ಪ್ರತಿದಿನ ಬೆಳಗ್ಗೆ ಹೊಟ್ಟೆ ಸರಿಯಿಲ್ಲದೆ ಎದ್ದ ಹಾಗೆ ಅನಿಸುತ್ತಿದೆಯಾ? ನಿನ್ನೆಯ ಊಟ ಸರಿಯಾಗಿ ಜೀರ್ಣವಾಗಿಲ್ಲ, ಯಾಕೋ ಹೊಟ್ಟೆ ಖಾಲಿಯಾದಂತೆ ಅನಿಸುತ್ತಿಲ್ಲ, ಸ್ವಲ್ಪ ಎದೆ ಉರಿಯೂ ಸೇರಿಕೊಂಡು ಯಾಕೋ ಎಲ್ಲವೂ ಸರಿಯಿಲ್ಲ ಎಂಬ ಭಾವ ನಿಮಗೆ ಆಗಾಗ ಆಗುತ್ತಿದೆಯೇ? ಹಾಗಿದ್ದರೆ, ಇದರ ಹಿಂದಿನ ಕಾರಣ ಹುಡುಕಲೇಬೇಕು. ಒಮ್ಮೆ ಹೀಗಾಗದೆ, ಪದೇಪದೆ ನಿಮಗೆ ಹೀಗಾಗುತ್ತಿದೆ ಎಂದರೆ ಅದಕ್ಕೆ ನಿರ್ದಿಷ್ಟ ಕಾರಣ ಇದ್ದೇ ಇರುತ್ತದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿ ತೊಂದರೆ ಇದೆ ಎಂದಾದಲ್ಲಿ, ಕೆಲವು ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಈ ಸಮಸ್ಯೆಗಳನ್ನೇ ಬುಡದಿಂದ ಕಿತ್ತು ಬಿಸಾಕಬಹುದು ಎಂದರೆ ನೀವು ನಂಬಲೇಬೇಕು. ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಇರುವ ಮಂದಿ, ಈ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿ ನೋಡಿ. ನಿಮ್ಮ ಸಮಸ್ಯೆಗಳು (Digestive problem) ಪರಿಹಾರವಾಗದಿದ್ದರೆ ಹೇಳಿ.
ಊಟಕ್ಕೆ ಸಮಯ ಇರಲಿ
ನಿಮ್ಮ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಸರಿಪಡಿಸಬೇಕಿದ್ದರೆ, ನೀವು ನಿಮ್ಮ ಊಟದ ಸಮಯವನ್ನು ಸರಿಪಡಿಸಿ ನೋಡಿ. ಊಟದ ಸಮಯ ಬದಲಿಸದ ಹೊರತು ನಿಮ್ಮ ಜೀರ್ಣಕ್ರಿಯೆಯ ಸಮಸ್ಯೆ ಪರಿಹಾರವಾಗದಲಾರದು. ಹೊಟ್ಟೆಯುಬ್ಬರ, ಮಲಬದ್ಧತೆ, ಎದೆಯುರಿ ಇತ್ಯಾದಿ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ, ನೀವು ಯಾವಾಗ ಊಟ ಮಾಡಬೇಕು ಎಂಬುದರ ಕಾಳಜಿ ನಿಮಗಿರಬೇಕು. ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ನೀವು ಅರ್ಥ ಮಾಡಿಕೊಳ್ಳಬೇಕು.
ರಾತ್ರಿ ಊಟ ತಡವಾಗದಿರಲಿ
ಮುಖ್ಯವಾಗಿ ರಾತ್ರಿಯೂಟದ ಬಗ್ಗೆ ಗಮನ ಕೊಡಬೇಕು. ರಾತ್ರಿ ನೀವು ಮಲಗುವ ಮೂರು ಗಂಟೆಯ ಮೊದಲು ಊಟ ಮಾಡಬೇಕು. ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸವಿದ್ದರೆ ಅದನ್ನು ಬಿಟ್ಟುಬಿಡಬೇಕು. ಇದು ಎಲ್ಲಕ್ಕಿಂತ ಮೊದಲು ನೀವು ಮಾಡಬೇಕಾದ ಬದಲಾವಣೆ.
ಸಮಯದ ಶಿಸ್ತಿರಲಿ
ನಿತ್ಯವೂ ಸರಿಯಾದ ಸಮಯಕ್ಕೆ ಊಟ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ಇದು ಹೊಟ್ಟೆಯುಬ್ಬರ, ಗ್ಯಾಸ್ ಮತ್ತಿತರ ಸಮಸ್ಯೆಯನ್ನು ಬಹಳಷ್ಟು ಸರಿಪಡಿಸುತ್ತದೆ.
ರಾತ್ರಿ ಬೇಗ ಊಟ ಮಾಡಿ
ರಾತ್ರಿ ಬೇಗ ಊಟ ಮಾಡುವುದರಿಂದ ದೇಹ ಪೋಷಕಾಂಶಗಳನ್ನು ಸಮರ್ಪಕವಾಗಿ ಹೀರಿಕೊಳ್ಳುತ್ತದೆ. ಮಲಗುವುದಕ್ಕಿಂತ ಸುಮಾರು ಮೂರು ಗಂಟೆಗೂ ಮುನ್ನ ಊಟ ಮಾಡುವುದುರಿಂದ ಪೋಷಕಾಂಶಗಳ ಹೀರಿಕೆಯೂ ಸಮರ್ಪಕವಾಗಿ ಆಗುತ್ತದೆ. ಅಷ್ಟೇ ಅಲ್ಲ, ಊಟ ಕರಗಿ ಹೊಟ್ಟೆ ಹಗುರವಾಗಿ ಒಳ್ಳೆಯ ನಿದ್ರೆ ಬರುತ್ತದೆ.
ಗ್ಯಾಸ್ ಸಮಸ್ಯೆ ನಿವಾರಣೆ
ರಾತ್ರಿ ಬೇಗನೆ ಉಣ್ಣುವುದರಿಂದ ಹೊಟ್ಟೆಗೆ ತನ್ನ ಆಹಾರವನ್ನು ಖಾಲಿ ಮಾಡಿಕೊಳ್ಳಲು ಹೆಚ್ಚು ಸಮಯ ಸಿಗುತ್ತದೆ. ಆಗ, ಆಸಿಡ್ ಮತ್ತೆ ಅನ್ನನಾಳದೆಡೆಗೆ ಹೋಗುವ ಅವಕಾಶ ಕಡಿಮೆ. ಇದರಿಂದ ಆಗುವ ಕಿರಿಕಿರಿ ತಪ್ಪಿ ಗ್ಯಾಸ್‌ನಂತಹ ಸಮಸ್ಯೆ ಆಗುವ ಅವಕಾಶ ಕಡಿಮೆ.
ಜೀರ್ಣಕ್ರಿಯೆಗೆ ಅನುಕೂಲ
ಬೇಗನೆ ಉಣ್ಣುವುದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಬೇಕಾಗುವ, ಜೀರ್ಣಕ್ರಿಯೆಗೆ ಸಹಾಯ ಮಾಡುವ ಒಳ್ಳೆಯ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಹಾಯವಾಗುತ್ತದೆ. ಜೀರ್ಣಕ್ರಿಯೆಯಲ್ಲಿ ಆಗುವ ಸಮಸ್ಯೆಗಳು ಅಷ್ಟಾಗಿ ಆಗದು. ಅಂದರೆ ಜೀರ್ಣಕ್ರಿಯೆಯ ಸಮಸ್ಯೆಗಳ ಸಂಭವ ಕಡಿಮೆಯಾಗುತ್ತದೆ.