Site icon Vistara News

Internet Addiction: ಈ 10 ಲಕ್ಷಣಗಳು ನಿಮ್ಮಲ್ಲಿದ್ದರೆ, ನೀವೂ ಇಂಟರ್ನೆಟ್‌ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ!

Internet Addiction

ಲಂಗು ಲಗಾಮಿಲ್ಲದೆ ಇಂಟರ್ನೆಟ್‌ ಬಳಸುವ ಅಭ್ಯಾಸ ಇಂದು ಮಕ್ಕಳಾದಿಯಾಗಿ ಹಿರಿಯರನ್ನೂ ಕಾಡುತ್ತಿದೆ. ಇದರಿಂದ ದಿನನಿತ್ಯದ ಚಟುವಟಿಕೆಗಳಿಗೂ ಸಾಕಷ್ಟು ಸಮಸ್ಯೆಯೂ ಆಗುತ್ತಿದೆ. ಹಲವು ವಿಚಾರಗಳಲ್ಲಿ ನಾವು ಹಿಂದೆ ಬೀಳುತ್ತೇವೆ. ಏಕಾಗ್ರತೆ, ಓದುವ ಅಭ್ಯಾಸ, ದೈಹಿಕ ಚಟುವಟಿಕೆ ಇತ್ಯಾದಿಗಳೂ ಕೂಡಾ ಇದರಿಂದಾಗಿ ಕುಂಠಿತವಾಗುತ್ತಿದೆ. ದೈಹಿಕ ಹಾಗೂ ಮಾನಸಿಕವಾಗಿ ಇದು ಸಾಕಷ್ಟು ಕೆಟ್ಟ ಪರಿಣಾಮ ಬೀರುವುದರಿಂದ ಆದಷ್ಟು ಆರಂಭಿಕ ಹಂತದಲ್ಲಿರುವಾಗಲೇ ಈ ಚಟಕ್ಕೆ ಕಡಿವಾಣ ಹಾಕಬೇಕು. ಇಂಟರ್ನೆಟ್‌ ಅಡಿಕ್ಷನ್‌ ಅಥವಾ ಅಂತರ್ಜಾಲ ಚಟ (Internet addiction) ಎಂಬುದು ಇತ್ತೀಚಿನ ದಶಕದಲ್ಲಿ ಅತ್ಯಂತ ಹೆಚ್ಚಾಗಿ ಎಲ್ಲರನ್ನೂ ಬಿಡದೆ ಕಾಡುವ ದೌರ್ಬಲ್ಯ. ಅತ್ಯಂತ ಹೆಚ್ಚು, ಲಂಗು ಲಗಾಮಿಲ್ಲದೆ ಇಂಟರ್ನೆಟ್‌ ಬಳಸುವ ಅಭ್ಯಾಸ ಇಂದು ಮಕ್ಕಳಾದಿಯಾಗಿ ಹಿರಿಯರನ್ನೂ ಕಾಡುತ್ತಿದೆ. ಇದರಿಂದ ದಿನನಿತ್ಯದ ಚಟುವಟಿಕೆಗಳಿಗೂ ಸಾಕಷ್ಟು ಸಮಸ್ಯೆಯೂ ಆಗುತ್ತಿದೆ. ಹಲವು ವಿಚಾರಗಳಲ್ಲಿ ನಾವು ಹಿಂದೆ ಬೀಳುತ್ತೇವೆ. ಏಕಾಗ್ರತೆ, ಓದುವ ಅಭ್ಯಾಸ, ದೈಹಿಕ ಚಟುವಟಿಕೆ ಇತ್ಯಾದಿಗಳೂ ಕೂಡಾ ಇದರಿಂದಾಗಿ ಕುಂಠಿತವಾಗುತ್ತಿದೆ. ದೈಹಿಕ ಹಾಗೂ ಮಾನಸಿಕವಾಗಿ ಇದು ಸಾಕಷ್ಟು ಕೆಟ್ಟ ಪರಿಣಾಮ ಬೀರುವುದರಿಂದ ಆದಷ್ಟು ಆರಂಭಿಕ ಹಂತದಲ್ಲಿರುವಾಗಲೇ ಈ ಚಟಕ್ಕೆ ಕಡಿವಾಣ ಹಾಕಬೇಕು. ನಿಮಗೇ ತಿಳಿಯದಾ ಹಾಗೆ ನೀವು ಇಂಟರ್ನೆಟ್‌ ದಾಸರಾಗಿದ್ದೀರಾ? ಇಂಟರ್ನೆಟ್‌ನ ಚಟಕ್ಕೆ ಬಿದ್ದಿದ್ದೀರಾ? ಬನ್ನಿ, ಈ ಕೆಳಗಿನ ಅಭ್ಯಾಸಗಳು ನಿಮ್ಮಲ್ಲಿದ್ದರೆ ನೀವೂ ಇದರ ದಾಸರಾಗಿದ್ದೀರಿ ಎಂಬಲ್ಲಿ ಯಾವ ಸಂಶಯವೂ ಇಲ್ಲ.

ಸದಾ ಇಂಟರ್ನೆಟ್‌ನದ್ದೇ ಧ್ಯಾನ

ಆಗಾಗ ನಿಮಗೆ ಆನ್‌ಲೈನ್‌ನ ಕೆಲಸಗಳೇ ಮನಸ್ಸಿನಲ್ಲಿ ಜ್ಞಾಪಕಕ್ಕೆ ಬರುತ್ತಿದೆಯಾ? ನೀವು ಯಾವುದಾದರೂ ಬೇರೆ ಕೆಲಸಕ್ಕೆ ಗಮನ ಕೊಡುವಾಗಲೂ ನೀವು ಕೆಲ ಹೊತ್ತಿನ ನಂತರ ಇಂಟರ್ನೆಟ್‌ನ ಬಳಕೆಯ ಬಗ್ಗೆ ಯೋಚನೆ ಮಾಡುತ್ತೀರುತ್ತೀರಿ ಎಂದಾದಲ್ಲಿ ನೀವು ಚಟಕ್ಕೆ ಬಿದ್ದಿದ್ದೀರಿ ಎಂದರ್ಥ.

ಕಡಿಮೆ ಬಳಸಲು ಸಾಧ್ಯವಾಗುತ್ತಿಲ್ಲ

ಇಂಟರ್ನೆಟ್‌ ಬಳಕೆಯನ್ನು ಕಡಿಮೆ ಮಾಡಲು ನಿಮ್ಮ ಕೈಯಲ್ಲಿ ಸಾಧ್ಯವಾಗುತ್ತಿಲ್ಲವೇ? ಹೆಚ್ಚು ಸಮಯವನ್ನು ಆನ್‌ಲೈನ್‌ನಲ್ಲಿ, ಅಥವಾ ಇಂಟರ್ನೆಟ್‌ ಆಧರಿಸಿದ ಕೆಲಸದಲ್ಲಿ ಕಳೆಯಲು ಇಷ್ಟಪಡುತ್ತೀರಿ ಅಥವಾ ಅದರಿಂದ ಹೊರಗೆ ಬರಲು ನೀವು ಯೋಚಿಸಿದರೂ ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ ಅದು ಚಟವೇ.

ನಿತ್ಯ ಕೆಲಸಗಳನ್ನು ಬಿಟ್ಟು…

ನಿಮ್ಮ ಖಾಸಗಿ ಕೆಲಸಗಳನ್ನು ನಿರ್ಲಕ್ಷ್ಯ ಮಾಡಿ ನೀವು ಆನ್‌ಲೈನ್‌, ಅಥವಾ ಇಂಟರ್ನೆಟ್‌ನಲ್ಲಿರಲು ಬಯಸುತ್ತೀರಿ ಎಂದಾದಲ್ಲಿ ನೀವು ಚಟಕ್ಕೆ ಬಿದ್ದಿದ್ದೀರಿ ಎಂದರ್ಥ. ಮನೆಕೆಲಸಗಳು, ನಿಮ್ಮ ನಿತ್ಯಕೆಲಸಗಳು, ಡೆಡ್‌ಲೈನ್‌ಗಳು ಮರೆತು ನೀವು ಇದಕ್ಕೆ ದಾಸರಾಗಿದ್ದೀರಿ ಎಂದರೆ ಅದು ನಿಮಗೆ ಒಳ್ಳೆಯದಲ್ಲ.

ಇಂಟರ್‌ನೆಟ್‌ ಸಿಗದಿದ್ದಾಗ ಚಡಪಡಿಕೆ

ಇಂಟರ್‌ನೆಟ್‌ ಸಿಗದಿದ್ದಾಗ, ಇಂಟರ್ನೆಟ್‌ ಬಳಸಲು ಸಾಧ್ಯವಾಗುತ್ತಿಲ್ಲ ಎಂದಾದಾಗ ಕಿರಿಕಿರಿಯಾಗುತ್ತಿದೆಯೋ, ಬೇರೆ ಕೆಲಸಕ್ಕೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲವೋ ಹಾಗಾದರೆ ಅದು ಇಂಟರ್ನೆಟ್‌ ಚಟದ ಕಾರಣದಿಂದಾಗಿಯೇ.

ಇಂಟರ್ನೆಟ್‌ ಅವಲಂಬನೆ

ನಿಮ್ಮ ತೊಂದರೆಗಳನ್ನು, ಬೇಸರಗಳನ್ನು ಮರೆಯಲು, ಒತ್ತಡವನ್ನು, ಋಣಾತ್ಮಕ ಚಿಂತನೆಗಳನ್ನು ಕಡಿಮೆ ಮಾಡಲು ಇಂಟರ್ನೆಟ್‌ನಲ್ಲಿರುವುದರ ಮೂಲಕ ಪಾರಾಗಲು ಪ್ರಯತ್ನಿಸುತ್ತೀರಿ ಎಂದರೆ ಅದು ಖಂಡಿತ ಚಟವೇ. ನಿಮ್ಮ ಈ ಭಾವನೆಗಳಿಗೆ ಬೇರೆ ಕಾರಣ ಹುಡುಕಿ ಅದನ್ನು ಸರಿ ಮಾಡಬೇಕೇ ಹೊರತು, ಇಂಟರ್ನೆಟ್‌ ನಿಮ್ಮ ಪಲಾಯನದ ಹಾದಿ ಆಗಬಾರದು.

ಕುಟುಂಬದವರ ಜೊತೆ ಮುಚ್ಚಿಡುತ್ತೀರಿ

ಆನ್‌ಲೈನ್‌/ ಇಂಟರ್ನೆಟ್‌ನಲ್ಲಿ ನೀವು ಕಳೆದ ಸಮಯವನ್ನು ನಿಮ್ಮ ಕುಟುಂಬದವರ ಜೊತೆ ಮುಚ್ಚಿಡುತ್ತೀರಿ ಎಂದಾದಲ್ಲಿ ಖಂಡಿತವಾಗಿಯೂ ನೀವು ಅದರ ದಾಸರಾಗಿದ್ದೀರಿ ಎಂದರ್ಥ.

ವಾಗ್ವಾದಗಳನ್ನು ಸೃಷ್ಟಿಸುತ್ತಿದೆಯೆ?

ಇಂಟರ್ನೆಟ್‌ ಬಳಕೆಯೇ ನಿಮ್ಮ ಹಾಗೂ ನಿಮ್ಮ ಸಂಗಾತಿಯ/ಪ್ರೀತಿಪಾತ್ರರ/ಹೆತ್ತವರ ಜೊತೆಗೆ ವಾಗ್ವಾದಗಳನ್ನು ಸೃಷ್ಟಿಸುತ್ತಿದೆ ಎಂದಾದಲ್ಲಿ ನೀವು ಇಂಟರ್ನೆಟ್‌ ಚಟಕ್ಕೆ ಬಿದ್ದಿದ್ದೀರಿ ಎಂದರ್ಥ. ಸಂಬಂಧಗಳ ಮಹತ್ವವನ್ನು ಅರಿಯದೆ, ಅದಕ್ಕೆ ಸರಿಯಾದ ಸಮಯವನ್ನು ನೀಡದೆ, ನೀವು ಇಂಟರ್ನೆಟ್‌ ಮೂಲಕ ನಿಮ್ಮ ಶಾಂತಿ ಕಂಡುಕೊಳ್ಳುತ್ತೀರಿ ಎಂದರೆ ಅದು ಒಳ್ಳೆಯ ಬೆಳವಣಿಗೆಯಲ್ಲ.

ಕಣ್ಣು ಸುಸ್ತಾದಂತೆ ಅನಿಸುವುದು

ಕಣ್ಣು ಸುಸ್ತಾದಂತೆ ಅನಿಸುವುದು, ಬೆನ್ನು ನೋವು, ಸೊಂಟ ನೋವು, ನಿದ್ದೆಯಲ್ಲಿ ಸಮಸ್ಯೆ ಇತ್ಯಾದಿಗಳು ನಿಮ್ಮನ್ನು ಕಾಡುತ್ತಿದೆ ಎಂದರೆ ನೀವು ಅತಿಯಾಗಿ ಇಂಟರ್ನೆಟ್‌ ಬಳಸುತ್ತಿದ್ದೀರಿ ಎಂದರ್ಥ,

ಹೊರಗಿನ ಆಸಕ್ತಿ ಕಡಿಮೆ

ಹೊರಗಿನ ಕೆಲಸ, ವ್ಯಾಯಾಮ, ಇತರ ಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗಿದೆ ಎಂದಾದಲ್ಲಿ ಹಾಗೂ ನೀವು ಆನ್‌ಲೈನ್‌ ಇರುವುದನ್ನೇ ಇಷ್ಟಪಡುತ್ತೀರಿ, ಅದಕ್ಕಾಗಿ ಕಾರಣ ಹುಡುಕುತ್ತೀರಿ ಎಂದಾದಲ್ಲಿ ನಿಮಗೆ ಇಂಟರ್ನೆಟ್‌ ಚಟವೇ.

ಇದನ್ನೂ ಓದಿ: Back Acne Problem: ಬೆನ್ನಿನ ಮೇಲಿನ ಮೊಡವೆಗಳ ಸಮಸ್ಯೆಯೇ? ಇಲ್ಲಿವೆ ಸರಳ ಪರಿಹಾರಕ್ಕೆ ಅಷ್ಟಸೂತ್ರಗಳು!

ಆನ್‌ಲೈನ್‌ನಲ್ಲೇ ಹೆಚ್ಚು ಸಮಯ

ದಿನಗಳೆದಂತೆ ಹೆಚ್ಚು ಹೆಚ್ಚು ಸಮಯ ಆನ್‌ಲೈನ್‌ಗಾಗಿ ಮೀಸಲಿಡುತ್ತಿದ್ದೀರಿ ಹಾಗೂ ಅದರಿಂದ ಸಂತೋಷ ಪಡೆಯುತ್ತಿದ್ದೀರಿ ಎಂದರೂ ಕೂಡಾ ನೀವು ಇಂಟರ್ನೆಟ್‌ ದಾಸರಾಗಿದ್ದೀರಿ ಎಂದರ್ಥ. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಅದನ್ನು ಮೊದಲೇ ಅರಿತುಕೊಂಡು ಈ ಅಭ್ಯಾಸವನ್ನು ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ, ಆಪ್ತ ಸಮಾಲೋಚನೆ ಹಾಗೂ ತಜ್ಞರ ನೆರವು ಪಡೆಯುವುದು ಅತ್ಯಂತ ಅಗತ್ಯ.

Exit mobile version