟದ ನಿಯಂತ್ರಣದ ತಂತ್ರಗಳನ್ನು ಕಲಿಸುತ್ತಿದ್ದರು. ಬಿಕೆಎಸ್ ಅಯ್ಯಂಗಾರ್ ಅವರು ಯೋಗವು ದೈಹಿಕ ಅಭ್ಯಾಸಕ್ಕಿಂತ ಹೆಚ್ಚಿನದು. ಅದು ಕಲೆ, ವಿಜ್ಞಾನ ಮತ್ತು ತತ್ತ್ವ ಶಾಸ್ತ್ರ ಎಂದು ನಂಬಿದ್ದರು.


ಬಿಕೆಎಸ್ ಅಯ್ಯಂಗಾರ್ ಪ್ರಯಾಣ ಹೇಗಿತ್ತು?

1950ರ ದಶಕದಲ್ಲಿ ಮುಂಬಯಿ ಪ್ರವಾಸದ ಸಮಯದಲ್ಲಿ ಅಯ್ಯಂಗಾರ್ ಅವರನ್ನು ಕಂಡ ಅಮೆರಿಕನ್- ಬ್ರಿಟಿಷ್ ಪಿಟೀಲು ವಾದಕ ಯೆಹೂದಿ ಮೆನುಹಿನ್ ಅವರೊಂದಿಗಿನ ಮುಖಾಮುಖಿಯಾಯಿತು. ಇದು ಯೋಗವನ್ನು ಜಾಗತಿಕವಾಗಿ ಪ್ರಚಾರ ಪಡಿಸಲು ಪ್ರೇರೇಪಿಸಿತು. 1952ರಲ್ಲಿ ಭಾರತಕ್ಕೆ ಭೇಟಿ ನೀಡಿದ ಮೆನುಹಿನ್ ಅವರು ಅಯ್ಯಂಗಾರ್‌ ಬಳಿ ಯೋಗಾಭ್ಯಾಸದ ಬಗ್ಗೆ ಕೇಳಿದರು. ಅವರು ಎಷ್ಟು ಪ್ರಭಾವಿತರಾದರೆಂದರೆ, ಕೇವಲ ಹತ್ತು ನಿಮಿಷಗಳಿಗೆಂದು ನಿಗದಿಯಾಗಿದ್ದ ಇವರ ನಡುವಿನ ಸಂಭಾಷಣೆಯು ಮೂರು ಗಂಟೆಗಳಿಗೂ ಹೆಚ್ಚು ಕಾಲ ಮುಂದುವರಿಯಿತು! ಅಯ್ಯಂಗಾರ್ ಅವರನ್ನು ಮೆನುಹಿನ್ ತಮ್ಮೊಂದಿಗೆ ಸ್ವಿಟ್ಜರ್ಲೆಂಡ್‌ಗೆ ಮತ್ತು ಅನಂತರ ಲಂಡನ್‌ಗೆ ಕರೆತಂದರು. ಇತರ ಪ್ರಭಾವಿ ವ್ಯಕ್ತಿಗಳಿಗೆ ಪರಿಚಯಿಸಿದರು.

1956ರಲ್ಲಿ ನ್ಯೂಯಾರ್ಕ್‌ಗೆ ಅಯ್ಯಂಗಾರ್ ಅವರು ಮೊದಲ ಬಾರಿಗೆ ಭೇಟಿ ನೀಡಿದರು. ಅಲ್ಲಿನವರಿಗೆ ಯೋಗದ ಬಗ್ಗೆ ಹೆಚ್ಚಿನ ಆಸಕ್ತಿ ಇರಲಿಲ್ಲ. ಅಲ್ಲಿ ದಶಕಗಳ ಕಾಲ ಕಾಲ ಅವರು ಜನರನ್ನು ಆಕರ್ಷಿಸಲು ಪ್ರಾರಂಭಿಸಿದರು. ಅನಂತರ ಅವರು ಅಂತಿಮವಾಗಿ ಆರು ಖಂಡಗಳಲ್ಲಿ ಯೋಗ ಸಂಸ್ಥೆಗಳನ್ನು ತೆರೆಯಲು ಹೋದರು. ಯೋಗ ಗುರುಗಳು ಆ ಸಮಯದಲ್ಲಿ 85 ವರ್ಷದ ಬೆಲ್ಜಿಯಂನ ರಾಣಿ ಎಲಿಸಬೆತ್‌ಗೆ ತಲೆಯ ಮೇಲೆ ನಿಲ್ಲುವ ಶಿರ್ಷಾಸನ ಕಲಿಸಿದರು.

1966ರಲ್ಲಿ ಅವರು ತಮ್ಮ ಮೊದಲ ಪುಸ್ತಕ ʼಲೈಟ್ ಆನ್ ಯೋಗʼ (1966) ಅನ್ನು ಪ್ರಕಟಿಸಿದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಮಾರಾಟವಾದ ಕೃತಿಯಾಯಿತು.


ಬಿಕೆಎಸ್ ಅಯ್ಯಂಗಾರ್ ಯಾರು?

ಅಯ್ಯಂಗಾರ್ ಅವರು 1918ರ ಡಿಸೆಂಬರ್ 14ರಂದು ಕರ್ನಾಟಕದ ಕೋಲಾರ ಜಿಲ್ಲೆಯ ಬೆಳ್ಳೂರಿನಲ್ಲಿ ಜನಿಸಿದರು. ಅವರು 1937ರಲ್ಲಿ ಮಹಾರಾಷ್ಟ್ರದ ಪುಣೆಗೆ ಬಂದರು. ‘ಅಯ್ಯಂಗಾರ್ ಯೋಗ’ ಎಂದು ಕರೆಯಲ್ಪಡುವ ತಮ್ಮ ಯೋಗ ಶೈಲಿಯನ್ನು ಅವರು ಅಲ್ಲಿ ಪ್ರಚಾರಪಡಿಸಿದರು. ಗಮನಾರ್ಹ ವಿಷಯವೆಂದರೆ ಅವರು ಬಾಲ್ಯದಲ್ಲಿ ಕ್ಷಯರೋಗ, ಟೈಫಾಯಿಡ್ ಮತ್ತು ಮಲೇರಿಯಾಗೆ ತುತ್ತಾಗಿ ಬದುಕುಳಿದರು. ಯೋಗವು ಅವರ ಜೀವವನ್ನು ಉಳಿಸಿದ ಕೀರ್ತಿಗೆ ಕಾರಣವಾಯಿತು.


ಯೋಗದ ಜ್ಞಾನವನ್ನು ಹರಡಿದ ಅನಂತರ ಅವರು 1975ರಲ್ಲಿ ತಮ್ಮದೇ ಆದ ‘ಯೋಗವಿದ್ಯಾ’ ಸಂಸ್ಥೆಯನ್ನು ಸ್ಥಾಪಿಸಿದರು. ಅನಂತರ ಅವರು ದೇಶ ಮತ್ತು ವಿದೇಶದ ವಿವಿಧ ಶಾಖೆಗಳಿಗೆ ವಿಸ್ತರಿಸಿದರು. ವಿಶ್ವದ ಅತ್ಯುತ್ತಮ ಯೋಗ ಗುರುಗಳಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟಿರುವ ಅಯ್ಯಂಗಾರ್ ಅವರು ಯೋಗದ ಕುರಿತು ‘ಲೈಟ್ ಆನ್ ಯೋಗ’, ‘ಲೈಟ್ ಆನ್ ಪ್ರಾಣಾಯಾಮ’ ಮತ್ತು ‘ಲೈಟ್ ಆನ್ ದಿ ಯೋಗ ಸೂತ್ರಾಸ್ ಆಫ್ ಪತಂಜಲಿ’ ಸೇರಿದಂತೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. “ಆಧುನಿಕ ಋಷಿ” ಎಂದು ಪ್ರಶಂಸಿಸಲ್ಪಟ್ಟ ಅಯ್ಯಂಗಾರ್ ಅವರು ವಿವಿಧ ದೇಶಗಳಲ್ಲಿ ತಮ್ಮ ಸಂಸ್ಥೆಯ 100 ಶಾಖೆಗಳನ್ನು ಸ್ಥಾಪಿಸಿದರು.

ಅಂತಾರಾಷ್ಟ್ರೀಯ ಖ್ಯಾತಿಯ ಯೋಗ ಗುರು ಶ್ರೀಸಾಮಾನ್ಯರ ಜೊತೆಗೆ ಅನೇಕ ಪ್ರಮುಖ ವ್ಯಕ್ತಿಗಳಿಗೆ ಯೋಗಾಸನಗಳನ್ನು ಕಲಿಸಿದರು. ಅವರಿಂದ ಯೋಗವನ್ನು ಕಲಿತವರಲ್ಲಿ ಪ್ರಖ್ಯಾತ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಮತ್ತು ಪ್ರಸಿದ್ಧ ತತ್ತ್ವಜ್ಞಾನಿ ಜೆ. ಕೃಷ್ಣಮೂರ್ತಿ ಸೇರಿದ್ದಾರೆ. ಅಯ್ಯಂಗಾರ್‌ ಅವರ ಯೋಗ ವಿಧಾನವು ಅನೇಕರನ್ನು ಆಕರ್ಷಿಸಿತು. ಅವರಲ್ಲಿ ನಟಿ ಕರೀನಾ ಕಪೂರ್, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ನಟಿ ಆನೆಟ್ ಬೆನಿಂಗ್, ಡಿಸೈನರ್ ಡೊನ್ನಾ ಕರಂಟೊ ಮತ್ತು ಬರಹಗಾರ ಅಲ್ಡಸ್ ಹಕ್ಸ್ಲೆ ಸೇರಿದ್ದಾರೆ.


ಇದನ್ನೂ ಓದಿ: International Yoga Day 2024: ಹಿರಿಯರಿಗೆ ಸೂಕ್ತವಾದ ಯೋಗಾಸನಗಳಿವು

ಇವರಿಗೆ ಸಂದ ಪ್ರಶಸ್ತಿಗಳು

ಯೋಗಕ್ಕೆ ನೀಡಿರುವ ಅಪಾರ ಕೊಡುಗೆಗಾಗಿ ಅಯ್ಯಂಗಾರ್ ಅವರಿಗೆ 1991ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಮತ್ತು 2014ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

2004ರಲ್ಲಿ ಅವರು ಅಮೆರಿಕದ ಪ್ರತಿಷ್ಠಿತ ʼಟೈಮ್ʼ ಮ್ಯಾಗಜೀನ್‌ನಿಂದ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಅಯ್ಯಂಗಾರ್‌ ಹೆಸರಿಸಲ್ಪಟ್ಟರು. 2014ರ ಆಗಸ್ಟ್ 20ರಂದು ಅಯ್ಯಂಗಾರ್ ಅವರು ಹೃದಯ ಮತ್ತು ಮೂತ್ರಪಿಂಡ ವೈಫಲ್ಯದಿಂದ ಪುಣೆಯಲ್ಲಿ ನಿಧನರಾದರು. ಆಗ ಅವರಿಗೆ 95 ವರ್ಷ ವಯಸ್ಸಾಗಿತ್ತು.

Exit mobile version