Site icon Vistara News

Leg numbness | ಆಗಾಗ ಕೈಕಾಲು ಜೋಮು ಹಿಡಿಯುತ್ತದೆಯೇ? ಕಾರಣ ಇಲ್ಲಿದೆ!

Leg numbness

ಮಾನವನ ದೇಹವೇ ಒಂದು ರಹಸ್ಯ. ಇಲ್ಲಿ ನಮ್ಮ ದೇಹದ ಪ್ರತಿಯೊಂದು ಭಾಗವೂ ಒಂದಲ್ಲ ಒಂದು ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ ಇರುತ್ತದೆ. ಅದು ಆಂತರಿಕವಿರಬಹುದು ಬಾಹ್ಯವೂ ಇರಬಹುದು. ಆದರೆ, ಕೆಲವೊಮ್ಮೆ ಇವು ನಮ್ಮ ಅರಿವಿಗೆ ಬೇಗನೆ ಬರುವುದಿಲ್ಲ. ಕೆಲವು ಸುಲಭವಾಗಿ ಗೊತ್ತಾಗಬಹುದು. ಯಾವುದೋ ಅಂಗಕ್ಕೆ ಇನ್ಯಾವುದೋ ರೀತಿಯಲ್ಲಿ ಏನೋ ಸಂಕಟವಾದಾಗ ಅದು ಸೂಕ್ಷ್ಮವಾಗಿ ಪ್ರತಿಕ್ರಿಯಿಸಿಯೇ ಇರುತ್ತದೆ. ಹೊರಗಿನಿಂದ ಬಂದ ವೈರಸ್‌, ಅಥವಾ ಯಾವುದೇ ಒಂದು ಹೊರಗಿನ ವಸ್ತು ದೇಹದೊಳಗೆ ಪ್ರವೇಶಿಸಿದಾಗ ನಮ್ಮ ದೇಹ ಅದರ ವಿರುದ್ಧ ಹೋರಾಡುತ್ತದೆ.

ಕೆಲವೊಮ್ಮೆ ಇದು ಅಂತಹ ಗಂಭೀರವಲ್ಲದ್ದೂ ಇರಬಹುದು ಅಥವಾ ಕೆಲವಕ್ಕೆ ತುರ್ತಾಗಿ ಚಿಕಿತ್ಸೆ ಬೇಕಾಗಬಹುದು, ಆದರೆ, ಇದು ಸೂಕ್ಷ್ಮ ರೀತಿಯಲ್ಲಿ ಗೊತ್ತಾಗಿಯೇ ಆಗುತ್ತದೆ. ಆದರೆ, ವಿಚಿತ್ರವೆಂದರೆ, ಕೆಲವೊಮ್ಮೆ ದೇಹ ಪ್ರತಿಕ್ರಿಯಿಸುತ್ತಿರುವುದು ಯಾವ ಕಾರಣಕ್ಕೆ ಎಂಬುದು ನಮಗೆ ಅರ್ಥವಾಗುವುದಿಲ್ಲ. ಯಾವುದೋ ಆಹಾರ ದೇಹಕ್ಕೆ ಸಹ್ಯವಾಗದೆ ಆದ ಅಲರ್ಜಿ, ಇನ್ನೇನೋ ತುರಿಕೆ, ಇದ್ದಕ್ಕಿದ್ದಂತೆ ಏರಿದ ತೂಕ ಹೀಗೆಲ್ಲ ಕೆಲವು ಸಮಸ್ಯೆಗಳ ಸರಿಯಾದ ಕಾರಣ ಗೊತ್ತಾಗುವುದಿಲ್ಲ. ಆದರೆ, ನಮ್ಮ ದೇಹವನ್ನು ಸರಿಯಾಗಿ ಗಮನಿಸುತ್ತಾ ಬಂದಲ್ಲಿ, ವ್ಯತ್ಯಾಸಗಳನ್ನು ಹಾಗೂ ಕಾರಣಗಳನ್ನು ಹುಡುಕುವುದು ಸುಲಭ.

ನಾವು ಬಹಳಷ್ಟು ಮಂದಿ ಇಂತಹ ಸಣ್ಣ ಪುಟ್ಟ ವಿಚಾರಗಳನ್ನು ಅಲಕ್ಷಿಸುವುದುಂಟು. ಆದರೆ, ದೇಹದ ಆರೋಗ್ಯದ ವಿಚಾರದಲ್ಲಿ ಅಲಕ್ಷ್ಯ ಸಲ್ಲ. ದೇಹದಲ್ಲಿ ಕಾಣುವ ಒಂದು ಸಣ್ಣ ಸೂಚನೆ, ಪ್ರತಿಕ್ರಿಯೆಯೂ ಕೂಡಾ ಇನ್ಯಾವುದನ್ನೋ ಹೇಳಬಹುದು. ಹೀಗಾಗಿ ದೇಹದ, ಆರೋಗ್ಯದ ಬಗೆಗೆ ಗಮನ ಅತ್ಯಗತ್ಯ.

ಬಹಳಷ್ಟು ಸಲ ಕಾಲಿನಲ್ಲಿ, ಪಾದದಲ್ಲಿ ಇರುವೆ ಹರಿದಂತಾಗುವುದನ್ನು ಅಥವಾ ಜೋಮು ಹಿಡಿದಂತಾಗುವುದನ್ನು ನೀವು ಗಮನಿಸಿರಬಹುದು. ಏನೋ ಕಚಕುಳಿಯಿಟ್ಟಂತೆ, ಕೆಲಕ್ಷಣಗಳ ಕಾಲ ಸ್ಪರ್ಶ ಜ್ಞಾನವಿರದಂತೆ ಅನಿಸಬಹುದು. ಕೂತಲ್ಲಿಂದ ನಿಲ್ಲಲು ಕಷ್ಟವಾಗಬಹುದು. ನಿಂತಿದ್ದರೆ, ಕಾಲನ್ನು ಎತ್ತಿಡಲೇ ಸಾಧ್ಯವಿಲ್ಲವೆನಿಸಿದಂತಾಗಬಹುದು. ಬಹಳಷ್ಟು ಮಂದಿ, ಇದು ಸಹಜ, ಎಲ್ಲರಿಗೂ ಹೀಗೆ ಆಗಾಗ ಆಗುವುದುಂಟು. ಒಂದೇ ಭಂಗಿಯಲ್ಲಿ ಕೂತಿದ್ದರೆ ಅಥವಾ ನಿಂತಿದ್ದರೆ ಆ ಜಾಗಕ್ಕೆ ಸರಿಯಾಗಿ ರಕ್ತ ಪರಿಚಲನೆಯಾಗದೆ ಹೀಗಾಗುವುದು ಎಂದು ಸಾಮಾನ್ಯವಾಗಿ ನಾವೆಲ್ಲ ಅಂದುಕೊಳ್ಳುತ್ತೇವೆ. ಒಂದು ಮಟ್ಟಿಗೆ ನಿಜ ಕೂಡಾ. ಆದರೆ, ಇದು ಬರಿಯ ಇಷ್ಟೇ ಅಲ್ಲ. ಇದಕ್ಕೆ ಬೇರೆ ಕಾರಣವೂ ಇರಬಹುದು ಎಂಬುದನ್ನು ಪರಿಗಣಿಸುವುದೂ ಅಗತ್ಯ.  ಹಾಗಿದ್ದರೆ ಹಾಗಾಗಲು ಇತರ ಕಾರಣಗಳನ್ನು ಇಲ್ಲಿ ಕೇಳಿ.

೧. ವಿಟಮಿನ್‌ ಬಿ ೧೨: ನಿಮ್ಮ ದೇಹಕ್ಕೆ ವಿಟಮಿನ್‌ ಬಿ ೧೨ನ ಕೊರತೆಯಿದ್ದಾಗಲೂ ಹೀಗಾಗುತ್ತದೆ. ವಿಟಮಿನ್‌ ಬಿ೧೨ ನರಮಂಡಲಕ್ಕೆ ಶಕ್ತಿಯನ್ನು ನೀಡುತ್ತದೆ. ನರಗಳು ದುರ್ಬಲವಾದಾಗ ಹೀಗೆ ಜೋಮು ಹಿಡಿದಂತಾಗುತ್ತದೆ.

೨. ವಿಟಮಿನ್‌ ಬಿ೬: ನರಮಂಡಲ ಸರಿಯಾಗಿ ಕೆಲಸ ಮಾಡಲು ವಿಟಮಿನ್‌ ಬಿ೬ ಬೇಕು. ಇದು ನರಮಂಡಲಕ್ಕೆ  ಇಂಧನವಿದ್ದಂತೆ. ಹಾಗಾಗಿ ಇದರ ಕೊರತೆಯಾದರೂ ಹೀಗೆ ಆಗುವ ಸಂಭವ ಇದೆ.

ಇದನ್ನೂ ಓದಿ | Caffeine effects | ನಿಮ್ಮ ಕಳಾಹೀನ ಚರ್ಮದ ರಹಸ್ಯ ಅತಿಯಾದ ಕಾಫಿ ಸೇವನೆಯೂ ಆಗಿರಬಹುದು!

೩. ಥೈರಾಯ್ಡ್‌ ತೊಂದರೆ: ಥೈರಾಯ್ಡ್‌ ಹಾರ್ಮೋನಿನ ವೈಪರೀತ್ಯದಿಂದಲೂ ಹೀಗಾಗಬಹುದು. ಹಾಗಾಗಿ ಥೈರಾಯ್ಡನ್ನು ಸಮತೋಲನದಲ್ಲಿರಿಸಿಕೊಳ್ಳುವುದು ಬಹಳ ಮುಖ್ಯ.

೪. ಸಕ್ಕರೆಯ ಮಟ್ಟ: ಹೌದು. ರಕ್ತದಲ್ಲಿನ ಸಕ್ಕರೆಯ ಅಂಶ ಏರುಪೇರಾದರೂ ಹೀಗಾಗುತ್ತದೆ. ಮಧುಮೇಹಿಗಳಲ್ಲಿ ಹೀಗಾಗುವುದು ಸಾಮಾನ್ಯ. ರಕ್ತದಲ್ಲಿ ಸಕ್ಕರೆಯ ಮಟ್ಟ ಏರುಪೇರಾದರೆ, ಅದು ನರವ್ಯೂಹದ ಮೇಲೆ ಪರಿಣಾಮ ಬೀರುತ್ತದೆ. ಇದು ಕೈಕಾಲುಗಳ ಮೇಲೆ ಬೀರುವ ಪರಿಣಾಮ ದೊಡ್ಡದು. ಸಕ್ಕರೆಯ ಮಟ್ಟ ಏರಿದೊಡನೆ ಕೈಕಾಲು, ಜೋಮು ಹಿಡಿದಂತಾಗುವುದು ಕಚಕುಳಿಯಿಟ್ಟಂತಾಗುವುದು ಹೆಚ್ಚಾಗುತ್ತದೆ.

೫. ಡೀಹೈಡ್ರೇಶನ್:‌ ದೇಹದಲ್ಲಿ ನೀರು ಕಡಿಮೆಯಾಗುವುದು ಅಥವಾ ನಿರ್ಜಲೀಕರಣವೂ ಇದಕ್ಕೆ ಕಾರಣವಿರಬಹುದು. ನೀರು ಕಡಿಮೆಯಾದರೆ ಅದು ಸೋಡಿಯಂ ಮಟ್ಟದ ಮೇಲೂ ಪರಿಣಾಮ ಬೀರಿ, ಅದೂ ಕಡಿಮೆಯಾಗುತ್ತದೆ. ಅದಕ್ಕಾಗಿ ಆಗಾಗ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ.

ಹಾಗಾಗಿ ಕಾಲು ಜೋಮು ಹಿಡಿಯುವ ಹಾಗಾದಾಗ ಅದನ್ನು ನಿರ್ಲಕ್ಷ್ಯ ಮಾಡದಿರಿ. ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆಗಳನ್ನು ಮಾಡಿಕೊಂಡು ಆರೋಗ್ಯವಾಗಿರಲು ಪ್ರಯತ್ನಿಸಿ.

ಇದನ್ನೂ ಓದಿ | ಒಂಟಿ ಕಾಲಿನ ಪರೀಕ್ಷೆಯಲ್ಲಿ ಆಯಸ್ಸಿನ ಗುಟ್ಟು ಬಯಲು?

Exit mobile version