ಚಳಿಗಾಲವೆಂದರೆ (Lips care in winter) ಮೊಗದ ನಗೆ ಮಾಸಿದಂತೆ! ಅಂದರೆ ಚಳಿಗಾಲ ಶೋಕವನ್ನೇ ತರುತ್ತದೆಂದಲ್ಲ, ತುಟಿಗಳೆಲ್ಲಾ ಬಿರಿದರೆ ನಗುವುದಾದರೂ ಹೇಗೆ? ಅಧರಗಳು ಅರಳದೆ ನಗಲುಂಟೇ? ಆದರೆ ಮಾಗಿ ತರುವ ಚಳಿ ಮತ್ತು ಶುಷ್ಕತೆಯಿಂದಾಗಿ ತುಟಿ ಅರಳಿಸಲಾಗದು; ಬಿರಿದು ಉರಿಯುತಿರುವುದ, ರಕ್ತ ಸೋರುವುದ ಸಹಿಸಲಾಗದು. ಈ ಸಮಸ್ಯೆಯಂತೂ ಯಾವುದೇ ಭೇದಭಾವ ತೋರದೆ ಎಲ್ಲಾ ವಯಸ್ಸು, ದೇಶ, ಭಾಷೆ, ಲಿಂಗ, ಜಾತಿ, ಮತದವರನ್ನು ಸಮಾನವಾಗಿ ಕಾಡುತ್ತದೆ. ಮತ್ತೆ ಒಡೆದ ಚೂರಾದ ನಗುವನ್ನು ಪುನಃ ಅರಳಿಸುವುದು ಹೇಗೆ?
ಕಾರಣಗಳೇನು?
ಚಳಿಗಾಲದ ಹವಾಮಾನದಲ್ಲಿನ ಶುಷ್ಕತೆ ಇದಕ್ಕೆ ಮುಖ್ಯ ಕಾರಣ. ಜೊತೆಗೆ, ಚಳಿಯೆಂಬ ಕಾರಣಕ್ಕೆ ಸರಿಯಾಗಿ ನೀರು ಕುಡಿಯದಿರುವುದು ಇನ್ನೊಂದು ಪ್ರಮುಖ ಕಾರಣ. ಇದಲ್ಲದೆ, ಪದೇಪದೆ ತುಟಿಗಳನ್ನು ನೆಕ್ಕುತ್ತಿರುವುದು, ಅಲರ್ಜಿಗಳು, ವಿಟಮಿನ್ ಬಿ ಅಥವಾ ಕಬ್ಬಿಣದ ಕೊರತೆ, ಬ್ಯಾಕ್ಟೀರಿಯ ಸೋಂಕು, ಥೈರಾಯ್ಡ್ ಸಮಸ್ಯೆ ಅಥವಾ ಬಳಸುತ್ತಿರುವ ಔಷಧ ಇಲ್ಲವೇ ಸ್ಕಿನ್ಕೇರ್ ವಸ್ತುಗಳಿಂದಾದ ಅಲರ್ಜಿ ಕಾರಣವಿರಬಹುದು. ಕಾರಣಗಳೇನೇ ಇದ್ದರೂ, ಬಿರಿದ ತುಟಿಗಳು ನಗು ಅಳಿಸಿ ನೋವು ತರುವುದಂತೂ ನಿಜ. ಚರ್ಮ ಸುಲಿದಂತಾಗುವುದು, ಊದಿಕೊಂಡು ಕೆಂಪಾದ ತುಟಿಗಳು, ಸೀಳಿದಂತಾಗಿ ರಕ್ತ ಒಸರುವುದು ಮುಂತಾದವು ಈ ಸಮಸ್ಯೆಯ ಪರಿಣಾಮಗಳು. ಹಾಗಾದರೆ ಚಳಿಗಾಲದಲ್ಲಿ ತುಟಿ ಒಡೆಯದಂತೆ ಏನು ಮಾಡಬಹುದು?
ಇವುಗಳತ್ತ ಗಮನ ಕೊಡಿ
ದೇಹಕ್ಕೆ ಹೆಚ್ಚಿನ ನೀರು ಬೇಕು ಎಂಬ ಸೂಚನೆಯೂ ಹೌದಿದು. ಹಾಗಾಗಿ ಚೆನ್ನಾಗಿ ನೀರು ಕುಡಿಯಿರಿ. ಹೆಚ್ಚಿನ ದ್ರವಾಹಾರಗಳನ್ನು ಸೇವಿಸಿ, ದೇಹ ನಿರ್ಜಲೀಕರಣದತ್ತ ಸಾಗದಂತೆ ಎಚ್ಚರ ವಹಿಸಿ. ಬಿರಿದ ತುಟಿಗಳನ್ನು ಆಗಾಗ ನೆಕ್ಕುತ್ತಿರಬೇಡಿ. ಇದರಿಂದ ಸಮಸ್ಯೆ ಬಿಗಡಾಯಿಸುತ್ತದೆ. ಚರ್ಮ ಸುರಿಯುತ್ತಿದ್ದರೆ ಅದನ್ನು ಎಳೆಯುವುದು, ಹಲ್ಲಿನಿಂದ ಕಚ್ಚುವುದು ಮಾಡಬೇಡಿ. ಬದಲಿಗೆ ತುಟಿಗೆ ಸರಿಯಾದ ಮ್ಯಾಯಿಶ್ಚರೈಸರ್ ಹಚ್ಚಿ.
ಅಲರ್ಜಿಗಳಿಂದಾಗಿ ಮೂಗು ಕಟ್ಟಿ ಬಾಯಲ್ಲಿ ಉಸಿರಾಡುತ್ತಿದ್ದರೆ, ಅದರಿಂದಲೂ ಬಾಯಿ ಒಣಗುತ್ತದೆ. ಅಲರ್ಜಿಗಳನ್ನು ನಿಯಂತ್ರಿಸಲು ಮದ್ದು ಮಾಡಿ. ದೀರ್ಘ ಕಾಲ ಸೂರ್ಯನ ಬಿಸಿಲಿಗೆ ಒಡ್ಡಿಕೊಂಡರೂ ತುಟಿ ಒಣಗಿ, ಕಪ್ಪಾಗಿ, ಬಿರಿಯುತ್ತದೆ. ಅಂಥ ಸಂದರ್ಭಗಳಲ್ಲಿ ಸನ್ಸ್ಕ್ರೀನ್ ಇರುವ ಮಾಯಿಶ್ಚರೈಸರ್ ಲೇಪಿಸಿ. ಧೂಮಪಾನದಿಂದಲೂ ತುಟಿಗಳ ಸ್ಥಿತಿ ದಯನೀಯವಾಗುತ್ತದೆ. ಇಂಥ ಸಂದರ್ಭಗಳಲ್ಲಿ ಒಂದಿಷ್ಟು ಮನೆಮದ್ದುಗಳನ್ನು ನೀವೇ ಮಾಡಿಕೊಳ್ಳಬಹುದು.
ಮೊದಲಿಗೆ ಒಣಗಿ ಸುಲಿದ ಚರ್ಮವನ್ನು ತೆಗೆದು ಹಾಕುವುದು ಅಗತ್ಯ. ಅದಿಲ್ಲದಿದ್ದರೆ ಸುಲಭಕ್ಕೆ ಬಿರಿದ ತುಟಿಗಳನ್ನು ಸರಿಪಡಿಸಲಾಗದು. ಹೀಗೆ ಎಕ್ಸ್ಫಾಲಿಯೇಟ್ ಮಾಡುವುದಕ್ಕೆ ದುಬಾರಿ ಬೆಲೆಯ ಸ್ಕ್ರಬ್ಗಳೇ ಬೇಕೆಂದಿಲ್ಲ. ಅದನ್ನೂ ಮನೆಯಲ್ಲೇ ಮಾಡಿಕೊಳ್ಳಬಹುದು. ಸಕ್ಕರೆ ಅಥವಾ ಸೈಂಧವ ಲವಣಕ್ಕೆ ಕೊಂಚ ಕೊಬ್ಬರಿ ಎಣ್ಣೆ ಅಥವಾ ಜೇನುತುಪ್ಪ ಮಿಶ್ರ ಮಾಡಿ. ಒದ್ದೆ ಬಟ್ಟೆಯ ನೆರವಿನಿಂದ ಈ ಮಿಶ್ರಣವನ್ನು ತುಟಿಗೆ ಹಾಕಿ ಮೃದುವಾಗಿ ತಿಕ್ಕಿ. ಇದರಿಂದ ಮೇಲ್ಪದರದಲ್ಲಿರುವ ಸತ್ತ ಚರ್ಮವೆಲ್ಲಾ ಎದ್ದು ಬರುತ್ತದೆ. ಹೊಸ ಚರ್ಮ ಬೆಳೆಯಲು ಅವಕಾಶವಾಗುತ್ತದೆ.
ಮನೆಮದ್ದುಗಳು
ದೇಹದ ಉಳಿದ ಭಾಗದ ಚರ್ಮದಂತಲ್ಲ ತುಟಿಗಳು. ಗಾಳಿ, ಬಿಸಿಲು, ಚಳಿ ಇದಕ್ಕೆಲ್ಲ ಬೇಗನೇ ನಲುಗುತ್ತವೆ. ಹಾಗಾಗಿ ನಿಮ್ಮಿಷ್ಟದ ಮಾಯಿಶ್ಚರೈಸರ್ ಹಚ್ಚುವುದು ಅಗತ್ಯ. ಅದಲ್ಲದೆ, ಕೆಲವು ಮನೆಮದ್ದುಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಉದಾ, ಶುದ್ಧ ಕೊಬ್ಬರಿ ಎಣ್ಣೆ. ಮೊದಲಿಗೆ ಚರ್ಮದ ತೇವವನ್ನು ಮಾತ್ರವೇ ಈ ಎಣ್ಣೆ ಹಿಡಿದಿಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಚರ್ಮ ಒಣಗದಂತೆ ರಕ್ಷಣಾ ಕವಚವನ್ನು ಮೇಲ್ಪದರದಲ್ಲಿ ಇದು ನಿರ್ಮಿಸುತ್ತದೆ ಎಂದೂ ಅಧ್ಯಯನಗಳು ಹೇಳುತ್ತವೆ. ಜೊತೆಗೆ, ಚರ್ಮದ ಉರಿ ಮತ್ತು ಊತವನ್ನು ಕಡಿಮೆ ಮಾಡುತ್ತದೆ.
ಲೋಳೆಸರ
ಸುಟ್ಟ ಮತ್ತು ಸೂರ್ಯನ ಬಿಸಿಲಿಗೆ ಕೆಂಪಾದ ಚರ್ಮಕ್ಕೆ ಇದರ ಲೇಪನ ಅತ್ತ್ಯುತ್ತಮ ಫಲಿತಾಂಶವನ್ನು ನೀಡುತ್ತದೆ. ಮಾತ್ರವಲ್ಲ, ಬಿರಿದ ತುಟಿಗಳಿಗೂ ಇದು ಮದ್ದು. ಇದರ ಎಲೆಗಳ ಒಳಗಿನ ಲೋಳೆಯನ್ನೇ ನೇರವಾಗಿ ತುಟಿಗೆ ಲೇಪಿಸಬಹುದು. ಅದಿಲ್ಲದಿದ್ದರೆ ಮಾರುಕಟ್ಟೆಯಲ್ಲಿರುವ ಶುದ್ಧ ಅಲೋವೇರಾ ಜೆಲ್ ಸಹ ಲೇಪಿಸಬಹುದು.
ಜೇನುತುಪ್ಪ
ಚರ್ಮದ ಸಮಸ್ಯೆಗಳ ಪರಿಹಾರಕ್ಕೆ ಜೇನುತುಪ್ಪ ಅತ್ಯಂತ ನಂಬಿಕಸ್ಥ ಮದ್ದು. ಇದರ ಉತ್ಕರ್ಷಣ ನಿರೋಧಕಗಳು ಗಾಯಗಳನ್ನು ಮಾಯಿಸುವಲ್ಲಿ ಒಳ್ಳೆಯ ಕೆಲಸ ಮಾಡಬಲ್ಲವು. ಹಾಗಾಗಿ ಒಡೆದು ರಕ್ತ ಸೋರುತ್ತಿರುವ ತುಟಿಗಳಿಗೆ ಕೊಂಚ ಕೊಬ್ಬರಿ ಎಣ್ಣೆಯೊಂದಿಗೆ ಜೇನುತುಪ್ಪವನ್ನು ಲೇಪಿಸಬಹುದು. ಇದರಿಂದ ಚಿಕ್ಕಪುಟ್ಟ ಸೋಂಕುಗಳೂ ಕಡಿಮೆಯಾಗುತ್ತವೆ
ಅವಕಾಡೊ ಬೆಣ್ಣೆ
ಬೆಣ್ಣೆ ಹಣ್ಣು ಪ್ರಬಲ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದರಿಂದ ತೆಗೆಯಲಾದ ಜಿಡ್ಡು ಸಹ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಉಳಿದ ತೈಲಗಳಂತೆಯೇ ಇದು ತುಟಿಗಳಿಗೆ ಪೋಷಣೆ ಒದಗಿಸುತ್ತದೆ. ಇದರ ಲೆನೊಲೆನಿಕ್ ಆಮ್ಲ ಮತ್ತು ಇತರ ಕೊಬ್ಬಿನಾಮ್ಲಗಳು ಒಡೆದ ತುಟಿಗಳನ್ನು ಮೃದುವಾಗಿಸಬಲ್ಲವು.
ಪೆಟ್ರೋಲಿಯಂ ಜೆಲ್ಲಿ
ಸಾಮಾನ್ಯ ಎಣ್ಣೆ, ಬೆಣ್ಣೆಗಳಿಗಿಂತ ಹೆಚ್ಚು ಕಾಲ ಇದು ತೇವವನ್ನು ಹಿಡಿದಿಡಬಲ್ಲದು. ಚಳಿಯಿಂದ ಒಡೆದ ತುಟಿಗಳಿಗೆ ಇದು ನೆರವಾಗಬಲ್ಲದು, ಆದರೆ ಸೂರ್ಯನ ತಾಪಕ್ಕೆ ಚರ್ಮ ಸುಲಿದಿದ್ದರೆ ಮಾತ್ರ ಪೆಟ್ರೋಲಿಯಂ ಜೆಲ್ಲಿ ಹೇಳಿಸಿದ್ದಲ್ಲ. ಇದರಿಂದ ಸಮಸ್ಯೆ ಹೆಚ್ಚುತ್ತದೆ.
ಇದನ್ನೂ ಓದಿ: Bone Health In Winter: ಚಳಿಗಾಲದಲ್ಲಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?