Site icon Vistara News

Lip Care Tips: ನಿಮ್ಮ ಕೆಂಪು ತುಟಿಗಳ ಕಾಳಜಿ ಹೀಗಿರಲಿ

Lip Care Tips

ಬಾಹ್ಯ ಸೌಂದರ್ಯದ ಬಗ್ಗೆ ಕವಿಕಲ್ಪನೆಗಳೇನಿವೆ ಎಂಬುದನ್ನು ಸುಮ್ಮನೆ ಗಮನಿಸಿದರೆ- ದುಂಬಿಯಂಥ ಮುಂಗುರುಳು, ಕಾಮನಬಿಲ್ಲಿನಂಥ ಹುಬ್ಬು, ಕಮಲದಂಥ ಕಣ್ಣುಗಳು, ಸಂಪಿಗೆ ಎಸಳಿನಂಥ ನಾಸಿಕ, ಬೆಣ್ಣೆಯಂತೆ ನುಣುಪಾದ ಕೆನ್ನೆ, ತೊಂಡೆಹಣ್ಣಿನಂಥ ಅಧರ, ದಾಳಿಂಬೆ ಬೀಜದಂಥ ಹಲ್ಲುಗಳು… ಇತ್ಯಾದಿ. ಇವುಗಳನ್ನೆಲ್ಲಾ ಒಂದೊಂದಾಗಿ ಜೋಡಿಸಿ ಮುಖ ಮಾಡಿ ನೋಡಿದರೆ ರಾಕ್ಷಸ-ಸದೃಶ್ಯ ಚಿತ್ರವೊಂದು ಮೂಡಬಹುದೇನೋ! ಇರಲಿ, ಇದನ್ನೀಗ ಹೆದರಿಸುವ ಉದ್ದೇಶದಿಂದ ಹೇಳಿದ್ದಲ್ಲ. ಒಂದೊಂದು ಅಂಗಗಳೂ ಹೀಗಿದ್ದರೆ ಚೆನ್ನ ಎಂಬ ವಿಕ್ಷಿಪ್ತ ಕಲ್ಪನೆಗಳ ಬಗ್ಗೆ ಮಾತ್ರವೇ ಹೇಳಿದ್ದು. ಸೌಂದರ್ಯ ಮೀಮಾಂಸೆಯನ್ನು ಬಿಟ್ಟು, ಆರೋಗ್ಯ ಶಾಸ್ತ್ರದತ್ತ ಹೊರಳಿದರೆ- ಒಡಕಿಲ್ಲದ, ಮೃದುವಾದ ಕೆಂದುಟಿಗಳು (lip care tips) ದೇಹಸ್ವಾಸ್ಥ್ಯದ ಬಗ್ಗೆ ಏನನ್ನು ಸೂಚಿಸುತ್ತವೆ?

ಮುದ್ದಾದ ಮುಗುಳ್ನಗೆಗೆ, ನಯವಾದ ನಿರಾಕರಣೆಗೆ, ತುಂಟ ಕೊಂಕು ನಗೆಗೆ, ಮದಭರಿತ ಮುತ್ತಿನ ಹೊತ್ತಿಗೆ, ಮುನಿಸಿನೊಂದಿಗೆ ಓರೆಯಾಗುವುದಕ್ಕೆ- ಇಂಥ ಎಲ್ಲ ಸಂದರ್ಭಗಳಲ್ಲೂ ಕೆಂದುಟಿಗಳಿಗೆ ಭರಪೂರ ಕೆಲಸವಿದೆ. ಹಾಗಿರುವಾಗ ಅಧರಗಳ (lip care tips) ಮಾಧುರ್ಯಕ್ಕೆ ಒಂದಿಷ್ಟಾದರೂ ಲಕ್ಷ್ಯ ವಹಿಸದಿದ್ದರೆ ಹೇಗೆ? ನೋಡುವವರ ಕಣ್ಣಿಗೆ ಹಿತವಾಗುವುದಕ್ಕೆ ಎಂಬ ಲೆಕ್ಕದಲ್ಲಿ ಮಾತ್ರವೇ ಅಲ್ಲ; ನಮ್ಮ ಬಗ್ಗೆ ನಾವು ತೋರಿಸುವ ಕಾಳಜಿಯು ಒಟ್ಟಾರೆಯಾಗಿ ನಮ್ಮ ಶುಚಿತ್ವ, ಬದುಕಿನ ಕುರಿತಾದ ಆಸ್ಥೆ ಮತ್ತು ದೇಹಸ್ವಾಸ್ಥ್ಯದ ಮೇಲೂ ಪರಿಣಾಮ ಬೀರುತ್ತದೆ. ಕೆಂಪಾದ, ನಯವಾದ, ಭರಿತ ಅಧರಕ್ಕೂ ಒರಟಾದ, ಕಪ್ಪಾದ, ಒಣಗಿ ಸಿಪ್ಪೆ ಸುಲಿದ ತುಟಿಗಳಿಗೂ ಎಲ್ಲಿಯ ಹೋಲಿಕೆ!

ಕಪ್ಪಾಗಲು ಕಾರಣವೇನು?

ಇದನ್ನು ಹೈಪರ್‌ ಪಿಗ್ಮೆಂಟೇಶನ್‌ ಎನ್ನಲಾಗುತ್ತದೆ. ಹೆಚ್ಚಿನ ಸಾರಿ ನಮ್ಮ ಜೀವನಶೈಲಿ ಇದಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಆರೋಗ್ಯದ ಸಮಸ್ಯೆಗಳು ಇರಲೂಬಹುದು. ಉದಾ, ಧೂಮಪಾನಿಗಳ ತುಟಿ ಬಣ್ಣಗೆಟ್ಟಿರುತ್ತದೆ. ಸದಾಕಾಲ ಬಿಸಿಲಿನಲ್ಲಿ ಕೆಲಸ ಮಾಡುವವರು ಅಥವಾ ಓಡಾಡುವವರ ತುಟಿಗಳೂ ಕಪ್ಪಾಗಿರಬಹುದು. ಕೆಲವೊಮ್ಮೆ ಹಾರ್ಮೋನುಗಳ ವ್ಯತ್ಯಾಸದಿಂದಾಗಿ ತುಟಿಗಳು ಬಣ್ಣಗೆಡಬಹುದು. ಅಲರ್ಜಿಗಳೂ ಈ ನಿಟ್ಟಿನಲ್ಲಿ ತಮ್ಮ ಕೊಡುಗೆ ನೀಡುವ ಸಾಧ್ಯತೆಯಿದೆ. ಅತಿಯಾದ ರಾಸಾಯನಿಕ ಭರಿತ ಸೌಂದರ್ಯ ಪ್ರಸಾದನಗಳ ಬಳಕೆಯೂ ತುಟಿಗಳು ಒಣಗಿ, ಬಿರಿದು, ಬಣ್ಣಗೆಡಲು ಕಾರಣವಾಗುತ್ತದೆ. ಇದಕ್ಕೇನು ಮಾಡಬಹುದು?

ನೀರು ಬೇಕು!

ಹೌದು. ತುಟಿಗಳು ಒಣಗಿ ಚರ್ಮ ಸುಲಿದಂತಾಗುತ್ತಿವೆ ಎಂದರೆ ದೇಹಕ್ಕೆ ನೀರು ಬೇಕು ಎಂಬುದರ ಮೊದಲ ಸೂಚನೆ. ಮೇಲಿನಿಂದ ತುಟಿಗಳಿಗೆ ಏನನ್ನೇ ಲೇಪಿಸಿದರೂ ಅದು ತಾತ್ಕಾಲಿಕ. ತುಟಿಯ ಚರ್ಮವನ್ನು ನಾಲಿಗೆಯಿಂದ ಒದ್ದೆ ಮಾಡುವುದು, ಸುಲಿಯುವುದು ಮುಂತಾದ ಅಂಗಚೇಷ್ಟೆಗಳನ್ನು ಮಾಡಲೇಬೇಡಿ. ಹೊಳೆಯುವ ನಯವಾದ ಅಧರಗಳಿಗೆ ಕಾರಣವಾಗುವುದು ದೇಹದಲ್ಲಿ ವಿಫುಲವಾಗಿರುವ ನೀರಿನಂಶ. ಸಾಕಷ್ಟು ನೀರು ಕುಡಿಯುವುದರ ಜೊತೆಗೆ ಕಲ್ಲಂಗಡಿ, ಕಿತ್ತಳೆ, ಸೌತೇಕಾಯಿ ಮುಂತಾದ ನೀರು ಹೇರಳವಾಗಿರುವ ಹಣ್ಣು-ತರಕಾರಿಗಳನ್ನು ತಿನ್ನಿ. ನೈಸರ್ಗಿಕವಾಗಿಯೇ ನಯವಾದ ಮತ್ತು ಭರಿತ ಅಧರ ನಿಮ್ಮದಾಗುತ್ತದೆ.

ಎಕ್ಸ್‌ಫಾಲಿಯೇಶನ್

ಹಳೆಯದನ್ನು ತೆಗೆದು ಹೊಸದಕ್ಕೆ ಜಾಗ ಮಾಡುವ ಪ್ರಕ್ರಿಯೆಯಿದು. ಚರ್ಮದಲ್ಲಿ ಹಳೆಯದಾಗಿರುವ ಕೋಶಗಳನ್ನು ನಾಜೂಕಾಗಿ ತೆಗೆದು, ಹೊಸದು ಮೂಡಿ ಬರುವುದಕ್ಕೆ ಅನುವು ಮಾಡುವ ಕೆಲಸವಿದು. ಪ್ರತಿದಿನ ಅಲ್ಲ, ವಾರಕ್ಕೊಮ್ಮೆ ಮಾಡಿದರೆ ಸಾಕಾಗುತ್ತದೆ. ಆದರೆ ಇದನ್ನು ಮಾಡುವುದು ಹೇಗೆ? ಇಲ್ಲಿದೆ ಕ್ರಮ!- ಬೀಟ್‌ರೂಟ್‌ ತುಣುಕುಗಳನ್ನು ಪೇಸ್ಟ್‌ ಮಾಡಿಕೊಳ್ಳಿ. ಇದಕ್ಕೆ ಆರೆಂಟು ಹನಿ ಕೊಬ್ಬರಿ ಎಣ್ಣೆ ಅಥವಾ ಆಲಿವ್‌ ಎಣ್ಣೆಯನ್ನು ಮಿಶ್ರ ಮಾಡಿ. ಪುಡಿ ಸಕ್ಕರೆಯನ್ನು ಚಿಟಿಕೆಯಷ್ಟು ಬೆರೆಸಿ. ಮೃದುವಾದ ಟೂತ್‌ಬ್ರಷ್‌ ಅಥವಾ ಶುದ್ಧ ಹತ್ತಿಯ ಬಟ್ಟೆಯನ್ನು ಈ ಮಿಶ್ರಣದಲ್ಲಿ ಅದ್ದಿ, ತುಟಿಗಳ ಮೇಲೆ ವೃತ್ತಾಕಾರದಲ್ಲಿ ಸೌಮ್ಯವಾಗಿ ಮಸಾಜ್‌ ಮಾಡಿ, ಒಂದೆರಡು ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಬಿಸಿಲಿಗೆ ಒಡ್ಡಬೇಡಿ

ಮೆಲನಿನ್‌ ಕಡಿಮೆ ಇರುವ ಕಾರಣಕ್ಕೆ ಬಿಸಿಲಿಗೆ ಮುಖವನ್ನು ಒಡ್ಡಿಕೊಂಡಾಗ ಮೊದಲು ಪರಿಣಾಮ ಬೀರುವುದು ತುಟಿಗಳ ಮೇಲೆ. 15 ಅಥವಾ 20 ಸಾಮರ್ಥ್ಯದ ಲಿಪ್‌ ಕ್ರೀಮ್‌ ಹಚ್ಚಿದರೂ ತುಟಿ ಕಪ್ಪಾಗುವುದನ್ನು ತಡೆಯಬಹುದು. ಸನ್‌ಬ್ಲಾಕ್‌ ಇರುವ ಲಿಮ್‌ ಬಾಮ್‌ಗಳು ಕಪ್ಪಾಗುವುದನ್ನು ಮಾತ್ರವೇ ಅಲ್ಲ, ತುಟಿ ಒಣಗಿ ಒರಟಾಗುವುದನ್ನು ತಡೆಯುತ್ತವೆ

ಮಾಸ್ಕ್‌ ಮಾಡಿ

ಮುಖ, ತಲೆಗೂದಲುಗಳಿಗೆ ಮಾಸ್ಕ್‌ ಹಾಕಿದ್ದಾಯಿತು. ಈಗ ತುಟಿಗಳಿಗೂ ಮಾಡಬೇಕೆ ಎಂದು ಹುಬ್ಬೇರಿಸದಿರಿ. ಮಾಡುವುದು ಸುಲಭವಿದೆ. ದಾಳಿಂಬೆ ಬೀಜಗಳನ್ನು ಆದಷ್ಟು ಪೇಸ್ಟ್‌ ಮಾಡಿ, ಅದಕ್ಕೆ ಎರಡು ಹನಿ ಗುಲಾಬಿ ನೀರು ಮತ್ತು ಸ್ವಲ್ಪ ಹಾಲಿನ ಕೆನೆ ಮಿಶ್ರ ಮಾಡಿ. ಈ ಮಿಶ್ರಣವನ್ನು ತುಟಿಗಳಿಗೆ ಹಚ್ಚಿ, 15 ನಿಮಿಷಗಳ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದರಿಂದ ನಯವಾದ ಕೆಂಪಾದ ಚೆಂದುಟಿಗಳು ನಿಮ್ಮದಾಗುತ್ತವೆ.

ಇದನ್ನೂ ಓದಿ: Health problem: ಅವಧಿ ಮೀರಿದ ಸಿರಪ್‌ ನೀಡಿದ ಅಂಗನವಾಡಿ ಟೀಚರ್‌; ಒಂದುವರೆ ವರ್ಷದ ಮಗು ಅಸ್ವಸ್ಥ

Exit mobile version