ಮದುವೆಯಾಗಿದೆ, ಆದರೆ ಮಕ್ಕಳಾಗುತ್ತಿಲ್ಲ. ಇದು ಕೆಲವರ ಸಮಸ್ಯೆ. ಇತ್ತೀಚಿಗಿನ ದಿನಗಳಲ್ಲಿ ಹೆಚ್ಚು. ಮದುವೆಯಾದ ಆರಂಭದ ವರ್ಷಗಳಲ್ಲಿ, ಈಗಿನ್ನೂ ಮಗು ಬೇಡ, ಇಬ್ಬರೂ ವರ್ಕಿಂಗ್, ಮಕ್ಕಳಾದರೆ, ವೃತ್ತಿ ಜೀವನಕ್ಕೆ ಹಾಗೂ ವೈಯಕ್ತಿಕ ಜೀವನಕ್ಕೆ ತೊಡಕಾಗುತ್ತದೆ ಎಂದುಕೊಳ್ಳುವ ಜೋಡಿಗಳು, ಮೂರ್ನಾಲ್ಕು ವರ್ಷ ಕಳೆಯುತ್ತಲೇ ಯಾಕೆ ಮಕ್ಕಳಾಗುತ್ತಿಲ್ಲ ಎಂಬ ತಲೆಬಿಸಿಯಲ್ಲೂ ಒದ್ದಾಡುತ್ತಾರೆ. ʻಯಾಕಿನ್ನೂ ಗುಡ್‌ನ್ಯೂಸ್ ಕೊಡುತ್ತಿಲ್ಲ?ʼ ಎಂದು ಆಗಾಗ ನೆಂಟರಿಷ್ಟರೂ, ಹಿರಿಯರೂ, ಸ್ನೇಹಿತ ವರ್ಗವೂ ಕೇಳಿ ಕೇಳಿ ಅದರ ಒತ್ತಡವೂ ಮೊದಲೇ ಹೆಚ್ಚಾಗುತ್ತದೆ. ಹೀಗಾದಾಗ, ಮಗುವೇ ಬೇಡ ಎಂದುಕೊಂಡವರೂ ಕೂಡ, ಒಂದು ಮಗು ಮಾಡಿಕೊಳ್ಳೋಣ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ. ಆದರೆ, ಎಷ್ಟೇ ಪ್ರಯತ್ನಿಸಿದರೂ ಮಕ್ಕಳಾಗುತ್ತಿಲ್ಲ (Not having children) ಎಂಬುದು ಅವರ ಕೊರಗು.
ಒತ್ತಡ ಜೀವನ
ಇಬ್ಬರದೂ ಒತ್ತಡದ ವೃತ್ತಿಜೀವನ, ನಿತ್ಯವೂ ಕಂಪ್ಯೂಟರ್ ಪರದೆ ಮುಂದೆ ಕೆಲಸ, ಸುಸ್ತು, ಹೊತ್ತಲ್ಲದ ಹೊತ್ತಿನಲ್ಲಿ ಕೆಲಸ ಮಾಡಬೇಕಾಗುವುದು ಇತ್ಯಾದಿ ಆಧುನಿಕ ಜೀವನ ಶೈಲಿಯೂ ಒಂದು ಕಡೆಯಲ್ಲಿ ಕಾರಣವಿದ್ದರೆ, ಇನ್ನೂ ಇತರ ಕಾರಣಗಳೂ ಇರಬಹುದು. ಪುರುಷನಾಗಲೀ, ಮಹಿಳೆಯಾಗಲೀ ಕೇವಲ ಒಂದೇ ಕಾರಣದಿಂದ ಮಕ್ಕಳಾಗುತ್ತಿಲ್ಲ ಎಂಬ ಸಮಸ್ಯೆ ಉಂಟಾಗುವುದಿಲ್ಲ. ಇದಕ್ಕೆ ಹಲವು ಆಂತರಿಕ ಅಥವಾ ಹೊರಗಿನ ಜಗತ್ತಿನ ಕಾರಣಗಳೂ ಇರುತ್ತವೆ. ಹೀಗಾದಾಗ ಮೊದಲು ಗಮನ ಹರಿಸಬೇಕಾದದ್ದು ಯಾವುದಕ್ಕೆ? ಕೇವಲ ಮಾತ್ರೆ ಗುಳಿಗೆಗಳಿಂದ ಎಲ್ಲವೂ ಸರಿಹೋದೀತೇ? ಯಾವೆಲ್ಲ ಸಣ್ಣ ಸಣ್ಣ ಕ್ರಮಗಳ ಬದಲಾವಣೆಯಿಂದ ಮಕ್ಕಳಾಗುವ ಸಾಧ್ಯತೆಯನ್ನು ಹೆಚ್ಚು ಮಾಡಬಹುದು ನೋಡೋಣ.
ಋತುಚಕ್ರ ಗಮನಿಸಿ
ವೈದ್ಯರೇ ಮೊದಲು ಸಲಹೆ ಕೊಡುವಂತೆ, ಪ್ರತಿಯೊಬ್ಬ ಹೆಣ್ಣೂ ಮೊದಲು ಗಮನಿಸಬೇಕಾದ್ದು ತನ್ನ ಋತುಚಕ್ರವನ್ನು. ಋತುಚಕ್ರ ಸರಿಯಾಗಿದೆಯೇ ಎಂಬುದು ಇಲ್ಲಿ ಬಹಳ ಮುಖ್ಯವಾಗುತ್ತದೆ. 28 ದಿನಗಳ ಮಾಸಿಕ ಋತುಚಕ್ರ ನಿಮ್ಮದಾಗಿದ್ದರೆ, 14ನೇ ದಿನ ಅತ್ಯಂತ ಫಲಪ್ರದವಾದ ದಿನ. ಈ ಸಮಯದಲ್ಲಿ ಲೈಂಗಿಕ ಸಂಪರ್ಕ ನಡೆಸಿದರೆ ಮಕ್ಕಳಾಗುವ ಸಾಧ್ಯತೆ ಅತ್ಯಂತ ಹೆಚ್ಚು. ಹಾಗಾಗಿ, ಮಕ್ಕಳಾಗಬೇಕಿದ್ದರೆ ಮೊದಲು ನಿಮ್ಮ ಋತುಚಕ್ರವನ್ನು ಗಮನಿಸಿ. ಇದರಲ್ಲಿ ಏರುಪೇರಿದ್ದರೆ, ಅಥವಾ ಸರಿಯಾಗಿಲ್ಲ ಅನಿಸಿದರೆ ವೈದ್ಯರನ್ನು ಸಂಪರ್ಕಿಸಿ.
ಆಹಾರವೂ ಮುಖ್ಯ
ಸಂತಾನ ಸಾಧ್ಯತೆಯನ್ನು ಹೆಚ್ಚಿಸುವ ಆಹಾರವನ್ನು ತಿನ್ನಿ. ಹೌದು. ನಿಮಗೆ ಮಕ್ಕಳಾಗಬೇಕಿದ್ದರೆ, ಉತ್ತಮ ಆಹಾರಕ್ರಮವನ್ನು ಪಾಲಿಸಿ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಒಣಬೀಜಗಳು, ತಾಜಾ ಹಣ್ಣುಗಳು, ಹಸಿರು ಸೊಪ್ಪು ತರಕಾರಿಗಳು, ಒಳ್ಳೆಯ ಕೊಬ್ಬು ಹೀಗೆ ಎಲ್ಲ ಬಗೆಯ ಪೋಷಕಾಂಶಗಳೂ ಇರುವ ಸಂಪೂರ್ಣ ಆಹಾರವನ್ನು ತಿನ್ನಿ. ಮುಖ್ಯವಾಗಿ, ಫೋಲಿಕ್ ಆಸಿಡ್, ಝಿಂಕ್, ವಿಟಮಿನ್ ಇ ಇರುವ ಆಹಾರಗಳನ್ನು ಸೇವಿಸಿ. ಧಾನ್ಯಗಳು, ಬೇಳೆಕಾಳುಗಳು, ಒಣಬೀಜಗಳು ಇತ್ಯಾದಿಗಳನ್ನು ನಿತ್ಯವೂ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ. ನಿಮಗೆ ಪಿಸಿಒಡಿ ಸಮಸ್ಯೆ ಇದ್ದರೆ, ನೀವು ತೆಗೆದುಕೊಳ್ಳುವ ಕಾರ್ಬೋಹೈಡ್ರೇಟ್ ಮಟ್ಟದ ಮೇಲೆ ನಿಗಾ ಇರಲಿ. ಜಂಕ್‌ನಿಂದ ದೂರವಿರಿ.
ಜೀವನಶೈಲಿಯ ಪಾತ್ರವೂ ಇದೆ
ಮುಖ್ಯವಾಗಿ ಜೀವನಕ್ರಮದಲ್ಲಿ ಬದಲಾವಣೆ ಅತ್ಯಂತ ಅಗತ್ಯ. ರಾತ್ರಿ ನಿಗದಿತ ಸಮಯಕ್ಕೆ ನಿದ್ದೆ, ಬೆಳಗ್ಗೆ ನಿಗದಿತ ಸಮಯಕ್ಕೆ ಏಳುವುದನ್ನು ಅಭ್ಯಾಸ ಮಾಡಿ. ರಾತ್ರಿ ಹೆಚ್ಚು ಹೊತ್ತು ಗ್ಯಾಜೆಟ್ ಬಳಸುವುದು, ನೈಟ್ ಶಿಪ್ಟ್‌ನಲ್ಲಿ ಕೆಲಸ ಮಾಡುವುದು ಇತ್ಯಾದಿ ಒಳ್ಳೆಯದಲ್ಲ. ನಿಯಮಿತ ಯೋಗ ಅಥವಾ ಯಾವುದೇ ವ್ಯಾಯಾಮ, ನಡಿಗೆ ಮತ್ತಿತರ ಮಾದರಿಯಲ್ಲಿ ದೇಹವನ್ನು ಚುರುಕಾಗಿ ಇಟ್ಟುಕೊಳ್ಳುವುದು ಅತ್ಯಂತ ಅಗತ್ಯ. ಹಾಗಂತ ಅತಿಯಾದ ವ್ಯಾಯಾಮವೂ ಒಳ್ಳೆಯದಲ್ಲ.
ದುರಭ್ಯಾಸ ಬಿಡಿ
ಮಧ್ಯಪಾನ, ಧೂಮಪಾನ ಅಥವಾ ಇನ್ನಾವುದೇ ಕೆಟ್ಟ ಅನಾರೋಗ್ಯಕರ ಚಟಗಳಿದ್ದರೆ ಬಿಟ್ಟುಬಿಡಿ. ಇದು ಕೇವಲ ಮಹಿಳೆಯರಿಗೆ ಮಾತ್ರವಲ್ಲ. ಇಬ್ಬರಿಗೂ ಸಂಬಂಧಿಸಿದ್ದು.
೫. ಒತ್ತಡವಾಗದಂತೆ ನೋಡಿಕೊಳ್ಳಿ. ಮನಸ್ಸನ್ನು ಶಾಂತವಾಗಿರುವಂತೆ ನೋಡಿಕೊಳ್ಳಿ. ನಿಮಗೆ ಖುಷಿ ಕೊಡುವ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಕೆಲಸದ ಒತ್ತಡ, ಕುಟುಂಬದ ಒತ್ತಡ ಇತ್ಯಾದಿಗಳಿಂದ ಆದಷ್ಟೂ ದೂರವಿರಿ. ಮಕ್ಕಳಾಗುತ್ತಿಲ್ಲ ಎಂಬ ಒತ್ತಡವನ್ನೂ ಮಾಡಿಕೊಳ್ಳಬೇಡಿ. ಇದು ಹಾರ್ಮೋನನ್ನು ಏರುಪೇರಾಗಿಸುವ ಕಾರಣದಿಂದ ಮಕ್ಕಳಾಗಲು ಕಷ್ಟವಾಗುತ್ತದೆ.
ಇದನ್ನೂ ಓದಿ: Diet To Prevent Period Cramps: ಮುಟ್ಟಿನ ದಿನಗಳ ಹೊಟ್ಟೆ ನೋವಿಗೆ ಹೀಗಿದೆ ಪರಿಹಾರ