Site icon Vistara News

Tea or Juice: ಬೆಳಗ್ಗೆ ಟೀ ಕುಡಿದರೆ ಒಳ್ಳೆಯದೇ ಅಥವಾ ಹಣ್ಣಿನ ರಸ ಉತ್ತಮವೇ?

Tea or Juice

ಬೆಳಗ್ಗೆ ಏಳುತ್ತಿದ್ದಂತೆ ನಮ್ಮ ದಿನ (Tea or Juice?) ಪ್ರಾರಂಭವಾಗುವುದಕ್ಕೆ ಸ್ವಲ್ಪ ಹೊತ್ತು ಬೇಕು. ನಿಧಾನಕ್ಕೆ ಕಣ್ಣುಜ್ಜುತ್ತಾ ಮೈಮುರಿಯುತ್ತಾ ಆಕಳಿಸುತ್ತಾ ಈ ಲೋಕಕ್ಕೆ ಬರುತ್ತೇವೆ. ಕೆಲವರಿಗೆ ಬೆಳಗ್ಗೆ ಎಚ್ಚರವಾದರೂ ದಿನ ಶುರುವಾಗುವುದಕ್ಕೆ ಸ್ವಲ್ಪ ಹೆಚ್ಚೇ ಹೊತ್ತು ಬೇಕಾಗಬಹುದು. ಅಂಥವರಿಗೊಂದು ಕಪ್‌ ಖಡಕ್‌ ಚಹಾ ಸಿಕ್ಕಿದರೆ ಎಲ್ಲವೂ ಸುಸೂತ್ರ. ಕೆಲವರಿಗೆ ಕಾಫಿಯಾದರೆ ಒಳ್ಳೆಯದು. ಅಂತೂ ಬೆಳಗಿನ ಡೋಸ್‌ ಕೆಫೇನ್‌ ಹೊಟ್ಟೆ ಸೇರಿದರೆ ಅಂಗಾಂಗಗಳೆಲ್ಲ ಚುರುಕಾಗುತ್ತವೆ. ದಿನದ ಶ್ರೀಕಾರ ಸರಿಯಾಗಿ ಆದಂತೆ. ಆದರೆ ಬೆಳಗಿನ ಹೊತ್ತು ಚಹಾ ಬದಲು ಹಣ್ಣಿನ ರಸ ಕುಡಿಯುವುದು ಒಳ್ಳೆಯದು ಎನ್ನುತ್ತಾರಲ್ಲ… ಯಾವುದು ಸರಿ? ಯಾವುದು ಸರಿಯಲ್ಲ?

ಯಾವುದು ಒಳ್ಳೆಯದು?

ಬೆಳಗಿನ ಹೊತ್ತು ಚಹಾ ಕುಡಿಯಬೇಕೊ ಅಥವಾ ತಾಜಾ ಹಣ್ಣಿನ ರಸವನ್ನೋ ಎಂಬುದೀಗ ಪ್ರಶ್ನೆ. ಈ ಎರಡೂ ಪೇಯಗಳಿಗೆ ಅದರದ್ದೇ ಆದ ಇತಿ-ಮಿತಿಗಳಿವೆ. ಬೆಳಗಿನ ಹೊತ್ತು ಗ್ರೀನ್‌ ಟೀ ಅಥವಾ ಬ್ಲಾಕ್‌ ಟೀ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಉತ್ಕರ್ಷಣ ನಿರೋಧಕಗಳು ವಿಫಲವಾಗಿ ದೊರೆಯುತ್ತವೆ. ಇದರಿಂದ ದೇಹದಲ್ಲಿರುವ ಉರಿಯೂತಗಳನ್ನು ಕಡಿಮೆ ಮಾಡಲು ನೆರವು ದೊರೆಯುತ್ತದೆ. ಜೊತೆಗೆ ಇದರಲ್ಲಿರುವ ಅಲ್ಪ ಪ್ರಮಾಣದ ಕೆಫೇನ್‌ ಅಂಶವು, ಸೋಮಾರಿ ದೇಹವನ್ನು ಸ್ವಲ್ಪ ಚುರುಕಾಗಿಸುತ್ತದೆ; ಚಯಾಪಚಯವನ್ನು ಹೆಚ್ಚಿಸುತ್ತದೆ; ಮೆದುಳಿಗೆ ಚೈತನ್ಯ ನೀಡಿ ದೇಹ ಸ್ವಾಸ್ಥ್ಯವನ್ನು ವೃದ್ಧಿಸುತ್ತದೆ.
ತಾಜಾ ಹಣ್ಣಿನ ರಸದ ಬಗ್ಗೆ ಹೇಳುವುದಾದರೆ, ಯಾವುದೇ ಬೆಲ್ಲ-ಸಕ್ಕರೆಗಳನ್ನು ಸೇರಿಸದೆ, ಅಂಗಡಿಯಿಂದ ತಂದಿದ್ದದೆ ಶುದ್ಧ ಹಣ್ಣಿನ ರಸವನ್ನೇ ಕುಡಿದರೆ ಲಾಭಗಳು ಸಾಕಷ್ಟಿವೆ. ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿ ದೊರೆಯುತ್ತದೆ. ಜೊತೆಗೆ ಬೆಳಗಿನ ಹೊತ್ತು ದೇಹಕ್ಕೆ ಅಗತ್ಯವಾದ ನೀರಿನಂಶವನ್ನು ಸುಲಭವಾಗಿ ಮತ್ತು ಯಥೇಚ್ಛವಾಗಿ ಮರುಪೂರಣ ಮಾಡಬಹುದು. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಶರೀರದ ಆರೋಗ್ಯವನ್ನು ಹೆಚ್ಚಿಸುತ್ತದೆ.

ಮಿತಿಗಳೇನು?

ಚಹಾ ಅಂದಾಕ್ಷಣ ಗ್ರೀನ್‌ ಟೀ, ಬ್ಲಾಕ್‌ ಟೀ ಕುಡಿಯುವವರು ಕಡಿಮೆ. ಸರಿಯಾಗಿ ಹಾಲು, ಸಕ್ಕರೆ ಸುರಿದೇ ಚಹಾ ಸಿದ್ಧಗೊಳ್ಳುತ್ತದೆ. ಗ್ರೀನ್‌ ಟೀನಲ್ಲಿರುವ ಲಾಭಗಳು ಈ ಇಂಗ್ಲಿಷ್‌ ಚಹಾದಲ್ಲಿ ದೊರೆಯುವುದು ಕಡಿಮೆ. ಅದರಲ್ಲೂ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಈ ಚಹಾ ಕುಡಿದರೆ ಬಹಳಷ್ಟು ಮಂದಿ ಆಸಿಡಿಟಿ, ಹೊಟ್ಟೆಯುಬ್ಬರ, ಎದೆಯುರಿ ಮತ್ತು ಇತರ ಜೀರ್ಣಾಂಗಗಳ ಸಮಸ್ಯೆಯನ್ನು ಎದುರಿಸಬಹುದು. ಅದೂ ಅಲ್ಲದೆ, ಈ ರೀತಿಯ ಚಹಾ ಸೇವನೆಯಿಂದ ದೇಹಕ್ಕೆ ಕೆಫೇನ್‌ ಅಂಶ ಅಧಿಕವಾಗುತ್ತದೆ. ಇದು ಎಲ್ಲರಿಗೂ ಹೊಂದದೇ ಇರಬಹುದು.
ಹಣ್ಣಿನ ರಸ ಎನ್ನುತ್ತಿದ್ದಂತೆ ಅಂಗಡಿಯಿಂದ ಖರೀದಿಸಿದ ಪ್ಯಾಕ್‌ ಉಪಯೋಗಿಸುವವರೇ ಹೆಚ್ಚು. ಇದರಲ್ಲಿ ಕೃತಕ ಬಣ್ಣ, ಸಕ್ಕರೆಯಂಶಗಳಿರಬಹುದು. ಇದರಿಂದ ಸಮಸ್ಯೆಯಾದೀತು. ತಾಜಾ ಮತ್ತು ಶುದ್ಧ ಹಣ್ಣಿನ ರಸವಾದರೂ ಮಧುಮೇಹಿಗಳಿಗೆ ತೊಂದರೆ ಆಗಬಹುದು. ಮಧುಮೇಹ ಇಲ್ಲದಿದ್ದರೂ, ಬೆಳಗಿನ ಖಾಲಿ ಹೊಟ್ಟೆಯಲ್ಲಿ ಹಣ್ಣಿನ ರಸ ಕುಡಿಯುವುದರಿಂದ ಬಹಳಷ್ಟು ಜನರಿಗೆ ಸಕ್ಕರೆಯಂಶ ದಿಢೀರ್‌ ಏರಿಕೆ ಆಗಬಹುದು. ಹಾಗಾಗಿ ಇದರೊಂದಿಗೆ ಪ್ರೊಟೀನ್‌ ಮತ್ತು ನಾರಿಯುಕ್ತ ಉಪಾಹಾರ ಸೇವನೆ ಅಗತ್ಯ.

ಎಷ್ಟು ಬಗೆಗಳಿವೆ?

ಬೆಳಗ್ಗೆ ಕುಡಿಯುವುದಕ್ಕೆ ಚಹಾ ಮಾತ್ರ ಸರಿ ಎನ್ನುವವರು ಹಾಲು ಬೆರೆಸಿದ ಚಹಾವನ್ನೇ ಕುಡಿಯಬೇಕೆಂದಿಲ್ಲ. ಬ್ಲಾಕ್‌ ಟೀ, ಗ್ರೀನ್‌ ಟೀ ಇದಕ್ಕೆ ಒಳ್ಳೆಯ ಪರ್ಯಾಯಗಳು. ಅದಿಲ್ಲದಿದ್ದರೆ, ನಿಂಬೆ ಚಹಾ, ಪುದೀನಾ ಚಹಾ, ಶುಂಠಿ ಚಹಾ, ಏಲಕ್ಕಿ-ಚಕ್ಕೆ ಹಾಕಿದ (ಹಾಲಿಲ್ಲದ) ಮಸಾಲೆ ಚಹಾ, ನಿಂಬೆಹುಲ್ಲು, ತುಳಸಿ ಮುಂತಾದವುಗಳನ್ನು ಹಾಕಿದ ಹರ್ಬಲ್‌ ಚಹಾ- ಹೀಗೆ ಚಹಾ ಸವಿಯುವವರಿಗೆ ತರಹೇವಾರಿ ಆಯ್ಕೆಗಳಿವೆ. ಇವೆಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಆರೋಗ್ಯಕ್ಕೆ ಉಪಯುಕ್ತವಾದವು.

ಯಾವೆಲ್ಲ ಜ್ಯೂಸ್‌ ಸೇವಿಸಬಹುದು?

ಕಿತ್ತಳೆ ರಸ ಹೆಚ್ಚಿನ ಜನರಿಗೆ ಇಷ್ಟವಾಗುವಂಥದ್ದು. ವಿಟಮಿನ್‌ ಸಿ ಹೇರಳವಾಗಿರುವ ಇದನ್ನು ಕುಡಿಯುವುದರಿಂದ ಪ್ರತಿರೋಧಕ ಶಕ್ತಿಯನ್ನು ಬಲಗೊಳಿಸಬಹುದು. ಕೊಲೆಸ್ಟ್ರಾಲ್‌ ಕಡಿಮೆ ಮಾಡಿ, ಹೃದಯವನ್ನು ಸಹ ಭದ್ರವಾಗಿ ಇರಿಸಿಕೊಳ್ಳಬಹುದು. ಸೇಬು ರಸವೂ ರುಚಿಕಟ್ಟಾಗಿರುತ್ತದೆ. ವಿಟಮಿನ್‌ ಸಿ ಮತ್ತು ಪೊಟಾಶಿಯಂ ಹೆಚ್ಚಿರುವ ಇದರಿಂದ ಹೃದಯದ ಆರೋಗ್ಯ ಚೆನ್ನಾಗಿರುವುದಲ್ಲದೆ ಜೀರ್ಣಾಂಗಗಳ ಕ್ಷಮತೆಯೂ ಹೆಚ್ಚುತ್ತದೆ. ಹುಳಿ ಮತ್ತು ಸಿಹಿಗಳನ್ನು ಸಮಾನವಾಗಿ ಹೊಂದಿರುವ ಅನಾನಸ್‌ ರಸ ಸೇವನೆಯಿಂದ ಉರಿಯೂತವನ್ನು ಕಡಿಮೆ ಮಾಡಬಹುದು. ಬ್ರೊಮೆಲಿನ್‌ ಎಂಬ ಉತ್ಕರ್ಷಣ ನಿರೋಧಕ ಹೆಚ್ಚಿರುವ ಈ ರಸದಿಂದ ಜೀರ್ಣಾಂಗಗಳೂ ಚುರುಕಾಗುತ್ತವೆ. ಇದಲ್ಲದೆ, ಕ್ಯಾರೆಟ್‌, ಬೀಟ್‌ರೂಟ್‌, ಸೌತೆಕಾಯಿ ರಸಗಳನ್ನು ಸೇವಿಸುವವರೂ ಇದ್ದಾರೆ. ಈ ಯಾವುದೇ ರಸಗಳ ಜೊತೆಗೆ ನಾಲ್ಕಾರು ಹನಿ ನಿಂಬೆ ರಸ ಸೇರಿಸಿದರೆ ಅಥವಾ ಯಾವುದಾದರೂ ಬೆರ್ರಿಗಳನ್ನು ಸೇರಿಸಿದರೆ ರುಚಿ ಇಷ್ಟವಾಗಬಹುದು. ಇದಕ್ಕೆ ಶುಂಠಿ, ಪುದೀನಾದಂಥ ಘಮಗಳನ್ನೂ ಸೇರಿಸಿಕೊಳ್ಳುವವರಿದ್ದಾರೆ.

ಇದನ್ನೂ ಓದಿ: Dry Fruits: ಡ್ರೈಫ್ರುಟ್ಸ್‌ಗಳನ್ನು ಯಾವಾಗ, ಎಷ್ಟು ತಿನ್ನಬೇಕು? ಈ ಮಾಹಿತಿ ತಿಳಿದಿರಲಿ

Exit mobile version