Site icon Vistara News

Junk Food Side Effects: ಗೇಮಿಂಗ್‌ ದಾಸರಾದ ಮಕ್ಕಳು ಜಂಕ್‌ ಫುಡ್‌ ವ್ಯಸನಿಗಳಾಗುವ ಸಂಭವ ಹೆಚ್ಚು!

Junk Food Side Effects

ನಿಮ್ಮ ಮಕ್ಕಳು ಅತೀವವಾಗಿ ಗೇಮಿಂಗ್‌ಗೆ ದಾಸರಾಗಿದ್ದಾರೋ? ಮೊಬೈಲ್‌ಗಳಲ್ಲಿ, ಲ್ಯಾಪ್‌ಟಾಪ್‌ ಅಥವಾ ಟ್ಯಾಬ್‌ಗಳಲ್ಲಿ ಗಂಟೆಗಟ್ಟಲೆ ಗೇಮ್‌ ಆಡುತ್ತಾರೋ? ಹಾಗಾದರೆ ಹುಷಾರು. ಗೇಮ್‌ ಆಡುವ, ಹೆಚ್ಚು ಹೊತ್ತು ಮೊಬೈಲ್‌ನಲ್ಲಿ ಕಳೆಯುವ ಮಕ್ಕಳಿಗೆ ಬೊಜ್ಜಿನ ಸಮಸ್ಯೆ ಕಾಡುವುದು ಹೆಚ್ಚು ಎಂದು ವರದಿ ಹೇಳಿದೆ. ಗೇಮಿಂಗ್‌ ವ್ಯಸನಕ್ಕೆ ದಾಸರಾದ ಮಕ್ಕಳು ಜಂಕ್‌ ಫುಡ್‌ ದಾಸರಾಗುವ ಸಾಧ್ಯತೆಗಳೂ ಹೆಚ್ಚಾಗಿದ್ದು, ಬೊಜ್ಜಿನ ಸಮಸ್ಯೆಯೂ ಇವರನ್ನೇ ಹೆಚ್ಚು (Junk Food Side Effects) ಕಾಡುತ್ತದೆ ಎನ್ನಲಾಗಿದೆ. ಲಿವರ್‌ಪೂಲ್‌ ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಸಂಶೋಧನೆಯೊಂದರೆ ಪ್ರಕಾರ, ಹದಿಹರೆಯದ ಮಕ್ಕಳು ಗೇಮಿಂಗ್‌ ಪ್ರಪಂಚದೊಳಕ್ಕೆ ಬೀಳುವುದರ ಜೊತೆಗೆ ಜಂಕ್‌ ಫುಡ್‌ ತಿನ್ನುವ ಅಭ್ಯಾಸವನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಗೇಮಿಂಗ್‌ ಹಾಗೂ ಜಂಕ್‌ ಫುಡ್‌ ತಿನ್ನುವ ಚಟಕ್ಕೆ ಒಂದಕ್ಕೊಂದು ಸಂಬಂಧವಿದ್ದು ಮಕ್ಕಳು ಮತ್ತಷ್ಟು ಜಂಕ್‌ ಫುಡ್‌ ತಿನ್ನುವ ಬಯಕೆಯತ್ತ ಹೆಚ್ಚು ವಾಲುತ್ತಾರೆ. ಗೇಮಿಂಗ್‌ ಸಂದರ್ಭ ಅವರಿಗೆ ಅರಿವಿಲ್ಲದೆಯೇ ಹೆಚ್ಚು ಹೆಚ್ಚು ಜಂಕ್‌ ತಿನ್ನುತ್ತಾರೆ. ಇದರಿಂದ ಸಹಜವಾಗಿಯೇ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಅದು ತನ್ನ ಸಂಶೋಧನಾ ವರದಿಯಲ್ಲಿ ತಿಳಿಸಿದೆ.
ಹದಿಹರೆಯದ, ಪುಟಾಣಿ ಮಕ್ಕಳಲ್ಲಿ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚು ಹೆಚ್ಚು ಬೊಜ್ಜಿನ ಸಮಸ್ಯೆಗಳು ಕಾಡುತ್ತಿವೆ. ಮಕ್ಕಳು ಸಣ್ಣ ವಯಸ್ಸಿನಲ್ಲಿಯೇ ಚುರುಕಾಗಿರುವುದನ್ನು ಬಿಟ್ಟು, ಸರಿಯಾಗಿ ಮೈಬಗ್ಗಿಸಲಾರದೆ ಕಷ್ಟಪಡುವುದನ್ನು ನೀವು ನೋಡಿರಬಹುದು. ಇದಕ್ಕೆ ಇಂದಿನ ಗೇಮಿಂಗ್‌ ಪ್ರಪಂಚದಲ್ಲಿ ಮಕ್ಕಳು ಸಾಮಾಜಿಕವಾಗಿ ತೊಡಗಿಸಿಕೊಳ್ಳುವುದು, ಗೇಮಿಂಗ್‌ ಲೈವ್‌ಸ್ಟ್ರೀಮ್‌ಗಳಲ್ಲಿ ಭಾಗವಹಿಸುವುದು, ಸಾಮಾಜಿಕ ಜಾಲತಾಣದಲ್ಲಿ ಮಕ್ಕಳು ಗೇಮಿಂಗ್‌ನಲ್ಲಿ ಸಕ್ರಿಯರಾಗಿರುವುದು, ಗಂಟೆಗಟ್ಟ್ಲೆ, ಬೇರೆಯವರ ಜೊತೆ ಆನ್‌ಲೈನ್‌ ಗೇಮಿಂಗ್‌ನಲ್ಲಿ ಭಾಗವಹಿಸುವುದು ಇತ್ಯಾದಿಗಳೂ ಕೂಡಾ ಕಾರಣ ಎಂದಿದೆ.
ಮಕ್ಕಳಲ್ಲಿ ಈ ಮನಸ್ಥಿತಿಯನ್ನು ತರುವಲ್ಲಿ ಹಲವು ಖ್ಯಾತ ಬ್ರ್ಯಾಂಡ್‌ಗಳ ಪಾಲೂ ಇದೆ ಎಂದಿರುವ ಈ ಸಂಶೋಧನೆ, ಇಂತಹ ಪ್ಲಾಟ್‌ಫಾರಂಗಳಲ್ಲಿ ಮಕ್ಕಳ ಮನಸ್ಸಿಗೆ ನಾಟುವಂಥ, ಅರ ಆಸಕ್ತಿ ಕೆರಳಿಸುವಂತ ಜಾಹಿರಾತುಗಳು, ಮಾರಾಟಗಳು ಇತ್ಯಾದಿಗಳನ್ನು ಹಮ್ಮಿಕೊಳ್ಳುವುದೂ ಕೂಡಾ ಕಾರಣ ಎಂದಿದೆ.

ಜಂಕ್‌ ಫುಡ್‌ ಆಕರ್ಷಣೆ

ಗೇಮಿಂಗ್‌ಗಳ ಮೂಲಕ ಮಕ್ಕಳು ಇಂತಹ ಜಾಹೀರಾತುಗಳು ಹೇಳುವ ಆಸಕ್ತಿ ಕೆರಳಿಸುವ ಕೊಲಾಬ್‌ಗಳಲ್ಲಿ ಭಾಗವಹಿಸಿ ಗಂಟೆಗಟ್ಟಲೆ ಗೇಮಿಂಗ್‌ ದುನಿಯಾದಲ್ಲಿ ತಮಗೇ ಅರಿವಿಲ್ಲದಂತೆ, ಅತಿ ಹೆಚ್ಚು ಸಕ್ಕರೆ, ಉಪ್ಪು ಹಾಗೂ ರಾಸಾಯನಿಕಗಳಿರುವ ಜಂಕ್‌ ಆಹಾರಗಳನ್ನು ಸೇವಿಸುವತ್ತ ಆಕರ್ಷಿತರಾಗುತ್ತಿದ್ದಾರೆ. ಇಂತಹ ಡಿಜಿಟಲ್‌ ಮಾರ್ಕೆಟಿಂಗ್‌ ಪ್ಲಾಟ್‌ ಫಾರಂಗಳ ಹಾವಳಿಯಿಂದಾಗಿಯೇ ಇಂದು ಮಕ್ಕಳು ಇವುಗಳ ದಾಸರಾಗುತ್ತಿದ್ದಾರೆ. ಅರಿವಿಲ್ಲದೇ ಅವುಗಳ ಬಲೆಯಲ್ಲಿ ಬೀಳುತ್ತಿದ್ದಾರೆ. ಮಕ್ಕಳ ಚಟುವಟಿಕೆಗಳಲ್ಲಿ ಗಮನವಿಡದೇ, ಗೇಮಿಂಗ್‌ ನೀಡಿದರೆ, ಇಂತಹ ಅಪಾಯದಲ್ಲಿ ಮಕ್ಕಳನ್ನು ಬೀಳಿಸುವ ತಪ್ಪಿನ ಹೊಣೆಗಾರಿಕೆಯನ್ನು ಪೋಷಕರೇ ಹೊರಬೇಕಾಗುತ್ತದೆ.

ಆಹಾರ ಶೈಲಿಯ ಬಗ್ಗೆ ನಿಗಾ ಇರಲಿ

ಹೀಗಾಗಿ, ನಿಮ್ಮ ಮಕ್ಕಳ ಆಹಾರ ಶೈಲಿಯ ಬಗ್ಗೆ ನಿಗಾ ಇರಲಿ. ಅವರ ಗೇಮಿಂಗ್‌ ಪ್ರಪಂಚದ ಬಗ್ಗೆ ನಿಮಗೆ ಅರಿವಿರಲಿ. ನಮಗೆ ತಿಳಿಯದು ಎಂಬ ಉಡಾಫೆ ಬೇಡ. ಅವರು ಏನು ಆಡುತ್ತಾರೆ, ಎಷ್ಟು ಆಡುತ್ತಾರೆ ಎಂಬುದು ನಿಮಗೆ ಗೊತ್ತಿರಲಿ. ಮಕ್ಕಳಲ್ಲಿ ಈ ಬಗ್ಗೆ ಸಹಜವಾಗಿ ಮಾತುಕತೆ ನಡೆಸುವ ಸ್ನೇಹದ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಿ.

ಹೊರಗಿನ ಆರ್ಡರ್‌ ನಿಲ್ಲಿಸಿ

ಮಕ್ಕಳು ಮೂರು ಹೊತ್ತು ಮನೆಯೂಟವನ್ನು ಚೆನ್ನಾಗಿ ತಿನ್ನಲಿ. ಹೊರಗಿನಿಂದ ಆರ್ಡರ್‌ ಮಾಡಿಕೊಳ್ಳುವುದು ಉತ್ಯಾದಿಗಳನ್ನು ಆದಷ್ಟೂ ನಿಮ್ಮ ಹತೋಟಿಯಲ್ಲಿಡಿ. ಮಕ್ಕಳ ಊಟದ ತಟ್ಟೆಯಲ್ಲಿ ಸಾಕಷ್ಟು ತರಕಾರಿಗಳು, ಮೊಳಕೆ ಕಾಳುಗಳು, ಧಾನ್ಯಗಳಿಂದ ಮಾಡಿದ ತಿಂಡಿಗಳು, ಪ್ರೊಟೀನ್‌ಯುಕ್ತ ಆಹಾರ ಇರಲಿ. ಹಣ್ಣು ಹಂಪಲುಗಳನ್ನೂ ಮಕ್ಕಳು ತಿನ್ನಲಿ. ಯಾವಾಗಲಾದರೊಮ್ಮೆ ಅಪರೂಪಕ್ಕೆ ಮಾತ್ರ ಜಂಕ್‌ ತಿಂದರೆ ಸಾಕು.

ವಾಕಿಂಗ್‌ ಅಭ್ಯಾಸ ಬೆಳೆಸಿ

ಮಕ್ಕಳು ಚೆನ್ನಾಗಿ ಆಡಲಿ. ದೇಹ ಶ್ರಮವನ್ನು ಬೇಡುವ ಆಟವನ್ನು ಆಡಲಿ. ಮಕ್ಕಳ ಜೊತೆಗೆ ಒಂದು ವಾಕಿಂಗ್‌ ಅಭ್ಯಾಸವನ್ನು ಬೆಳೆಸಿಕೊಳ್ಳಿ. ನಿತ್ಯವೂ ನಿಮಗೆ ಸಾಧ್ಯವಾಗದಿದ್ದರೆ ವಾರಾಂತ್ಯದಲ್ಲಾದರೂ ಮಕ್ಕಳ ಜೊತೆ ಇದಕ್ಕಾಗಿ ಸಮಯ ಇಡಿ. ನಿಮ್ಮ ಹಾಗೂ ಅವರ ಪ್ರಪಂಚ ಬೇರೆ ಬೇರೆಯಾಗದಿರಲಿ.

ಫ್ರಿಡ್ಜ್‌ನಲ್ಲಿ ಚಾಕೋಲೇಟ್‌ ತುಂಬಿಸಿಡಬೇಡಿ

ನಿಮ್ಮ ಫ್ರಿಡ್ಜ್‌ನಲ್ಲಿ ಚಾಕೋಲೇಟ್‌ಗಳು, ಸಕ್ಕರೆಯುಕ್ಕ ತಿನಿಸುಗಳು, ಸಿಹಿತಿಂಡಿಗಳು ಇತ್ಯಾದಿಗಳಿಂದ ತುಂಬಿಸಬೇಡಿ. ಒಳ್ಳೆಯ ಆಹಾರಗಳೇ ಮಕ್ಕಳ ಕೈಗೆ ಸಿಗುವಂತಿರಲಿ. ಸಂಸ್ಕರಿಸಿದ ಆಹಾರಗಳು, ಪ್ಯಾಕೇಜ್ಡ್‌ ಡ್ರಿಂಕ್‌ಗಳನ್ನು ತಂದು ಇಟ್ಟುಕೊಳ್ಳಬೇಡಿ. ಆರೋಗ್ಯಕರ ಆಹಾರಗಳನ್ನು ಮಾಡುವ ಕ್ರಮ ಮಕ್ಕಳಿಗೆ ಕಲಿಸಿ. ಅವರಿಗೆ ಅವನ್ನೇ ತಿನ್ನಲು ಕೊಡಿ.

ಇದನ್ನೂ ಓದಿ: Health Tips Kannada: ನಮ್ಮ ದೇಹದಲ್ಲಿ ಉಪ್ಪಿನ ಅಂಶ ಕಡಿಮೆಯಾಗಿದೆ ಎಂದು ತಿಳಿಯುವುದು ಹೇಗೆ?

ಟಿವಿ ಮುಂದೆ ಉಣ್ಣುವ ಅಭ್ಯಾಸ ಬಿಡಿಸಿ

ಟಿವಿ ಮುಂದೆ ಕೂತು ಅಥವಾ ಫೋನ್‌ ನೋಡುತ್ತಾ ಅವರು ಉಣ್ಣುವ ಅಭ್ಯಾಸವಿದ್ದರೆ ಅದನ್ನು ಬಿಡಿಸಿ. ಎಲ್ಲರೂ ಒಟ್ಟಾಗಿ ಜೊತೆಯಾಗಿ ಒಂದೆಡೆ ಸೇರಿ ಕುಳಿತು ಉಣ್ಣುವ ಅಭ್ಯಾಸವನ್ನು ಮಕ್ಕಳೂ ರೂಢಿಸಿಕೊಳ್ಳಲಿ. ಮಕ್ಕಳು ಶಾಲೆಯಿಂದ ಬಂದ ಮೇಳೆ ಟಿವಿ ಮುಂದೆ ಕೂತು ಉಣ್ಣುವ ಅಭ್ಯಾಸ ರೂಢಿಸಿಕೊಂಡಿದ್ದರೆ ಅದರಿಂದ ಅವರನ್ನು ಮುಕ್ತರನ್ನಾಗಿಸಿ. ಟೇಬಲ್‌ ಮೇಲೆ ಕುಳಿತು ಕೇವಲ ಉಣ್ಣುವ ವಿಚಾರಕ್ಕೆ ಮಾತ್ರ ಗಮನ ಹರಿಸುವಂತೆ ಅವರನ್ನು ಬದಲಾಯಿಸಿ.

Exit mobile version