Site icon Vistara News

Male fertility | ಕುಸಿಯುತ್ತಿದೆ ಪುರುಷರ ಫಲವಂತಿಕೆ: ತಜ್ಞರ ಆತಂಕ

male fertility

ಭಾರತವೂ ಸೇರಿದಂತೆ ವಿಶ್ವದ ಹಲವಾರು ದೇಶಗಳಲ್ಲಿ ನಡೆಸಿದ ಆಧ್ಯಯನಗಳ ಅನ್ವಯ, ಜಾಗತಿಕವಾಗಿ ಪುರುಷರ ವೀರ್ಯದ ಸಾಂದ್ರತೆ ಮತ್ತು ಫಲವತ್ತತೆ ಕ್ಷೀಣಿಸುತ್ತಿದೆ. ವೀರ್ಯಾಣುಗಳ ಸಂಖ್ಯೆ ಕ್ಷೀಣಿಸುವುದು ಕೇವಲ ಫಲವತ್ತತೆಯ ಕ್ಷಯದ ಸಂಕೇತ ಮಾತ್ರವಲ್ಲ, ಕುಂಠಿತವಾಗುತ್ತಿರುವ ಆಯಸ್ಸು, ಹೆಚ್ಚುತ್ತಿರುವ ಅನಾರೋಗ್ಯದ ಸೂಚಕವೂ ಹೌದು ಎನ್ನುತ್ತಾರೆ ಅಧ್ಯಯನಕಾರರು.

ಭಾರತವೂ ಸೇರಿದಂತೆ ೫೩ ದೇಶಗಳಿಂದ ದತ್ತಾಂಶಗಳನ್ನು ಅಧ್ಯಯನಕ್ಕಾಗಿ ಕಲೆಹಾಕಲಾಗಿದೆ. ೨೦೧೧ರಿಂದ ೨೦೧೮ರ ವರೆಗಿನ ಮಾಹಿತಿ ಈ ಅಧ್ಯಯನದಲ್ಲಿದೆ. ಆಧುನಿಕ ಎಂದು ಕರೆಸಿಕೊಳ್ಳುವ ಜೀವನಶೈಲಿ ಮತ್ತು ವಾತಾವರಣದ ಏರುಪೇರುಗಳಿಂದಾಗಿ ನಿಸರ್ಗದ ಸಮತೋಲನ ಹದಗೆಟ್ಟಿರುವಾಗ, ಮಾನವರ ಪ್ರಜನನ ಸಾಮರ್ಥ್ಯದ ಮೇಲೆ ಬೀರಿರುವ ಪರಿಣಾಮವನ್ನು ಪ್ರಧಾನವಾಗಿ ಈ ಅಧ್ಯಯನದಲ್ಲಿ ಪರಿಶೀಲಿಸಲಾಗಿದೆ. ದಕ್ಷಿಣ ಅಮೆರಿಕ, ಏಷ್ಯಾ ಮತ್ತು ಆಫ್ರಿಕಾದ ದೇಶಗಳನ್ನು ಇದೇ ಮೊದಲ ಬಾರಿಗೆ ಈ ಅಧ್ಯಯನ ಒಳಗೊಂಡಿತ್ತು. ಉತ್ತರ ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಐರೋಪ್ಯ ದೇಶಗಳಲ್ಲಿ ಈಗಾಗಲೇ ಇಂಥ ಪ್ರವೃತ್ತಿ ಕಂಡುಬಂದಿತ್ತು. ಇದೀಗ ಉಳಿದ ದೇಶಗಳೂ ಇದೇ ದಿಕ್ಕಿನೆಡೆಗೆ ವಾಲುತ್ತಿದ್ದು, ಪರಿಣಾಮವಾಗಿ ಜಾಗತಿಕವಾಗಿ ಪುರುಷರ ಫಲವಂತಿಕೆ ಕ್ಷೀಣಿಸುವ ಆತಂಕ ಎದುರಾಗಿದೆ.

ಕಳೆದ ೪೬ ವರ್ಷಗಳಲ್ಲಿ ಶೇ ೫೦ರಷ್ಟು ಫಲವಂತಿಕೆ ಪುರುಷರಲ್ಲಿ ಕ್ಷೀಣಿಸಿದೆ. ಅದರಲ್ಲೂ ಕಳೆದ ಕೆಲವು ವರ್ಷಗಳಲ್ಲಿ ಇದು ಏರುಗತಿಯಲ್ಲಿದೆ. ಜಗತ್ತಿನೆಲ್ಲೆಡೆ ಇರುವಷ್ಟೇ ಪ್ರಧಾನವಾಗಿ ಭಾರತದಲ್ಲಿಯೂ ಈ ಅಂಶ ದಾಖಲಾಗಿದೆ. ಇದಕ್ಕೆ ಕಾರಣಗಳೇನು ಎಂಬ ಬಗ್ಗೆ ಈ ಅಧ್ಯಯನದಲ್ಲಿ ಕೂಲಂಕಷವಾಗಿ ಚರ್ಚೆ ಮಾಡಲಾಗಿಲ್ಲ. ಆದರೆ ಶಿಶು ಗರ್ಭದಲ್ಲಿರುವಾಗಲೇ ಆಗುವ ಏರುಪೇರಿನಿಂದ ಮುಂದೆ ಜೀವನದುದ್ದಕ್ಕೂ ಫಲವಂತಿಕೆ ಮೇಲೆ ಪರಿಣಾಮ ಬೀರಬಹುದು. ಸ್ವ ಇಚ್ಛೆಯಿಂದ ಕೈಗೆತ್ತಿಕೊಂಡ ಅಸಂಗತ ಜೀವನಶೈಲಿ ಇರಬಹುದು. ವಾತಾವರಣಕ್ಕೆ ಮಿತಿಮೀರಿ ಸೇರುತ್ತಿರುವ ಕಶ್ಮಲಗಳಿರಬಹುದು. ನೀರು, ಆಹಾರ ಮತ್ತು ಗಾಳಿಯ ಮೂಲಕ ದೇಹ ಸೇರುತ್ತಿರುವ ರಾಸಾಯನಿಕಗಳಿರಬಹುದು- ಇಂಥ ಯಾವುದೇ ಕಾರಣಗಳಿಗೂ ಪ್ರಜನನ ಸಾಮರ್ಥ್ಯ ಕುಸಿಯುವ ಸಾಧ್ಯತೆಯಿದೆ.

ಇದನ್ನೂ ಓದಿ | Kiss benefits | ಮುತ್ತು ಕೊಟ್ಟು ನೀವೂ ಆರೋಗ್ಯವಾಗಿರಿ! ನಿಮ್ಮವರನ್ನೂ ಆರೋಗ್ಯವಾಗಿರಿಸಿ!

“ದೊಡ್ಡ ಕಲ್ಲಿದ್ದಲು ಗಣಿಯಲ್ಲಿ ಸಣ್ಣ ಗುಬ್ಬಿಯನ್ನು ಹುಡುಕುವ ಸಾಹಸವನ್ನು ಈ ಅಧ್ಯಯನದ ಮೂಲಕ ಮಾಡಿದ್ದೇವೆ. ನಮ್ಮೆದುರಿಗಿರುವ ಈ ಗಂಭೀರ ಸಮಸ್ಯೆಗೆ ಸಮಾಧಾನ ಹುಡುಕದಿದ್ದರೆ ಮಾನವ ಕುಲ ಅಳಿವಿನ ಅಂಚಿಗೆ ಬರುವ ಅಪಾಯ ದೂರವಿಲ್ಲ. ಹಾಗಾಗಿ ಆರೋಗ್ಯಕರ ವಾತಾವರಣವನ್ನು ಜೀವಜಗತ್ತಿನ ಎಲ್ಲರಿಗೂ ಸೃಷ್ಟಿಸಿಕೊಡಬೇಕಾದ ತುರ್ತಿನ ಬಗ್ಗೆ ನಾವು ವಿಶ್ವದ ಗಮನ ಸೆಳೆಯ ಬಯಸುತ್ತೇವೆ” ಎಂದು ಅಧ್ಯಯನಕಾರರು ಹೇಳಿದ್ದಾರೆ. ಮಾತ್ರವಲ್ಲ, ಜನಸಂಖ್ಯಾ ಬಾಹುಳ್ಯ ಹೊಂದಿರುವ ಭಾರತದ ಬಗ್ಗೆಯೇ ಈ ಕುರಿತು ಪ್ರತ್ಯೇಕ ಅಧ್ಯಯನ ಕೈಗೊಳ್ಳುವುದು ಸೂಕ್ತ ಎಂಬುದು ಅವರ ಅಭಿಪ್ರಾಯ.

ಫಲವಂತಿಕೆಯ ಕುಸಿತ ಹಲವಾರು ಸತ್ಯಗಳನ್ನು ತೆರೆದಿಡುತ್ತಿದೆ. ಹೆಚ್ಚುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಗಳು, ಕ್ಯಾನ್ಸರ್‌ನಂತಹ ಮಾರಕ ರೋಗಗಳು, ಹಾರ್ಮೋನ್‌ಗಳ ಏರುಪೇರುಗಳು ಮತ್ತು ಪ್ರಜನನಾಂಗಗಳ ದೋಷಗಳಂಥ ಹಲವಾರು ಸಮಸ್ಯೆಗಳನ್ನು ಇದು ಸೂಚಿಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ಪುರುಷರ ಫಲವಂತಿಕೆಯು ಸತತ ಮತ್ತು ಸುಸ್ಥಿರವಾಗಿ ಕ್ಷಯಿಸುತ್ತಿರುವುದು ತೀವ್ರ ಆತಂಕಕಾರಿ ಎಂದು ಅಧ್ಯಯನ ಒತ್ತಿ ಹೇಳಿದೆ.

ಇದನ್ನೂ ಓದಿ | Carbohydrates | ಪ್ರೊಟೀನೋ… ಕಾರ್ಬೋಹೈಡ್ರೇಟೋ…? ಗೊಂದಲಕ್ಕೆ ಇಲ್ಲಿದೆ ಮದ್ದು!

Exit mobile version