Site icon Vistara News

Mango Diet: ತೂಕ ಇಳಿಸುವ ಮಂದಿಯೂ ಚಿಂತೆಯಿಲ್ಲದೆ ಮಾವಿನಹಣ್ಣು ತಿನ್ನಿ: ಇಲ್ಲಿವೆ ಟಿಪ್ಸ್!

Mango Diet

ಬೇಸಗೆ ಬಂತೆಂದರೆ ಎಲ್ಲರ ಹರುಷಕ್ಕೆ ಒಂದು ಕಾರಣ ಹಣ್ಣುಗಳ ರಾಜನೆಂದೇ ಖ್ಯಾತಿವೆತ್ತ ಮಾವಿನಹಣ್ಣು. ಬೇಸಗೆಯಲ್ಲಿ ಮರದ ತುಂಬಾ, ಮಾರುಕಟ್ಟೆ ತುಂಬಾ ಮಾವಿನಹಣ್ಣನ್ನು ನೋಡಿ ಬಾಯಿ ಚಪ್ಪರಿಸಿಕೊಂಡು ಬೇಸಗೆಯಿಡೀ ತಿಂದು ಬೇಸಗೆಯನ್ನು ಬೈಯದೆ ನೆಮ್ಮದಿಯಾಗಿರುತ್ತೇವೆ. ಮನೆಯಲ್ಲಿ ಬುಟ್ಟಿ ತುಂಬಾ ಮಾವಿನಹಣ್ಣು ತುಂಬಿಟ್ಟು ನಾನಾ ಬಗೆಯ ರೆಸಿಪಿಗಳನ್ನು ಟ್ರೈ ಮಾಡುತ್ತೇವೆ. ಮ್ಯಾಂಗೋ ಶೇಕ್‌ ಮಾಡಿ ಹೀರುತ್ತೇವೆ. ಮಾವಿನಹಣ್ಣಿನ ಐಸ್‌ಕ್ರೀಂ ಸವಿಯುತ್ತೇವೆ. ಆದರೆ, ಇವೆಲ್ಲವನ್ನೂ ಮಾಡುವಾಗ ಒಂದು ಭಯ ಮಾತ್ರ ಇದ್ದೇ ಇರುತ್ತದೆ. ಅದೇನೆಂದರೆ ತೂಕ ಏರಿಕೆ!

ಹೌದು. ನಾವು ಯಾವಾಗಲೂ ಮಾವಿನಹಣ್ಣು ತೂಕ ಇಳಿಸುವ ಮಂದಿಗೆ ಯೋಗ್ಯ ಹಣ್ಣಲ್ಲ ಎಂಬುದನ್ನೇ ಸಾರ್ವಕಾಲಿಕ ಸತ್ಯ ಅಂದುಕೊಂಡಿದ್ದೇವೆ. ಹೀಗಾಗಿ ಮಾವಿನಹಣ್ಣು ತಿಂದರೆ ತೂಕ ಏರುವುದು ಗ್ಯಾರೆಂಟಿ ಎಂದು ಅನೇಕರು ಮಾವಿನಹಣ್ಣಿನ ಸುದ್ದಿಗೂ ಹೋಗಲಾರರು. ಆದರೆ ಯಾವುದೇ ತೂಕ ಏರಿಕೆಯ ಭಯವೂ ಇಲ್ಲದೆ ನಾವು ಮಾವು ತಿನ್ನಬಹುದು ಎಂಬುದು ಗೊತ್ತೇ? ಹಾಗಾದರೆ, ಈ ಬೇಸಗೆಯಲ್ಲಿ ಮಾವು ತಿನ್ನುವಾಗ ಈ ಸರಳ ಸೂತ್ರಗಳನ್ನು ಅನುಸರಿಸಿ.

1. ಎಷ್ಟು ತಿನ್ನುತ್ತೀರಿ ಎಂಬ ಗಮನ ಇರಲಿ: ಹೌದು. ಮಾವಿನಹಣ್ಣು ಒಮ್ಮೆ ಒಂದು ದಿನಕ್ಕೆ ಎಷ್ಟು ನಿಮ್ಮ ಹೊಟ್ಟೆ ಸೇರುತ್ತಿದೆ ಎಂಬುದರ ಬಗ್ಗೆ ಗಮನ ಕೊಡಿ. ಮಾವಿನಹಣ್ಣು ಕೊಬ್ಬುರಹಿತ. ಹಾಗಾಗಿ ಅದನ್ನು ತೂಕ ಇಳಿಸುವ ಮಂದಿಯೂ ತಿನ್ನಬಹುದು, ಆದರೆ, ಎಷ್ಟು ಒಮ್ಮೆ ತಿನ್ನುತ್ತೀರಿ ಎಂಬುದು ಬಹಳ ಮುಖ್ಯ. ಸ್ವಲ್ಪ ಮಾವಿನಹಣ್ಣನ್ನು ಮಾತ್ರ ಹೊಟ್ಟೆಗಿಳಿಸಿದರೆ ಸಾಕು. ಒಮ್ಮೆ ನೂರು ಗ್ರಾಂನಷ್ಟು ಮಾವಿನಹಣ್ಣನ್ನು ಸೇವಿಸಿದರೆ, ಯಾವ ತೊಂದರೆಯೂ ಇಲ್ಲ. ಆದರೆ, ರುಚಿಯಾಗಿದೆ ಎಂದು ಇಡೀ ದಿನ ಮಾವಿನಹಣ್ಣು ತಿನ್ನುತ್ತಲೇ ಇರುವುದು ಒಳ್ಳೆಯದಲ್ಲ.

2. ಊಟದ ಜೊತೆಗೆ ತಿನ್ನಬೇಡಿ: ಮಧ್ಯಾಹ್ನದ ಊಟ ಅಥವಾ ರಾತ್ರಿ ಊಟದ ಜೊತೆಗೆ ಮಾವಿನಹಣ್ಣನ್ನು ತಿನ್ನುವ ಅಭ್ಯಾಸ ಇಟ್ಟುಕೊಳ್ಳಬೇಡಿ. ಊಟದ ಮಧ್ಯದ ಸ್ನ್ಯಾಕ್‌ ಸಮಯದಲ್ಲಿ ಮಾವಿನಹಣ್ಣು ಬೆಸ್ಟ್‌. ಇದರಲ್ ಅತ್ಯುತ್ತಮ ಪೋಷಕಾಂಶಗಳೂ ಇರುವುದರಿಂದ ಸ್ನ್ಯಾಕ್‌ ಸಮಯದಲ್ಲಿ ಜಂಕ್‌ ತಿನ್ನುವ ಬದಲು ಮಾವಿನ ಹಣ್ಣನ್ನು ಪರ್ಯಾಯವಾಗಿ ತಿನ್ನಬಹುದು. ಆಗ ಬೇಗ ಹಸಿವೆಯಾಗುವುದಿಲ್ಲ. ಹಸಿವೆಯಿಂದ ಏನೋನೋ ತಿನ್ನುವುದು ತಪ್ಪುತ್ತದೆ.

3. ಮಾವಿನಹಣ್ಣಿನ ಜೊತೆಗೆ ಸಿಹಿ ಸೇರಿಸಿ ತಿನ್ನುವುದನ್ನು ಬಿಡಿ: ಹೌದು. ಮಾವಿನಹಣ್ಣು ನೈಸರ್ಗಿಕವಾಗಿ ಸಿಹಿಯಾದ ಹಣ್ಣು ಆದ್ದರಿಂದ ಇದಕ್ಕೆ ಸಿಹಿ ಸೇರಿಸಿ ತಿನ್ನುವುದು ಒಳ್ಳೆಯದಲ್ಲ. ಆಮ್‌ರಸ್‌, ಮ್ಯಾಂಗೋ ಐಸ್‌ಕ್ರೀಂ ಹಾಗೂ ಕುಲ್ಫಿಗಳು, ಮ್ಯಾಗೋ ಶೇಕ್‌ಗಳು, ಸೀಕರಣೆ, ರಸಾಯನ ಇತ್ಯಾದಿ ಇತ್ಯಾದಿ ಮಾವಿನಹಣ್ಣಿನ ವಿವಿಧ ಪಾನೀಯ ಹಾಗೂ ಭಕ್ಷ್ಯಗಳನ್ನು ತಿನ್ನುವುದನ್ನು ಕಡಿಮೆ ಮಾಡಿ. ಮಾವಿನಹಣ್ಣನ್ನೇ ನೇರವಾಗಿ ಹಾಗೆಯೇ ತಿನ್ನಿ.

ಇದನ್ನೂ ಓದಿ: Alphonso Mango: ಪುಣೆಯಲ್ಲಿ ಅಲ್ಫೊನ್ಸೋ ಮಾವು ಇಎಂಇ ಮೂಲಕ ಮಾರಾಟ!

4. ಡಯಟ್‌ ಮಾಡ್ತಿದೀರಾ?: ಈಗಷ್ಟೇ ತೂಕ ಇಳಿಸುವ ಡಯಟ್‌ ಅನ್ನು ಆರಂಭಿಸಿದ್ದರೆ, ಕನಿಷ್ಟ ಎರಡು ವಾರಗಳಾದರೂ ಮಾವಿನ ಹಣ್ಣನ್ನು ಡಯಟ್‌ನಲ್ಲಿ ಸೇರಿಸಬೇಡಿ.

5. ನಿಮ್ಮ ಡಯಟ್‌ ಅನ್ನು ನೀವೇ ಸಿದ್ಧಗೊಳಿಸಿ: ಡಯಟ್‌ ಪ್ಲಾನ್‌ ಮಾಡುವ ಸಂದರ್ಭ ಮಾವಿನಹಣ್ಣಿಗೂ ಸ್ವಲ್ಪ ಜಾಗ ಕೊಡಿ. ಮಾವಿನ ಹಣ್ಣಿನ ಜೊತೆಗೆ ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದರೆ ತೂಕ ಏರಿಕೆಯ ಭಯವಿಲ್ಲ. ಆದರೆ, ಹಣ್ಣಿನ ಜೊತೆಗೆ ಸಾಕಷ್ಟು ಸಕ್ಕರೆ ಸೇರಿಸಿ, ಬಗೆಬಗೆಯ ತಿನಿಸುಗಳನ್ನು ಮಾಡಿ ತಿನ್ನುವುದರಿಂದ ಹಾಗೂ ಅನಾರೋಗ್ಯಕರ ಜಂಕ್‌ ಆಹಾರವನ್ನೂ ಇದರ ಜೊತೆ ತಿನ್ನುವುದರಿಂದ ತೂಕ ಏರುತ್ತದೆ. ಹಾಗಾಗಿ ಮುತುವರ್ಜಿಯಿಂದ ನಿಮ್ಮ ಡಯಟ್‌ ಪ್ಲಾನ್‌ ಸಿದ್ಧಪಡಿಸಿ.

ನೆನಪಿಡಿ. ಮಾವಿನಹಣ್ಣು ನಿಮ್ಮ ತೂಕ ಇಳಿಸಲು ಸಹಾಯ ಮಾಡುವುದಿಲ್ಲ. ಆದರೆ, ಈ ಹಣ್ಣಿನ ಜೊತೆಗೆ ಇತರ ಆಹಾರವನ್ನೂ ತೂಕ ಇಳಿಕೆಗೆ ಪೂರಕವಾಗಿಯೇ ತೆಗೆದುಕೊಳ್ಳುವುದರಿಂದ ತೂಕ ಏರದಂತೆ ತಡೆದು ಮಾವಿನಹಣ್ಣಿನ ರುಚಿಯನ್ನೂ ಡಯಟ್‌ ಜೊತೆ ಎಂಜಾಯ್‌ ಮಾಡಬಹುದು.

ಇದನ್ನೂ ಓದಿ: mango time: ಮಾವುಪ್ರಿಯರಿಗೆ ಹಣ್ಣು ತಿನ್ನಲು 15 ಕಾರಣಗಳು!

Exit mobile version