Site icon Vistara News

Kidney Stones: ಕಿಡ್ನಿ ಕಲ್ಲಿನ ಬಗ್ಗೆ ನಾವು ಈ ವಿಷಯ ತಿಳಿದಿರಬೇಕು

Kidney Stones


ಕಿಡ್ನಿ ಕಲ್ಲುಗಳೆಂದರೆ (Kidney stones) ಉಪ್ಪು ಅಥವಾ ಖನಿಜಗಳ ಗಟ್ಟಿಗಳು. ಮೂತ್ರನಾಳದ ಯಾವುದೇ ಭಾಗದಲ್ಲಿ, ಅಂದರೆ ಮೂತ್ರಪಿಂಡಗಳ ಒಳಗೆ, ಯುರೇಟರ್‌, ಬ್ಲಾಡರ್‌ ಅಥವಾ ಯುರೇತ್ರ ಭಾಗಗಳಲ್ಲಿ ಬೆಳೆಯುವ ಇವು ತೀವ್ರ ನೋವನ್ನು ತರುವಂಥವು. ಹಲವಾರು ಕಾರಣಗಳಿಂದ ಈ ಅವಸ್ಥೆ ತಲೆದೋರುತ್ತದೆ. ವಿಶ್ವದಲ್ಲಿ ಕೋಟಿಗಟ್ಟಲೆ ಜನ ಕಿಡ್ನಿ ಕಲ್ಲುಗಳ (Kidney stones) ತೊಂದರೆಯನ್ನು ಅನುಭವಿಸಿ, ಸಂಪೂರ್ಣ ಗುಣಮುಖರೂ ಆಗಿದ್ದಾರೆ. ಇದರ ಲಕ್ಷಣಗಳನ್ನು ಅರಿತರೆ, ಸೂಕ್ತ ಸಮಯಕ್ಕೆ ಇವುಗಳನ್ನು ಪತ್ತೆಹಚ್ಚಿ ಕಲ್ಲುಗಳಿಂದ ಮತ್ತದರ ನೋವಿನಿಂದ ಮುಕ್ತರಾಗಬಹುದು. ಔಷಧಿ ಮತ್ತು ಆಹಾರದ ಬಗ್ಗೆ ಗಮನ ನೀಡಿದರೆ, ಇವು ಮತ್ತೆ ಬೆಳೆಯದಂತೆ ಎಚ್ಚರಿಕೆಯನ್ನೂ ವಹಿಸಬಹುದು

ಏನಿದರ ಚಿಹ್ನೆಗಳು?

ಕಲ್ಲುಗಳು ಬೆಳೆಯುವ ಹಂತದಲ್ಲಿ ನೋವಿನ ಅನುಭವ ಆಗದೆಯೇ ಇರಬಹುದು. ಆದರೆ ಒಮ್ಮೆ ಗಟ್ಟಿಯಾಗ ಖನಿಜಗಳನ್ನು ಮೂತ್ರಪಿಂಡದಿಂದ ಹೊರದೂಡುವುದಕ್ಕೆಂದು ಸಂಚಲನ ಆರಂಭವಾಗುತ್ತಿದ್ದಂತೆ ನೋವಿನ ಅನುಭವವೂ ಶುರುವಾಗುತ್ತದೆ. ಕಿಬ್ಬೊಟ್ಟೆ ಮತ್ತು ಬೆನ್ನು, ಪಕ್ಕೆ ಮತ್ತು ತೊಡೆಗಳವರೆಗೂ ಈ ನೋವು ವ್ಯಾಪಿಸಬಹುದು. ಇದಲ್ಲದೆ, ಮೂತ್ರದಲ್ಲಿ ರಕ್ತದ ಚಿಹ್ನೆಗಳು, ವಾಕರಿಕೆ, ವಾಂತಿ, ಅಸ್ವಸ್ಥತೆ, ಮೂತ್ರದ ದುರ್ವಾಸನೆ, ಚಳಿ-ಜ್ವರ, ಪದೇಪದೆ ಮೂತ್ರಶಂಕೆ, ಸ್ವಲ್ಪವೇ ಮೂತ್ರ ವಿಸರ್ಜನೆ ಆಗುವುದು, ವಿರ್ಜನೆಯ ವೇಳೆಗೆ ನೋವು- ಇಂಥ ಕೆಲವು ಲಕ್ಷಣಗಳು ಕಾಣಬಹುದು.

ಕಾರಣಗಳೇನು?

ಹೆಚ್ಚಿನ ಜನರಲ್ಲಿ ಕಂಡುಬರುವಂಥವು ಕ್ಯಾಲ್ಶಿಯಂನಿಂದಾಗುವ ಕಲ್ಲುಗಳು. ಇದಲ್ಲದೆ ಯೂರಿಕ್ ಆಮ್ಲದಂಶವೂ ಕೆಲವೊಮ್ಮೆ ಕಲ್ಲುಗಳಿಗೆ ಕಾರಣವಾಗುತ್ತದೆ. ಸೋಂಕುಗಳಿಂದಲೂ ಈ ಅವಸ್ಥೆ ಕಾಡಬಹುದು. ಕೆಲವು ಔಷಧಿಗಳೂ ಇದಕ್ಕೆ ಕಾರಣವಾಗಬಹುದು. ಕಲ್ಲುಗಳು ಅತಿ ಸಣ್ಣ ಎಂದರೆ ಧೂಳಿನ ಕಣದಷ್ಟೂ ಇರಬಹುದು; ಪಿಂಗ್‌ಪಾಂಗ್‌ ಚೆಂಡಿನಷ್ಟೂ ಇರಬಹುದು. ಗಾತ್ರ ಸಣ್ಣದಿದ್ದಷ್ಟೂ ತನ್ನಷ್ಟಕ್ಕೇ ಹೊರಹಾಕುವುದಕ್ಕೆ ಮೂತ್ರಪಿಂಡಕ್ಕೆ ಸಾಧ್ಯವಾಗುತ್ತದೆ. ದೊಡ್ಡದಾದಷ್ಟು ನೋವು ಸಹ ಹೆಚ್ಚಾಗುತ್ತದೆ.

20ರಿಂದ 60 ವರ್ಷದವರಲ್ಲಿ ಈ ಸಮಸ್ಯೆ ಹೆಚ್ಚು ಕಾಣುತ್ತದೆ. ಅದರಲ್ಲೂ ಮಹಿಳೆಯರಿಗಿಂತ ಪುರುಷರಲ್ಲಿ ಇದರ ಸಾಧ್ಯತೆ ಹೆಚ್ಚು ಎನ್ನುತ್ತವೆ ಅಧ್ಯಯನಗಳು. ಅದಲ್ಲದೆ, ನಿರ್ಜಲೀಕರಣ, ಬೊಜ್ಜು, ಅತಿಯಾದ ಪ್ರೊಟೀನ್‌, ಉಪ್ಪು ಮತ್ತು ಗ್ಲೂಕೋಸ್‌ ಇರುವ ಆಹಾರಗಳ ಸೇವನೆ, ಜಠರದ ಉರಿಯೂತ, ಕೆಲವು ಔಷಧಗಳ ಸೇವನೆಯಂಥ ಕಾರಣಗಳಿಂದಲೂ ಕಿಡ್ನಿಯಲ್ಲಿ ಕಲ್ಲು ಬೆಳೆಯಬಹುದು.

ಏನು ಮಾಡಬೇಕು?

ಕಲ್ಲುಗಳ ಗಾತ್ರ ದೊಡ್ಡದಿಲ್ಲದಿದ್ದರೆ ಹೆಚ್ಚಿನ ಸಂದರ್ಭಗಳಲ್ಲಿ ತಾವೇ ಮೂತ್ರನಾಳದಿಂದ ಹೊರಟು ಹೋಗುತ್ತವೆ. ಇದಕ್ಕೆ ಚೆನ್ನಾಗಿ ನೀರು ಕುಡಿಯಬೇಕಷ್ಟೆ. ನೋವು ನಿವಾರಣೆಗೆ ಪಕ್ಕೆ ಅಥವಾ ಕೆಳಬೆನ್ನಿಗೆ ಬಿಸಿನೀರಿನ ಶಾಖ ನೀಡುವುದು ಪರಿಣಾಮಕಾರಿ. ಆದರೆ ಕಲ್ಲುಗಳು ತಮ್ಮಷ್ಟಕ್ಕೇ ಹೊರಗೆ ಹೋಗದಷ್ಟು ದೊಡ್ಡದಿದ್ದರೆ, ಅವುಗಳನ್ನು ಕರಗಿಸುವುದಕ್ಕೆ ವೈದ್ಯರು ಔಷಧಿ ನೀಡುತ್ತಾರೆ.

ನೋವು ನಿರ್ವಹಣೆ

ಅತಿಯಾದ ನೋವುಂಟು ಮಾಡುವ ಈ ಸಮಸ್ಯೆಗೆ ಕೆಲವೊಮ್ಮೆ ನೋವು ನಿವಾರಕ ಮಾತ್ರೆಗಳು ಬೇಕಾಗುತ್ತವೆ. ಸ್ಟಿರಾಯ್ಡ್‌ ಇಲ್ಲದ ಉರಿಯೂತದ ಔಷಧಗಳನ್ನು ವೈದ್ಯರು ನೀಡಬಹುದು. ಆದರೆ ವೈದ್ಯರ ಸಲಹೆ ಇಲ್ಲದೆ ಯಾವುದೇ ನೋವು ನಿವಾರಕಗಳನ್ನು ಅಥವಾ ಯಾವುದೇ ಔಷಧಗಳನ್ನು ನಿಮ್ಮಷ್ಟಕ್ಕೆ ನೀವೇ ಸೇವಿಸಬೇಡಿ. ಸಮಸ್ಯೆ ಹೆಚ್ಚಾಗಬಹುದು.

ಹೆಚ್ಚಿನ ಚಿಕಿತ್ಸೆ

ಆಲ್ಫಾ-ಬ್ಲಾಕರ್‌ಗಳನ್ನು ಒಳಗೊಂಡ ಔಷಧಿಗಳನ್ನು ವೈದ್ಯರು ನೀಡಬಹುದು. ಇವು ಮೂತ್ರನಾಳಗಳ ಸ್ನಾಯುಗಳಿಗೆ ವಿಶ್ರಾಂತಿ ನೀಡಿ, ಕಲ್ಲು ಹೊರಹೋಗುವಂತೆ ಮಾಡುತ್ತವೆ. ಕೆಲವೊಮ್ಮೆ ಲೇಸರ್‌ ಚಿಕಿತ್ಸೆಯಿಂದ ಕಲ್ಲುಗಳನ್ನು ಒಡೆದು ಸಣ್ಣದಾಗಿ ಮಾಡಲಾಗುತ್ತದೆ. ಇದರಿಂದಲೂ ಸಣ್ಣ ಚೂರುಗಳು ತಮ್ಮಷ್ಟಕ್ಕೇ ಹೊರಹೋಗುತ್ತವೆ. ಕಲ್ಲುಗಳು ತೀರಾ ದೊಡ್ಡದಾಗಿದ್ದರೆ, ತಮ್ಮಷ್ಟಕ್ಕೆ ತಾವೇ ಹೊರಹೋಗದಿದ್ದರೆ, ಮೂತ್ರನಾಳಗಳ ಸೋಂಕು ಅಥವಾ ಮೂತ್ರಪಿಂಡದ ಸಮಸ್ಯೆಯಿದ್ದರೆ ಶಸ್ತ್ರಚಿಕಿತ್ಸೆ ಬೇಕಾಗಬಹುದು.

ತಡೆಗಟ್ಟುವುದು

ಒಮ್ಮೆ ಈ ಸಮಸ್ಯೆ ಕಾಣಿಸಿಕೊಂಡರೆ, ಅದು ಮರುಕಳಿಸುವ ಸಾಧ್ಯತೆ ಇದ್ದೇಇರುತ್ತದೆ. ಹಾಗಾಗಿ ನೀರು ಮತ್ತಿತರ ದ್ರವಗಳ ಸೇವನೆಯನ್ನು ಹೆಚ್ಚುಹೆಚ್ಚಾಗಿ ಮಾಡಬೇಕು. ಉಪ್ಪು ಮತ್ತು ಪ್ರಾಣಿಜನ್ಯ ಪ್ರೊಟೀನ್‌ ಸೇವನೆ ಕಡಿಮೆ ಮಾಡಬೇಕು. ಪಾಲಕ್‌ ಸೊಪ್ಪು, ಚಾಕಲೇಟ್, ಆಲೂ ಚಿಪ್ಸ್‌, ಶೇಂಗಾ ಮುಂತಾದ ಆಕ್ಸಲೇಟ್‌ ಹೆಚ್ಚಿರುವ ಆಹಾರಗಳನ್ನು ವರ್ಜಿಸಬೇಕು.

FAQ

ಕಿಡ್ನಿ ಕಲ್ಲಿನ ಆರಂಭಿಕ ಲಕ್ಷಣಗಳೇನು?

ಮೂತ್ರನಾಳದ ಸೋಂಕಿನಂತೆ ಭಾಸವಾಗುವ ಚಿಹ್ನೆಗಳು ಮೊದಲಿಗೆ ಕಾಣಬಹುದು. ಕಿಬ್ಬೊಟ್ಟೆ, ಕೆಳಬೆನ್ನಿನಲ್ಲಿ ನೋವು ಬರಬಹುದು

ಯಾವ ವಯಸ್ಸಿನವರಿಗೆ ಈ ತೊಂದರೆ ಬರುತ್ತದೆ?

ಸಾಮಾನ್ಯವಾಗಿ, 20ರಿಂದ 60 ವರ್ಷ ವಯೋಮಾನದವರಿಗೆ ಇದು ಹೆಚ್ಚು ಕಾಣಿಸಿಕೊಳ್ಳುತ್ತದೆ. ಉಳಿದವರಿಗೆ ಈ ಸಮಸ್ಯೆ ಬರಬಾರದೆಂದಿಲ್ಲ

ಇದನ್ನೂ ಓದಿ: Keep Your Heart Healthy: ಹೀಗೆ ಮಾಡಿ ಹೃದಯವನ್ನು ಭದ್ರವಾಗಿಟ್ಟುಕೊಳ್ಳಿ!

Exit mobile version