Site icon Vistara News

International Yoga Day 2024: ದೇಹ ತೂಕ ಇಳಿಕೆಗೆ ಈ 5 ಆಸನಗಳು ಸೂಕ್ತ

Weight Loss tension

ತೂಕ ಇಳಿಕೆಗೆ ಯೋಗವನ್ನು (International Yoga Day 2024) ನೆಚ್ಚಿಕೊಳ್ಳಬಹುದೇ? ಖಂಡಿತಾ! ದೇಹದ ಚಯಾಪಚಯವನ್ನು ಹೆಚ್ಚಿಸುವ ಮೂಲಕ ದೇಹದ ತೂಕವನ್ನು ಇಳಿಸುವುದಕ್ಕೆ ಯೋಗ ನೆರವಾಗುತ್ತದೆ. ಜೊತೆಗೆ, ಸ್ನಾಯು- ಕೀಲುಗಳ ಸ್ವಾಸ್ಥ್ಯ ಹೆಚ್ಚಿಸಿ, ಆರೋಗ್ಯಕರ ಆಹಾರಾಭ್ಯಾಸ ರೂಢಿಸಿಕೊಳ್ಳುವುದಕ್ಕೆ ನೆರವಾಗುತ್ತದೆ.
ಯೋಗದ ಬೇರುಗಳು ಭಾರತದಲ್ಲಿ ಇರುವುದು ಹೌದಾದರೂ ಅದರ ರೆಂಬೆ-ಕೊಂಬೆಗಳು ಜಗತ್ತಿನೆಲ್ಲೆಡೆ ಹರಡಿವೆ. ಕೆಲವರು ಆಧ್ಯಾತ್ಮದ ವಿಕಾಸಕ್ಕೆ, ಹಲವರು ಮಾನಸಿಕ ಸ್ವಾಸ್ಥ್ಯಕ್ಕೆ, ಬಹಳಷ್ಟು ಮಂದಿ ವ್ಯಾಯಾಮದಂತೆ ಇದನ್ನು ಅಳವಡಿಸಿಕೊಂಡಿದ್ದಾರೆ. ಇರಲಿ, ಎಲ್ಲ ಅವರವರ ಭಕುತಿಗೆ ಬಿಟ್ಟಿದ್ದು. ಆದರೆ ತೂಕ ಇಳಿಸುವ ಉದ್ದೇಶವಿದ್ದರೆ, ಅದು ಯೋಗದಿಂದ ಸಾಧ್ಯವೇ? ಹೌದಾದರೆ, ಅದಕ್ಕೆ ಸೂಕ್ತವಾದಂಥ ಆಸನಗಳು ಯಾವುವು? ಮುಂತಾದ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಆಸನಗಳು, ಉಸಿರಾಟ, ಧ್ಯಾನ ಮುಂತಾದ ಹಲವು ಅಂಗಗಳನ್ನು ಏಕತ್ರಗೊಳಿಸಿಕೊಂಡು ಮುನ್ನಡೆಯುವ ಪದ್ಧತಿ ಯೋಗದಲ್ಲಿದೆ. ಹಾಗಾಗಿ ದೇಹ ಮತ್ತು ಮನಸ್ಸುಗಳೆರಡರ ಆರೋಗ್ಯ ಸುಧಾರಣೆಗೆ ಇದನ್ನು ಬಳಸಬಹುದು. ಇದೇ ಹಿನ್ನೆಲೆಯಲ್ಲಿ, ತೂಕ ಇಳಿಕೆಗೂ ಯೋಗವನ್ನು ನೆಚ್ಚಿಕೊಳ್ಳಬಹುದೇ? ಖಂಡಿತಾ! ದೇಹದ ಚಯಾಪಚಯವನ್ನು ಹೆಚ್ಚಿಸುವ ಮೂಲಕ ದೇಹದ ತೂಕವನ್ನು ಇಳಿಸುವುದಕ್ಕೆ ಯೋಗ ನೆರವಾಗುತ್ತದೆ. ಜೊತೆಗೆ, ಸ್ನಾಯುಗಳು ಸಡಿಲ ಆಗದಂತೆ ಕಾಪಾಡಿ, ಕೀಲುಗಳ ಸ್ವಾಸ್ಥ್ಯ ಹೆಚ್ಚಿಸಿ, ಆರೋಗ್ಯಕರ ಆಹಾರಾಭ್ಯಾಸ ರೂಢಿಸಿಕೊಳ್ಳುವುದಕ್ಕೆ ನೆರವಾಗುತ್ತದೆ. ಇವೆಲ್ಲವೂ ತೂಕ ಇಳಿಕೆಗೆ ಅತ್ಯಂತ ಪೂರಕವಾದ ಅಂಶಗಳು. ಅಂಥ ಕೆಲವು ಆಸನಗಳು ಇಲ್ಲಿವೆ

ಸೂರ್ಯ ನಮಸ್ಕಾರ

ಹಲವು ಆಸನಗಳ ಸರಣಿಯನ್ನು ಇಲ್ಲಿ ಅಭ್ಯಾಸ ಮಾಡಬೇಕಾಗುತ್ತದೆ. ಆ ಎಲ್ಲಾ ಆಸನಗಳು ದೇಹದ ಹಲವಾರು ಸ್ನಾಯು, ಕೀಲುಗಳನ್ನು ಬಳಸಿಕೊಳ್ಳುತ್ತವೆ. ಈ ಮೂಲಕ ಇಡೀ ದೇಹವನ್ನು ಹಿಗ್ಗಿಸಿ, ಬಗ್ಗಿಸಿ, ತಗ್ಗಿಸಿ, ಮಟ್ಟಸವಾಗಿ ಮಾಡುವ, ಬಲಗೊಳಿಸುವ ಸಾಧ್ಯತೆ ಸೂರ್ಯ ನಮಸ್ಕಾರಕ್ಕಿದೆ. ಜೊತೆಗೆ ಇಡೀ ದೇಹದ ರಕ್ತ ಪರಿಚಲನೆಯನ್ನು ಸುಧಾರಿಸಿ, ಚಯಾಪಚಯವನ್ನು ಹೆಚ್ಚಿಸುತ್ತದೆ. ದಿನಕ್ಕೆ 10-15 ಸೂರ್ಯ ನಮಸ್ಕಾರಗಳು ಪರಿಣಾಮಕಾರಿ ಎನಿಸುತ್ತವೆ.

ವೀರಭದ್ರಾಸನ

ಈ ಆಸನವನ್ನು ಒಂದಕ್ಕಿಂತ ಹೆಚ್ಚಿನ ಕ್ರಮದಲ್ಲಿ ಅಭ್ಯಾಸ ಮಾಡಲಾಗುತ್ತದೆ. ಈ ಎಲ್ಲಾ ಆಸನಗಳು ಕಾಲು, ತೋಳು ಮತ್ತು ಹೊಟ್ಟೆ, ಬೆನ್ನಿನ ಸ್ನಾಯುಗಳನ್ನು ಬಲಗೊಳಿಸುವಂಥವು. ನಿಯಮಿತವಾಗಿ ಈ ಆಸನ ಅಭ್ಯಾಸ ಮಾಡುವುದರಿಂದ ಬಹಳಷ್ಟು ಕ್ಯಾಲರಿಗಳನ್ನು ಕರಗಿಸಿ, ದೇಹದ ಅದಷ್ಟೂ ಭಾಗಗಳ ಕೊಬ್ಬು ಇಳಿಸಬಹುದು.

ಉತ್ಕಟಾಸನ

ನೋಡುವುದಕ್ಕೆ ಸರಳವಾಗಿ ಕಂಡರೂ, ಅಷ್ಟೇನೂ ಸರಳವಲ್ಲ ಈ ಆಸನ. ತೊಡೆ, ಪೃಷ್ಠ, ಹೊಟ್ಟೆ, ಬೆನ್ನುಗಳ ಸ್ನಾಯುಗಳನ್ನು ಹುರಿಗಟ್ಟಿಸುವುದು ಇದರಿಂದ ಸಾಧ್ಯ. ಯಾವುದೇ ಕುರ್ಚಿ ಇಲ್ಲದೆಯೂ ಕುರ್ಚಿಯ ಮೇಲೆ ಕುಳಿತಂತೆ ಕಾಣುತ್ತದೆ ಈ ಆಸನದಲ್ಲಿ. ಮೊದಲಿಗೆ ಹತ್ತಿಪ್ಪತ್ತು ಸೆಕೆಂಡುಗಳಷ್ಟೇ ಹೀಗೆ ದೇಹವನ್ನು ಹಿಡಿಯಲು ಸಾಧ್ಯವಾಗಬಹುದು. ಕ್ರಮೇಣ ನಿಮಿಷದವರೆಗೆ ಇದನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ಅಧಿಕ ಪ್ರಮಾಣದಲ್ಲಿ ಶಕ್ತಿ ವ್ಯಯವಾಗುತ್ತದೆ.

ಫಲಕಾಸನ

ಇದನ್ನು ಫ್ಲಾಂಕ್‌ ಪೋಸ್‌ ಎಂದೇ ಹೇಳಲಾಗುತ್ತದೆ. ಇಡೀ ಶರೀರಕ್ಕೆ ಆಗುವಂಥ ವ್ಯಾಯಾಮವಿದು. ಇದರಿಂದ ಕಾಲು, ಕೈ, ಹೊಟ್ಟೆ, ಬೆನ್ನು, ಪೃಷ್ಠದ ಭಾಗವನ್ನು ಬಲಗೊಳಿಸಬಹುದು. ನೆಲಕ್ಕೆ ಸಮಾನಾಂತರವಾಗಿ ದೇಹವನ್ನು ಕೈ-ಕಾಲುಗಳ ಮೇಲೆ ನಿಲ್ಲಿಸುವಂಥ ಆಸನವಿದು. ಮೊದಲಿಗೆ 30 ಸೆಕೆಂಡ್‌ ಹಿಡಿಯುವುದೂ ಕಠಿಣ ಎನಿಸಬಹುದು. ನಿಯಮಿತವಾಗಿ ಅಭ್ಯಾಸ ಮಾಡಿದರೆ, ಎರಡು ನಿಮಿಷಗಳವರೆಗೆ ಈ ಆಸನದಲ್ಲಿ ಇರುವುದನ್ನು ಕ್ರಮೇಣ ಸಾಧ್ಯವಾಗಿಸಿಕೊಳ್ಳಬಹುದು.

ಪಶ್ಚಿಮೋತ್ತಾಸನ

ಕುಳಿತು ಮುಂಬಾಗಿ ಪಾದ ಮುಟ್ಟುವ ಆಸನವಿದು. ಇದೂ ಸಹ ರಕ್ತ ಪರಿಚಲನೆಯನ್ನು ವೃದ್ಧಿಸಿ, ಹೃದಯದ ಆರೋಗ್ಯ ಸುಧಾರಿಸುತ್ತದೆ. ದೇಹ ಬಿಗಿಯಾಗಿದ್ದರೆ ಈ ಆಸನಗಳು ಕಷ್ಟ ಎನ್ನುವುದು ಹೌದಾದರೂ, ಇವುಗಳನ್ನು ಅಭ್ಯಾಸ ಮಾಡುತ್ತಲೇ ಕ್ರಮೇಣ ದೇಹ ಸಡಿಲವಾಗುತ್ತದೆ. ಶಕ್ತಿ ಕರಗಿಸುವುದೇ ಅಲ್ಲದೆ ಶರೀರದ ರೋಗನಿರೋಧಕ ಶಕ್ತಿಯನ್ನೂ ಇದು ಹೆಚ್ಚಿಸುತ್ತದೆ. ಕಾಲು ಚಾಚಿ ಕುಳಿತು, ನಿಧಾನಕ್ಕೆ ಮುಂದೆ ಬಾಗಬೇಕು, ಕುತ್ತಿಗೆಯಿಂದಲ್ಲ, ಕಟಿಯ ಭಾಗದಿಂದ ಮುಂಬಾಗುವುದು ಸರಿಯಾದ ರೀತಿ. ಬಾಗುತ್ತಾ ಕೈಯಿಂದ ಪಾದಗಳನ್ನು ಹಿಡಿಯುವಷ್ಟು ಬಾಗುವುದು ಜೊತೆಗೆ ಕಿಬ್ಬೊಟ್ಟೆಯನ್ನು ತೊಡೆಗಳಿಗೆ ತಾಗಿಸುವುದು ಇದರ ಕ್ರಮ.

ಇದನ್ನೂ ಓದಿ: International Yoga Day 2024: ಯೋಗಾಭ್ಯಾಸಕ್ಕೆ ಪುರುಷರ ಉಡುಗೆಗಳು ಹೀಗಿರಬೇಕು

Exit mobile version