ಮಕ್ಕಳಿಗೆ ಬೇಸಿಗೆ (kids Care) ರಜ ಬಂದಿದೆ. ಅವರೊಂದಿಗೆ ಎಲ್ಲಾದರೂ ತಿರುಗಾಡುವುದು ಈ ದಿನಗಳಲ್ಲಿ ಸಾಮಾನ್ಯ. ರೈಲು, ವಿಮಾನಗಳಲ್ಲಿ ಓಡಾಡಿದರೆ ಆ ಕತೆ ಬೇರೆ. ಆದರೆ ಬಸ್ಸು, ಕಾರುಗಳಲ್ಲಿ ಓಡಾಡಿದರೆ ಎಷ್ಟೋ ಮಕ್ಕಳು ಹೊಟ್ಟೆ ತೊಳೆಸಿ ವಾಂತಿ ಮಾಡುವುದು ಸಾಮಾನ್ಯ. ಅದರಲ್ಲೂ ನಾಲ್ಕಾರು ದಿನಗಳ ಕಾಲ ತಿರುಗಾಟದಲ್ಲೇ ಇರುವಂಥ ಪ್ರವಾಸವನ್ನು ಕೈಗೆತ್ತಿಕೊಳ್ಳುವಾಗ, ಹೀಗೆ ತಿಂದಿದ್ದೆಲ್ಲ ಮಗುಚುವ ಮಕ್ಕಳಿದ್ದರೆ ಹೆತ್ತವರ ಪಡಿಪಾಟಲು ಹೇಳತೀರದು. ಮೋಜು, ಮಸ್ತಿಯ ಬದಲು ಪ್ರವಾಸದಲ್ಲಿ ತಲೆಬಿಸಿಯೇ ತುಂಬಿಕೊಳ್ಳುತ್ತದೆ.
ಕಾರು, ಬಸ್ಸುಗಳು ಮಾತ್ರವಲ್ಲ, ಅಮ್ಯೂಸ್‌ಮೆಂಟ್ ಪಾರ್ಕುಗಳಿಗೆ ಹೋದರೂ ಪರಿಸ್ಥಿತಿ ಭಿನ್ನವಾಗಿರುವುದಿಲ್ಲ. ಯಾವುದೇ ತಿರುಗಿಸುವ ರೈಡ್‌ಗಳಿಗೆ ಹತ್ತಿದರೆ, ಹೊಟ್ಟೆಯೆಲ್ಲ ತಿರುಗುವುದೇ! ವಯಸ್ಕರಿಗೂ ಇಂಥವೆಲ್ಲ ಆಗಬಾರದೆಂದಿಲ್ಲ. ಆದರೆ ದೊಡ್ಡವರಿಗೆ ಹೋಲಿಸಿದಲ್ಲಿ ಮಕ್ಕಳಲ್ಲಿ ಈ ಪ್ರಯಾಣದ ಅಸ್ವಸ್ಥತೆಯ ಪ್ರಮಾಣ ಹೆಚ್ಚು. ಇನ್ನೂ ಬೆಳೆಯದ ಅವರ ವೆಸ್ಟಿಬ್ಯುಲರ್ ವ್ಯವಸ್ಥೆಯೇ ಇದಕ್ಕೆ ಕಾರಣ ಎನ್ನುತ್ತದೆ ವೈದ್ಯ ವಿಜ್ಞಾನ. ಆದರೆ ಇದರಲ್ಲೇ ಕೊಂಚ ವ್ಯತ್ಯಾಸವಿದೆ. ದೊಡ್ಡವರು ಅನುಭವಿಸಿದಂತೆ ಮಾಮೂಲಿ ಹೊಟ್ಟೆ ತೊಳೆಸುವುದನ್ನಷ್ಟೇ ಈ ಮಕ್ಕಳು ಅನುಭವಿಸುವುದಿಲ್ಲ. ಬದಲಿಗೆ, ಸುಸ್ತು, ಆಯಾಸ, ಕಿರಿಕಿರಿ, ತಲೆ ಸುತ್ತಿದ ಅನುಭವ, ವಿಪರೀತ ಆಕಳಿಸುವುದು, ನಿದ್ದೆ ಬಂದಂತಾಗುವುದು- ಇವೆಲ್ಲ ಲಕ್ಷಣಗಳನ್ನು ಮಕ್ಕಳಲ್ಲಿ ಗಮನಿಸಬಹುದು.
ನಿಯಂತ್ರಣ ಹೇಗೆ?
ಮಕ್ಕಳಲ್ಲಿ ಕಾಣುವ ಈ ಲಕ್ಷಣಗಳನ್ನು ನಿಭಾಯಿಸಲು ಸಾಧ್ಯವೇ? ಮಕ್ಕಳು ಪ್ರೌಢಾವಸ್ಥೆಗೆ ಬಂದಂತೆ ಪ್ರಯಾಣದ ಅಸ್ವಸ್ಥತೆಯು ತನ್ನಷ್ಟಕ್ಕೇ ಕಡಿಮೆಯಾಗಬಹುದು; ಆಗದೆಯೂ ಇರಬಹುದು. ಅದೇನೇ ಇದ್ದರು, ಆಯಾ ಪ್ರವಾಸಗಳು ಪ್ರಯಾಸಕರ ಆಗದಂತೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ.
ಪ್ರಯಾಣ ದೀರ್ಘವಾಗಿದ್ದರೆ, ಅದನ್ನು ತುಂಡರಿಸಿ. ಉದಾ, ಆರೆಂಟು ತಾಸುಗಳ ಪ್ರಯಾಣವಿದ್ದರೆ, ಅದನ್ನು ಪ್ರತಿ ಎರಡು ತಾಸುಗಳಿಗೆ ತುಂಡರಿಸಲು ಸಾಧ್ಯವೇ ನೋಡಿ. ನಡುವೆ ಚಹಾ, ತಿಂಡಿ ಅಥವಾ ಊಟದ ವಿರಾಮವನ್ನು ಅಳವಡಿಸಿಕೊಳ್ಳಲು ಅವಕಾಶವಿದ್ದರೆ ಇನ್ನೂ ಒಳ್ಳೆಯದು. ಪ್ರಯಾಣಿಸುತ್ತಿರುವ ವಾಹನದಲ್ಲಿ ಸಾಕಷ್ಟು ತಾಜಾ ಗಾಳಿ ಇರಲಿ. ಕಿಟಕಿಗಳೆಲ್ಲ ಮುಚ್ಚಿದ್ದು, ಉಸಿರು ಕಟ್ಟುವಂತಿದ್ದರೆ ಪ್ರಯಾಣದ ಅಸ್ವಸ್ಥತೆ ಇನ್ನಷ್ಟು ಬಾಧಿಸುತ್ತದೆ.
ಸ್ಕ್ರೀನ್ ಬೇಡ
ಪ್ರಯಾಣಿಸುವಾಗ ಓದುವುದು, ಸ್ಕ್ರೀನ್ ನೋಡುವುದು ಬೇಡ. ಇದರಿಂದ ಹೊಟ್ಟೆಯ ತಳಮಳ ಇನ್ನಷ್ಟು ಹೆಚ್ಚುತ್ತದೆ. ಇದರ ಬದಲಿಗೆ ಕಿಟಕಿಯಾಚೆಯ ಲೋಕ ಎಷ್ಟು ಸುಂದರವಾಗಿದೆ ಎಂಬುದನ್ನು ಗಮನಿಸಬಹುದು. ನಮ್ಮೊಂದಿಗೇ ಓಡುವ ಸೂರ್ಯ-ಚಂದ್ರರೊಂದಿಗೆ ಮೋಜು ಮಾಡಬಹುದು. ಕಿವಿಗೆ ಇಯರ್‌ಫೋನ್ ಹಾಕಿ ಬೇಕಾದ್ದನ್ನು ಕೇಳಬಹುದು. ಅಂತೂ ಕಣ್ಣಿಗೆ ಕೆಲಸ ನೀಡದೆಯೇ, ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಆಗಬೇಕಿದೆ.
ಶುಂಠಿ ಪೆಪ್ಪರಮಿಂಟು
ಶುಂಠಿ ಮಿಠಾಯಿಗಳು, ಪೆಪ್ಪರಮಿಂಟುಗಳು, ಜಿಂಜರ್ ಕುಕಿಗಳು ಅಥವಾ ಶುಂಠಿ ಪಾನಕದಂಥವು ಇಂಥ ಸಮಯದಲ್ಲಿ ನೆರವಾಗಬಹುದು. ಒಂದೊಮ್ಮೆ ಶುಂಠಿಯ ಘಾಟು ಇಷ್ಟವಾಗದಿದ್ದರೆ, ನಿಂಬೆಹಣ್ಣಿನ ಸಿಪ್ಪೆಯ ಸೊನೆ, ಕಿತ್ತಳೆ ಸಿಪ್ಪೆಯ ಸೊನೆ, ಏಲಕ್ಕಿಯ ಪರಿಮಳ- ಇಂಥವೆಲ್ಲ ಹೊಟ್ಟೆ ತೊಳೆಸುವುದು ಮತ್ತು ಓಕರಿಕೆಯನ್ನು ನಿಯಂತ್ರಿಸುತ್ತವೆ. ಕೆಲವು ಅಕ್ಯುಪ್ರೆಷರ್ ಬಿಂದುಗಳಲ್ಲಿ ಒತ್ತುವುದರಿಂದಲೂ ಹೊಟ್ಟೆಯ ತಳಮಳವನ್ನು ನಿಯಂತ್ರಿಸಬಹುದು.
ಆಹಾರ ಲಘುವಾಗಿರಲಿ
ಪ್ರಯಾಣ ಮಾಡುವುದಿದೆ ಎಂಬುದು ಗೊತ್ತಿರುವಾಗ, ಮಕ್ಕಳ ಆಹಾರ ಲಘುವಾಗಿರಲಿ. ಕರಿದ ಅಥವಾ ಜಿಡ್ಡಿನ ತಿಂಡಿಗಳು, ಅತಿಯಾದ ಹುಳಿ ರುಚಿಯವು, ಖಾರ-ಮಸಾಲೆ ಹೊಂದಿದವು, ಹೊಟ್ಟೆ ಉಬ್ಬರಿಸುವಂಥವು ಪ್ರಯಾಣಕ್ಕೆ ಮುನ್ನ ಬೇಡ. ಸುಲಭವಾಗಿ ಜೀರ್ಣವಾಗಲು ಲಘು ಆಹಾರ ಸೇವಿಸುವುದು ಒಳ್ಳೆಯದು. ನೀರು ಸಾಕಷ್ಟು ಕುಡಿಯುವುದು ಸೂಕ್ತ. ಮಗುವಿಗೆ ಸಾಕಷ್ಟು ವಿಶ್ರಾಂತಿ ನೀಡಿ. ಅರ್ಧ ನಿದ್ದೆಯಲ್ಲಿ ಎಬ್ಬಿಸುವುದು ಅಸ್ವಸ್ಥತೆಯನ್ನು ಇಮ್ಮಡಿಕೊಳಿಸುತ್ತದೆ.
ದೀರ್ಘ ಉಸಿರಾಟದಂಥವು, ಮಾನಸಿಕವಾಗಿ ಮಗುವಿನ ಪ್ರಯಾಣದ ಆತಂಕವನ್ನು ಕಡಿಮೆ ಮಾಡಬಲ್ಲದು. ಕೆಲವೊಮ್ಮೆ ಪ್ರಯಾಣದ ಬಗೆಗಿನ ಆತಂಕ, ಅತಿ ಉತ್ಸುಕತೆ ಸಹ ಹೊಟ್ಟೆಯಲ್ಲಿ ತಳಮಳ ಸೃಷ್ಟಿಸುತ್ತದೆ ಅಥವಾ ಇದ್ದಿದ್ದನ್ನು ಹೆಚ್ಚಿಸುತ್ತದೆ. ಇಷ್ಟಾಗಿಯೂ ಪ್ರಯಾಣದಲ್ಲಿ ಪದೇಪದೆ ವಾಂತಿಯಾಗುತ್ತಿದ್ದು, ಅಸ್ವಸ್ಥತೆ ಹೆಚ್ಚಿದರೆ, ವೈದ್ಯರನ್ನು ಸಂಪರ್ಕಿಸಿ. ಅವರ ಸಲಹೆಯ ಮೇರೆಗೆ ವಾಂತಿ ನಿಲ್ಲಿಸುವ ಔಷಧಿ ನೀಡಿ.
ಇದನ್ನೂ ಓದಿ: Eating Ice Cream In Summer: ಬೇಸಿಗೆಯಲ್ಲಿ ಐಸ್‌ಕ್ರೀಮ್ ತಿನ್ನುವುದರಿಂದ ಸೆಖೆ ಮತ್ತೂ ಹೆಚ್ಚಾಗುತ್ತದೆ ಗೊತ್ತೆ?