Site icon Vistara News

Yoga Day 2022 | ಪ್ರಧಾನಿ ಮೋದಿ ಪ್ರದರ್ಶಿಸಿದ ಆಸನಗಳು ಯಾವುವು? ಇವುಗಳ ಮಹತ್ವವೇನು?

Yoga Day 2022

ತಾಡಾಸನ : ಇದನ್ನು ಪರ್ವತ ಭಂಗಿ ಎಂದು ಕೂಡ ಕರೆಯಲಾಗುತ್ತದೆ. ಇದು ರಕ್ತ ಸಂಚಾರವನ್ನು ಸುಧಾರಿಸುವುದು ಮತ್ತು ದೇಹವು ಬೇರೆ ಯೋಗಾಸನಗಳಿಗೆ ತಯಾರಾಗಲು ಇದು ನೆರವಾಗುವುದು. ತಾಡಾಸನದಲ್ಲಿ ನಾವು ಹೆಚ್ಚು ಪಾದಗಳಿಗೆ ಮಹತ್ವ ನೀಡುತ್ತೇವೆ. ತಾಡಾಸನ ವೇಳೆ ಇದನ್ನು ಒಂದು ಬಿಲ್ಲಿನಂತೆ ಮಾಡುತ್ತದೆ ಮತ್ತು ಇದರಿಂದ ಪಾದಗಳಿಗೆ ಬಲ ಸಿಗುವುದು. ಸಾಮಾನ್ಯ ಜನರು ಕೂಡ ಪಾದಗಳನ್ನು ಬಲಪಡಿಸಿಕೊಳ್ಳಲು ಇದನ್ನು ಬಳಸಬಹುದು.

ವೃಕ್ಷಾಸನ : ವೃಕ್ಷಾಸನ ಇಡೀ ದೇಹಕ್ಕೆ ಮತ್ತು ಮನಸ್ಸಿಗೆ ಶಕ್ತಿ ಮತ್ತು ಆತ್ಮವಿಶ್ವಾಸ ಮೂಡಿಸುತ್ತದೆ. ಇದನ್ನು ಮಾಡುವುದರಿಂದ ಬೆನ್ನು ಮೂಳೆ, ನರಗಳು ಬಲವಾಗುತ್ತವೆ. ಕಾಲಿನ ಮಂಡಿ ಹಾಗೂ ಸೊಂಟ ಬಲವಾಗುವುದು, ಕಣ್ಣುಗಳ ದೃಷ್ಟಿಗೆ ಇದು ತುಂಬಾ ಒಳ್ಳೆಯದು. ತಾಳ್ಮೆ, ಏಕಾಗ್ರತೆ ಹೆಚ್ಚಿಸುವುದು.

ಪಾದ ಹಸ್ತಾಸನ: ಈ ಆಸನದಲ್ಲಿ ಕಾಲಬೆರಳು ಮತ್ತು ಕಾಲುಗಂಟುಗಳನ್ನು ಸ್ಪರ್ಶಿಸಲಾಗುತ್ತದೆ. ಈ ಆಸನದಲ್ಲಿ ಕೈಯನ್ನು ಕಾಲುಗಳ ಸಮೀಪಕ್ಕೆ ತರುವುದರಿಂದ ಇದಕ್ಕೆ ಪಾದಹಸ್ತಾಸನ ಎಂದು ಕರೆಯಲಾಗುತ್ತದೆ. ಮಲಬದ್ಧತೆ ಮುಂತಾದ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ನರವ್ಯೂಹವನ್ನು ಬಲಗೊಳಿಸುತ್ತದೆ. ಉದರದ ಸ್ನಾಯುಗಳು ಮತ್ತು ತೊಡೆಯ ಸ್ನಾಯುಗಳನ್ನು ಶಕ್ತಿಯುತಗೊಳಿಸುತ್ತದೆ. ಒಳಾಂಗಗಳನ್ನು ವಿಶೇಷವಾಗಿ ಜೀರ್ಣಕ್ರಿಯೆ ಸಂಬಂಧಿ ಅಂಗಗಳನ್ನು ಬಲಪಡಿಸುತ್ತದೆ.

ಚಿತ್ರ ಕೃಪೆ: ಎಎನ್‌ಐ

ಅರ್ಧಚಕ್ರಾಸನ : ಇದು ನಿಂತುಕೊಂಡು ಮಾಡುವ ಸುಲಭವಾದ ಯೋಗಾಸನ. ದೇಹವನ್ನು ಶಿಸ್ತುಬದ್ಧವಾಗಿ ಹಿಂದಕ್ಕೆ ಬಾಗಿಸಿದಾಗ, ಶಾಸಕೋಶದ ಭಾಗ ಎಳೆತಕ್ಕೆ ಒಳಗಾಗಿ ಹೆಚ್ಚಿನ ವಾಯು ಸಂಚಾರವಾಗುತ್ತದೆ. ಎದೆಯ ಭಾಗಕ್ಕೆ ಮೆದು ವ್ಯಾಯಾಮವಾಗುತ್ತದೆ. ಇದನ್ನು ಮಾಡುವುದರಿಂದ ಶಿರಸ್ಸಿನ ಭಾಗಕ್ಕೆ ಹೆಚ್ಚಿನ ರಕ್ತ ಸಂಚಲನೆ ಜರುಗಿ, ನರ ಮಂಡಲ ಸಚೇತನಗೊಳ್ಳುತ್ತದೆ. ಶ್ವಾಸ ಕೋಶದ ಸಾಮರ್ಥ್ಯ ಹೆಚ್ಚುತ್ತದೆ. ಅಸ್ತಮಾ ನಿವಾರಣೆಯಾಗುತ್ತದೆ.

ತ್ರಿಕೋನಾಸನ : ಶರೀರರದ ಸಮತೋಲನ ಕಾಪಾಡಲು ಮಾಡುವ ಆಸನ ಇದು. ಇದನ್ನು ಮಾಡುವುದರಿಂದ ಕಾಲುಗಳು, ಮಂಡಿಗಳು, ಪಾದದ ಕೋನಗಳು, ತೋಳುಗಳು ಮತ್ತು ಎದೆ ಇವುಗಳಿಗೆ ಶಕ್ತಿ ದೊರಕುವುದು.  ಹಿಂಭಾಗ, ತೊಡೆ ಸಂದುಗಳು, ಮಂಡಿಯ ಹಿಂಭಾಗದ ಸ್ನಾಯುಗಳು ಮತ್ತು ಮೀನ ಖಂಡಗಳು: ಭುಜಗಳು, ಎದೆ ಮತ್ತು ಬೆನ್ನು ಮೂಳೆ ಇವುಗಳ ವಿಸ್ತರಣೆಯಾಗಿ ತೆರೆದುಕೊಳ್ಳುವುದು.  ಮನಸ್ಸು ಮತ್ತು ಶಾರೀರಿಕತೆಯಲ್ಲಿ ಸಮಾನತೆ ಹೊಂದುವುದು. ತಿಂದ ಆಹಾರ ಅರಗುವಲ್ಲಿ ಸಹಾಯಕವಾಗುವುದು.

ಭದ್ರಾಸನ : ದೇಹದಲ್ಲಿರುವ ಕೊಬ್ಬು ಕರಗಿಸಲು ಈ ಆಸನ ಮಾಡಲಾಗುತ್ತದೆ. ಕೋಪಕ್ಕೆ ಹೆಸರಾದ ವೀರಭದ್ರನಿಂದಾಗಿ ಈ ಯೋಗಕ್ಕೆ ಈ ಹೆಸರು ಬಂದಿದೆ. ಇದನ್ನು ಮಾಡುವುದರಿಂದ ಮೀನಖಂಡ ಮತ್ತು ತೊಡೆಯ ಸ್ನಾಯುಗಳಲ್ಲಿನ ಬಿಗಿತ ಮತ್ತು ಕೊಬ್ಬಿನಾಂಶ ದೂರವಾಗುವುದು. -ಬೆನ್ನು ನೇರವಾಗುವುದು.

ವಜ್ರಾಸನ: ಸಂಸ್ಕೃತದಲ್ಲಿ ‘ವಜ್ರ’ ಅಂದರೆ ಕಠಿಣ ಎಂದರ್ಥ. ಈ ಭಂಗಿಯ ಯೋಗಾಭ್ಯಾಸ ನಿರತ ವ್ಯಕ್ತಿಯು ವಜ್ರದಂತೆ ಕಂಡುಬರುವ ಕಾರಣಕ್ಕೆ ಇದಕ್ಕೆ ವಜ್ರಾಸನ ಎಂದು ಹೆಸರು. ಇದನ್ನು ಮಾಡುವುದರಿಂದ ನಿದ್ರಾಹೀನತೆ ದೂರವಾಗುತ್ತದೆ. ಜೀರ್ಣಕ್ರಿಯೆ, ಪೈಲ್ಸ್‌, ಮಂಡಿನೋವಿನಿಂದ ಬಳಲುತ್ತಿರು ಇವುಗಳಿಂದ ಮುಕ್ತರಾಗುತ್ತಾರೆ. ಪ್ರತಿದಿನ ಈ ಆಸನದಲ್ಲಿ ಕೆಲವು ನಿಮಿಷಗಳು ಕೂರುವುದರಿಂದ ಮಂಡಿನೋವು ಬಾರದಂತೆ ತಡೆಗಟ್ಟಬಹುದು. ಪ್ರಾಣಾಯಾಮ ಮತ್ತು ಧ್ಯಾನಕ್ಕೆ ಸೂಕ್ತ ಆಸನವಿದು.

ಚಿತ್ರ ಕೃಪೆ: ಎಎನ್‌ಐ

ಉಷ್ಠಾಸನ : ಉಷ್ಟ್ರ ಎಂದರೆ ಒಂಟೆ. ಒಂಟೆಯನ್ನು ಹೋಲುವಂತಹ ಯೋಗದ ಭಂಗಿ. ಇದು ನಮ್ಮ ದೇಹವನ್ನು ಶಕ್ತಿಯುತ ಗೊಳಿಸುವುದಲ್ಲದೆ ನಮ್ಮ ಜೀರ್ಣಕ್ರಿಯೆಯನ್ನು ಉತ್ತಮ ಗೊಳಿಸುತ್ತದೆ. ಜೀರ್ಣ ಕ್ರಿಯೆ ಉತ್ತಮಗೊಳಿಸುತ್ತದೆ. ಬೆನ್ನು ಮತ್ತು ಭುಜಗಳನ್ನು ಶಕ್ತಿಯುತಗೊಳಿಸುತ್ತದೆ. ಬೆನ್ನು ನೋವನ್ನು ನಿವಾರಿಸುತ್ತದೆ. ಉಸಿರಾಟದ ತೊಂದರೆ, ಅಸ್ತಮಾ, ಉಬ್ಬಸ ನಿವಾರಣೆಗೆ ಪೂರಕ. ಹೊಟ್ಟೆ ಮತ್ತು ಎದೆಯ ಭಾಗ ವಿಸ್ತಾರವಾಗುವುದು. ಅಜೀರ್ಣ ಮತ್ತು ಮಲಬದ್ಧತೆ ನಿವಾರಣೆಗೆ ಉತ್ತಮ ಆಸನ. ತಲೆಯ ಭಾಗಕ್ಕೆ ಹೆಚ್ಚಿನ ರಕ್ತ ಸಂಚಾರವಾಗಿ ನಮ್ಮ ಸ್ಮರಣಶಕ್ತಿ, ಗ್ರಹಣಶಕ್ತಿ ಮತ್ತು ಏಕಾಗ್ರತೆ ಹೆಚ್ಚುವುದು.

ಇವುಗಳಲ್ಲದೆ ಆರ್ಧುಷ್ಠಾಸನ, ಉಷ್ಠಾಸನ, ಶಶಾಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧಹಲಸನ, ಪವನಮುಕ್ತಾಸನ, ಶವಾಸನಗಳನ್ನು ಪ್ರದರ್ಶಿಸಲಾಯಿತು.

ಇದನ್ನೂ ಓದಿ |Yoga Day 2022 | ಜೀವನನ್ನು ಶಿವನನ್ನಾಗಿ ಮಾಡುವ ಮಹಾ ಮಾರ್ಗವೇ ಈ ಯೋಗ

Exit mobile version