Site icon Vistara News

Cooking Soda: ಅಡುಗೆ ಸೋಡಾ ಬಳಕೆ ಆರೋಗ್ಯಕ್ಕೆ ನಿಜಕ್ಕೂ ಮಾರಕವೆ?

Cooking Soda

ಉಬ್ಬದಿರುವ ಇಡ್ಲಿ, ವಡೆ, ಗರಿಯಾಗದ ದೋಸೆ ಇವೆಲ್ಲ ಯಾರಿಗೆ ಇಷ್ಟವಾಗುತ್ತದೆ? ಹಾಗೆಂದು ಎಲ್ಲ ಸಾರಿಯೂ ಸರಿಯಾದ ಪ್ರಮಾಣದಲ್ಲಿ ಹಿಟ್ಟು ಹುದುಗು ಬರುವುದಕ್ಕೆ ಸಾಧ್ಯವಿಲ್ಲ. ರುಬ್ಬುವುದು ವ್ಯತ್ಯಾಸವಾದೀತು, ಚಳಿಯಿಂದ ಹುದುಗು ಬಾರದಿರಬಹುದು… ಇಂಥವೆಲ್ಲ ಏನೇ ಆದರೂ ಅಡುಗೆ ಮಾತ್ರ ಸರಿಯಾಗಿಯೇ ಇರಬೇಕು ಎನ್ನುವ ಕಾಲವಿದು. ಇಂಥ ದಿನಗಳಿಗೆಂದೇ ಇರಿಸಿಕೊಂಡ ಆಪತ್‌ಬಾಂಧವ ಅಡುಗೆ ಸೋಡಾವನ್ನು ಕೊಂಚ ಬೆರೆಸಿಬಿಟ್ಟರೆ, ಎಲ್ಲವೂ ಸರಿಯಾಗಿ ಬಿಡುತ್ತದೆ. ದೋಕ್ಲಾ ಮಾಡುವಾಗ ಸೋಡಾ ಬೆರೆಸದವರು, ಇನೊ ಸೇರಿಸಬಹುದು. ಆಂಟಾಸಿಡ್‌ನಂತೆ ಬಳಕೆಯಾಗುವ ಸ್ಯಾಶೆ ಇನೊ. ಬೇಕಿಂಗ್‌ ಸೋಡಾ (Cooking Soda), ಇನೊ ಇಂಥವುಗಳು ಹಿಟ್ಟನ್ನು ತ್ವರಿತವಾಗಿ ಹುದುಗು ಬರುವಂತೆ ಸುಲಭದಲ್ಲಿ ಮಾಡುತ್ತವೆ. ಅವಸರಕ್ಕೆ ಹಿಟ್ಟು ಹುದುಗು ಬರಿಸುವ ಈ ವಸ್ತುಗಳು ಎಷ್ಟೋ ಜನರಿಗೆ ಮೆಚ್ಚು ಎನಿಸಿವೆ. ಸೋಡಾ ಬಳಕೆ ಆರೋಗ್ಯಕ್ಕೆ ಹಿತವೇ ಎಂಬುದು ಪ್ರಶ್ನೆ.

ಅತಿ ಬಳಕೆ ಸರಿಯಲ್ಲ

ಯಾವತ್ತೋ ಒಂದೆರಡು ಬಾರಿ ಉಪಯೋಗಿಸಿದರೆ ಇವುಗಳಿಂದ ಹಾನಿಯಿಲ್ಲ. ಆದರೆ ಸದಾ ಕಾಲ ಇವುಗಳನ್ನೇ ನೆಚ್ಚಿಕೊಂಡಿದ್ದರೆ ಆರೋಗ್ಯ ಹದಗೆಡುತ್ತದೆ. ಸೋಡಾ ಅಥವಾ ಸೋಡಿಯಂ ಬೈಕಾರ್ಬೊನೇಟ್‌ಗೆ ಇರುವ ಸಹಜ ಗುಣವೆಂದರೆ ಕ್ಷಾರ ಅಥವಾ ಆಲ್ಕಲೈನ್. ಇದನ್ನು ಅತಿಯಾಗಿ ದೇಹಕ್ಕೆ ಸೇರಿಸಿದರೆ ರಕ್ತ ಪಿಎಚ್‌ ವ್ಯತ್ಯಾಸವಾಗಬಹುದು. ರಕ್ತದ ಪಿಎಚ್‌ ಸಾಮಾನ್ಯವಾಗಿ ಸೂಕ್ಷ್ಮ ಪ್ರಕ್ರಿಯೆಗಳಿಂದ ಸಮತೋಲನಕ್ಕೆ ಒಳಪಡುತ್ತದೆ. ಒಂದೊಮ್ಮೆ ಈ ಸಮತೋಲನ ವ್ಯತ್ಯಾಸವಾದರೆ ಅನಾರೋಗ್ಯ ನಿಶ್ಚಿತ. ದೇಹದ ಚಯಾಪಚಯದ ಮೇಲೆ ತೀವ್ರತರ ಪರಿಣಾಮ ಇದರಿಂದ ಕಾಣಿಸಿಕೊಳ್ಳಬಹುದು. ಈ ಹಂತದಲ್ಲಿ ಮೂತ್ರಪಿಂಡಗಳ ಮೇಲಿನ ಒತ್ತಡ ಹೆಚ್ಚುವುದು ಸಾಮಾನ್ಯ. ಸೋಡಾ ಬಳಕೆ ಹೆಚ್ಚಾದರೆ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಇನ್ಸುಲಿನ್‌ ಉತ್ಪಾದನೆ ಹೆಚ್ಚಾಗಿ, ರಕ್ತದಲ್ಲಿ ಸಕ್ಕರೆ ಅಂಶ ಏರಿ, ಆಹಾರದಲ್ಲಿರುವ ಸಕ್ಕರೆಯ ಅಂಶವು ಕೊಬ್ಬಾಗಿ ಪರಿವರ್ತನೆ ಹೊಂದುತ್ತದೆ. ಮಾತ್ರವಲ್ಲ, ಸರಿಯಾದ ಪ್ರಮಾಣದಲ್ಲಿ ಆಹಾರದಲ್ಲಿ ಕ್ಯಾಲ್ಶಿಯಂ ಇದ್ದರೂ ಅದನ್ನು ಹೀರಿಕೊಳ್ಳಲು ಮೂಳೆಗಳಿಗೆ ಸೋಡಿಯಂ ತಡೆಯೊಡ್ಡುತ್ತದೆ. ಆಸ್ಟಿಯೊಪೊರೊಸಿಸ್‌ನಂಥ ಮಾರಕ ಕಾಯಿಲೆಗಳು ಅಮರಿಕೊಳ್ಳುವುದಕ್ಕೆ ಇಷ್ಟು ಸಾಲದೇ?

ಹಾಗಾಗಿಯೇ ಸೋಡಾ ಅಥವಾ ಸೋಡಿಯಂ ಬೈಕಾರ್ಬೊನೇಟ್‌ ಬಳಕೆ ಅತಿಯಾದರೆ, ಅದರ ದೂರಗಾಮಿ ಪರಿಣಾಮವಾಗಿ ಮೂತ್ರಪಿಂಡಗಳು ಸಂಕಷ್ಟಕ್ಕೆ ಒಳಗಾಗುತ್ತವೆ. ಇನೊದಲ್ಲಿರುವುದು ಶೇ. ೬೦ರಷ್ಟು ಸೋಡಿಯಂ. ಈ ವಸ್ತುಗಳನ್ನು ಎಂದಾದರೊಮ್ಮೆ ಉಪಯೋಗಿಸಬಹುದೇ ಹೊರತು ನಿತ್ಯದ ಅಡುಗೆಯಲ್ಲಿ ಇವುಗಳನ್ನು ಉಪ್ಪು, ಸಕ್ಕರೆಯಂತೆ ಬಳಸುವ ಹಾಗಿಲ್ಲ. ಸೋಡಾಗಿಂತಲೂ ಇನೊ ಕಡಿಮೆ ತೀವ್ರತೆಯದ್ದು ಹೌದಾದರೂ, ಇಡ್ಲಿ, ದೋಕ್ಲಾ ಮುಂತಾದವುಗಳ ತಯಾರಿಕೆಯಲ್ಲಿ ಇದನ್ನು ಪದೇಪದೆ ಬಳಸಿದರೆ ರಕ್ತದೊತ್ತಡ ಹೆಚ್ಚುವುದು ಖಂಡಿತ ಎನ್ನುತ್ತಾರೆ ಆಹಾರ ತಜ್ಞರು. ಇದಕ್ಕೆ ಆಂಟಾಸಿಡ್‌ನಂತೆ ಬಳಸುವಾಗಲೂ ೫ ಗ್ರಾಂ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವುದು ಸಲ್ಲದು. ಅದರಲ್ಲೂ ರಕ್ತದೊತ್ತಡ, ಮೂತ್ರಪಿಂಡ, ಯಕೃತ್‌ ಮತ್ತು ಹೃದಯದ ಆರೋಗ್ಯಗಳ ಸಮಸ್ಯೆ ಇರುವವರು ಇಂಥ ವಸ್ತುಗಳನ್ನು ಆದಷ್ಟೂ ಬಳಸದೇ ಇರುವುದೇ ಕ್ಷೇಮ. ಹೆಚ್ಚಿನ ಸೋಡಿಯಂ ದೇಹಕ್ಕೆ ಹೊರೆಯೇ.

ಆಂಟಾಸಿಡ್‌ ಬಗ್ಗೆ ಎಚ್ಚರ

ಯಾವುದೇ ಆಂಟಾಸಿಡ್‌ಗಳು ದೇಹದ ಪ್ರತಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ಸೋಂಕುಗಳು ಹೆಚ್ಚುವ ಸಾಧ್ಯತೆಯಿದೆ. ಹಾಗಾಗಿ ಹೆಚ್ಚಾಗುವ ಆಸಿಡಿಟಿ ನಿಯಂತ್ರಣಕ್ಕೆ ಆಂಟಾಸಿಡ್‌ ಮೊರೆ ಹೋಗುವ ಬದಲು, ಜೀವನಶೈಲಿಯ ಬದಲಾವಣೆಯಿಂದ ಈ ಸಮಸ್ಯೆಯನ್ನು ಹತೋಟಿಗೆ ತರುವುದಕ್ಕೆ ಯತ್ನಿಸುವುದು ಕ್ಷೇಮ. ಸೋಡಾದಲ್ಲಿ ಹೇಳುವಂಥ ಯಾವುದೇ ಪೋಷಕಾಂಶ ಇಲ್ಲ. ಇದರಲ್ಲಿರುವ ಫಾಸ್ಫಾರಿಕ್‌ ಆಮ್ಲವು ಹೊಟ್ಟೆಯಲ್ಲಿರುವ ಜೀರ್ಣ ರಸದೊಂದಿಗೆ ಬೆರೆತು, ಪಚನವನ್ನು ಇನ್ನಷ್ಟು ನಿಧಾನಗೊಳಿಸುತ್ತದೆ; ಸತ್ವಗಳನ್ನು ಹೀರಿಕೊಳ್ಳುವ ದೇಹದ ಕೆಲಸಕ್ಕೆ ಅಡ್ಡಿ ಮಾಡುತ್ತದೆ. ಇದರಿಂದ ಆರೋಗ್ಯ ಹಾಳು ಹೊರತಾಗಿ ಮತ್ತೇನಿಲ್ಲ.
ಹಾಗಾಗಿ ಬೇಕ್ ಮಾಡುವಾಗ ಮೊಟ್ಟೆ, ಮೊಸರು ಅಥವಾ ಅಗಸೆಯಂಥ ಲೋಳೆ ಬರುವ ಬೀಜಗಳ ಬಳಕೆಯಂಥ ಇತರ ಮಾರ್ಗಗಳ ಉಪಯೋಗ ಸಾಧ್ಯವೇ ಎಂಬುದನ್ನು ಪರಿಶೀಲಿಸುವುದು ಕ್ಷೇಮ. ಹಿಟ್ಟು ಹುದುಗು ಬರಬೇಕೆಂದರೆ, ಎಂಟು ತಾಸುಗಳ ಅಥವಾ ರಾತ್ರಿ-ಬೆಳಗಿನ ಸಮಯ ನೀಡುವುದೇ ಸರಿ. ಇಷ್ಟಕ್ಕೂ ಕಾಳು-ಬೇಳೆ ಸಾಕಷ್ಟು ಬಳಸಿದಲ್ಲಿ ಹಿಟ್ಟು ತಾನಾಗಿಯೇ ಹುದುಗುತ್ತದೆ, ಸೋಡಾ ಅಗತ್ಯವೂ ಬೀಳುವುದಿಲ್ಲ. ಅಂತೂ ಅಜ್ಜಿ ಕಾಲದ್ದೇ ಕೆಲವೊಮ್ಮೆ ಕ್ಷೇಮ ಎಂಬುದರಲ್ಲಿ ಅತಿಶಯವಿಲ್ಲ.

ಇದನ್ನೂ ಓದಿ: Healthy Weight Gain: ತೂಕ ಹೆಚ್ಚಿಸಿಕೊಳ್ಳಬೇಕೆ? ಇಲ್ಲಿದೆ ಆರೋಗ್ಯಕರ ಆಯ್ಕೆ!

Exit mobile version