Site icon Vistara News

Madras Eye: ಎಲ್ಲೆಡೆ ಹರಡುತ್ತಿದೆ ಮದ್ರಾಸ್ ಐ ಕಣ್ಣು ನೋವು: ಮುನ್ನೆಚ್ಚರಿಕೆ ಹೀಗಿರಲಿ!

madras eye

ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ರಾಜ್ಯದಲ್ಲೂ ಎಲ್ಲೆಡೆ ಭಾರೀ ಮಳೆಯಾಗಿರುವುದು ಹಾಗೂ ಆಗುತ್ತಿರುವುದು ಗೊತ್ತೇ ಇದೆ. ಅದೇ ಕಾರಣದಿಂದ ಇದೀಗ ಆರೋಗ್ಯ ಸಮಸ್ಯೆಗಳೂ (health tips) ಹೆಚ್ಚಾಗುತ್ತಿದೆ. ಕೇವಲ ಡೆಂಗ್ಯು ಮಾತ್ರವಲ್ಲ, ಇದ್ದಕ್ಕಿದಂತೆ ಎಲ್ಲೆಡೆ, ಕಂಜಂಟಿವೈಟಿಸ್‌ ಹೆಸರಿನ ಹಾಗೂ ಸಾಮಾನ್ಯವಾಗಿ ಮಡ್ರಾಸ್‌ ಐ (ಕೆಂಗಣ್ಣು- Madras eye infection) ಎಂಬ ಹೆಸರಿನಿಂದ ಕರೆಯಲ್ಪಡುವ ಕಣ್ಣು ನೋವಿನ ಸಮಸ್ಯೆಯೂ ವ್ಯಾಪಕವಾಗಿ ಹಬ್ಬತೊಡಗಿದೆ. ಕರ್ನಾಟಕವೂ ಸೇರಿದಂತೆ, ದೆಹಲಿ, ಗುಜರಾತ್‌, ಈಶಾನ್ಯ ರಾಜ್ಯಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದೆ. ಮಕ್ಕಳಲ್ಲಿ ಈ ಕೆಂಗಣ್ಣಿನ ಸಮಸ್ಯೆ ವ್ಯಾಪಕವಾಗಿ ಹಬ್ಬುತ್ತಿದ್ದು, ಈ ಹಿನ್ನೆಲೆಯಲ್ಲಿ ಅರುಣಾಚಲ ಪ್ರದೇಶದ ಇಟಾನಗರದ ಶಾಲೆಗಳಲ್ಲಿ ಎಂಟನೇ ತರಗತಿವರೆಗಿನ ಮಕ್ಕಳಿಗೆ ಜುಲೈ ‌25ರಿಂದ ಜುಲೈ 26ರವರೆಗೆ ರಜೆಯನ್ನೂ ಸಾರಲಾಗಿದೆ.

ಸಾಮಾನ್ಯವಾಗಿ ಚಳಿಗಾಲದಲ್ಲಿ ಅಂದರೆ ನವೆಂಬರ್‌ ಸುಮಾರಿಗೆ ಕಾಣಿಸಿಕೊಳ್ಳುವ ಈ ಸಮಸ್ಯೆ ಈ ಬಾರಿ ಮಳೆಗಾಲದಲ್ಲೇ ವಕ್ಕರಿಸಿಕೊಂಡಿದ್ದು, ವಿಪರೀತ ಮಳೆಯೇ ಇದಕ್ಕೆ ಕಾರಣವಾಗಿದೆ. ವೈರಾಣುಗಳಿಂದ ಹರಡುವ ಈ ಕಾಯಿಲೆ ವಾತಾವರಣದಲ್ಲಿ ತೇವಾಂಶ ಹೆಚ್ಚಾದಾಗ ಅಥವಾ ಚಳಿ ಹೆಚ್ಚಾದಾಗ ಕಾಣಿಸಿಕೊಳ್ಳುವ ಸಮಸ್ಯೆ. ಜುಲೈ ಆರಂಭದಿಂದಲೂ ಎಲ್ಲೆಡೆ ವಿಪರೀತ ಮಳೆಯಾಗುತ್ತಿದ್ದು, ಸೂರ್ಯನ ಬಿಸಿಲೇ ಇಲ್ಲವಾಗಿರುವುದರಿಂದಲೇ ವೈರಾಣುಗಳ ಹರಡುವಿಕೆಗೆ ಕಾರಣವಾಗಿದೆ.

ಮಲೆನಾಡು ಹಾಗೂ ಮಧ್ಯ ಕರ್ನಾಟಕ ಕಳೆದ ಒಂದು ವಾರದಿಂದ ಈ ಪ್ರಕರಣಗಳು ಹೆಚ್ಚಾಗುತ್ತಿವೆ. ಶಾಲೆ ಕಾಲೇಜು ಮಕ್ಕಳಲ್ಲಿ ಇದು ಹೆಚ್ಚಾಗಿದೆ. ವಿದ್ಯಾರ್ಥಿಗಳು ತಮ್ಮ ನಿತ್ಯದ ಕೆಲಸಗಳಲ್ಲಿ ಪರಸ್ಪರ ಹೆಚ್ಚು ಬೆರೆಯುವುದರಿಂದ ಸಹಪಾಠಿಗಳ, ಪುಸ್ತಕ, ಪೆನ್‌, ಪೆನ್ಸಿಲ್‌ ಇತ್ಯಾದಿಗಳನ್ನು ಹಂಚಿಕೊಳ್ಳುವುದರಿಂದ, ಜೊತೆಗೇ ಆಡುವುದು ಇತ್ಯಾದಿಗಳಿಂದ ವೈರಾಣುಗಳು ಸುಲಭವಾಗಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿವೆ. ವೈದ್ಯರ, ಜಿಲ್ಲಾಸ್ಪತ್ರೆಗಳ ಬಳಿ ಕಣ್ಣಿನ ಸಮಸ್ಯೆಯ (eye care) ರೋಗಿಗಳು ಸಾಲುಗಟ್ಟಿ ನಿಲ್ಲಲಾರಂಭಿಸಿದ್ದಾರೆ.

ಹಾಗಾದರೆ, ಈ ಕೆಂಗಣ್ಣು ಸಮಸ್ಯೆ ಬರದಂತೆ ಹೇಗೆ ತಡೆಗಟ್ಟಬಹುದು (Madras eye prevention) ಎಂಬುದನ್ನು ನೋಡೋಣ.

1. ಕಣ್ಣು ಕೆಂಪಗಾಗುತ್ತಿರುವುದು, ಕಸ ಬಿದ್ದಾಗ ಆಗುವಂತೆ ಚುಚ್ಚುವುದು, ಕಣ್ಣಿನಲ್ಲಿ ತುರಿಕೆ ಹಾಗೂ ಕಿರಿಕಿರಿಯಾಗುವುದು, ಕಣ್ಣಿನಿಂದ ನೀರು ಸುರಿಯುವುದು, ಬೆಳಗ್ಗೆ ಏಳುವಾಗ ಹೀಚು ಬರುವುದು, ಕಣ್ಣಿನ ರೆಪ್ಪೆ ದಪ್ಪ ಆದಂತೆ ಅನಿಸುವುದು ಇತ್ಯಾದಿಗಳ ಅನುಭವ ಆಗುತ್ತಿದ್ದಂತೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ನೀವೇ ನಿಮಗೆ ತೋಚಿದ ಐ ಡ್ರಾಪ್ಸ್‌ ಹಾಕದೆ, ವೈದ್ಯರು ಹೇಳಿದ ಐ ಡ್ರಾಪ್ಸ್‌ ಹಾಕಿ.

2. ಮುಖ್ಯವಾಗಿ ಈ ಮೇಲಿನ ಸಮಸ್ಯೆಗಳು ಕಂಡು ಬಂದಾಗ ಇತರರಿಂದ ದೂರವಿರಿ. ನಿಮ್ಮ ವಸ್ತುಗಳನ್ನು ಇತರರಿಗೆ ಬಳಸಲು ಕೊಡಬೇಡಿ. ಅವರ ವಸ್ತುಗಳನ್ನೂ ತೆಗೆದುಕೊಳ್ಳಬೇಡಿ.

3. ಕಣ್ಣಿನ ಸಮಸ್ಯೆ ಇದೆ ಎಂದು ಗೊತ್ತಾದ ತಕ್ಷಣ ಹೊರಗೆ ತಿರುಗಾಡಬೇಡಿ. ಬೇರೆಯವರಿಂದ ದೂರವಿರಿ. ಯಾಕೆಂದರೆ ಗಾಳಿಗೆ ಸುತ್ತಾಡಲು ಹೋಗುವುದರಿಂದ ಕಣ್ಣಿನ ವೈರಾಣುಗಳು ಗಾಳಿಯ ಮೂಲಕವೂ ಪ್ರಸಾರವಾಗಿ ಇತರರಿಗೆ ಹರಡುತ್ತದೆ.

Cry Eye

4. ಮೊಬೈಲ್‌ ವೀಕ್ಷಣೆ, ಟಿವಿ ನೋಡುವುದು ಇತ್ಯಾದಿಗಳನ್ನು ಬಿಟ್ಟು ಕಣ್ಣಿಗೆ ವಿಶ್ರಾಂತಿ ನೀಡಿ. ವಾಹನ ಚಲಾಯಿಸುವುದು, ಕೆಲಸಕ್ಕೆ ಹೊರಗೆ ಹೋಗುವುದು ಇತ್ಯಾದಿಗಳನ್ನೂ ಮಾಡಬೇಡಿ.

ಇದನ್ನೂ ಓದಿ: Thyroid Health Tips: ಥೈರಾಯ್ಡ್‌ ಸಮಸ್ಯೆ ಎಂಬ ಸಾಮಾನ್ಯ ತೊಂದರೆ: ಆಹಾರಕ್ರಮದಲ್ಲೇ ಪರಿಹಾರವಿದೆ!

5. ಈ ಸಮಸ್ಯೆ ಇರುವ ಮಂದಿ ಕೆಲ ದಿನ ಪ್ರತ್ಯೇಕ ಕೋಣೆಯಲ್ಲಿರುವುದು ಒಳ್ಳೆಯದು.

6. ಕಣ್ಣಿನ ತೊಂದರೆ ಬರಬಹುದು ಎಂದು ಮೊದಲೇ ಕಣ್ಣಿಗೆ ಐ ಡ್ರಾಪ್ಸ್‌ ಹಾಕಬೇಡಿ. ಇದರಿಂದ ಕಣ್ಣಿನ ತೊಂದರೆ ಬಂದರೆ ಸಮಸ್ಯೆ ದುಪ್ಪಟ್ಟಾಗುವ ಭಯ ಇದೆ.

7. ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಈ ಬಗ್ಗೆ ಜಾಗ್ರತೆ ವಹಿಸಲು ಹೇಳಿ. ಅವರಿಗೆ ಆಗಾಗ ಕೈತೊಳೆಯಲು ಹೇಳಿ. ಸುಮ್ಮನೆ ಕಣ್ಣಿಗೆ ಕೈಹಾಕಿ ತುರಿಸುತ್ತಿರುವುದು ಕೈಯಿಂದ ಕಣ್ಣೊರೆಸಿಕೊಳ್ಳುವುದು ಇತ್ಯಾದಿಗಳನ್ನು ಮಾಡದಿರುವಂತೆ ತಿಳಿಹೇಳಿ.

8. ಸೋಂಕಿತರ ಕಣ್ಣನ್ನು ನೋಡುವುದರಿಂದ ಕಣ್ಣು ನೋವು ಬರದು. ಆದರೆ, ಅವರ ಕಣ್ಣೀರು ಗಾಳಿಯಲ್ಲಿ ಬಹುಬೇಗನೆ ಹರಡುತ್ತವೆ. ಹಾಗಾಗಿ ಕಣ್ಣು ನೋವಿನ ಸಮಸ್ಯೆಯಿರುವ ಮಂದಿಯಿಂದ ದೂರವಿದ್ದು ಜಾಗ್ರತೆ ವಹಿಸಿ.

ಇದನ್ನೂ ಓದಿ: Health Tips For Rainy Season: ಮಳೆಗಾಲದಲ್ಲಿ ಹೆಚ್ಚುವ ನೋವುಗಳನ್ನು ಕಡಿಮೆ ಮಾಡುವುದು ಹೇಗೆ?

Exit mobile version