Site icon Vistara News

Healthy Foods For Kidney: ಕಿಡ್ನಿಯ ಆರೋಗ್ಯವರ್ಧನೆಗೆ ಈ ಕೆಳಗಿನ ಆಹಾರಶೈಲಿಯ ಬಗೆಗೆ ಗೊತ್ತಿರಲಿ!

Healthy Foods For Kidney

ಕಿಡ್ನಿಯ ಆರೋಗ್ಯ ಸಮತೋಲನದಲ್ಲಿ ಇಟ್ಟುಕೊಳ್ಳಲು ಯಾವಾಗಲೂ ಸಮತೋಲಿತ ಆಹಾರ ಬಹಳ ಮುಖ್ಯ. ಆಹಾರದ ವಿಚಾರದಲ್ಲಿ ಎಚ್ಚರಿಕೆ ಇಲ್ಲದೆ ಹೋದರೆ, ಕಿಡ್ನಿಯ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ ಎಂದೇ ಅರ್ಥ. ಯಾಕೆಂದರೆ, ಕಿಡ್ನಿಗೆ ಅತಿಯಾದ ಕೆಲಸ, ಒತ್ತಡ ನೀಡುವ ಮೂಲಕವೇ ನಾವು ಕಿಡ್ನಿಯ ಆರೋಗ್ಯವನ್ನು ಹದಗೆಡಿಸಲು ಕಾರಣ. ಸೋಡಿಯಂ, ಪೊಟಾಶಿಯಂ, ಪಾಸ್ಪರಸ್‌ ಮತ್ತಿತರ ಖನಿಜಾಂಶಗಳನ್ನು ಅತಿಯಾಗಿಸದೆ, ಕಿಡ್ನಿಯ ಮೇಲೆ ಒತ್ತಡ ಬೀಳದಂತೆ ನೋಡಿಕೊಂಡರೆ, ಕಿಡ್ನಿಯ ತೊಂದರೆಗಳನ್ನು ತಪ್ಪಿಸಬಹುದು. ಹಾಗಾಗಿ ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಹಂಪಲುಗಳ ಸೇವನೆ, ತರಕಾರಿ, ಧಾನ್ಯಗಳು, ಬೇಳೆಕಾಳುಗಳು ಇತ್ಯಾದಿಗಳ ಸೇವನೆ ಬಹಳ ಮುಖ್ಯ. ಪ್ರೊಟೀನ್‌ ಸೇರಿದಂತೆ ಎಲ್ಲ ಬಗೆಯ ಪೋಷಕಾಂಶಗಳೂ ಇರುವ ಸಮೃದ್ಧ ಆಹಾರದ ಸೇವನೆ ಅತೀ ಅಗತ್ಯ. ಹಾಗಾದರೆ ಬನ್ನಿ, ಕಿಡ್ನಿಗೆ ಒತ್ತಡ ಬೀಳದಂತೆ ಕಿಡ್ನಿಯ ಆರೋಗ್ಯವನ್ನು ಹೆಚ್ಚಿಸುವ ಯಾವ ಬಗೆಯ ಆಹಾರ ಕ್ರಮವನ್ನು (healthy foods for kidney) ನಾವು ಅನುಸರಿಸಬಹುದು ಎಂಬುದನ್ನು ನೋಡೋಣ.

ಹಣ್ಣು ಹಂಪಲುಗಳನ್ನು ಮರೆಯಲೇಬಾರದು

ಆರೋಗ್ಯಕರ ಕಿಡ್ನಿಗಳ ವಿಚಾರಕ್ಕೆ ಬಂದಾಗ ಹಣ್ಣು ಹಂಪಲುಗಳನ್ನು ಮರೆಯಲೇಬಾರದು. ಪೇರಳೆ, ಸೇಬು, ಪೀಯರ್‌, ಪಪ್ಪಾಯಿ ಹಾಗೂ ಅನನಾಸು ಈ ಐದು ಹಣ್ಣುಗಳು ಕಿಡ್ನಿ ಸ್ನೇಹಿ. ಇವು ಕಿಡ್ನಿಗೆ ಹಾನಿಯಾಗುವುದನ್ನು ತಪ್ಪಿಸಿ, ಕಿಡ್ನಿಯನ್ನು ಆರೋಗ್ಯವಾಗಿಸುತ್ತವೆ.

ಕಬ್ಬಿಣಾಂಶ ಇರುವ ಆಹಾರಗಳು

ವಿಟಮಿನ್‌ ಕೆ ಹಾಗೂ ಕಬ್ಬಿಣಾಂಶ ಇರುವ ಆಹಾರಗಳು ಯಾವಾಗಲೂ ಕಿಡ್ನಿಗೆ ಒಳ್ಳೆಯದನ್ನೇ ಮಾಡುತ್ತವೆ. ಹೀಗಾಗಿ ಈ ಪೋಷಕಾಂಶಗಳು ಹೆಚ್ಚಿರುವ ತರಕಾರಿಗಳನ್ನು ಸೇವನೆ ಮಾಡಿ. ಹಸಿರು ತರಕಾರಿಗಳಲ್ಲಿ ಇವು ಹೆಚ್ಚಿದ್ದು, ಬಸಳೆ, ಕಾಳೆ, ಬ್ರೊಕೋಲಿ, ಕ್ಯಾಬೇಜ್‌ ಇತ್ಯಾದಿಗಳನ್ನು ಸೇವಿಸಬಹುದು. ಆದರೆ ಹಿತಮಿತವಾಗಿರಲಿ.

ಪ್ರೊಟೀನ್‌ ಆಹಾರ ಸೂಕ್ತ

ಮೀನು ಹಾಗೂ ಟೋಫು ಸೇರಿದಂತೆ, ಪ್ರೊಟೀನ್‌ ಹೆಚ್ಚಿರುವ ಆಹಾರಗಳು ಕಿಡ್ನಿಗೆ ಅತ್ಯಂತ ಒಳ್ಳೆಯದು. ಈ ಆಹಾರಗಳು ಕಿಡ್ನಿಯ ಮೇಲಿನ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತವೆ.

ಧಾನ್ಯಗಳ ಸೇವನೆ

ಧಾನ್ಯಗಳ ಸೇವನೆ ಕಿಡ್ನಿಗೆ ಅತ್ಯಂತ ಅಗತ್ಯ. ಕುಚ್ಚಲಕ್ಕಿ, ಕ್ವಿನೋವಾ, ಇವೆರಡೂ ಆಹಾರಗಳು ಕಿಡ್ನಿಯ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನೂ ಸಮತೋಲನದಲ್ಲಿಡಲು ನೆರವಾಗುತ್ತದೆ.
ಆಹಾರ ಸೇವನೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರದತ್ತ ಗಮನ ಹರಿಸಿದರೆ, ಕಿಡ್ನಿ ಸಂಬಂಧಿತ ಸಮಸ್ಯೆಗಳು ಬಾರದು. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು, ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವುದು ಕಿಡ್ನಿಯ ಆರೋಗ್ಯಕ್ಕೆ ಬಹಳ ಮುಖ್ಯ. ಡಯಟ್‌ ಅಥವಾ ಇನ್ಯಾವುದೋ ಹೆಸರಿನಲ್ಲಿ ಇದ್ದಕ್ಕಿದ್ದಂತೆ ಆಹಾರಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಇತ್ಯಾದಿಗಳಿಂದ ಕಿಡ್ನಿಯ ಮೇಲೆ ಒತ್ತಡ ಬೀಳುತ್ತದೆ.

ಕೆಲವು ಆಹಾರಗಳಿಂದ ದೂರ ಇರಬೇಕು

ಕಿಡ್ನಿಯ ತೊಂದರೆ, ಸಮಸ್ಯೆ ಇದ್ದವರು, ಕೆಲವು ಆಹಾರಗಳನ್ನು ದೂರವಿಡುವುದನ್ನು ಮರೆಯಬಾರದು. ಬ್ರೆಡ್‌ ಮತ್ತಿತರ ಸಂಸ್ಕರಿಸಿದ ಆಹಾರಗಳು, ಕ್ಯಾನ್‌ನಲ್ಲಿ ಸಂರಕ್ಷಿಸಲ್ಪಟ್ಟ ಆಹಾರಗಳು, ಬೆಣ್ಣೆಹಣ್ಣು, ಬಾಳೆಹಣ್ಣು, ಕಿತ್ತಳೆ, ಕೆಲವು ಒಣ ಹಣ್ಣುಗಳು, ಟೊಮೆಟೋ, ಸಂಸ್ಕರಿಸಿದ ಮಾಂಸ, ಉಪ್ಪಿನಕಾಯಿ, ಆಲೂಗಡ್ಡೆ ಇತ್ಯಾದಿಗಳನ್ನು ಕಡಿಮೆ ಮಾಡುವುದು ಒಳ್ಳೆಯದು. ಏನೇ ಕಿಡ್ನಿಯ ಸಮಸ್ಯೆ ಇದ್ದರೂ ವೈದ್ಯರ ಸಲಹೆಯ ಪ್ರಕಾರ ಆಹಾರಕ್ರಮವನ್ನು ರೂಢಿಸಿಕೊಳ್ಳುವುದು ಒಳ್ಳೆಯದು.

Exit mobile version