ಏನಾದರೂ ಮಾಡಿ ತೂಕ ಇಳಿಸಲೇಬೇಕು ಎಂಬ ಹಠಕ್ಕೆ ಬಿದ್ದವರು, ಆಗಾಗ ತೂಕ ಇಳಿಸುವುದನ್ನೇ ಅಭ್ಯಾಸ ಮಾಡಿಕೊಂಡವರು, ಫಿಟ್ನೆಸ್ ಫ್ರೀಕ್ಗಳು ಟ್ರೆಂಡ್ಗಳನ್ನು ಫಾಲೋ ಮಾಡುವುದುಂಟು. ಫಿಟ್ನೆಸ್ ವಿಚಾರದಲ್ಲಿ, ತೂಕ ಇಳಿಸುವ ವಿಚಾರದಲ್ಲಿ ಆಗಾಗ ಇಂತಹ ಟ್ರೆಂಡ್ಗಳಾಗುವುದುಂಟು. ಒಮ್ಮೆ ಒಂದು ಬಗೆಯ ಆಹಾರ ಕ್ರಮ, ಡಯಟ್ ಟ್ರೆಂಡ್ ಆದರೆ, ಇನ್ನೊಮ್ಮೆ ಇನ್ನೊಂದು ವಿಧದ ಪದ್ಧತಿ ಟ್ರೆಂಡ್ಗೆ ಬರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಇಂತಹ ಟ್ರೆಂಡ್ಗಳನ್ನು ನೋಡಿ, ಆಕರ್ಷಿತರಾಗಿ, ಬಹುಬೇಗನೆ ತೂಕ ಇಳಿಸುವ ಹುಚ್ಚಿಗೆ ಬೀಳುವವರಿಗೇನೂ ಕಡಿಮೆಯಿಲ್ಲ. ಆದರೆ, ಇಂತಹ ಸಮಯದಲ್ಲಿ ಯಾವುದು ಆರೋಗ್ಯಕರ, ಯಾವುದು ಒಳ್ಲೇಯದಲ್ಲ ಎಂಬಿತ್ಯಾದಿ ವಿವರಗಳ ಬಗೆಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಆರೋಗ್ಯ ಹಾಳು ಮಾಡುವ, ಪ್ರಾಣಕ್ಕೇ ಸಂಚಕಾರ ತರುವ ಮಂದಿಯೂ ಇಲ್ಲದಿಲ್ಲ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ, ಫಿಟ್ನೆಸ್ ಪ್ರಿಯರಲ್ಲಿ ʻವನ್ ಮೀಲ್ ಅ ಡೇʼ (One Meal A Day) ಡಯಟ್ ಪ್ರಕಾರವು ಟ್ರೆಂಡ್ ಆಗುತ್ತಿದೆ.
ಹೆಸರೇ ಹೇಳುವಂತೆ ವನ್ ಮೀಲ್ ಅ ಡೇ (ಒಎಂಎಡಿ), ದಿನಕ್ಕೊಂದೇ ಬಾರಿ ತಿನ್ನುವ ಆಹಾರಕ್ರಮ. ದಿನದಲ್ಲಿ ಒಮ್ಮೆ ತಿಂದರೆ ಮುಗಿಯಿತು. ಉಳಿದ ಅವಧಿಯಲ್ಲಿ ಉಪವಾಸ. ಅವರವರ ಖಾಸಗಿ ಆಯ್ಕೆಗಳಿಗೆ ಅನುಗುಣವಾಗಿ, ಆಹಾರಕ್ರಮಕ್ಕೆ ಅನುಗುಣವಾಗಿ, ಆವರವರ ಆಯ್ಕೆಯ ಆಹಾರ ಒಮ್ಮೆ ತಿಂದ ಮೇಲೆ, ನಂತರ ಇಡೀ ದಿನ ಖಾಲಿ ಹೊಟ್ಟೆಯಲ್ಲಿರುವುದು ಅಥವಾ, ಸಾಧ್ಯವಾದಷ್ಟೂ ಕಡಿಮೆ ತಿನ್ನುವುದು. ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಇಂತಹ ಡಯಟ್ ಅನ್ನು ಅನುಸರಿಸುತ್ತಿದ್ದು, ತಮ್ಮ ಸೌಂದರ್ಯ ಹಾಗೂ ಫಿಟ್ನೆಸ್ನ ರಹಸ್ಯವನ್ನು ಹಂಚಿಕೊಳ್ಳುವ ಮೂಲಕ ಸಾಕಷ್ಟು ಮಂದಿ ಈ ಆಹಾರಕ್ರಮದತ್ತ ಆಕರ್ಷಿತರಾಗುತ್ತಿದ್ದಾರೆ. ಬನ್ನಿ, ಒನ್ ಮೀಲ್ ಅ ಡೇ ಡಯಟ್ನ ಸಾಧಕ ಬಾಧಕಗಳನ್ನು ನೋಡೋಣ.
- ೧. ಈ ಆಹಾರ ಕ್ರಮದಲ್ಲಿ, ನಾವು ಒಂದು ದಿನಕ್ಕೆ ಬೇಕಾದಷ್ಟು ಕ್ಯಾಲರಿಯನ್ನು ಒಂದೇ ಹೊತ್ತಿನಲ್ಲಿ ಪಡೆದುಕೊಳ್ಳಬೇಕಾಗುತ್ತದೆ. ದೇಹಕ್ಕೆ ಬೇಕಾದ ಎಲ್ಲ ಬಗೆಯ ಪೋಷಕಾಂಶಗಳನ್ನು ನಾವು ಒಂದೇ ಹೊತ್ತಿನಲ್ಲಿ ಸೇವಿಸಬೇಕಾಗುವುದು ಈ ಆಹಾರ ಪದ್ಧತಿಯ ದೊಡ್ಡ ಚಾಲೆಂಜ್. ಇದರಿಂದ ಕೆಲವೊಮ್ಮೆ ನಮಗೆ ಸರಿಯಾದ ಪೋಷಕಾಂಶಗಳು ಸಿಗದೇ ಹೋಗುವ ಅಪಾಯವೂ ಇದೆ.
- ೨. ಇಂತಹ ಆಹಾರ ಪದ್ಧತಿಯಿಂದ ಹಾಗಾದರೆ ಲಾಭವಿದೆಯಾ ಎಂದು ಕೇಳಿದರೆ, ಇದೆ ಎಂಬ ಉತ್ತರ ಸಿಗಬಹುದು. ಇದರಿಂದ ತತ್ಕ್ಷಣಕ್ಕೆ ಬಹುಬೇಗನೆ ಪ್ರತಿಫಲ ಪಡೆದವರೂ ಇರಬಹುದು. ಆದರೆ, ಈ ಬಗೆಯ ಆಹಾರಕ್ರಮವನ್ನು ನಾವು ಪ್ರೋತ್ಸಾಹಿಸುವುದಿಲ್ಲ ಎನ್ನುತ್ತಾರೆ ವೈದ್ಯರು. ಈ ಬಗೆಯ ಡಯಟ್ ಸ್ವಲ್ಪ ಹೆಚ್ಚೇ ತೀಕ್ಷ್ಣವಾಗಿ ಇರುವುದರಿಂದ ಡಯಟ್ ಮಾಡಲಿಚ್ಛಿಸುವವರು, ಇಂಟರ್ ಮಿಟೆಂಟ್ ಫಾಸ್ಟಿಂಗ್ ಮಾಡಬಹುದು. ಈ ಬಗೆಯ ಡಯಟ್ನಲ್ಲಿ ದಿನಕ್ಕೆ ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿ ಸುಮಾರು ೧೬ ಗಂಟೆಗಳ ಉಪವಾಸವನ್ನು ಇಟ್ಟುಕೊಳ್ಳಬಹುದು. ಉಳಿದ ಅವಧಿಯಲ್ಲಿ ಊಟ ಮಾಡಬಹುದು. ಅಂದರೆ, ಬಹುತೇಕರು ತಮ್ಮ ರಾತ್ರಿಯ ಊಟವನ್ನು ಸಂಜೆ ಆರರ ಒಳಗಾಗಿ ಮುಗಿಸುವ ಅಥವಾ ರಾತ್ರಿಯ ಊಟವನ್ನೇ ಸ್ಕಿಪ್ ಮಾಡುವ ಆಹಾರ ಪದ್ಧತಿಯನ್ನೂ ಇತ್ತೀಚೆಗೆ ಮಾಡುತ್ತಿದ್ದಾರೆ. ಈ ಬಗೆಯ ಆಹಾರ ಪದ್ಧತಿಯಲ್ಲಿ ಹೆಚ್ಚು ಕಷ್ಟವಿರುವುದಿಲ್ಲ. ಹಾಗೂ ಪೋಷಕಾಂಶ ದೇಹಕ್ಕೆ ಸಿಗದೇ ಇರುವ ಭಯವೂ ಇರುವುದಿಲ್ಲ.
- ೩. ಸಂಶೋಧನೆಗಳ ಪ್ರಕಾರ, ʻವನ್ ಮೀಲ್ ಅ ಡೇʼ ಪದ್ಧತಿಯಿಂದ ಸಾಕಷ್ಟು ಪ್ರಯೋಜನಗಳಿವೆ ಎಂದಾದರೂ, ಇಂತಹ ಆಹಾರಕ್ರಮ ಅನುಸರಿಸುವ ಮೊದಲು ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ವೈದ್ಯರ ಪ್ರಕಾರ ಈ ಪದ್ಧತಿಯ್ನು ನಿತ್ಯವೂ ಅನುಸರಿಸುವ ಬದಲು, ಯಾವಾಗಲಾದರೊಮ್ಮೆ ಅನುಸರಿಸಬಹುದು. ಅಷ್ಟೇ ಅಲ್ಲ, ಎಲ್ಲರೂ ಈ ಬಗೆಯ ಡಯಟ್ ಪಾಲಿಸುವುದು ಒಳ್ಳೆಯದಲ್ಲ. ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ೧೮ ವರ್ಷದೊಳಗಿನ ಮಕ್ಕಳು, ರೋಗಗ್ರಸ್ಥರು, ಏನಾದರೊಂದು ದೈಹಿಕ, ಮಾನಸಿಕ ಸಮಸ್ಯೆ ಎದುರಿಸುವ ಮಂದಿ ಇಂತಹ ಆಹಾರ ಪದ್ಧತಿಯಿಂದ ದೂರವಿರುವುದು ಒಳ್ಳೆಯದು. ಈ ಬಗೆಯಲ್ಲಿ, ರಕ್ತದಲ್ಲಿನ ಸಕ್ಕರೆಯ ಪ್ರಮಾಣದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಕಷ್ಟ. ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್, ಅಸಿಡಿಟಿ, ಬ್ಲೋಟಿಂಗ್, ಅಲರ್ಜಿಗಳು, ಉರಿಯೂತದಂತಹ ಸಮಸ್ಯೆ ಹೊಂದಿರುವ ಮಂದಿಗೂ ಇದು ಒಳ್ಳೆಯದಲ್ಲ. ನಿತ್ಯವೂ ಕೆಲವು ಬಗೆಯ ಮಾತ್ರೆಯನ್ನು ತೆಗೆದುಕೊಳ್ಳುವ ಮಂದಿಗೂ ಇದು ಒಳ್ಳೆಯದಲ್ಲ. ಹಾಗಾಗಿ, ಇಂಥ ಟ್ರೆಂಡಿಂಗ್ ಡಯಟ್ಗಳನ್ನು ಫಾಲೋ ಮಾಡುವ ಮೊದಲು ನುರಿತವರನ್ನು ಸಂಪರ್ಕಿಸಿ. ನಿಮ್ಮ ವೈದ್ಯರ ಸಲಹೆ ಪಡೆಯಿರಿ. ಕಣ್ಣು ಮುಚ್ಚಿ ಪ್ರಯತ್ನಿಸುವುದು ಒಳ್ಳೆಯದಲ್ಲ.
ಇದನ್ನೂ ಓದಿ: Millets For Health: ಸಿರಿಧಾನ್ಯಗಳನ್ನು ನಾವು ಏಕೆ ತಿನ್ನಬೇಕೆಂದರೆ…