Site icon Vistara News

Mango Juice Benefits: ತಾಜಾ ಮಾವಿನ ರಸ ಕುಡಿಯುವುದರಿಂದ ಎಷ್ಟೊಂದು ಪ್ರಯೋಜನ ಇದೆ ನೋಡಿ…

Mango Juice Benefits

ಬೇಸಿಗೆಯೆಂದರೆ ಬೆವರಷ್ಟೇ ಅಲ್ಲ, ಮಾವಿನ ಹಣ್ಣಿನ ಕಾಲವೂ ಹೌದು. ಇದು ರುಚಿಗೆ ಮಾತ್ರವೇ ಅಲ್ಲ, ಆರೋಗ್ಯದ ಮೇಲಾಗುವ ಲಾಭದಾಯಕ ಪರಿಣಾಮಗಳಿಗಾಗಿಯೂ ಜನಪ್ರಿಯ. ತಾಜಾ ಹಣ್ಣನ್ನು ತಿನ್ನುವುದು ಎಲ್ಲಕ್ಕಿಂತ ಒಳ್ಳೆಯ ಆಯ್ಕೆ. ಆದರೆ ಬೇಸಿಗೆಯಲ್ಲಿ ಸಾಕಷ್ಟು ನೀರಿನಂಶವನ್ನು ದೇಹಕ್ಕೆ ಒದಗಿಸುವತ್ತಲೂ ಗಮನ ನೀಡಬೇಕಾಗಿರುವುದರಿಂದ, ಮಾವಿನ ಜ್ಯೂಸ್‌ ಸೇವನೆಯೂ ಸೂಕ್ತವೇ. ಸದಾ ಕಾಲ ಅದನ್ನೇ ಕುಡಿಯುವುದನ್ನು ಯಾರೂ ಮಾಡುವುದಿಲ್ಲ, ಮಾಡಬಾರದು. ನೀರು ಎಲ್ಲಕ್ಕಿಂತ ಶ್ರೇಷ್ಠವಾದ ಪಾನೀಯ. ಆದರೆ ಒಮ್ಮೊಮ್ಮೆ ಮಾವಿನ ಜ್ಯೂಸ್‌ (Mango Juice) ಸಹ ಬಾಯಾರಿಕೆಗೆ ರುಚಿಕರ ಆಯ್ಕೆಯಾಗಿ ಒದಗಬಲ್ಲದು. ಜ್ಯೂಸರ್‌ಗೆ ಹಾಕಿ ಇದರ ನಾರಿನಂಶವನ್ನು ತೆಗೆಯುವುದು, ಮಿಕ್ಸರ್‌ಗೆ ಹಾಕಿ ನಾರಿನಂಶವನ್ನು ಸೋಸಿ ತೆಗೆಯುವುದು- ಇಂಥವೆಲ್ಲ ಸೂಕ್ತವಲ್ಲ. ಹಣ್ಣನ್ನು ಸೇವಿಸುವಾಗ ಅದರ ನೀರು ಮಾತ್ರವಲ್ಲ, ನಾರಿನಂಶಗಳನ್ನೂ ಜೊತೆಗೆ ಸೇರಿಸಿಕೊಂಡರೆ ಆರೋಗ್ಯಕರ. ಏನು ಲಾಭಗಳು ದೊರೆಯುತ್ತವೆ (Mango Juice Benefits) ಮಾವಿನ ತಾಜಾ ಜ್ಯೂಸ್‌ ಕುಡಿಯುವುದರಿಂದ?

ಸತ್ವಗಳಿಂದ ಭರಿತ

ಇದರಲ್ಲಿರುವ ಪಿಷ್ಟ ಮತ್ತು ನೈಸರ್ಗಿಕ ಸಕ್ಕರೆಯಂಶ ದೇಹ ದಣಿದಂಥ ಹೊತ್ತಿನಲ್ಲಿ ತ್ವರಿತವಾಗಿ ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಒಂದು ಸರ್ವಿಂಗ್‌ ತಾಜಾ ಮಾವಿನ ಹಣ್ಣಿನ ರಸದಿಂದ ಅಂದಾಜು 24 ಗ್ರಾಂ ಪಿಷ್ಟ ಮತ್ತು 22 ಗ್ರಾಂನಷ್ಟು ಪ್ರಾಕೃತಿಕ ಸಕ್ಕರೆಯಂಶ ದೊರೆಯುತ್ತದೆ. ವ್ಯಾಯಾಮ ಮಾಡಿ ದಣಿದಾಗ, ಬಿಸಿಲಿನಲ್ಲಿ ಬಸವಳಿದು ಬಂದಂಥ ಸಂದರ್ಭಗಳಲ್ಲಿ ಒಂದು ಗ್ಲಾಸ್‌ ತಂಪಾದ ಮಾವಿನ ಹಣ್ಣಿನ ರಸ ಇಡೀ ದೇಹಕ್ಕೆ ಚೈತನ್ಯ ನೀಡಬಲ್ಲದು. ಜೊತೆಗೆ, ವಿಟಮಿನ್‌ ಸಿ ಮತ್ತು ಎ, ನಾರು, ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿಂದ ಮಾವು ಸಮೃದ್ಧವಾಗಿದೆ.

ಪ್ರತಿರೋಧಕತೆ ಹೆಚ್ಚಳ

ಮಾವಿನಲ್ಲಿ ವಿಟಮಿನ್‌ ಸಿ ಅಂಶ ಭರಪೂರವಿದೆ. ಸುಮಾರು 100 ಮಿ.ಲೀ. ತಾಜಾ ಮಾವಿನ ರಸದಲ್ಲಿ ಅಂದಾಜು 14 ಎಂ.ಜಿ.ಯಷ್ಟು ವಿಟಮಿನ್‌ ಸಿ ದೊರೆಯುತ್ತದೆ. ಸೋಂಕುಗಳ ವಿರುದ್ಧ ಹೋರಾಡುವಂಥ ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದರಿಂದ ಹಿಡಿದು, ಕೊಲಾಜಿನ್‌ ಉತ್ಪಾದನೆಯವರೆಗೆ ಬಹಳಷ್ಟು ರೀತಿಯ ಕೆಲಸಗಳನ್ನು ಸಿ ಜೀವಸತ್ವ ನಿರ್ವಹಿಸುತ್ತದೆ.

ಜೀರ್ಣಾಂಗಗಳ ಸಾಮರ್ಥ್ಯ ಹೆಚ್ಚಳ

ಜೀರ್ಣಾಂಗಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ನಾರಿನಂಶದ ಅಗತ್ಯವಿದೆ. ಮಾವಿನಲ್ಲಿ ನಾರು ಹೇರಳವಾಗಿದೆ. ಇದರಿಂದ ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸಬಹುದು. ಬೇಕಾದ ಅಂಶಗಳನ್ನು ಜೀರ್ಣ ಮಾಡಿ, ಬೇಡದ್ದನ್ನು ದೇಹದಿಂದ ಹೊರಹಾಕುವುದಕ್ಕೆ ಸುಲಭವಾಗುತ್ತದೆ. ಈ ಮೂಲಕ ಮಲಬದ್ಧತೆಯನ್ನು ದೂರ ಮಾಡುತ್ತದೆ.

ದೃಷ್ಟಿ ಚುರುಕು

ಮಾವಿನಲ್ಲಿರುವ ವಿಟಮಿನ್‌ ಎ ಸತ್ವದಿಂದ ದೃಷ್ಟಿಯನ್ನು ಚೆನ್ನಾಗಿರಿಸಿಕೊಳ್ಳಲು ಅನುಕೂಲ. ಕಣ್ಣಿನ ಹೊರಕವಚವಾದ ಕಾರ್ನಿಯಾದ ಆರೋಗ್ಯ ರಕ್ಷಣೆಗೆ ಎ ಜೀವಸತ್ವ ಅಗತ್ಯವಾಗಿ ಬೇಕು. ಕಣ್ಣಿನಲ್ಲಿರುವ ರೊಡೊಪ್ಸಿನ್‌ ಎಂಬ ಪ್ರೊಟೀನ್‌ಗೂ ವಿಟಮಿನ್‌ ಎ ಅಗತ್ಯ. ಇದು ಕಡಿಮೆ ಬೆಳಕಿನ ಸಂದರ್ಭಗಳಲ್ಲೂ ದೃಷ್ಟಿ ಸ್ವಚ್ಛವಾಗಿ ಕೆಲಸ ಮಾಡುವುದನ್ನು ಸಾಧ್ಯವಾಗಿಸುತ್ತದೆ.

ಚರ್ಮದ ಕಾಂತಿ ಹೆಚ್ಚಳ

ಚರ್ಮ ಬಿಗಿಯಾಗಿರುವುದಕ್ಕೆ, ಸುಕ್ಕಾಗದಂತೆ ತಡೆಯುವುದಕ್ಕೆ, ಕಾಂತಿಯುಕ್ತ ಆಗಿರುವುದಕ್ಕೆ ಬೇಕಾಗುವುದು ಕೊಲಾಜಿನ್‌ ಸತ್ವ. ಇದರ ಉತ್ಪತ್ತಿಗೆ ಅಗತ್ಯವಾದದ್ದು ವಿಟಮಿನ್‌ ಸಿ ಅಂಶ. ಇದರಿಂದ ವಯಸ್ಸಾದಂತೆ ಕಾಣುವುದನ್ನು ಮುಂದೂಡಬಹುದು. ಕಾಡುವ ಉರಿಯೂತದ ನಿವಾರಣೆಗೂ ವಿಟಮಿನ್‌ ಸಿ ಯಂಥ ಉತ್ಕರ್ಷಣ ನಿರೋಧಕಗಳ ಆವಶ್ಯಕತೆಯಿದೆ.

ಮೆದುಳು ಕ್ಷೇಮ

ಮಾವಿನಲ್ಲಿ ಉತ್ಕರ್ಷಣ ನಿರೋಧಕಗಳು ವಿಫುಲವಾಗಿವೆ. ಉತ್ಕರ್ಷಣ ನಿರೋಧಕಗಳ ಸಾಂದ್ರತೆ ಹೆಚ್ಚಿದಷ್ಟಕ್ಕೂ ದೇಹದ ಅಂಗಾಂಗಗಳು ಕ್ಷೇಮವಾಗಿ ಇರುತ್ತವೆ. ಮುಕ್ತಕಣಗಳನ್ನು ನಿರ್ಬಂಧಿಸುವುದರಿಂದ ಮೆದುಳನ್ನು ಕಾಡುವ ಅಲ್‌ಜೈಮರ್ಸ್‌ನಂಥ ರೋಗಗಳು ಹತ್ತಿರ ಬಾರದಂತೆ ನೋಡಿಕೊಳ್ಳಬಹುದು.

ಇದನ್ನೂ ಓದಿ: Vertigo Problem: ನಿಮಗೆ ಇದ್ದಕ್ಕಿದ್ದಂತೆ ತಲೆ ಸುತ್ತುತ್ತಿದೆಯೆ? ಈ ವಿಷಯ ತಿಳಿದುಕೊಂಡಿರಿ

ಜೋಕೆ!

ಒಳ್ಳೆಯದೆಂಬ ನೆವದಿಂದ ಮಿತಿಮೀರಿದ ಪ್ರಮಾಣದಲ್ಲಿ ಮಾವಿನ ಜ್ಯೂಸ್‌ ಸೇವಿಸಿದರೆ ಹೊಟ್ಟೆಯ ಆರೋಗ್ಯ ಹಾಳಾಗಬಹುದು. ಅತಿಯಾದ ನಾರಿನ ಅಂಶವಿರುವ ಆಹಾರದ ಸೇವನೆಯಿಂದ ಡಯರಿಯ ಕಾಡಬಹುದು. ಮಾವಿನಲ್ಲಿರುವ ಅಧಿಕ ಸಕ್ಕರೆಯಂಶದಿಂದ ತೂಕ ಹೆಚ್ಚಬಹುದು. ಮಧುಮೇಹಿಗಳು ಮಾವಿನ ಸೇವನೆಯ ಮೇಲೆ ನಿಯಂತ್ರಣ ಇರಿಸಿಕೊಳ್ಳದಿದ್ದರೆ, ಸಕ್ಕರೆ ಕಾಯಿಲೆ ನಿಯಂತ್ರಣ ತಪ್ಪಬಹುದು.

Exit mobile version