Site icon Vistara News

Makeup less beauty | ಮೇಕಪ್‌ ಇಲ್ಲದೇ ʻಸ್ಮಾರ್ಟ್‌ ಆ್ಯಂಡ್‌ ಬ್ಯೂಟಿಫುಲ್‌ʼ ಆಗಿ ಕಾಣಲು 20 ಸೂತ್ರಗಳು!

beauty

ಬಾಹ್ಯ ಸೌಂದರ್ಯಕ್ಕಿಂತಲೂ ಆಂತರಿಕ ಸೌಂದರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಎಂಬ ಮಾತಿದೆ. ಸೌಂದರ್ಯವಿರುವುದು ನೋಡುಗನ ಕಣ್ಣಲ್ಲಿ ಎಂಬ ಮಾತೂ ಸತ್ಯವೇ. ಆದರೂ ಮುಖ ನೋಡಿ ಮಣೆ ಹಾಕುವ ಈ ಕಾಲದಲ್ಲಿ ನಮ್ಮನ್ನು ನಾವು ಸ್ಮಾರ್ಟ್‌ ಆಗಿ ಕಾಣುವಂತೆ ಬಿಂಬಿಸಲು ಮಹಿಳೆಯರು ಮಾಡುವ ಸರ್ಕಸ್‌ ಒಂದೆರಡಲ್ಲ. ಮೇಕಪ್‌ ಎಂಬುದು ಆಧುನಿಕ ಮಹಿಳೆಯರ ದಿನನಿತ್ಯದ ಸೌಂದರ್ಯದ ಅವಿಭಾಜ್ಯ ಅಂಗವಾದರೂ ಮೇಕಪ್‌ ಇಲ್ಲದೆಯೇ ಸುಂದರರವಾಗಿ ಕಾಣುವುದೂ ಕೂಡಾ ಈಗಿನ ಕಾಲದಲ್ಲಿ ಚಾಲೆಂಜೇ. ಆದರೂ, ಢಾಳಾಗಿ ಮೇಕಪ್‌ ಮಾಡಿಕೊಳ್ಳುವುದಕ್ಕಿಂತಲೂ ಈಗೆಲ್ಲ ನ್ಯೂಡ್‌ ಮೇಕಪ್‌ ಕೂಡಾ ಹೆಚ್ಚು ಟ್ರೆಂಡೀ ಆಗುತ್ತಿದೆ. ಸ್ವಲ್ಪವೇ ಸ್ವಲ್ಪ ಮೇಕಪ್‌ ಮಾಡಿಕೊಂಡು, ಮೇಕಪ್‌ ಇದ್ದೂ ಇಲ್ಲದಂತೆ ಕಾಣುವ ಅಥವಾ ಮೇಕಪ್‌ ಇಲ್ಲದೆಯೂ ಸ್ಮಾರ್ಟ್‌ ಆಗಿ, ಸುಂದರವಾಗಿ, ಸ್ಟೈಲಿಷ್‌ ಆಗಿ ಕಾಣುವ ರಹಸ್ಯಗಳನ್ನು ಈಗಿನ ಹುಡುಗಿಯರು ಕಂಡುಕೊಂಡಿದ್ದಾರೆ ಕೂಡಾ.

ಮುಖದ ಸೌಂದರ್ಯದ ಗುಟ್ಟು ನಮ್ಮ ಲೈಫ್‌ಸ್ಟೈಲಿನಲ್ಲಿ ಅಡಗಿದೆ ಎನ್ನುತ್ತಾರೆ. ಹಾಗಾದರೆ, ಹೆಚ್ಚಿನ ಮೇಕಪ್‌ ಅಗತ್ಯವಿಲ್ಲದೆ ನಮ್ಮನ್ನು ನಾವು ಸುಂದರರನ್ನಾಗಿ ಕಾಣುವಂತೆ ಮಾಡಿಕೊಳ್ಳುವುದು ಹೇಗೆ ಎಂಬ ಗೊಂದಲಗಳಿಗೆ ಪರಿಹಾರ ಇಲ್ಲಿದೆ. ಒಳಗಿನಿಂದಲೇ ಆರೋಗ್ಯಕರ ಶೈಲಿಯಲ್ಲಿ ನಮ್ಮ ಚೆಲುವನ್ನು ವೃದ್ಧಿಸಿಕೊಳ್ಳುವ ಸ್ಮಾರ್ಟ್‌ ಸುಲಭೋಪಾಯಗಳು ಇಲ್ಲಿವೆ.

೧. ಉತ್ತಮ ಆರೋಗ್ಯಕರ ಆಹಾರ ಸೇವಿಸಿ. ನೀವೇನು ಆಹಾರ ತಿನ್ನುತ್ತೀರೋ ಅದೇ ನಿಮ್ಮ ಚರ್ಮದ ಆರೋಗ್ಯದ ಗುಟ್ಟೂ ಕೂಡಾ. ಚರ್ಮ ಫಳಪಳಿಸುವಂತಿರಲು ಹೇರಳವಾಗಿ ಹಣ್ಣು, ತರಕಾರಿ, ಒಮೆಗಾ-೩ ಫ್ಯಾಟಿ ಆಸಿಡ್‌ ಇರುವ ಫ್ಲ್ಯಾಕ್‌ ಸೀಡ್‌, ವಾಲ್‌ನಟ್‌ ಮತ್ತಿತರ ಆಹಾರಗಳನ್ನು ಹೆಚ್ಚು ಪ್ರತಿನಿತ್ಯ ಸೇವಿಸಬೇಕು.

೨. ಸಾಕಷ್ಟು ನೀರು ಕುಡಿಯಿರಿ. ನೀರು ದೇಹದಲ್ಲಿರುವ ಕಶ್ಮಲಗಳನ್ನು ಹೊರತಳ್ಳುವುದರಿಂದ ಹೆಚ್ಚು ನೀರು ಕುಡಿದರೆ, ತಾಜಾ ಆಗಿ ಕಾಣಿಸುತ್ತೀರಿ.

೩. ನೆಮ್ಮದಿಯಿಂದ ನಿದ್ದೆ ಮಾಡಿ. ಸುಖವಾದ ನಿದ್ದೆ ಸೌಂದರ್ಯದ ಕೀಲಿಕೈ. ಪ್ರತಿದಿನವೂ ಸರಿಯಾದ ನಿದ್ದೆ ಸಿಕ್ಕರೆ, ನಿಮ್ಮ ಮುಖವಷ್ಟೇ ಅಲ್ಲ ದೇಹವಿಡೀ ಚೈತನ್ಯದ ಚಿಲುಮೆಯಾಗುತ್ತದೆ.

೪. ನೀವು ಬಳಸುವ ಸೌಂದರ್ಯ ಪರಿಕರಗಳಲ್ಲಿ ಬಳಸುವ ವಸ್ತುಗಳ ಬಗ್ಗೆ ಗಮನ ಇರಲಿ. ಅವುಗಳಲ್ಲಿರುವ ರಾಸಾಯನಿಕಗಳ ಬಗ್ಗೆ ತಿಳಿದುಕೊಳ್ಳಿ. ಅತಿಯಾದ ಬಳಕೆ ಒಳ್ಳೆಯದಲ್ಲ. ಇವು ಪ್ಯಾರಾಬೆನ್‌, ಸಲ್ಫೇಟ್‌, ಪೆಟ್ರೋಕೆಮಿಕಲ್‌ ವಸ್ತುಗಳಿಂದ ದೂರವಿರಲಿ.

೫. ಆರೋಗ್ಯಕರವಾದ ಚರ್ಮಕ್ಕೆ ಪಡೆಯುವತ್ತ ಸಮಯ ಮೀಸಲಿಡಿ. ಬದಲಾಗಿ, ಚರ್ಮವನ್ನು ಮೇಕಪ್‌ನಿಂದ ಹೇಗೆ ಕವರ್‌ ಮಾಡಿಕೊಳ್ಳಬಹುದು ಎಂದಲ್ಲ. ನಿಯಮಿತ ವ್ಯಾಯಾಮ, ದೇಹ ಚರ್ಮ, ಮನಸ್ಸನ್ನು ಆರೋಗ್ಯವಾಗಿಡುತ್ತದೆ.

೬. ಪ್ರತಿನಿತ್ಯ ಒಂದು ಸಣ್ಣ ಸಮಯವನ್ನು ನಿಮ್ಮ ಚರ್ಮದ ಕಾಳಜಿಗೆಂದೇ ಮೀಸಲಿಡಿ. ಹೊರಗೆ ಹೋಗಿ ಬಂದ ಮೇಲೆ ಶುಚಿತ್ವ ಕಾಪಾಡಿ. ಚರ್ಮಕ್ಕೆ ಉಸಿರಾಡಲು ಬಿಡಿ. ಮೃದುವಾದ ಮಾಯ್‌ಶ್ಚರೈಸರ್‌ ಮರೆಯಬೇಡಿ.

ಇದನ್ನೂ ಓದಿ | Baby crying | ಮಗುವಿನ ಅಳು ನಿಲ್ಲಿಸುವ ಸುಲಭೋಪಾಯ ಕಂಡು ಹಿಡಿದರು ಜಪಾನೀಯರು!

೭. ಹೊರಗೆ ಕಾಲಿಡುವಾಗ ಸನ್‌ಸ್ಕ್ರೀನ್‌ ಬಳಸಿ. ಹಾನಿಕಾರಕ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಿ.

೮. ಒತ್ತಡಗಳಿಂದ ದೂರವಿರಿ. ಅತಿಯಾದ ಒತ್ತಡ ಚರ್ಮ ಕೂದಲು, ಆರೋಗ್ಯ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ. ಅಂಥ ಸಂದರ್ಭಗಳಲ್ಲೂ ಧ್ಯಾನ, ಯೋಗಕ್ಕೆ ಗಮನಕೊಟ್ಟು ಒತ್ತಡ ನಿವಾರಿಸಿಕೊಳ್ಳಿ.

೯. ಗ್ರೀನ್‌ ಟೀ ಕುಡಿಯಿರಿ. ತೂಕವನ್ನು ಆರೋಗ್ಯಕರ ರೀತಿಯಲ್ಲಿ ಕಾಪಾಡಿಕೊಳ್ಳಿ.

೧೦. ಆಗಾಗ ಮುಖಕ್ಕೆ ಮಸಾಜ್‌ ಮಾಡಿಕೊಳ್ಳಿ. ಇದರಿಂದ ಮುಖದಲ್ಲಿ ರಕ್ತಪರಿಚಲನೆ ಸರಿಯಾಗುತ್ತದೆ. ಚರ್ಮ ಸುಕ್ಕಾಗುವಿಕೆ, ಕಲೆಗಳನ್ನೂ ಇದು ಕಡಿಮೆ ಮಾಡುತ್ತದೆ.‌

೧೧. ನಿಮಗೆ ಹೊಂದುವ, ಸರಿಯಾದ ಫಿಟ್ಟಿಂಗ್‌ನ ಬಟ್ಟೆಗಳನ್ನೇ ಧರಿಸಿ. ವ್ಯಕ್ತಿತ್ವಕ್ಕೆ ಹೊಂದುವ ಬಟ್ಟೆಗಳ ಬಗ್ಗೆಯೂ ಗಮನ ಕೊಡಿ. ಯಾವ ಸಮಯಕ್ಕೆ ಎಂತಹ ಬಟ್ಟೆಗಳನ್ನು ಧರಿಸಿಬೇಕು ಎಂಬ ಸಾಮಾನ್ಯ ಜ್ಞಾನವಿರಲಿ.

೧೨. ನಗು ಎಲ್ಲದರ ಮೂಲ ಮಂತ್ರ. ನಿಮ್ಮ ನಗುವಿನ ಬಗೆಗೆ ಕಾಳಜಿಯಿರಲಿ. ಅದಕ್ಕಾಗಿ ಹಲ್ಲಿನ ಬಗೆಗೂ ಕಾಳಜಿ ವಹಿಸಿ.

೧೩. ಆಗಾಗ ಕೂದಲನ್ನು ಟ್ರಿಮ್‌ ಮಾಡಿ. ಮೈ, ಮುಖದ ಮೇಲಿನ ಅನವಶ್ಯಕ ಕೂದಲುಗಳನ್ನು ವ್ಯಾಕ್ಸ್‌ ಮಾಡಿ.

ಇದನ್ನೂ ಓದಿ | World alzheimers month | ಮರೆವಿನ ರೋಗ ಅಲ್ಜೈಮರ್ಸ್‌ ಬಗೆಗೆ ಇರಲಿ ಅರಿವು

೧೪. ಮೊಡವೆಗಳು ಆಗಾಗ ಮುಖದಲ್ಲಿ ಏಳುತ್ತಿದ್ದರೆ ಕಾಳಜಿ ವಹಿಸಿ. ಯಾವ ಸಮಸ್ಯೆಯಿಂದಾಗಿ ಮೊಡವೆಯ ಸಮಸ್ಯೆ ಉಲ್ಬಣಗೊಂಡಿದೆ ಎಂದು ಮೂಲ ಪತ್ತೆ ಹಚ್ಚಿ ಚಿಕಿತ್ಸೆ ಮಾಡಿ.

೧೫. ಜಂಕ್‌ ತಿನ್ನುವುದನ್ನು ಬಿಡಿ. ಅಥವಾ ಕಡಿಮೆ ಮಾಡುವ ಬಗ್ಗೆ ಪ್ರಯತ್ನಪಡಿ.

೧೬. ನಿಮ್ಮದೇ ಆದ ವ್ಯಕ್ತಿತ್ವ ಬೆಳೆಸಿಕೊಳ್ಳಿ. ನಡೆನುಡಿಗಳಲ್ಲಿ ನಿಮ್ಮತನ ಕಾಯ್ದುಕೊಳ್ಳಿ.

೧೭. ಒಂದಿಷ್ಟು ಮನೆಯಲ್ಲೇ ಮಾಡಿದ ಫೇಸ್‌ಮಾಸ್ಕ್‌ಗಳನ್ನು ಮುಖಕ್ಕೆ ಆಗಾಗ ಬಳಸಿ. ವಾರಕ್ಕೊಮ್ಮೆ ಸ್ಕ್ರಬ್‌ ಮಾಡಿ.

೧೮. ಮಲಗಲು ಸಿಲ್ಕ್‌ ಕವರ್‌ ಹಾಕಿದ ತಲೆದಿಂಬನ್ನೇ ಬಳಸಿ. ಇದು ನಯವಾಗಿರುವುದರಿಂದ ಮುಖದ ಚರ್ಮಕ್ಕೆ ಹಾಗೂ ಕೂದಲಿಗೆ ಒಳ್ಳೆಯದು. ಹತ್ತಿಬಟ್ಟೆಯ ತಲೆದಿಂಬುಗಳಿಂದ ಕೂದಲು ಉದುರಬಹುದು.

೧೯. ನಿಮಗೆ ಖುಷಿಕೊಡುವ ಕೆಲಸಗಳಲ್ಲಿ ಭಾಗಿಯಾಗಿ. ಹವ್ಯಾಸಗಳಿಗೆ ಸಮಯ ಕೊಡಿ. ಸಣ್ಣ ಸಣ್ಣ ಖುಷಿಗಳು ಬದುಕಿಗೆ ಜೀವಜಲ.

೨೦. ಎಲ್ಲಕ್ಕಿಂತ ಮುಖ್ಯವಾಗಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. ಅದು ನಿಮ್ಮ ನಡೆನುಡಿಯಲ್ಲಿ ಪ್ರತಿಫಲಿಸಲಿ.

Exit mobile version