ಹೇಳಿ ಕೇಳಿ ಈಗ ಪರೀಕ್ಷೆಗಳ ಪರ್ವಕಾಲ. ಮಕ್ಕಳಿರುವ ಮನೆಗಳೆಲ್ಲ ಮಕ್ಕಳ ಜೊತೆಗೆ ಪೋಷಕರಿಗೂ ಇದು ಪರೀಕ್ಷೆಯೆಂಬ ಸಂಧಿಕಾಲ. ಮಕ್ಕಳು ಓದುವುದಕ್ಕಿಂತ ಪೋಷಕರು ಧೃತಿಗೆಡುವುದೇ ಹೆಚ್ಚು. ಮನೆಯಲ್ಲೊಂದು ಒತ್ತಡದ ವಾತಾವರಣ. ಆದರೆ, ಮಕ್ಕಳ ಪರೀಕ್ಷೆಯ ಸಂದರ್ಭ ನಿಜವಾಗಿಯೂ ಬೇಕಾಗುವುದು ಪೋಷಕರ ತಾಳ್ಮೆ. ಜೊತೆಗೆ ಹಲವು ಸಮಯಗಳಿಂದ ಅವರು ಕಲಿಸಿಕೊಟ್ಟ ಶಿಸ್ತು. ಬನ್ನಿ, ಪರೀಕ್ಷೆಯ ಹಂತವನ್ನು ಮಕ್ಕಳು ಸರಾಗವಾಗಿ ದಾಟಿಕೊಂಡು ಹೋಗಲು ಪೋಷಕರಾದವರು ಏನು ಮಾಡಬೇಕು, ಮಕ್ಕಳನ್ನು ಪರೀಕ್ಷೆಗೆ ಹೇಗೆ ಸಿದ್ಧಗೊಳಿಸಬೇಕು (Exam Tips) ಎಂಬುದನ್ನು ಇಲ್ಲಿ ನೋಡೋಣ.
ಓದಿನ ಶಿಸ್ತು ಇರಲಿ
ಮಕ್ಕಳಿಗೆ ಪರೀಕ್ಷೆ ಹತ್ತಿರ ಬಂದಂತೆ ಓದು ಎಂದು ಬೆನ್ನು ಬೀಳುವ ಮೊದಲು ನಿತ್ಯವೂ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳುವಂತೆ ಮಾಡಿ. ಶಾಲೆಯಿಂದ ಬಂದ ಮಗು ಒಂದು ನಿತ್ಯದ ದಿನಚರಿಯನ್ನು ತನ್ನ ಪಾಡಿಗೆ ಪಾಲಿಸುವಂತೆ ಮಾಡುವುದು ಹೆತ್ತವರ ಕರ್ತವ್ಯ. ಹೆತ್ತವರು ಎಷ್ಟೇ ಬ್ಯುಸಿಯಾಗಿರಲಿ, ಮಕ್ಕಳ ಓದಿನ ವಿಚಾರದಲ್ಲಿ ಈ ಶಿಸ್ತನ್ನು ರೂಢಿಸಿಕೊಳ್ಳುವಂತೆ ಮಾಡದಿದ್ದಲ್ಲಿ, ಅದು ಖಂಡಿತ ಮಕ್ಕಳ ಶಿಕ್ಷಣದ ಮೇಲೆ ಪ್ರಭಾವ ಬಿದ್ದೇ ಬೀಳುತ್ತದೆ. ಯಾಕೆಂದರೆ, ಪರೀಕ್ಷೆ ಕೇವಲ ಶಾಲೆಯಲ್ಲಿ ಮಾತ್ರ ಬರುವುದಿಲ್ಲ. ಜೀವನದುದ್ದಕ್ಕೂ ಸಾಕಷ್ಟು ಪರೀಕ್ಷೆಗಳನ್ನು ಮಕ್ಕಳು ಎದುರಿಸಬೇಕಾಗುತ್ತದೆ. ಶಾಲೆಯ ಪರೀಕ್ಷೆಗಳು ಮಕ್ಕಳನ್ನು ಮುಂದಿನ ಜೀವನಕ್ಕೆ ಬದುಕಿನ ನಿಜವಾದ ಪರೀಕ್ಷೆಗಳಿಗೆ ಸಜ್ಜು ಮಾಡುತ್ತವೆ ಎಂಬುದನ್ನು ನೆನಪಿಡಿ.
ಸಿದ್ಧ ವೇಳಾಪಟ್ಟಿಯಿರಲಿ
ನಿತ್ಯವೂ ಮಕ್ಕಳು ಪಾಲನೆ ಮಾಡಲು ಒಂದು ಸಿದ್ಧ ವೇಳಾಪಟ್ಟಿಯಿರಲಿ. ಮಕ್ಕಳಿಗೆ ಸಾಕಷ್ಟು ತಮ್ಮ ಸಮಯವನ್ನೂ ನೀಡಿ. ಶಾಲೆಯಿಂದ ಬಂದ ತಕ್ಷಣ ರಿಲ್ಯಾಕ್ಸ್ ಆಗಲು ಒಂದಿಷ್ಟು ಸಮಯ, ನಂತರ ಓದಿಗಾಗಿ, ಹೋಂವರ್ಕ್‌ಗಾಗಿ, ಇತರ ಆಸಕ್ತಿಗಳಿದ್ದರೆ ಅವುಗಳ ತರಗತಿಗಳಿಗಾಗಿ ಹೀಗೆ ಒಂದು ಸಿದ್ಧ ಮಾದರಿಯನ್ನು ಮಕ್ಕಳು ಪಾಲಿಸಲಿ. ಪರೀಕ್ಷೆಯ ಸಂದರ್ಭ ಮಾತ್ರವೇ ಎಲ್ಲವನ್ನೂ ಒಮ್ಮೆಲೆ ಹೇರದಂತೆ, ಮೊದಲಿನಿಂದಲೇ ಈ ತಯಾರಿ ಅಗತ್ಯ.
ಏಕಾಗ್ರತೆ ಮುಖ್ಯ
ಮಕ್ಕಳಲ್ಲಿ ಏಕಾಗ್ರತೆಯ ಕೊರತೆ ಸಾಮಾನ್ಯವೇ. ಮನೆಯಲ್ಲಿ ಮಕ್ಕಳ ಓದಿನ ಜೊತೆಜೊತೆಗೇ ಸಾಕಷ್ಟು ಕೆಲಸಗಳು ಅವರ ಸುತ್ತಮುತ್ತ ನಡೆಯುತ್ತಿದ್ದರೆ ಸಹಜವಾಗಿಯೇ ಮಕ್ಕಳು ಬೇರೆ ಕೆಲಸಗಳತ್ತ ಆಕರ್ಷಿತರಾಗುತ್ತಾರೆ. ಏಕಾಗ್ರತೆ ಅವರಿಂದ ಸಾಧ್ಯವಾಗುವುದಿಲ್ಲ. ಹೀಗಾಗಿ, ಅವರ ಓದಿಗೊಂದು ಶಾಂತಿಯ, ಯಾವುದೇ ಶಬ್ದಗಳಿಲ್ಲದ, ಇತರ ಕೆಲಸ ಕಾರ್ಯಗಳಿಂದ ವಿಚಲಿತರಾಗದಂತಹ ಒಂದು ಜಾಗವಿರಲಿ. ಮಕ್ಕಳು ಅಲ್ಲಿಯೇ ಕುಳಿತು ತಮ್ಮ ಓದಿನ ಕೆಲಸ ಕಾರ್ಯಗಳನ್ನು ಮಾಡುವ ಅಭ್ಯಾಸವನ್ನು ರೂಢಿ ಮಾಡಿಸಿ.
ನಿರ್ದಿಷ್ಟ ಸಮಯ ನೀಡಿ
ಒಮ್ಮೆಲೇ ಒಂದಿಷ್ಟು ರಾಶಿ ಓದನ್ನು ಮಕ್ಕಳಿಗೆ ಹೇರಬೇಡಿ. ಓದನ್ನು ಸಣ್ಣ ಸಣ್ಣ ಭಾಗಗಳಾಗಿ ಒಂದಿಷ್ಟು ನಿರ್ದಿಷ್ಟ ಸಮಯ ನೀಡಿ ಅದನ್ನು ಮುಗಿಸುವಂತೆ ಹೇಳಿ. ಆಗ ಮಕ್ಕಳಿಗೆ ಒಮ್ಮೆಲೆ ಒಂದು ರಾಶಿ ಓದಲು ಹೇರಿಕೆ ಮಾಡಿದಂತಾಗುವುದಿಲ್ಲ. ಪರೀಕ್ಷೆಗೆ ಬಹಳ ದಿನಗಳಿರುವಾಗಲೇ ಓದಲು ಆರಂಭಿಸಿದರೆ ಹೀಗೆ ಮಾಡಲು ಸಾಧ್ಯವಾಗುವುದು. ಇಲ್ಲವಾದರೆ, ಒಮ್ಮೆಲೆ, ಎಲ್ಲವೂ ಹೊರೆಯೇ ಆಗುತ್ತದೆ. ಪರೀಕ್ಷೆ ಇರುವ ಮಕ್ಕಳ ಮನೆಗಳು ಯುದ್ಧಭೂಮಿಗಳಂತಾಗುತ್ತದೆ.
ಓದಿನ ತಂತ್ರ ಹೇಳಿ ಕೊಡಿ
ಬೇರೆ ಬೇರೆ ಮಾದರಿಯ ಓದಿನ ತಂತ್ರಗಳನ್ನು ಮಕ್ಕಳಿಗೆ ಹೇಳಿ ಕೊಡಿ. ಉದಾಹರಣೆಗೆ, ಸುಲಭದ ಮಾದರಿಯಲ್ಲಿ ನೆನಪಿಟ್ಟುಕೊಳ್ಳುವ ತಂತ್ರಗಳಿರಬಹುದು, ಬರೆದು ಕಲಿತುಕೊಳ್ಳುವುದಿರಬಹುದು, ಕೆಲವು ಪಾಯಿಂಟ್‌ಗಳನ್ನಾಗಿ ಮಾಡಿ ಸುಲಭವಾಗಿ ನೆನಪಿಸಿಕೊಳ್ಳಲು ಮಾಡುವ ಚಿಕ್ಕ ಚಿಕ್ಕ ನೋಟ್‌ಗಳಿರಬಹುದು, ಮಕ್ಕಳು ನೆನಪಿಟ್ಟುಕೊಳ್ಳಲು ಅನುಕೂಲವಾಗುವ ತಂತ್ರಗಳನ್ನು ಕಲಿಸಿ ಕೊಡಿ. ಇದು ಮಕ್ಕಳ ಯೋಚನಾಶಕ್ತಿಯನ್ನು ಹೆಚ್ಚಿಸುವುದಲ್ಲದೆ, ನೆನಪಿನಶಕ್ತಿಯನ್ನೂ ಉದ್ದೀಪಿಸುತ್ತದೆ.
ಒತ್ತಡ ಹೆಚ್ಚಿಸಬೇಡಿ
ಓದುವ ಕೆಲಸವೊಂದನ್ನೇ ಆಗಾಗ ನೆನಪಿಸುತ್ತಿರಬೇಡಿ. ಮಾತುಮಾತಿಗೂ ಅದನ್ನೇ ಹೇಳುತ್ತಿರಬೇಡಿ. ಇದು ಒತ್ತಡವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಓದಿನ ನಡುವೆ ಬ್ರೇಕ್‌ಗಳಿರಲಿ. ಈ ಬ್ರೇಕ್ 5-10 ನಿಮಿಷಗಳದ್ದಾಗಿರಲಿ. ಈ ಸಮಯದಲ್ಲಿ ಅವರು ಕೊಂಚ ರಿಲ್ಯಾಕ್ಸ್ ಮಾಡಲಿ. ಇದು ಮತ್ತೆ ಮಕ್ಕಳ ಓದಿನತ್ತ ಏಕಾಗ್ರತೆಯನ್ನು ಹೆಚ್ಚು ಮಾಡಿಸುತ್ತದೆ.
ಸಮತೋಲಿತ ಆಹಾರ ನೀಡಿ
ಮುಖ್ಯವಾಗಿ ಮಕ್ಕಳಿಗೆ ಸಮತೋಲಿತ, ಪೋಷಕಾಂಶಯುಕ್ತ ಆಹಾರ ಕೊಡಿ. ಮಕ್ಕಳ ನೆನಪಿನ ಶಕ್ತಿಯನ್ನು ಉದ್ದೀಪಿಸುವ, ಮಿದುಳನ್ನು ಆರೋಗ್ಯವಾಗಿಸುವ, ಚುರುಕಾಗಿಸುವ ಉತ್ತಮ ಆಹಾರಗಳು ಅವಾಗಿರಲಿ. ಉದಾಹರಣೆಗೆ ಬೀಜಗಳು, ಒಣ ಹಣ್ಣುಗಳು, ಹಣ್ಣುಗಳು, ಸೊಪ್ಪು ತರಕಾರಿಗಳು, ಧಾನ್ಯಗಳು, ಹಾಲು, ಮೊಟ್ಟೆ ಇತ್ಯಾದಿ. ಇದು ಮಕ್ಕಳ ಶಕ್ತಿವರ್ಧನೆಗೂ ನೆರವಾಗುತ್ತದೆ. ಅವರನ್ನು ಚುರುಕಾಗಿರಿಸುತ್ತದೆ. ಆದಷ್ಟೂ ಕುರುಕಲು, ಜಂಕ್ ಅಥವಾ ಸಂಸ್ಕರಿಸಿದ ಆಹಾರಗಳಿಂದ ದೂರವಿಡಿ.
ನಿದ್ದೆ ಕೂಡ ಮುಖ್ಯ
ಓದಿನ ಸಮಯದಲ್ಲಿ ಮಕ್ಕಳಿಗೆ ನಿದ್ದೆಯೂ ಮುಖ್ಯ. ಮಕ್ಕಳಿಗೆ ಸರಿಯಾಗಿ ನಿದ್ದೆ ಮಾಡಲು ಸಮಯ ಕೊಡಿ. ಮಕ್ಕಳ ನಿದ್ದೆಗೆ ಒಂದು ಸರಿಯಾದ ಸಮಯ ನಿಗದಿ ಮಾಡಿ. ಮಕ್ಕಳು ಸಣ್ಣ ವಯಸ್ಸಿನವರಾಗಿದ್ದರೆ, ರಾತ್ರಿ ಹೆಚ್ಚು ಹೊತ್ತು ಕೂರಿಸಬೇಡಿ. ಎಂಟು ಗಂಟೆಗಳ ಕನಿಷ್ಟ ನಿದ್ದೆಯನ್ನು ತಪ್ಪಿಸಲು ಬಿಡಬೇಡಿ.
ಮಕ್ಕಳನ್ನು ಪ್ರೋತ್ಸಾಹಿಸಿ
ಮಕ್ಕಳ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ. ಅವರು ಓದಿ ಮನನ ಮಾಡಿದ್ದಕ್ಕೆ ಉತ್ತಮವಾಗಿ ಪರೀಕ್ಷೆ ಬರೆದು ಬಂದಾಗ ಅವರ ಬೆನ್ನು ತಟ್ಟಿ. ಖುಷಿಯಿಂದ ಸ್ವಾಗತಿಸಿ. ಮತ್ತೆ ಮುಂದಿನ ಓದಿಗೆ ಇದೇ ರೀತಿ ಪೂರಕ ವಾತಾವರಣ ಕಲ್ಪಿಸಿ ಕೊಡಿ.
ಇದನ್ನೂ ಓದಿ: Side Effects Of Vitamin: ವಿಟಮಿನ್ ಮಾತ್ರೆಗಳನ್ನು ಅತಿಯಾಗಿ ಸೇವಿಸಬೇಡಿ!