ನಗುವನ್ನು ಮುಖದ ಸರ್ವೋತ್ತಮ ನಗ ಎನ್ನಲಾಗುತ್ತದೆ. ಯಾವ ಬೆಡಗು- ಬಿನ್ನಾಣಗಳ ಅಗತ್ಯವಿಲ್ಲದೇ, ಬಣ್ಣ-ಬೇಗಡೆಗಳ ಹಂಗಿಲ್ಲದೆ ವ್ಯಕ್ತಿಯ ಆಂತರಿಕ ಸೌಂದರ್ಯವನ್ನು ಎತ್ತಿ ಹಿಡಿಯುವ ಸಾಮರ್ಥ್ಯವಿದ್ದರೆ- ಅದು ನಗುವಿಗೆ ಮಾತ್ರ. ನಗುವಿನ ಸಾಮರ್ಥ್ಯ ಇಷ್ಟೇ ಅಲ್ಲ, ಇನ್ನೂ ಬಹಳಷ್ಟಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಲಾಫಿಂಗ್ ಯೋಗ ಎಂದೇ ಖ್ಯಾತವಾದ ಯೋಗದ ಕವಲೊಂದು ಸಾಕಷ್ಟು ಮನ್ನಣೆ ಗಳಿಸಿದೆ. ಈ ಯೋಗ ಮಾಡುವುದಕ್ಕೆ ಸುಲಭ ಎಂಬಂತೆ ಕಂಡರೂ, ಸುಮ್ಮನೆ ನಗುವ ಅಭ್ಯಾಸ ಯಾರಿಗೂ ಇರುವುದಿಲ್ಲವಲ್ಲ! ಆದರೆ ನಗುವ ಅಭ್ಯಾಸ ಮಾಡಿಕೊಂಡರೆ ಲಾಭಗಳು ಹಲವಾರು ಇರುವುದಂತೂ ಹೌದು. ಹಾಗಾದರೆ ಏನೆಲ್ಲಾ ಪ್ರಯೋಜನಗಳಿವೆ ನೋಡೋಣವೇ?
ಏನಿದು ಲಾಫಿಂಗ್ ಯೋಗ?
ಉದ್ದೇಶಪೂರ್ವಕವಾಗಿ ದೀರ್ಘ ಸಮಯದವರೆಗೆ ನಗುತ್ತಿರುವ ಕ್ರಿಯೆಯನ್ನು ನಗುಯೋಗ (Laughing yoga) ಎನ್ನುತ್ತಾರೆ. ಎಷ್ಟೋ ಪಾರ್ಕುಗಳಲ್ಲಿ ಒಂದಿಷ್ಟು ಮಂದಿ ಒಟ್ಟಿಗೇ ನಿಂತು ಒದ್ದಾಡುತ್ತಾ ನಗುವುದನ್ನು ಅಥವಾ ಅವರ ಒದ್ದಾಟ ನೋಡಿ ಇತರರು ನಗುವುದನ್ನು ಹಲವು ಬಾರಿ ಕಂಡಿರಬಹುದು. ಇವೆಲ್ಲಾ ಆರಂಭವಾದ ಶುರುವಿನ ದಿನಗಳಲ್ಲಿ ಅವರನ್ನು ನೋಡಲೆಂದೇ ದಾರಿಹೋಕರು ಒಂದೆರಡು ಕ್ಷಣ ನಿಂತು, ತಾವೂ ನಕ್ಕು ಹೋಗುತ್ತಿದ್ದುದುಂಟು. ಆದರೆ ಇದೊಂದು ವ್ಯಾಯಾಮದ ಭಾಗವಾಗಿ ಮಾಡುತ್ತಿರುವ ಕ್ರಿಯೆ ಎಂಬುದು ಅರ್ಥವಾಗುತ್ತಿದ್ದಂತೆ, ಲಾಫಿಂಗ್ ಯೋಗವೂ (Laughing yoga) ಈಗ ಜನಪ್ರಿಯವಾಗಿದೆ. ಮುಂಬಯಿಯ ವೈದ್ಯ ಡಾ. ಮದನ್ ಕಟಾರಿಯ ಇದನ್ನು 1990ರ ಸುಮಾರಿಗೆ ಚಾಲ್ತಿಗೆ ತಂದಿದ್ದರು. ತಡೆಯಲಾದೆ, ತನ್ನಷ್ಟಕ್ಕೆ ಬಂದ ನಗುವೇ ಆಗಲೀ, ಕಚುಗುಳಿ ಇಟ್ಟ ಒತ್ತಾಯದ ನಗುವೇ (Laughing yoga) ಇರಲಿ- ನಗುವಿಗಿರುವ ಆರೋಗ್ಯ ಸುಧಾರಣೆಯ ಗುಣವನ್ನು ಅಲ್ಲಗಳೆಯಲಾಗದು ಎಂಬುದು ಡಾ. ಕಟಾರಿಯ ಅವರ ನಿಲುವಾಗಿತ್ತು.
ಹೇಗೆ ಉಪಯುಕ್ತ?
ತನ್ನಷ್ಟಕ್ಕೇ ನಗು ಬಂದಾಗ, ನಕ್ಕೂನಕ್ಕು ಕಣ್ಣಲ್ಲಿ ನೀರು ಬರುವಂತಾದಾಗ, ಇನ್ನೂ ವಿಪರೀತ ನಕ್ಕು ಹೊಟ್ಟೆ ನೋಯುವಷ್ಟಾದಾಗ- ದೇಹ-ಮನಸ್ಸುಗಳು ಹಗುರಾದ ಭಾವನೆ ಬರುವುದನ್ನು ನಾವೆಲ್ಲರೂ ಗಮನಿಸಿರುತ್ತೇವೆ. ಮೂಲತಃ ಒತ್ತಡ ನಿವಾರಣೆಯ ಅದ್ಭುತ ತಂತ್ರವಿದು. ಆದರೆ ಹಾಗೆ ನಗುವಂಥ ಕಾರಣಗಳು ಪ್ರತಿದಿನ ದೊರೆಯಬೇಕಲ್ಲ. ಅದರ ಅಗತ್ಯವಿಲ್ಲ ಎನ್ನುತ್ತಾರೆ ನಗುಯೋಗದ ರಾಯಭಾರಿಗಳು. ಒತ್ತಾಯದ ನಗು ಅಥವಾ ವ್ಯಾಯಾಮಕ್ಕಾಗಿ ನಕ್ಕಿದ್ದೇ ಆದರೂ, ಇದರಿಂದ ಉಪಯೋಗವಿದೆ. ಲಾಫಿಂಗ್ ಯೋಗಕ್ಕಾಗಿ ದೀರ್ಘ ಉಸಿರಾಟ ಅಗತ್ಯವಾಗಿ ಬೇಕಾಗುತ್ತದೆ. ಒಬ್ಬರಿಗಿಂತ ಹೆಚ್ಚು ಮಂದಿ ಈ ಕ್ರಿಯೆಯಲ್ಲಿ ಪಾಲ್ಗೊಂಡರಂತೂ ಒಬ್ಬರನ್ನೊಬ್ಬರು ನೋಡುತ್ತಲೇ ಸಹಜವಾಗಿ ನಗತೊಡಗುತ್ತಾರೆ. ನಗುವವರನ್ನು ನೋಡಿ ನಗುವುದೂ ಮೋಜಲ್ಲವೇ! ನಗು ಸಕಾರಣವೋ ಅಕಾರಣವೋ ಎಂಬುದು ಎಂಡಾರ್ಫಿನ್‌ನಂಥ ದೇಹದ ಹ್ಯಾಪಿ ಹಾರ್ಮೋನುಗಳಿಗೆ ತಿಳಿಯುವುದಿಲ್ಲ. ನಗುವಿನ ಕ್ರಿಯೆಗೆ ಅವು ಪ್ರತಿಕ್ರಿಯಿಸುತ್ತವೆ. ಈ ಸಂತೋಷದ ಚೋದಕಗಳ ಸ್ರವಿಸುವಿಕೆಯಿಂದ ದೇಹಕ್ಕೆ ಹಲವಾರು ರೀತಿಯ ಉಪಕಾರ ಆಗುವುದಂತೂ ನಿಶ್ಚಿತ.
ಲಾಫಿಂಗ್ ಯೋಗದ ಲಾಭಗಳ ಬಗ್ಗೆ ಹೇಳುವುದಾದರೆ, ದೇಹ ಮತ್ತು ಮನಸ್ಸುಗಳ ಮೇಲಿನ ಒತ್ತಡ ನಿವಾರಣೆಯಾಗುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ನಗುತ್ತಿರುವ ಜೀವಗಳ ಪ್ರತಿರೋಧಕ ಶಕ್ತಿಯೂ ಪ್ರಬಲವಾಗಿಯೇ ಇರುವುದು ಕುತೂಹಲದ ಸಂಗತಿ. ಹೌದು, ಸದಾ ಸಂತೋಷದಲ್ಲಿರುವವರಿಗೆ ರೋಗಬಾಧೆ, ಸೋಂಕುಗಳ ಉಪಟಳ ಕಡಿಮೆ. ಇವರಲ್ಲಿ ಆಮ್ಲಜನಕದ ಮಟ್ಟ ಕುಸಿಯುವುದು ಅಪರೂಪ. ಉದಾಸೀನ ಭಾವ ದೂರಾಗುತ್ತಿದ್ದಂತೆ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಮರಳಿ, ಹೃದಯ ಕ್ಷೇಮವಾಗಿರುತ್ತದೆ. ಇಡೀ ದಿನದ ಮೂಡ್ ಉತ್ತಮವಾಗಿದ್ದರೆ ಮಾಡುವ ಕೆಲಸದಲ್ಲೂ ಯಶಸ್ಸು- ನಗುವುದಕ್ಕೆ ಇನ್ನೂ ಹೆಚ್ಚಿನ ಕಾರಣಗಳು ಬೇಕೆ?
ಮಾಡುವುದು ಹೇಗೆ?
ಹೌದಪ್ಪಾ… ಸುಮ್ಮನೇ ತಮ್ಮಷ್ಟಕ್ಕೆ ನಗುವವರಿಗೆ ಲೋಕದಲ್ಲಿ ʻಬೇರೆʼ ಹೆಸರೇ ಇದೆ! ಆದರೆ ʻಅವರʼಷ್ಟು ಶೋಕರಹಿತರು ಯಾರಿದ್ದಾರೆ ಲೋಕದಲ್ಲಿ? ಹುಡುಗಾಟಕ್ಕಲ್ಲ, ಸುಮ್ಮನೆ ಕಾರಣವಿಲ್ಲದೆ ನಗುವುದು ಖಂಡಿತಕ್ಕೂ ಸುಲಭವಲ್ಲ. ಇದಕ್ಕೆ ಕೆಲವು ಸರಳ ಕ್ರಮಗಳನ್ನು ಪ್ರಯತ್ನಿಸಬಹುದು.
ಮೊದಲಿಗೆ, ಲಾಫಿಂಗ್ ಯೋಗದ ಅಭ್ಯಾಸಿಗಳ ಗುಂಪಿಗೆ ಸೇರುವುದು ಒಳ್ಳೆಯದು. ಇದರಿಂದ ಮುಜುಗರವಿಲ್ಲದೇ ಮನಬಿಚ್ಚಿ ಅಕಾರಣವಾಗಿ ನಗಬಹುದು. ಒಂದೊಮ್ಮೆ ನಿಮ್ಮ ವಲಯದಲ್ಲಿ ಅಂಥ ಗುಂಪುಗಳಿಲ್ಲ ಎಂದಾದರೆ ಚಿಂತಿಲ್ಲ, ನಿಮ್ಮಷ್ಟಕ್ಕೆ ನೀವೇ ನಗುವುದಕ್ಕೆ ಮುಜುಗರ ಬೇಡ.ಹೆಚ್ಚು ಜನರಿಲ್ಲದ ಜಾಗವನ್ನು ಆಯ್ದುಕೊಳ್ಳಿ. ಮನೆಯೊಳಗಿದ್ದರೆ ಕನ್ನಡಿ ಮುಂದೆಯೂ ನಿಲ್ಲಬಹುದು. ನಮಗಿಂತ ತಮಾಷೆಯ ವಸ್ತು ಯಾವುದಿದೆ ಲೋಕದಲ್ಲಿ?
ಆರಂಭದಲ್ಲಿ ಕೆಲವು ಲಘು ವ್ಯಾಯಾಮಗಳು ನೆರವಾಗುತ್ತವೆ. ಕೆಲವು ಸರಳ ಸ್ಟ್ರೆಚ್‌ಗಳು ಅಥವಾ ನಿಂತಲ್ಲೇ ಜಾಗಿಂಗ್‌ನಂತಹ ವ್ಯಾಯಾಮಗಳೂ ಸಾಕಾಗುತ್ತವೆ. ದೀರ್ಘ ಉಸಿರಾಟದೊಂದಿಗೆ ಚಪ್ಪಾಳೆ ತಟ್ಟುವ ಕ್ರಮವುಂಟು. ದೀರ್ಘವಾಗಿ ಒಳಗೆಳೆದುಕೊಂಡ ಉಸಿರನ್ನು ಹೊರಗೆ ಬಿಡುವಾಗ ನಗುವುದು- ಕಷ್ಟವಾದರೂ ಪ್ರಾರಂಭಿಸಿ. ಪ್ರಾರಂಭದಲ್ಲಿ ʻಇದೇನು ಹುಚ್ಚು!ʼ ಎಂಬ ಭಾವ ಇದ್ದರೂ ಕ್ರಮೇಣ ಆ ಹುಚ್ಚೇ ಇಷ್ಟವಾಗತೊಡಗುತ್ತದೆ. ನಗು ಇಲ್ಲರಿಗೂ ಇಷ್ಟವೇ- ಆದರೆ ನಗುವುದಿಲ್ಲವಷ್ಟೇ. ದಿನಕ್ಕೆ ೫ ನಿಮಿಷ ನಕ್ಕರೂ ಮನಸ್ಸು ಸಾಕಷ್ಟು ನಗುರಾಗಿರುತ್ತದೆ. ಆರೋಗ್ಯ ಸುಧಾರಣೆಗೆ ರಹದಾರಿ ದೊರೆಯುತ್ತದೆ. ತಡವೇಕೆ, ಎದೆ ಹಗುರಾಗುವಷ್ಟು ನಕ್ಕು ನಲಿಯಿರಿ.
ಇದನ್ನೂ ಓದಿ: Health Tips: ಮೊಳಕೆ ಕಾಳುಗಳನ್ನು ಹೇಗೆ ತಿಂದರೆ ಒಳ್ಳೆಯದು ಗೊತ್ತೇ?