Site icon Vistara News

Jal Jeera Benefits: ಬೇಸಿಗೆಯಲ್ಲಿ ಕುಡಿದು ನೋಡಿ ಜಲ್‌ಜೀರಾ ನೀರು

Jal Jeera Benefits

ಬೇಸಿಗೆಯಲ್ಲಿ ಬಗೆಬಗೆ ತಿನ್ನುವುದಕ್ಕಿಂತ, ತಂಪಾಗಿ ದಾಹ ತಣಿಸುವಂಥ ಪೇಯಗಳದ್ದೇ ಭರಾಟೆ. ಎಷ್ಟು ಲೀಟರುಗಟ್ಟಲೆ ನೀರು ಕುಡಿದರೂ ಬಾಯಾರಿಕೆಗೆ ಕೊನೆಯೇ ಇರುವುದಿಲ್ಲ. ಇಂಥ ಹೊತ್ತಿನಲ್ಲಿ ನೆರವಿಗೆ ಬರುವುದು (Jal Jeera Benefits) ಜಲ್‌ಜೀರಾ. ಮಾರುಕಟ್ಟೆಯಲ್ಲಿ ದೊರೆಯುವ ಜಲ್‌ಜೀರಾ ಪುಡಿಯನ್ನು ನೀರಿಗೆ ಬೆರೆಸಿ ಕುಡಿಯುವುದು ಒಂದು ರೀತಿ. ಈ ನೀರಿಗೆ ಪುದೀನಾ ಅಥವಾ ಕೊತ್ತಂಬರಿ ಸೊಪ್ಪುಗಳನ್ನು ಬೆರೆಸಿ ಕುಡಿಯುವುದು ಇನ್ನೊಂದು ರೀತಿ. ಹಾಗೆ ನೋಡಿದರೆ, ಜಲ್‌ಜೀರಾ ಪುಡಿಯಲ್ಲೇ ಹಲವು ರೀತಿಯ ಮಸಾಲೆಗಳು ಸೇರಿರುತ್ತವೆ. ಜೀರಿಗೆ, ಶುಂಠಿ ಮತ್ತು ಕಾಳುಮೆಣಸಿನ ಪುಡಿ, ಸೈಂಧವ ಲವಣ, ಒಣಮಾವಿನ ಪುಡಿ, ಕೊತ್ತಂಬರಿ ಮತ್ತು ಪುದೀನಾ ಎಲೆಗಳ ಪುಡಿಗಳು ಇದರಲ್ಲಿ ಸೇರಿರುತ್ತವೆ. ಹಾಗೆಂದೇ ಇದನ್ನು ಕುಡಿದಾಕ್ಷಣ ದಣಿವಾರಿದ ಅನುಭವ ನೀಡುತ್ತದೆ. ಇದನ್ನು ಕುಡಿಯುವುದರಿಂದ ಇನ್ನೂ ಕೆಲವು ಲಾಭಗಳಿವೆ. ಅದೇನೆಂದು ನೋಡೋಣ

ಬೇಸಿಗೆಗೆ ಸೂಕ್ತ

ದೇಹವನ್ನು ತಣಿಸುವುದಕ್ಕೆ ಅಗತ್ಯವಾದ ವಸ್ತುಗಳು ಜಲ್‌ಜೀರಾದಲ್ಲಿ ಅಡಕವಾಗಿವೆ. ದೇಹಕ್ಕೆ ಅಗತ್ಯವಾದ ಎಲೆಕ್ಟ್ರೋಲೈಟ್‌ಗಳನ್ನು ಈ ಪಾನೀಯ ಪೂರೈಸುತ್ತದೆ. ಜೊತೆಗೆ ನೀರಿನ ಅಂಶವೂ ದೇಹಕ್ಕೆ ದೊರೆಯುತ್ತದೆ. ಬೇಸಿಗೆಯಲ್ಲಿ ಬೆವರಿ, ಬಳಲಿ , ಬೆಂಡಾಗುವ ಸಂದರ್ಭದಲ್ಲಿ ಒಂದು ಲೋಟ ಜಲ್‌ಜೀರಾ ಬೆರೆಸಿದ ನೀರು ಚೇತೋಹಾರಿ ಅನುಭವವನ್ನು ನೀಡಬಲ್ಲದು.

ಜೀರ್ಣಕಾರಿ

ಜಲ್‌ಜೀರಾದಲ್ಲಿರುವ ಶುಂಠಿ, ಪುದೀನಾ ಇತ್ಯಾದಿಗಳು ಪಚನಕಾರಿ ಗುಣವನ್ನು ಹೊಂದಿವೆ. ಜೀರಿಗೆಯ ಅಂಶದಿಂದಾಗಿ ಹೊಟ್ಟೆಯುಬ್ಬರ, ಅಸಿಡಿಟಿಯಂಥ ತೊಂದರೆಗಳು ಕಡಿಮೆಯಾಗುತ್ತವೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಅಥವಾ ಮದುವೆ ಮನೆಯ ಊಟ ಹೆಚ್ಚಾಗಿ ಹೊಟ್ಟೆ ಭಾರವಾದರೆ, ಊಟದ ಸ್ವಲ್ಪ ಹೊತ್ತಿನ ನಂತರ ಜಲ್‌ಜೀರಾ ಸೇವನೆ ಅನುಕೂಲ ಎನಿಸುತ್ತದೆ.

ಹೊಟ್ಟೆಯ ತಳಮಳ ಶಮನ

ಹೊಟ್ಟೆಯಲ್ಲಿ ತಳಮಳ ಆಗುವುದಕ್ಕೆ ಬಹಳಷ್ಟು ಕಾರಣಗಳು ಇರುತ್ತವೆ- ಅಜೀರ್ಣ, ಆಸಿಡಿಟಿ, ಹೊಟ್ಟೆ ಉಬ್ಬರ, ನೋವು, ಹೊಟ್ಟೆ ತೊಳೆಸುವುದು ಇತ್ಯಾದಿ. ಶುಂಠಿಯಿಂದ ಹೊಟ್ಟೆ ತೊಳೆಸುವುದು, ಕಿಬ್ಬೊಟ್ಟೆಯ ನೋವು ಕಡಿಮೆಯಾದರೆ, ಜೀರಿಗೆ ಮತ್ತು ಕಾಳುಮೆಣಸಿನ ಅಂಶಗಳಿಂದ ಹೊಟ್ಟೆ ಉಬ್ಬರ, ಅಜೀರ್ಣ ಕಡಿಮೆಯಾಗುತ್ತದೆ. ಆದರೆ ರಕ್ತದೊತ್ತಡ ಹೆಚ್ಚಿರುವವರು ಜಲ್‌ಜೀರಾವನ್ನು ಮಿತಿಯಲ್ಲಿ ಸೇವಿಸುವುದು ಸೂಕ್ತ.

ಹಸಿವು ಹೆಚ್ಚಿಸುತ್ತದೆ

ಬೇಸಿಗೆಯಲ್ಲಿ ಹಸಿವೆ ಕೆಲವೊಮ್ಮೆ ಕಡಿಮೆ ಎನಿಸುತ್ತದೆ. ತಿನ್ನುವುದೇ ಬೇಡ, ತಂಪಾಗಿ ಪಾನೀಯಗಳಿದ್ದರೆ ದಿನ ಕಳೆಯಬಹುದು ಎಂದೆನಿಸಿದರೂ, ಹಸಿವಿಲ್ಲವೆಂದು ತಿನ್ನದೇ ಕುಳಿತ ಪರಿಣಾಮವಾಗಿ ಒಂದೆರಡು ದಿನಗಳಲ್ಲಿ ಸುಸ್ತು, ಆಯಾಸ, ನಿಶ್ಶಕ್ತಿ ಮುಂತಾದವೆಲ್ಲಾ ಆರಂಭವಾಗುತ್ತವೆ. ಜಲ್‌ಜೀರಾದಲ್ಲಿರುವ ಮಸಾಲೆಗಳ ಮಿಶ್ರಣವು, ಜೀರ್ಣಾಂಗವನ್ನು ಚುರುಕುಗೊಳಿಸಿ, ಹಸಿವೆ ಹೆಚ್ಚಿಸುತ್ತದೆ. ಒಂದೊಮ್ಮೆ ಅಜೀರ್ಣದಿಂದ ಹಸಿವಾಗದಿದ್ದರೆ, ಅದನ್ನೂ ಸರಿಪಡಿಸುತ್ತದೆ.

ಮಾರುಕಟ್ಟೆಯಲ್ಲಿ ದೊರೆಯುವ ಜಲ್‌ಜೀರಾ ಪುಡಿಗಳು ಬೇಡ ಎನಿಸಿದರೆ, ಬೇಕಾದ ರೀತಿಯಲ್ಲಿ ಮನೆಯಲ್ಲೂ ಮಾಡಿಕೊಳ್ಳಬಹುದು. ಕೆಲವು ಮಸಾಲೆಪ್ರಿಯರು ಜಲ್‌ಜೀರಾ ಪುಡಿಗಳಿಗೆ ಕೊಂಚ ಗರಂ ಮಸಾಲೆ ಸೇರಿಸಿಕೊಳ್ಳುವವರಿದ್ದಾರೆ. ಇದಕ್ಕೆ ಕೊಂಚ ಬೆಲ್ಲ ಸೇರಿಸಿ, ಪಾನಕದಂತೆ ಕುಡಿದು ಸುಖಿಸುವವರಿದ್ದಾರೆ. ಒಣ ಮಾವಿನ ಪುಡಿ ದೊರೆಯದಿದ್ದರೆ, ನಿಂಬೆ ರಸ ಹಾಕಿಕೊಂಡರೂ ಸರಿ- ಬಾಯಿ, ದೇಹ ಎರಡಕ್ಕೂ ಹಿತ. ಬಿಸಿಲಿನಲ್ಲಿ ಬಂದಾಗ ತಂಪಾದ ಜಲ್‌ಜೀರಾ ನೀರು ನಿಜಕ್ಕೂ ಚೈತನ್ಯಕ್ಕೆ ತಂಪೆರೆಯಬಲ್ಲದು.

ಇದನ್ನೂ ಓದಿ: Drumstick Tea Health Benefits: ನುಗ್ಗೆ ಸೊಪ್ಪಿನ ಚಹಾದ ಸ್ಪೆಷಲ್ ಇವು!

Exit mobile version