ಬೆಂಗಳೂರು: ರಾಜ್ಯದ ಹಾಗೂ ದೇಶದ ಪ್ರತಿಷ್ಠಿತ ಹೃದ್ರೋಗ ಸಂಸ್ಥೆಗಳಲ್ಲೊಂದಾದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (Jayadeva Hospital) ಪ್ರಭಾರ ನಿರ್ದೇಶಕರಾಗಿ (In-charge Director) ಕೆ.ಎಸ್. ರವೀಂದ್ರ ನಾಥ್ (KS Ravindranath) ಆಯ್ಕೆಯಾಗಿದ್ದಾರೆ. ಇದೇ ವೇಳೆ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ (Dr CN Manjunath) ಅವರು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಭಾವುಕ ವಿದಾಯ ಹೇಳಿದರು. ಮುಂದಿನ ನಿರ್ದೇಶಕರಿಗೆ ಆಲ್ ದಿ ಬೆಸ್ಟ್ ಹೇಳಿದರು. ತಾವು ದೈಹಿಕವಾಗಿ ಮಾತ್ರವೇ ಈ ಸಂಸ್ಥೆಯಿಂದ ದೂರವಾಗುತ್ತಿದ್ದು, ಮಾನಸಿಕವಾಗಿ ಇಲ್ಲಿಯೇ ಇರುತ್ತೇನೆ ಎಂದು ಸಿಬ್ಬಂದಿಗೆ ಧೈರ್ಯ ತುಂಬಿದರು.
ಈ ವೇಳೆ ಡಾ. ಸಿ.ಎನ್. ಮಂಜುನಾಥ್ ಅವರು ಕೆ.ಎಸ್. ರವೀಂದ್ರ ನಾಥ್ ಅವರಿಗೆ ಜಯದೇವ ನಿರ್ದೇಶಕರ ಹುದ್ದೆಯನ್ನು ಹಸ್ತಾಂತರ ಮಾಡಿದರು. ಡಾ. ರವೀಂದ್ರ ನಾಥ್ ಅವರಿಗೆ 69 ವರ್ಷ ವಯಸ್ಸಾಗಿದ್ದು, ಅಪಾರ ಅನುಭವವನ್ನು ಹೊಂದಿದ್ದಾರೆ. ಹಿರಿಯ ಪ್ರಾಧ್ಯಾಪಕರಾಗಿರುವ ಅವರು, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಸಹ ಆಗಿದ್ದರು.
ಕೆ.ಎಸ್. ರವೀಂದ್ರ ನಾಥ್‌ಗೆ ಅಪಾರ ಅನುಭವ ಇದೆ: ಮಂಜುನಾಥ್
ಅಧಿಕಾರ ಹಸ್ತಾಂತರ ಮಾಡಿದ ಬಳಿಕ ವಿಸ್ತಾರ ನ್ಯೂಸ್ ಕತೆ ಮಾತನಾಡಿದ ಡಾ. ಸಿ. ಎನ್ ಮಂಜುನಾಥ್, ಕೆ.ಎಸ್. ರವೀಂದ್ರ ನಾಥ್ ಅವರನ್ನು ಪ್ರಭಾರ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ. ಅವರು ಕೂಡ ಸಮರ್ಥರಿದ್ದಾರೆ. ಹಿರಿಯ ಪ್ರಾಧ್ಯಾಪಕರಾಗಿರುವ ಅವರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಸಹ ಆಗಿದ್ದರು. ಅವರಿಗೆ ಅಪಾರ ಅನುಭವ ಇರುವುದರಿಂದ ಸಂಸ್ಥೆಗೆ ಒಳ್ಳೆಯದು ಆಗುತ್ತದೆ. ಇಷ್ಟು ದಿನ ಹೇಗೆ ನಾವು ನಡೆಸಿಕೊಂಡು ಬಂದಿದ್ದೇವೋ, ಇನ್ನು ಮುಂದೆಯೂ ಹಾಗೆ ಇದು ಮುಂದುವರಿಯುತ್ತದೆ ಎಂದು ಹೇಳಿದರು.
ಅಧಿಕಾರವೇನು ದೊಡ್ಡದು ಅಲ್ಲ ನನಗೆ
ಜನಸಾಮಾನ್ಯರಿಗೆ ಇದೇ ರೀತಿಯ ಗುಣಮಟ್ಟದ ಸೇವೆ ಸಿಗಬೇಕು. ಈ ಪ್ರಕ್ರಿಯೆ ಸಾಗಬೇಕು. ಅವರಿಗೆ ನಾನು ಗುಡ್ ಲಕ್ ಹೇಳುತ್ತೇನೆ, ಒಳ್ಳೆಯದಾಗಲಿ. ದೈಹಿಕವಾಗಿ ಈಗ ನಾನು ಹೋಗುತ್ತಿದ್ದೇನೆ. ಮಾನಸಿಕವಾಗಿ ಅವರ ಜತೆಯಲ್ಲೇ ಇರುತ್ತೇನೆ. ಅವರ ಹೃದಯದಲ್ಲಿ ಇರುತ್ತೇನೆ ನಾನು. ಕೇವಲ ಜವಾಬ್ದಾರಿಯಿಂದ ನಿರ್ಗಮಿಸುತ್ತಿದೇನೆ. ಅವರ ನೆನಪುಗಳು ಯಾವಾಗಲೂ ಉಳಿಯುತ್ತದೆ. ಈ ಹೃದಯದಿಂದ ಪ್ರತಿಯೊಬ್ಬರನ್ನು ಪ್ರೀತಿ ಮಾಡುತ್ತೇನೆ. ಅತಿ ದೊಡ್ಡ ಸಂಪತ್ತು ಎಂದರೆ ನಂಬಿಕೆ, ಪ್ರೀತಿ ವಿಶ್ವಾಸವಾಗಿದೆ. ಅಧಿಕಾರವೇನು ದೊಡ್ಡದು ಅಲ್ಲ ನನಗೆ ಎಂದು ಡಾ. ಸಿ. ಎನ್ ಮಂಜುನಾಥ್ ಹೇಳಿದರು.
ಸಿ.ಎನ್ ಮಂಜುನಾಥ್ ಅವರ ಎದುರೇ ಕಣ್ಣೀರುಹಾಕಿದ ಸಿಬ್ಬಂದಿ
ಇನ್ನು ಅಭಿನಂದನೆ ಸಲ್ಲಿಸುವ ವೇಳೆ ಆಸ್ಪತ್ರೆಯ ಎಲ್ಲ ಸಿಬ್ಬಂದಿ ಹೂ ಗುಚ್ಚವನ್ನು ನೀಡಿ, ಭಾವುಕರಗಿ ಕಣ್ಣೀರಿಟ್ಟರು. ಈ ಸಂಧರ್ಭದಲ್ಲಿ ಹಿರಿಯ ಸಿಬ್ಬಂದಿಗೆ ಡಾ. ಸಿಎನ್ ಮಂಜುನಾಥ್ ಅವರು ಅಭಿನಂದನೆ ಸಲ್ಲಿಸಿ ವಿದಾಯವನ್ನು ತಿಳಿಸಿದರು. ಈ ಮೂಲಕ ಡಾ. ಮಂಜುನಾಥ್ ಅವರು ಬರೋಬ್ಬರಿ 17 ವರ್ಷಗಳ ಜಯದೇವ ಜತೆಗಿನ ಪಯಣವನ್ನು ಪೂರ್ಣಗೊಳಿಸಿದಂತಾಗಿದೆ.
ಹೂ ಮಳೆ ಸುರಿಸಿ ಬೀಳ್ಕೊಟ್ಟಿದ್ದ ಸಿಬ್ಬಂದಿ
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ, ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರ ಸೇವಾವಧಿ ಜ.31ರಂದು ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಜಯದೇವ ಆಸ್ಪತ್ರೆ (Jayadeva Hospital) ವೈದ್ಯರು, ಸಿಬ್ಬಂದಿ ಮಂಗಳವಾರ (ಜ.30) ಭಾವಪೂರ್ಣವಾಗಿ ಸನ್ಮಾನಿಸಿ ಬೀಳ್ಕೊಟ್ಟಿದ್ದರು.
ಜಯದೇವ ಆಸ್ಪತ್ರೆಗೆ ಡಾ. ಸಿ.ಎನ್ ಮಂಜುನಾಥ್ ಅವರು ಆಗಮಿಸುತ್ತಿದ್ದಂತೆ ಅವರ ಮೇಲೆ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹೂ ಮಳೆ ಸುರಿಸಿದ್ದರು. ಈ ವೇಳೆ ಅಭಿಮಾನಿಗಳು ಜೈಕಾರ ಕೂಗಿದ್ದರು. ಬೀಳ್ಕೊಡುಗೆ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪತ್ನಿ ಚನ್ನಮ್ಮ, ಎಚ್.ಡಿ. ದೇವೇಗೌಡರ ಪುತ್ರಿ, ಡಾ. ಸಿ.ಎನ್ ಮಂಜುನಾಥ್ ಅವರ ಪತ್ನಿ ಡಾ. ಅನುಸೂಯ ಮಂಜುನಾಥ್, ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಸೇರಿ ನೂರಾರು ಮಂದಿ ಭಾಗವಹಿಸಿದ್ದರು.
ಇದನ್ನೂ ಓದಿ: Jayadeva Hospital: ಹೂ ಮಳೆ ಸುರಿಸಿ ಡಾ.ಸಿ.ಎನ್. ಮಂಜುನಾಥ್‌ರನ್ನು ಬೀಳ್ಕೊಟ್ಟ ಜಯದೇವ ಆಸ್ಪತ್ರೆ ಸಿಬ್ಬಂದಿ
ಡಾ. ಸಿ.ಎನ್ ಮಂಜುನಾಥ್ ಅವರ ಸಾಧನೆ ಬಿಂಬಿಸುವ ವಿಶೇಷ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಗಿತ್ತು. ಮಂಜುನಾಥ್‌ರಂತಹ ಅಳಿಯ ಸಿಕ್ಕಿದ್ದು ನನ್ನ ಪುಣ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಬಣ್ಣಿಸಿದ್ದರು.