Site icon Vistara News

Cardiopulmonary Resuscitation: ಜೀವರಕ್ಷಕ ಸಿಪಿಆರ್‌; ಈ ವಿಧಾನ ಅನುಸರಿಸಿ, ಜೀವ ಉಳಿಸಿ

Cardiopulmonary Resuscitation

ಹೀಗೊಂದು ಸನ್ನಿವೇಶವನ್ನು ಊಹಿಸಿಕೊಳ್ಳಿ- ನಿಮ್ಮೆದುರಿಗಿರುವ ಯಾರೋ ಒಬ್ಬ ವ್ಯಕ್ತಿ ಹಠಾತ್‌ ಕುಸಿದು ಬೀಳುತ್ತಾರೆ. ಬಿದ್ದವರಿಗೆ ಎಚ್ಚರವಿಲ್ಲ. ನೀವು ಕರೆದು-ಕೂಗಿ-ತಟ್ಟಿ-ಅಲ್ಲಾಡಿಸಿ ಏನೇ ಮಾಡಿದರೂ ಅವರಿಂದ ಪ್ರತಿಕ್ರಿಯೆಯಿಲ್ಲ. ಅವರ ಉಸಿರಾಟ ನಿಂತಿರಬಹುದೇ ಎಂದು ನಿಮಗೆ ಅನುಮಾನವಿದೆ. ತಕ್ಷಣ ಆಂಬುಲೆನ್ಸ್‌ಗೆ ಕರೆ ಮಾಡಿದರೂ ನೀವಿರುವಲ್ಲಿ ಅದು ಬರುವುದಕ್ಕೆ ಹತ್ತಾರು ನಿಮಿಷಗಳು ಬೇಕು. ಇಂಥ ತುರ್ತು ಸಂದರ್ಭದಲ್ಲಿ ಆ ವ್ಯಕ್ತಿಯ ಪ್ರಾಣವನ್ನು ಹೇಗೆ ಉಳಿಸಬಹುದು? ಹೃದಯ ಸ್ತಂಭನದ ಸುದ್ದಿಗಳು ಇಂದಿನ ದಿನಗಳಲ್ಲಿ ಹೊಸದಲ್ಲ ಎಂಬಂತಾಗಿರುವುದು ದುರದೃಷ್ಟಕರ. ಇಂಥ ಘಟನೆಗಳು ಸಂಭವಿಸಿದಾಗ ಸುತ್ತಲಿನವರಿಗೆ ಹೃದಯ ಬಡಿತವನ್ನು ಪುನರುಜ್ಜೀವನಗೊಳಿಸುವ ಸಿಪಿಆರ್‌ (Cardiopulmonary resuscitation or CPR) ಎಂಬ ಜೀವರಕ್ಷಕ ತಂತ್ರದ ಅರಿವಿದ್ದರೆ, ಹೃದಯ ಸ್ತಂಭನಕ್ಕೆ ಒಳಗಾದ ವ್ಯಕ್ತಿಯ ಜೀವ ಉಳಿಸುವ ಸಾಧ್ಯತೆ ಮೂರು ಪಟ್ಟು ಹೆಚ್ಚಿರುತ್ತದೆ. ಇದ್ದಕ್ಕಿದ್ದಂತೆ ಹೃದಯ ತನ್ನ ಕೆಲಸವನ್ನು ಸ್ತಂಭಿಸಿದಾಗ ಅಥವಾ ನಿಲ್ಲಿಸಿದಾಗ, ಹೊರಗಿನಿಂದ ಎದೆಯ ಮೇಲೆ ಸತತ ಒತ್ತಡ ಹಾಕುತ್ತಲೇ ಇರುವ ಮೂಲಕ ಹೃದಯ ತನ್ನ ಕೆಲಸವನ್ನು ಪುನರಾರಂಭಿಸುವಂತೆ ಮಾಡುವುದು ಸಿಪಿಆರ್‌ನ (Cardiopulmonary Resuscitation) ಮುಖ್ಯ ಉದ್ದೇಶ.

ವಿವರಗಳು ಹೀಗಿವೆ

ಹೃದಯ ತನ್ನ ಕೆಲಸವನ್ನು ಇದ್ದಕ್ಕಿದ್ದಂತೆ ನಿಲ್ಲಿಸುವುದನ್ನು ಹೃದಯ ಸ್ತಂಭನ ಎಂದು ಹೇಳಲಾಗುತ್ತದೆ. ಹೃದಯ ಬಡಿಯುವುದನ್ನು ನಿಲ್ಲಿಸಿದರೆ, ಮೆದುಳು ಸೇರಿದಂತೆ ದೇಹದ ಉಳಿದೆಲ್ಲ ಅಂಗಗಳಿಗೆ ರಕ್ತ ಮತ್ತು ಆಮ್ಲಜನಕದ ಪೂರೈಕೆ ನಿಂತುಹೋಗುತ್ತದೆ. ಆಗ ಆ ವ್ಯಕ್ತಿಯನ್ನು ಉಳಿಸುವುದು ಕಷ್ಟಸಾಧ್ಯ. ಮುಂದಿನ ಕೆಲವು ನಿಮಿಷಗಳವರೆಗೆ ಸಾಕಾಗುವಷ್ಟು ಆಮ್ಲಜನಕ ರಕ್ತದಲ್ಲಿ ಇರುತ್ತದೆ. ಆದರೆ ಹೃದಯದ ಬಡಿತ ನಿಂತಿರುವುದರಿಂದ ರಕ್ತ ಸಂಚಾರವೂ ನಿಂತಿರುತ್ತದೆ.
ಅಂಥ ಸಂದರ್ಭದಲ್ಲಿ ರಕ್ತ ಸಂಚಾರ ನಿಲ್ಲದಂತೆ ಹೃದಯವನ್ನು ಹೊರಗಿನಿಂದ ಸತತವಾಗಿ, ಶಕ್ತಿ ಮತ್ತು ವೇಗದಿಂದ ಒತ್ತುವುದು ಈ ವಿಧಾನದಲ್ಲಿ ಮುಖ್ಯವಾದ ತಂತ್ರ. ಹೀಗೆ ರಕ್ತ ಸಂಚಾರ ನಿಲ್ಲದಂತೆ ಮಾಡಿದರೆ, ಮೆದುಳು ಮತ್ತಿತರ ಅಂಗಾಂಗಗಳಿಗೆ ಆಮ್ಲಜನಕದ ಪೂರೈಕೆ ನಿಲ್ಲದಂತೆ ಮಾಡಲು ಸಾಧ್ಯವಿದೆ. ಸಿಪಿಆರ್‌ ಮಾಡುವ ಬಗ್ಗೆ ನಿಮಗೆ ಸೂಕ್ತವಾದ ತರಬೇತಿ ಇಲ್ಲದಿದ್ದರೂ, ಹೀಗೆ ಪ್ರಯತ್ನಿಸುವುದರಿಂದ ಹಾನಿಯಿಲ್ಲ. ಯಾವುದೇ ಪ್ರಯತ್ನ ಮಾಡದಿದ್ದಾಗಲೇ ಅಪಾಯ ಹೆಚ್ಚುತ್ತದೆ.

ಏನು ಮಾಡಬೇಕು?

ಸ್ತಂಭನಕ್ಕೆ ಒಳಗಾದ ವ್ಯಕ್ತಿ ಸುರಕ್ಷಿತ ಜಾಗದಲ್ಲಿದ್ದಾರೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ರಸ್ತೆಯ ನಡುವೆ, ಬೆಂಕಿಯ ಸಮೀಪ- ಇಂಥ ಸ್ಥಳಗಳಲ್ಲಿ ಅಪಾಯ ಇನ್ನೂ ಹೆಚ್ಚುತ್ತದೆ. ಆ ವ್ಯಕ್ತಿಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ಮೊದಲಿಗೆ ಅಂಗಾತ ಮಲಗಿಸಿ. ಎದೆ ಏರಿಳಿಯುತ್ತಿದೆಯೇ ಗಮನಿಸಿ. ಏರಿಳಿತ ಇಲ್ಲದಿದ್ದರೆ, ಎದೆಯ ಸ್ವಲ್ಪವೇ ಎಡಭಾಗಕ್ಕೆ ನಿಮ್ಮ ಒಂದು ಹಸ್ತ ಊರಿ. ಅದನ್ನು ಇನ್ನೊಂದು ಹಸ್ತದಿಂದ ಲಾಕ್‌ ಮಾಡಿ ಜಾರದಂತೆ ಬಿಗಿ ಮಾಡಿ.
ಈಗ ನಿಮ್ಮ ಇಡೀ ಶರೀರದ ಭಾರವನ್ನು ನಿಮ್ಮ ಕೈಗಳ ಮೇಲೆ ಬಿಟ್ಟು ಸತತವಾಗಿ ಎದೆಯನ್ನು ಒತ್ತಿ. ಮೊಣಕೈಯನ್ನು ಬಗ್ಗಿಸದೆ ನೇರವಾಗಿಸಿ, ಸತತವಾಗಿ ಎದೆಯ ಮೇಲೆ ಒತ್ತಡ ಹಾಕುತ್ತಲೇ ಇರಿ. ನೀವು ಒತ್ತುವ ಭಾರಕ್ಕೆ, ಎದೆಯ ಭಾಗ ಸುಮಾರು ಎರಡು ಇಂಚಿನಷ್ಟು ಒಳಗೆ ಹೋಗಬೇಕು. ಇದನ್ನು ನಿಮಿಷಕ್ಕೆ 100ರಿಂದ 120 ಸಲದಷ್ಟು ತ್ವರಿತವಾಗಿ ಮಾಡಬೇಕು. ನಡುವೆ ಎದೆ ತನ್ನ ಮೊದಲಿನ ಸ್ಥಾನಕ್ಕೆ ಬರುವುದಕ್ಕೆ ಕೆಲವು ಸೆಕೆಂಡ್‌ಗಳ ಬಿಡುವು ಕೊಡಿ. ಅಂದಾಜಿಗೆ ಹೇಳುವುದಾದರೆ ಸುಮಾರು ೩೦-೪೦ ಬಾರಿ ಒತ್ತಿದ ಮೇಲೆ ಕೆಲವು ಸೆಕೆಂಡ್‌ಗಳ ಬಿಡುವು ನೀಡಿ. ಈ ಬಿಡುವಿನಲ್ಲಿ ಸಾಧ್ಯವಾದರೆ ಬಾಯಿಂದ ಬಾಯಿಗೆ ಕೃತಕ ಉಸಿರು ಕೊಡುವುದಕ್ಕೆ ಸಾಧ್ಯವೇ ನೋಡಿ. ಮತ್ತೆ ಸಿಪಿಆರ್‌ ಮುಂದುವರಿಸಿ. ಯಾವುದೇ ವೈದ್ಯಕೀಯ ನೆರವು ದೊರೆಯುವವರೆಗೆ ಅಥವಾ ಆ ವ್ಯಕ್ತಿಯಲ್ಲಿ ಉಸಿರಾಟ ಕಾಣುವವರೆಗೆ ಇದನ್ನು ಮುಂದುವರಿಸಬೇಕು.

ಯಾವಾಗ ಬೇಡ?

ಹೃದಯಾಘಾತವಾಗಿರುವ ವ್ಯಕ್ತಿ ಎಚ್ಚರವಾಗಿದ್ದು, ಉಸಿರಾಡುತ್ತಿದ್ದರೆ ಸಿಪಿಆರ್‌ ಮಾಡುವ ಅಗತ್ಯವಿಲ್ಲ. ಆಗ ತ್ವರಿತವಾಗಿ ಆಸ್ಪತ್ರೆಗೆ ಧಾವಿಸುವುದೊಂದೇ ಮಾರ್ಗ. ಜೊತೆಗೆ, ಸಿಪಿಆರ್‌ ಮಾಡುತ್ತಿರುವ ವ್ಯಕ್ತಿಯಲ್ಲಿ ಉಸಿರಾಟ ಅಥವಾ ಕೈ-ಕಾಲುಗಳ ಚಲನೆ ಕಂಡುಬಂದಲ್ಲಿ ಇಲ್ಲವೇ ಕಣ್ಣು ತೆರೆದಲ್ಲಿ ನಿಲ್ಲಿಸಬಹುದು.
ಇದನ್ನು ಹೃದಯ ಸ್ತಂಭನದ ಪ್ರಕರಣದಲ್ಲಿ ಮಾತ್ರವೇ ಅಲ್ಲ, ನೀರಿನಲ್ಲಿ ತೇಲಿ ಹೋಗುತ್ತಿದ್ದ ವ್ಯಕ್ತಿಯನ್ನು ಉಳಿಸಿದಾಗಲೂ ಸಿಪಿಆರ್‌ ಮಾಡುವ ಅಗತ್ಯ ಬರಬಹುದು. ಇಂಥ ಪ್ರಕರಣಗಳಲ್ಲಿ ಮಕ್ಕಳು ಸಿಲುಕಬಹುದು. ಆಗ ಎಳೆಯ ದೇಹವದು ಎಂಬುದನ್ನು ಗಮನದಲ್ಲಿ ಇರಿಸಿಕೊಂಡು ಸಿಪಿಆರ್‌ ಮಾಡಬೇಕು. ಮಾಡುವ ವಿಧಾನ ಒಂದೇ ಆದರೂ, ಎದೆಯ ಮೇಲೆ ಎರಡೂ ಕೈಗಳ ಬದಲು ಒಂದೇ ಕೈಯ ಬಲ ಹಾಕಿ ಕ್ಷಿಪ್ರವಾಗಿ ಒತ್ತುತ್ತಿದ್ದರೆ ಸಾಕಾದೀತು. ಆ ವ್ತಕ್ತಿಯಲ್ಲಿ ಚಲನೆ ಬರುವವರೆಗೆ ಮುಂದುವರಿಸಿ.

ಇದನ್ನೂ ಓದಿ: Benefits of Peaches: ಸಿಹಿ ರಸದ ಪೀಚ್‌ ಹಣ್ಣಿನ ಪ್ರಯೋಜನಗಳು ಹಲವು

Exit mobile version