Site icon Vistara News

Kokum Benefits: ಬೇಸಿಗೆಯನ್ನು ತಾಜಾ ಆಗಿರಿಸಲು ಬೇಕು ಕೋಕಂ ಅಥವಾ ಪುನರ್ಪುಳಿ!

kokum benefits

ಬೇಸಿಗೆ ಬಂತೆಂದರೆ ತಾಜಾ ಅನುಭೂತಿ ನೀಡುವ ಪೇಯಗಳು ಬೇಕೇ ಬೇಕು. ಅದು ಕೇವಲ ಬಾಯಿಗಷ್ಟೇ ತಾಜಾ ಅನುಭೂತಿ ನೀಡಿದರೆ ಸಾಲದು, ದೇಹಕ್ಕೂ ನೀಡಬೇಕು. ಬೇಸಿಗೆ ಬಿಸಿಲಿನ ಝಳದ ಪರಿಣಾಮವನ್ನು ದೇಹದಿಂದ ಹೊಡೆದೋಡಿಸುವ ಗುಣವಾದರೂ ಬೇಕು. ಅದಕ್ಕಾಗಿಯೇ ನಾವು ಹಲವಾರು ನೈಸರ್ಗಿಕವಾದ ಋತುಮಾನಕ್ಕನುಗುಣವಾಗಿ ದಕ್ಕುವ ಹಣ್ಣುಗಳ ಮೊರೆ ಹೋಗುತ್ತೇವೆ. ಅವುಗಳ ಪೈಕಿ ಕೋಕಮ್‌ ಕೂಡಾ ಒಂದು. ಆದರೆ, ಬಹಳಷ್ಟು ಮಂದಿಯ ಪಾಲಿಗೆ ಅಜ್ಞಾತವಾಗಿಯೇ ಉಳಿದಿರುವ ಈ ಕೋಕಂ ಅಥವಾ ಪುನರ್‌ಪುಳಿ ಎಂಬ ಹಣ್ಣಿನ ಅದ್ಭುತ ಲಾಭಗಳ ಬಗ್ಗೆ ಗೊತ್ತಿಲ್ಲ.

ಎಪ್ರಿಲ್‌, ಮೇ ತಿಂಗಳು ಬಂದಾಕ್ಷಣ ಭಾರತದ ಪಶ್ಚಿಮ ಕರಾವಳಿಯೆಲ್ಲೆಡೆ ಬೆಟ್ಟಗುಡ್ಡಗಳಲ್ಲಿ ಬೆಳೆವ ಹಣ್ಣಿದು. ವೈಜ್ಞಾನಿಕ ಹೆಸರು ಗಾರ್ಸೀನಿಯಾ ಇಂಡಿಕಾ. ನೋಡಲು ಗುಲಾಬಿ ಮಿಶ್ರಿತ ನೇರಳೆಯ ಬಣ್ಣದ ಹಣ್ಣುನ ಸಿಪ್ಪೆ ತೆಗೆದರೆ ಒಳಗಡೆ ಬಿಳಿಯ ಬಣ್ಣದ ತಿನ್ನಬಹುದಾದ ತೊಳೆಗಳಿರುತ್ತವೆ. ಬೀಜವೂ ಇರುತ್ತದೆ. ಬೀಜ ಸಮೇತ ಹಣ್ಣನ್ನು ತಿನ್ನಬಹುದಾದರೂ ಹೆಚ್ಚು ಉಪಯೋಗಕ್ಕೆ ಬರುವುದು ಇದರ ಸಿಪ್ಪೆ. ಯಾಕೆಂದರೆ, ಇದರ ಸಿಪ್ಪೆಯನ್ನು ಒಣಗಿಸಿಟ್ಟರೆ ವರ್ಷಪೂರ್ತಿ ಹಲವು ಬಗೆಯಲ್ಲಿ ಆಹಾರವಾಗಿ ಆರೋಗ್ಯವನ್ನೂ ಚೈತನ್ಯವನ್ನೂ ನೀಡುತ್ತದೆ.

ಹುಳಿಯಾಗಿರುವ ಈ ಹಣ್ಣಿನಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು ಇದು ನಮ್ಮ ಹೊಟ್ಟೆಯನ್ನು ಯಾವಾಗಲೂ ತಂಪಾಗಿಟ್ಟಿರುತ್ತದೆ. ಅಷ್ಟೇ ಅಲ್ಲ. ಕಡಿಮೆ ಕ್ಯಾಲರಿಯ ಈ ಹಣ್ಣು ನಮ್ಮ ಪಚನಕ್ರಿಯೆಯನ್ನು ಚುರುಕಾಗಿಸಿ ಹೊಟ್ಟೆಯನ್ನು ಸಮತೋಲನದಲ್ಲಿರಿಸುತ್ತದೆ. ಇದು ಖನಿಜಾಂಶಗಳಿಂದ ಸಮೃದ್ಧವಾಗಿದ್ದು ಇದರಲ್ಲಿ ಮೆಗ್ನೀಶಿಯಂ, ಪೊಟಾಶಿಯಂ, ಮ್ಯಾಂಗನೀಸ್‌ ಮತ್ತಿತರ ಅಂಶಗಳೂ ಇವೆ. ಇದು ಮಧುಮೇಹಿಗಳಿಗೂ ಒಳ್ಳೆಯದು.

ಬಹಳಷ್ಟು ಮಂದಿ ಕೋಕಂ ಅಥವಾ ಪುನರ್ಪುಳಿಯನ್ನೂ ಹುಣಸೇಹಣ್ಣನ್ನೂ ಒಂದೇ ಅಂದುಕೊಳ್ಳುವುದುಂಟು. ಆದರೆ ಇವೆರಡೂ ಬೇರೆ ಬೇರೆ. ಆದರೆ ಇವುಗಳ ಗುಣ ಬಹುತೇಕ ಒಂದೇ ಆಗಿದೆ. ಅಡುಗೆಗೆ ಇವೆರಡೂ ಹುಳಿ ರುಚಿಯನ್ನು ಸೇರಿಸುವಲ್ಲಿ ನೆರವಾಗುತ್ತದೆ.

ಇದನ್ನೂ ಓದಿ: Avocado Benefits: ಅವಕಾಡೊ ಸೌಂದರ್ಯವರ್ಧಕವೂ ಹೌದು!

ಕೋಕಂ ಶರಬತ್ತು: ಬೇಸಿಗೆಯಲ್ಲಿ ಅತ್ಯಂತ ಸರಳವಾಗಿ ನಾವು ಇದನ್ನು ಬಳಸುವ ವಿಧಾನವೆಂದರೆ ಶರಬತ್ತು. ಕೋಕಂ ಶರಬತ್ತು, ಅತ್ಯಂತ ರುಚಿಕರವೂ ಹೌದು. ಕೋಕಂನ ಒಣಗಿಸಿದ ಸಿಪ್ಪೆಯನ್ನು ನೀರಿನಲ್ಲಿ ಮೊದಲೇ ಮೆದುವಾಗಿಸಲು ಒಂದೆರಡು ಗಂಟೆ ಬಿಡಿ. ಸ್ವಲ್ಪ ಹೊತ್ತಿನ ನಂತರ ಕೋಕಂನಿಂದಾಗಿ ನೀರು ಗುಲಾಬಿಗೆಂಪು ಬಣ್ಣಕ್ಕೆ ತಿರುಗುತ್ತದೆ. ಇದಕ್ಕೆ ಸಕ್ಕರೆ ಸೇರಿಸಿ ಶರಬತ್ತು ಮಾಡಿ ಕುಡಿಯಬಹುದು. ಅಥವಾ ಇದಕ್ಕೆ ನಿಂಬೆಹಣ್ಣನ್ನು ಹಿಂಡಿಯೂಜ್ಯೂಸ್‌ ಮಾಡಿ ಕುಡಿಯಬಹದು. ಹುರಿದ ಜೀರಿಗೆ ಕೊಂಚ ಉಪ್ಪು ಸೇರಿಸಿಯೂ ಕುಡಿಯಬಹುದು.

ಕೋಕಂ ಲಸ್ಸಿ: ಕೋಕಂನಿಂದ ಲಸ್ಸಿಯನ್ನೂ ಮಾಡಬಹುದು. ಬೇಸಿಗೆಯಲ್ಲಿ ತಣ್ಣಗೆ ಕುಡಿಯಬೇಕನಿಸಿದಾಗ ಇದು ಅತ್ಯುತ್ತಮ ಪೇಯ. ಕೋಕಂ ಸಿಪ್ಪೆಯನ್ನು ಒಂದೆರಡು ಗಂಟೆ ಮೊದಲೇ ನೆನೆ ಹಾಕಿ ನಂತರ ಅದು ಮೆದುವಾದಾಗ ಮೊಸರಿನ ಜೊತೆಗೆ ಮಿಕ್ಸಿಯಲ್ಲಿ ತಿರುಗಿಸಿ, ನೆನೆಸಿದ ನೀರನ್ನೂ ಸೇರಿಸಿ. ರುಚಿಗೆ ಸಕ್ಕರೆ ಹಾಕಿ. ಪಿಂಕ್‌ ಬಣ್ಣದ ಚೆಂದನೆಯ ಆರೋಗ್ಯಕರ ಲಸ್ಸಿ ಸಿದ್ಧ.

ಸೋಲ್‌ ಕಡಿ: ಹುರಿದ ಒಂದೆರಡು ಎಸಳು ಬೆಳ್ಳುಳ್ಳಿ, ಕೋಕಂ, ತೆಂಗಿನಕಾಯಿ ಹಾಲು ಇವನ್ನು ಹಾಕಿ ಮಿಕ್ಸಿಯಲ್ಲಿ ತಿರುಗಿಸಿದರೆ ದೊರೆಯುವ ಪೇಯವಿದು. ಇದಕ್ಕೆ ಮೆಣಸು, ಕೊತ್ತಂಬರಿ ಸೊಪ್ಪನು ಹಾಕಿಯೂ ಕುಡಿಯಬಹದು. ಇದು ಪಚನಕ್ಕೆ ಅತ್ಯಂತ ಒಳ್ಳೆಯದು.

ಕೋಕಂ ಮಾಕ್ಟೇಲ್:‌ ನೆನೆಹಾಕಿದ ಕೋಕಂ, ನಿಂಬೆಹಣ್ಣಿನ ರಸ, ಪುದಿನ ಎಲೆಗಳು, ಒಂದು ಸಣ್ಣ ತುಂಡು ಶುಂಠಿ, ಸಕ್ಕರೆ, ಚಿಟಿಕೆ ಉಪ್ಪು ಇವಿಷ್ಟಿದ್ದರೆ ರುಚಿಯಾದ ಕೋಕಂ ಮಾಕ್ಟೇಲ್‌ ಮಾಡಬಹುದು. ಒಂದಷ್ಟೂ ಐಸ್‌ ಕ್ಯೂಬ್‌ ಸೇರಿದರೆ, ದೇಹವೂ ಮನಸ್ಸೂ ತಂಪು ತಂಪು!

ಇದನ್ನೂ ಓದಿ: Tender Coconut Benefits: ಎಳನೀರೆಂಬ ಅಮೃತ: ಬೇಸಿಗೆಯ ಝಳವನ್ನು ತಗ್ಗಿಸುವ ಬಗೆಬಗೆಯ ಪಾನೀಯಗಳು!

Exit mobile version