Site icon Vistara News

Lucid dreaming : ಏನಿದು ಸ್ಪಷ್ಟ ಕನಸು? ಏನಿದರ ಪ್ರಯೋಜನ?

Lucid dreaming

ಕನಸುಗಳು ಒಂಥರಾ ಪುರಾಣ ಕಾಲದ ನಾರದರ ಹಾಗೆ! ಬೇಕೆಂದಾಗ ಬಾರದೆ, ಬೇಡ ಎಂದಾಗ ಖಂಡಿತಾ ಬಂದು, ಕೆಲವು ಬಾರಿ ತಲೆಬಿಸಿ ತಂದು, ಹಲವು ಬಾರಿ ಒಳ್ಳೆಯದನ್ನು ಮಾಡುತ್ತವೆ. ಸ್ವಪ್ನಗಳ ಬಗ್ಗೆ ಸಿಕ್ಕಾಪಟ್ಟೆ ಸಂಶೋಧನೆ, ಅಧ್ಯಯನಗಳು ನಡೆದಿವೆ, ನಡೆಯುತ್ತಿವೆ. ಮನಸ್ಶಾಸ್ತ್ರಜ್ಞರಿಗೂ ಈ ಬಗ್ಗೆ ತೀರದ ಕುತೂಹಲಗಳಿವೆ. ʻಕನಸು ಕಾಣುತ್ತಲೇ ಇರಿ, ಆಗಷ್ಟೇ ನನಸಾಗುವುದಕ್ಕೆ ಸಾಧ್ಯʼ ಎಂಬ ಖ್ಯಾತನಾಮರ ಮಾತುಗಳಿಗೆ, ʻಅಂದರೆ ನಿದ್ದೆ ಮಾಡುತ್ತಲೇ ಇರಿʼ ಎಂದು ಅರ್ಥೈಸಿದ ಕಿಡಿಗೇಡಿಗಳಿಗೂ ಬರವಿಲ್ಲ. ಅದೇನೇ ಇರಲಿ, ನಮ್ಮ ಕನಸುಗಳನ್ನು ನಾವು ನಿಯಂತ್ರಿಸಬಹುದೇ? ಹಗಲುಗನಸಿನ ಬಗ್ಗೆಯಲ್ಲ ಇಲ್ಲಿ ಹೇಳುತ್ತಿರುವುದು, ಮಲಗಿದಾಗ ಬೀಳುವ ಸ್ವಪ್ನಗಳ ಬಗ್ಗೆ.

ಮಾನವನ ಮನಸ್ಸು ಅಚ್ಚರಿಗಳ ಆಗರ. ಹಾಗಾಗಿಯೇ ಕನಸು ಕಾಣುವುದನ್ನು ಅಥವಾ ಕನಸು ಬೀಳುವುದನ್ನು ತಡೆಯಲು ಮಾತ್ರ ಸಾಧ್ಯವಿಲ್ಲ. ಆದರೆ ಸ್ಪಷ್ಟ ಕನಸು (Lucid dreaming) ಒಂದಲ್ಲಾ ಒಂದು ಬಾರಿ ಎಲ್ಲರಿಗೂ ಅನುಭವಕ್ಕೆ ಬಂದೇ ಇರುತ್ತದೆ. ಅಂದರೆ ಕನಸು ಕಾಣುತ್ತಿರುವ ವ್ಯಕ್ತಿಗೆ, ಇದು ನಿಜವಲ್ಲ- ಕನಸು ಎಂಬುದು ತಿಳಿದಿರುತ್ತದೆ. ಇಡೀ ಕನಸಿನ ವಿವರಗಳನ್ನು ತಾನೇ ನಿರ್ದೇಶಿಸಬಲ್ಲೆ ಎಂದು ಭಾಸವಾಗುತ್ತದೆ. ತನ್ನದೇ ನಿರ್ದೇಶನದ ಸಿನೆಮಾ ಇದು ಎಂಬಂತೆ, ಎಚ್ಚರವೋ ಅಥವಾ ನಿದ್ದೆಯೋ ತಿಳಿಯದ ಸ್ಥಿತಿಯಲ್ಲಿ ಕನಸು ಬೀಳುತ್ತಲೇ ಹೋಗುತ್ತದೆ. ಆದರೆ ಇವೆಲ್ಲವೂ ಕನಸು ಎಂಬುದು ಕಾಣುತ್ತಿರುವ ವ್ಯಕ್ತಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ.

ನಿದ್ದೆಯ ಆರ್‌ಇಎಂ (rapid eye movement ) ಹಂತದಲ್ಲಿ ಸ್ಪಷ್ಟ ಕನಸುಗಳು ಬೀಳುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಇದೇ ಕಾರಣಕ್ಕಾಗಿ ಕನಸು ನೆನಪಿರುತ್ತದೆ ಮತ್ತು ಅದನ್ನು ನಿರ್ದೇಶಿಸಲು ತನಗೆ ಸಾಧ್ಯ ಎಂಬ ಭಾವ ಕನಸುಗಾರನಿಗೆ ಬರುತ್ತದೆ. ತಮ್ಮ ಅನುಭವಕ್ಕೆ ಬಂದಿದ್ದು ನಿಜವೋ ಕನಸೋ ಎಂದು ಗೊಂದಲ ಮೂಡುವುದೂ ಇದೇ ಹಂತದಲ್ಲಿ. ಆದರೆ ಸ್ಪಷ್ಟ ಕನಸುಗಳಿಗೆ ಚಿಕಿತ್ಸಕ ಗುಣವಿದೆ. ಇಂಥ ಕನಸುಗಳ ಮೂಲಕ ಮಾನಸಿಕ ಚಿಕಿತ್ಸೆಯನ್ನೂ ನೀಡಬಹುದು ಎಂಬುದು ಮನೋಚಿಕಿತ್ಸಕರ ಮಾತು. ಹೇಗೆ, ನೋಡೋಣ ಬನ್ನಿ.

ಚಿಕಿತ್ಸೆ ಸಾಧ್ಯ
ನಿದ್ದೆಯಲ್ಲಿ ಕಂಡಿದ್ದು ಜಾಗೃತ ಮನಸ್ಸಿಗೆ ಹೇಗೆ ಲಾಭದಾಯಕ ಎನ್ನುವುದು ಪ್ರಶ್ನೆ. ದುಃಸ್ವಪ್ನಗಳಿಂದ ಪದೇಪದೆ ತೊಂದರೆಗೀಡಾಗುವವರಲ್ಲಿ, ಮಾನಸಿಕ ಒತ್ತಡಕ್ಕೆ ಒಳಗಾದವರಲ್ಲಿ, ನಾನಾ ಭೀತಿಗಳಿಗೆ ತುತ್ತಾದವರಲ್ಲಿ ಈ ಮೂಲಕ ಧೈರ್ಯ ತುಂಬಲು ಸಾಧ್ಯವಿದೆ ಎನ್ನುತ್ತಾರೆ ಚಿಕಿತ್ಸಕರು. ಬೀಳುತ್ತಿರುವುದು ಕನಸು ಮತ್ತೆ ಈ ಬಗ್ಗೆ ಹೆದರುವ ಅಗತ್ಯವಿಲ್ಲ; ತನ್ನ ಕನಸಿನಂತೆಯೇ ತನ್ನ ಬದುಕನ್ನೂ ತಾನೇ ನಿರ್ದೇಶಿಸಿಕೊಳ್ಳಬಹುದು ಎಂಬಂಥ ಭರವಸೆಯ ಭಾವಗಳು ಕನಸುಗಾರನಲ್ಲಿ ಬಂದರೆ, ಮನಸ್ಸಿನ ಹಲವು ತೊಂದರೆಗಳು ದೂರಾಗುತ್ತವೆ.

ಸ್ಪಷ್ಟ ಕನಸಿನ ಸಂದರ್ಭದಲ್ಲಿ ನಮ್ಮ ಮೆದುಳಿನ ಕೆಲವು ಭಾಗ ಜಾಗೃತ ಅವಸ್ಥೆಯಲ್ಲೇ ಇರುತ್ತದೆ. ಇಂಥ ಸ್ಥಿತಿಯಲ್ಲಿ ಮಾಡುವಂಥ ಅಭ್ಯಾಸಗಳು ಜಾಗೃತ ಬದುಕಿನಲ್ಲಿ ಲಾಭದಾಯಕವಾಗಬಲ್ಲವು. ಉದಾ, ಪಿಯಾನೊ ಕಲಿಯುವವರು ಚುರುಕಾಗಿ ಬೆರಳಾಡಿಸುವುದನ್ನು ಸ್ಪಷ್ಟ ಸ್ವಪ್ನದ ಸ್ಥಿತಿಯಲ್ಲಿ ರೂಢಿಸಿಕೊಂಡರೆ, ಎಚ್ಚೆತ್ತಾಗಲೂ ಈ ಅಭ್ಯಾಸ ಕೈಬಿಡುವುದಿಲ್ಲ.

ಸ್ಪಷ್ಟ ಸ್ವಪ್ನಗಳು ಹೆಚ್ಚಿಗೆ ಕಾಣಿಸಿಕೊಳ್ಳುವವರು ಎಂಥ ಮನಸ್ಥಿತಿಯವರು ಎಂಬುದನ್ನೂ ಅಧ್ಯಯನ ನಡೆಸಲಾಗಿದೆ. ಮಾನಸಿಕ ದೃಢತೆ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಂಥವರಲ್ಲಿ ಲೂಸಿಡ್‌ ಡ್ರೀಮಿಂಗ್‌ ಹೆಚ್ಚು ಎನ್ನಲಾಗುತ್ತದೆ. ಅಥವಾ ಲೂಡಿಸ್‌ ಡ್ರೀಮ್‌ಗಳು ಹೆಚ್ಚು ಕಾಣಿಸಿಕೊಳ್ಳುವವರಲ್ಲಿ ಚಿತ್ತ ಸ್ವಾಸ್ಥ್ಯ ಹೆಚ್ಚು ಎಂದೂ ಇರಬಹುದಲ್ಲ. ಒಟ್ಟಿನಲ್ಲಿ, ಸ್ಪಷ್ಟ ಸ್ವಪ್ನಗಳಿಂದ ಸಿಕ್ಕುಗಳನ್ನು ಬಿಡಿಸುವ ಸಾಮರ್ಥ್ಯ ಹೆಚ್ಚುತ್ತದೆ ಮತ್ತು ಅಂಥವರು ಹೆಚ್ಚು ಕ್ರಿಯಾಶೀಲರು ಎನ್ನುತ್ತದೆ ಮನೋವಿಜ್ಞಾನ.

ಇದನ್ನೂ ಓದಿ: Healthy Pasta | ಪಾಸ್ತಾ ಎಂಬ ಮೋಡಿಗಾರ: ತೂಕ ಇಳಿಸುವ ಮಂದಿ ಪಾಸ್ತಾ ತಿನ್ನಬಾರದೇ?

Exit mobile version