Site icon Vistara News

Benefits Of Pear: ಪೇರ್‌ ಎಂಬ ರಸಭರಿತ ಹಣ್ಣಿನ ಮಹತ್ವ ತಿಳಿದಿರಲಿ…

Benefits Of Pear

ಪೌಷ್ಟಿಕಾಂಶಯುಕ್ತ ಆಹಾರಗಳ ಮಹಾಪೂರದಲ್ಲಿ ನಮಗೆ ಬೇಕಾದ್ದನ್ನು ಆಯ್ದುಕೊಳ್ಳುವುದು ಕೆಲವೊಮ್ಮೆ ಕಷ್ಟವೇ ಆಗಬಹುದು. ಕೆಲವು ಆಹಾರಗಳು ರುಚಿಗಾಗಿ ಗಮನ ಸೆಳೆದರೆ, ಕೆಲವು ಸತ್ವಗಳಿಗಾಗಿ ಹೆಸರುವಾಸಿಯಾಗಿವೆ. ಇನ್ನೂ ಕೆಲವು ಈ ಎರಡೂ ವಿಭಾಗಗಳಲ್ಲಿ ಗೆಲ್ಲುವಂಥವು. ಅಂಥವುಗಳಲ್ಲಿ ಪೇರ್‌ ಹಣ್ಣು ಸಹ ಒಂದು. ನೋಡುವುದಕ್ಕೆ ಮರಸೇಬಿನ ಸೋದರ ಸಂಬಂಧಿಯಂತೆ ಕಾಣುವ ಪೇರ್‌, ರುಚಿಯಲ್ಲಿ ಕೊಂಚ ಭಿನ್ನವಾದರೂ, ಅದೇ ಜಾತಿಗೆ ಸೇರಿದ ಫಲ. ಏನಿದರ ಆರೋಗ್ಯ ಸತ್ವಗಳು (Benefits of Pear) ಎಂಬುದನ್ನು ನೋಡೋಣ.

ರಸಭರಿತ ಸಿಹಿಯಾದ ಪೇರ್‌ಗಳಲ್ಲಿ ಹಲವು ವಿಧದ ಖನಿಜಗಳು, ವಿಟಮಿನ್‌ಗಳು ಮತ್ತು ಜೀವಸತ್ವಗಳು ತುಂಬಿವೆ. ಇದರಲ್ಲಿರುವ ನಾರು ಮತ್ತು ಉತ್ಕರ್ಷಣ ನಿರೋಧಕಗಳು ದೇಹಕ್ಕೆ ಸಂಪೂರ್ಣ ಸತ್ವಗಳನ್ನು ನೀಡುವಂಥ ಸ್ವರೂಪದವು. ಇವುಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಕೊಂಡಲ್ಲಿ, ನಮ್ಮ ಆರೋಗ್ಯಕ್ಕೆ ಹಲವು ರೀತಿಯ ಲಾಭಗಳು ದೊರೆಯುತ್ತವೆ.
ಇದರಲ್ಲಿರುವ ಸತ್ವಗಳೇನು ಎಂಬುದನ್ನೀಗ ನೋಡೋಣ. ಪ್ರತಿ ನೂರು ಗ್ರಾಂ ಪೇರ್‌ ಹಣ್ಣಿನಲ್ಲಿ, 86.5ರಷ್ಟು ನೀರು, 0.4 ಗ್ರಾಂ ಪ್ರೊಟೀನ್‌, 2.2 ಗ್ರಾಂ ನಾರು, 10 ಗ್ರಾಂ ಶರ್ಕರ ಪಿಷ್ಟಗಳು, 0.5 ಗ್ರಾಂನಷ್ಟು ಖನಿಜಗಳು, 0.1 ಗ್ರಾಂ ಕೊಬ್ಬು ಇದೆ. ಇದರಲ್ಲಿ ಕ್ಯಾಲ್ಶಿಯಂ, ಫಾಸ್ಫರಸ್‌, ಕಬ್ಬಿಣ, ಎ ಮತ್ತು ಸಿ ವಿಟಮಿನ್‌ಗಳು, ರೈಬೊಫ್ಲೇವಿನ್‌, ಥಿಯಾಮಿನ್‌ ಮುಂತಾದ ಬಿ ವಿಟಮಿನ್‌ಗಳಿವೆ.

ನಾರುಭರಿತ

ಪೇರ್‌ ಹಣ್ಣಿನ ಪ್ರಮುಖ ಅಂಶವೆಂದರೆ ಇದರಲ್ಲಿರುವ ನಾರಿನಂಶ. ನಮ್ಮ ಜೀರ್ಣಾಂಗಗಳನ್ನು ಸುಸೂತ್ರವಾಗಿ ಇರಿಸುವುದಕ್ಕೆ ಬೇಕಾದ ಹಲವು ಅಂಶಗಳಲ್ಲಿ ನಾರು ಪ್ರಮುಖವಾದದ್ದು. ಇದರಲ್ಲಿರುವ ಕರಗಬಲ್ಲಂಥ ನಾರಿನಂಶ ಕೊಬ್ಬು ಕರಗುವುದಕ್ಕೆ ನೆರವಾಗುತ್ತದೆ. ಕರಗದಿರುವ ನಾರಿನಂಶ ಮಲಬದ್ಧತೆಯನ್ನು ನಿವಾರಿಸಿ, ಜೀರ್ಣಾಂಗಗಳನ್ನು ಸುಸ್ಥಿತಿಯಲ್ಲಿ ಇರಿಸುತ್ತದೆ.

ಉತ್ಕರ್ಷಣ ನಿರೋಧಕಗಳು ಹೇರಳ

ಇದರಲ್ಲಿ ವಿಟಮಿನ್‌ ಸಿ ಮತ್ತು ತಾಮ್ರದ ಗುಣಗಳು ಭರಪೂರ ಇದೆ. ಈ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಉರಿಯೂತ ತಗ್ಗಿಸಲು ನೆರವಾಗುತ್ತವೆ. ದೇಹದಲ್ಲಿರುವ ಮುಕ್ತ ಕಣಗಳನ್ನು ನಿರ್ಬಂಧಿಸಿ, ಮಾರಕ ರೋಗಗಳನ್ನು ತಡೆಗಟ್ಟುವ ಸಾಮರ್ಥ್ಯ ಈ ಉತ್ಕರ್ಷಣ ನಿರೋಧಕಗಳಿಗೆ ಇದೆ. ಇದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಿ, ಸೋಂಕುಗಳೊಂದಿಗೆ ಹೋರಾಡುವುದಕ್ಕೆ ದೇಹ ಸನ್ನದ್ಧವಾಗಿರುತ್ತದೆ.

ಹೃದಯಕ್ಕೆ ಮಿತ್ರ

ಉತ್ಕರ್ಷಣ ನಿರೋಧಕಗಳ ಜೊತೆಗೆ, ನಾರು ಮತ್ತು ಪೊಟಾಶಿಯಂ ಸಹ ಈ ಹಣ್ಣು ಹೊಂದಿದೆ. ಇದರಿಂದ ಕೊಲೆಸ್ಟ್ರಾಲ್‌ ಕಡಿತ ಮಾಡಿ, ರಕ್ತದೊತ್ತಡ ನಿಯಂತ್ರಣಕ್ಕೂ ನೆರವು ದೊರೆಯುತ್ತದೆ. ಹಾಗಾಗಿ ಈ ರುಚಿಕರ ಮತ್ತು ರಸಭರಿತ ಹಣ್ಣು ನಮ್ಮ ಹೃದಯದ ಆರೋಗ್ಯವನ್ನೂ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಬಲ್ಲದು.
ಶಕ್ತಿ ಸಂಚಯನ:
ಈ ಹಣ್ಣಿನ ರುಚಿ ಸಿಹಿ. ಇದರಲ್ಲಿರುವ ನೈಸರ್ಗಿಕ ಫ್ರಕ್ಟೋಸ್‌ ಮತ್ತು ಗ್ಲುಕೋಸ್‌ ಅಂಶಗಳು ದೇಹ ಬಳಲದಂತೆ ಕಾಪಾಡುತ್ತವೆ. ಆಯಾಸವಾದ ಸಂದರ್ಭದಲ್ಲಿ ಕೃತಕ ಎನರ್ಜಿ ಪೇಯಗಳ ಮೊರೆ ಹೋಗದೆ, ರಸಭರಿತ ಪೇರೊಂದನ್ನು ಸೇವಿಸುವುದು ನಿಜಕ್ಕೂ ಜಾಣತನ. ಇದರಿಂದ ದೇಹಕ್ಕೆ ನೀರು ಮತ್ತು ನೈಸರ್ಗಿಕ ಸಕ್ಕರೆಗಳೆರಡೂ ದೊರೆಯುತ್ತವೆ. ಜೊತೆಗೆ, ಖನಿಜಗಳು ಮತ್ತು ನಾರಿನಂಥ ಹೆಚ್ಚುವರು ಲಾಭಗಳಂತೂ ಇದ್ದೇಇದೆ.

ಚರ್ಮಕ್ಕೆ ಹೊಳಪು

ಇದರಲ್ಲಿರುವ ವಿಟಮಿನ್‌ ಎ ಮತ್ತು ಸಿ ಅಂಶವು ಚರ್ಮದ ಕಾಂತಿಯನ್ನು ವೃದ್ಧಿಸುತ್ತದೆ. ದೇಹದಲ್ಲಿರುವ ಮುಕ್ತ ಕಣಗಳನ್ನು ನಿರ್ಬಂಧಿಸುವ ಸಿ ಜೀವಸತ್ವದಂಥ ಉತ್ಕರ್ಷಣ ನಿರೋಧಕಗಳು, ಚರ್ಮದ ಕಾಂತಿಯ ಮೇಲೂ ಪರಿಣಾಮ ಬೀರುತ್ತವೆ. ಸರ್ಮ ಸುಕ್ಕಾಗುವುದು ಮತ್ತು ಹೊಳಪು ಕಳೆದುಕೊಳ್ಳುವುದನ್ನು ತಡೆದು, ತನುಕಾಂತಿಯನ್ನು ಹೆಚ್ಚಿಸುತ್ತವೆ. ಹಾಗಾಗಿ ಪೇರ್‌ ಹಣ್ಣಿನ ನಿಯಮಿತ ಸೇವನೆ ಆರೋಗ್ಯಕ್ಕೆ ಲಾಭದಾಯಕ.

ಇದನ್ನೂ ಓದಿ: Fat First: ಕೊಬ್ಬು ಕರಗಿಸಬೇಕೆ? ಕೊಬ್ಬನ್ನೇ ತಿನ್ನಿ!

Exit mobile version