Site icon Vistara News

Benefits of Kasoori Methi: ಕಸೂರಿ ಮೇಥಿ ರುಚಿ ಹೆಚ್ಚಿಸಲು ಮಾತ್ರವಲ್ಲ, ಆರೋಗ್ಯ ವೃದ್ಧಿಗೂ ಸೂಕ್ತ

Benefits of Kasoori Methi

ಅಡುಗೆಗಳ ಘಮ ಹೆಚ್ಚಿಸುವುದಕ್ಕೆಂದು ಹಲವಾರು ಸೊಪ್ಪುಗಳನ್ನು ಬಳಸುವುದು ವಿಶ್ವದೆಲ್ಲೆಡೆಯ ಅಡುಗೆಮನೆಗಳ ವಾಡಿಕೆ. ಪಶ್ಚಿಮ ದೇಶಗಳಲ್ಲಿ ಥೈಮ್‌, ರೋಸ್‌ಮೆರಿ, ಬೆಸಿಲ್‌ ಮುಂತಾದ ಎಲೆಗಳನ್ನು ತಾಜಾ ಅಥವಾ ಒಣಗಿಸಿದ್ದು ಅಡುಗೆಗಳಲ್ಲಿ ಬಳಸಲಾಗುತ್ತದೆ. ಭಾರತೀಯ ಅಡುಗೆಮನೆಗಳಲ್ಲೂ ಕೊತ್ತಂಬರಿ, ಕರಿಬೇವು, ಪುದೀನಾ ಮುಂತಾದವು ಬಳಕೆಯಲ್ಲಿವೆ. ಇವೆಲ್ಲ ಸಾಮಾನ್ಯವಾಗಿ ತಾಜಾ ಆಗಿಯೇ ಬಳಸುವ ಸೊಪ್ಪುಗಳು. ಆದರೆ ಮೆಂತೆ ಸೊಪ್ಪು ಹಸಿಯಾಗಿ ಬಳಸಿದಂತೆಯೇ ಒಣಗಿದ್ದೂ ಬಳಕೆಯಲ್ಲಿದೆ. ಕಸೂರಿ ಮೇಥಿ ಎಂದು ಕರೆಯಲಾಗುವ ಈ ಸೊಪ್ಪು ಬಹಳಷ್ಟು ಅಡುಗೆಗಳ ಘಮ, ರುಚಿ ಹೆಚ್ಚಿಸುತ್ತದೆ. ಆದರೆ ಅಷ್ಟೇ ಅಲ್ಲ, ಆರೋಗ್ಯಕ್ಕೂ ಬಹಳಷ್ಟು ಲಾಭಗಳನ್ನು ಕಸೂರಿ ಮೇಥಿ (Benefits of Kasoori Methi) ತರಬಲ್ಲದು. ತೂಕ ಇಳಿಸುವಲ್ಲಿ ಮತ್ತು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸುವಲ್ಲಿ ಮೆಂತೆಯ ಗುಣಗಳು ಪ್ರಸಿದ್ಧವಾದವು. ಮೆಂತೆಯ ಬೀಜಗಳನ್ನು ಸೇವಿಸಿದರೂ, ಸೊಪ್ಪು ಬಳಸಿದರೂ ಪರಿಣಾಮ ಇದ್ದೇಇದೆ. ಬೆಳಗಿನ ಖಾಲಿ ಹೊಟ್ಟೆಯಲ್ಲಿ ಮೆಂತೆಯ ನೀರು ಕುಡಿಯುವುದು, ಕಷಾಯ ಸೇವಿಸುವುದು ಮುಂತಾದ ಕ್ರಮಗಳು ತೂಕ ಇಳಿಸುವವರಿಗೆ ಈಗಾಗಲೇ ತಿಳಿದಿರುವಂಥದ್ದೇ. ರುಚಿಯಲ್ಲಿ ಕಿರುಕಹಿಯನ್ನು ಹೊಂದಿರುವ ಇದು ಬಹಳಷ್ಟು ರೀತಿಯ ಅಡುಗೆಗಳಿಗೆ ಹೊಂದಿಕೊಳ್ಳುತ್ತದೆ.

ಕ್ಯಾಲರಿ ಕಡಿಮೆ

ಆದರೆ ಸತ್ವಗಳು ಹೆಚ್ಚು. ಒಂದಿಡೀ ಟೇಬಲ್‌ ಚಮಚ ಕಸೂರಿ ಮೇಥಿಯಲ್ಲಿ ಕೇವಲ 20 ಕ್ಯಾಲರಿ ದೇಹ ಸೇರುತ್ತದೆ. ಮೆಂತೆಯಲ್ಲಿರುವ ಎಲ್ಲ ಸೂಕ್ಷ್ಮ ಪೋಷಕಾಂಶಗಳ ಜೊತೆಗೆ ದೇಹಕ್ಕೆ ದೊರೆಯುವುದು ಹೆಚ್ಚಿನ ಕ್ಯಾಲರಿಗಳಲ್ಲ. ಹಾಗಾಗಿ ಯಾವುದೇ ಅಡುಗೆಗೆ ಇದನ್ನು ಸೇರಿಸಿದರೂ, ಹೆಚ್ಚಿನ ಯೋಚನೆ ಇಲ್ಲದೆಯೆ ಇದನ್ನು ಸವಿಯಬಹುದು.

ನಾರು ಹೆಚ್ಚು

ತೂಕ ಇಳಿಕೆಯಾಗಲೀ ಮಧುಮೇಹವನ್ನು ನಿಯಂತ್ರಿಸುವುದಾಗಲೀ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರು ಇರುವುದು ಆವಶ್ಯಕ. ಇದು ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸಿ, ಸತ್ವಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ. ಜೊತೆಗೆ ಹಸಿವಾಗುವುದನ್ನು ಮುಂದೂಡಿ, ಕಳ್ಳ ಹಸಿವೆಯನ್ನು ನಿಯಂತ್ರಿಸುತ್ತದೆ. ಮಾತ್ರವಲ್ಲ, ರಕ್ತದಲ್ಲಿ ಸಕ್ಕರೆಯ ಮಟ್ಟ ತ್ವರಿತವಾಗಿ ಏರಿಳಿಯುವುದನ್ನು ತಡೆಯುತ್ತದೆ.

ರುಚಿ, ಘಮ

ತಿನ್ನುವ ಆಹಾರಕ್ಕೆ ಘಮ, ರುಚಿ ಎರಡೂ ಚೆನ್ನಾಗಿದ್ದರೆ ತಿಂದ ತೃಪ್ತಿಯೂ ಹೆಚ್ಚುತ್ತದೆ. ಆಗ ಮತ್ತೆ ಮತ್ತೆ ತಿನ್ನುತ್ತಿರಬೇಕೆಂಬ ಬಯಕೆಯೂ ಕಾಡುವುದಿಲ್ಲ. ಹೆಚ್ಚಿನ ಎಣ್ಣೆ, ಕೊಬ್ಬು ಮತ್ತು ಸಾಸೇಜ್‌ಗಳನ್ನು ಉಪಯೋಗಿಸಿ ಆಹಾರವನ್ನು ರುಚಿಕಟ್ಟಾಗಿಸಿದರೆ ಕ್ಯಾಲರಿ ಹೆಚ್ಚಾಗಿಬಿಡುತ್ತದೆ. ಆದರೆ ಕಸೂರಿ ಮೇಥಿ ಹೆಚ್ಚಿನ ಕ್ಯಾಲರಿ ಇಲ್ಲದೆಯೂ ಆಹಾರದ ರುಚಿ ಹೆಚ್ಚಿಸುತ್ತದೆ ಎನ್ನುವುದು ಮುಖ್ಯ.

ಮಧುಮೇಹ ನಿಯಂತ್ರಣ

ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಳಿಯುವುದು ತೀವ್ರವಾದರೆ ಹಸಿವನ್ನು ನಿಯಂತ್ರಿಸುವುದು ಕಷ್ಟ. ಆದರೆ ಹೆಚ್ಚಿನ ನಾರುಭರಿತ ಆಹಾರಗಳ ಸೇವನೆಯಿಂದ ರಕ್ತಕ್ಕೆ ಗ್ಲೂಕೋಸ್‌ ತ್ವರಿತವಾಗಿ ಸೇರುವುದಿಲ್ಲ. ಹಾಗಾಗಿ ಕಸೂರಿ ಮೇಥಿ ಸೇವನೆಯಿಂದ ರೋಗ ನಿಯಂತ್ರಣಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ದೊರೆತು, ದೇಹ ಸ್ವಾಸ್ಥ್ಯ ಹೆಚ್ಚುತ್ತದೆ.

ಪಚನಕಾರಿ

ತೂಕ ಇಳಿಸುವುದಕ್ಕೆ ಜೀರ್ಣಾಂಗಗಳ ಕ್ಷಮತೆ ಹೆಚ್ಚಿರುವುದು ಅಗತ್ಯ. ಪಚನಾಂಗಗಳ ಸಾಮರ್ಥ್ಯ ಹೆಚ್ಚಿಸುವಲ್ಲಿ ಮೆಂತೆಯ ಶಕ್ತಿ ದೊಡ್ಡದು. ಪರಂಪರಾಗತ ಔಷಧಿಯಲ್ಲಿ ಅಜೀರ್ಣ ಸಂಬಂಧಿ ತೊಂದರೆಗಳಿಗೆ ಮೆಂತೆಯನ್ನು ಮದ್ದಾಗಿ ಬಳಸಲಾಗುತ್ತದೆ. ಅಜೀರ್ಣ ಮಾತ್ರವೇ ಅಲ್ಲ, ಹೊಟ್ಟೆನೋವು, ಹೊಟ್ಟೆ ಉಬ್ಬರ, ಮಲಬದ್ಧತೆಗೂ ಮೆಂತೆ ದಿವ್ಯೌಷಧ. ಜಠರವನ್ನು ಆರೋಗ್ಯಕರವಾಗಿ ಇರಿಸುವ ಮೆಂತೆ ಇಡೀ ದೇಹದ ಆರೋಗ್ಯವನ್ನು ವೃದ್ಧಿಸಬಲ್ಲದು.

ಉತ್ಕರ್ಷಣ ನಿರೋಧಕಗಳು

ಕಸೂರಿ ಮೇಥಿಯಲ್ಲಿ ಹಲವಾರು ಬಗೆಯ ಉತ್ಕರ್ಷಣ ನಿರೋಧಕಗಳಿವೆ. ಹಾಗಾಗಿ ಶರೀರದಲ್ಲಿನ ಉರಿಯೂತ ಶಮನಕ್ಕೆ ಅಗತ್ಯ ಕೆಲಸವನ್ನಿದು ಮಾಡಬಲ್ಲದು. ಇದರಿಂದ ಕೀಲುಗಳಲ್ಲಿ ನೋವು ಕಡಿಮೆಯಾಗಿ, ಹೆಚ್ಚು ಚಟುವಟಿಕೆಯಿಂದ ಇರುವುದಕ್ಕೆ ಸಾಧ್ಯ. ಊಟ, ಆರೋಗ್ಯ ಸೇರಿದಂತೆ ಬದುಕಿನ ಒಟ್ಟಾರೆ ಸೌಂದರ್ಯ ಹೆಚ್ಚಿಸುವಲ್ಲಿ ಇದು ನೆರವಾಗುತ್ತದೆ. ಯಾವುದೋ ಒಂದು ವಸ್ತು ಅಥವಾ ಆಹಾರದಿಂದ ತೂಕ ಇಳಿಸುವುದು ಅಸಾಧ್ಯ. ಜೀವನದ ಗುಣಮಟ್ಟ ಸುಧಾರಿಸುವುದಕ್ಕೆ ಸರಿಯಾದ ಆಹಾರ, ನಿದ್ದೆ ಮತ್ತು ವ್ಯಾಯಾಮ ಮುಖ್ಯವಾಗುತ್ತವೆ. ಆದರೆ ಕಸೂರಿ ಮೇಥಿಯಂಥ ಸಣ್ಣ ವಸ್ತುಗಳ ಸಹ ಆಹಾರದ ರುಚಿ, ಘಮ ಹೆಚ್ಚಿಸಿ, ಸ್ವಾಸ್ಥ್ಯ ವೃದ್ಧಿಸುವಂಥ ಕೆಲಸ ಮಾಡಬಲ್ಲವು.

ಇದನ್ನೂ ಓದಿ: Snake Bites: ಅಕಸ್ಮಾತ್‌ ಹಾವು ಕಚ್ಚಿದರೆ ಏನು ಮಾಡಬೇಕು? ಏನು ಮಾಡಬಾರದು?

Exit mobile version