Site icon Vistara News

Menopausal Weight Gain: ಋತುಚಕ್ರ ನಿಂತ ಬಳಿಕ ತೂಕ ಹೆಚ್ಚುವುದನ್ನು ತಡೆಯಬಹುದೇ?

Menopausal Weight Gain

ರಜೋನಿವೃತ್ತಿ ಪ್ರತಿಯೊಂದು ಮಹಿಳೆಯ ಬದುಕಿನ ಮಹತ್ವದ ಘಟ್ಟಗಳಲ್ಲಿ ಒಂದು. 40 ವರ್ಷದ ನಂತರ ಈ ಘಟ್ಟದ ಒಂದೊಂದೇ ಹಂತಗಳು ಪ್ರಾರಂಭವಾಗುತ್ತವೆ. ಈ ಘಟ್ಟದಲ್ಲಿ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ತರದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಾಣಬಹುದು. ಮೈಯೆಲ್ಲ ಬಿಸಿಯಾಗಿ ಬೆವರುವುದು, ನಿದ್ರಾಹೀನತೆ, ಚರ್ಮವೆಲ್ಲ ಶುಷ್ಕವಾಗುವುದು, ಮೂಡ್‌ ಬದಲಾವಣೆ ಮುಂತಾದ ಬಹಳಷ್ಟು ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಇವುಗಳ ಜೊತೆಗೆ, ಶರೀರದ ಆಕಾರವೇ ಬದಲಾಗುವಂತೆ ತೂಕ ಹೆಚ್ಚುತ್ತದೆ. ಬದುಕಿನಲ್ಲಿ ಈವರೆಗೂ ತೂಕ ಇಳಿಸುವುದಕ್ಕೆ ಒದ್ದಾಡವರಿಗೂ ಕಷ್ಟವಾಗುವಂತೆ, ಏರಿದ ತೂಕ ಇಳಿಯುವುದೇ ಇಲ್ಲವೆಂದು ಗಪ್ಪನೆ ಕೂತು ಬಿಡುತ್ತದೆ. ತಳೋದರಿಯರೂ ಗುಂಡಮ್ಮಂದಿರಾಗುತ್ತಾರೆ. ಇರುವೆಲ್ಲ ಸಂಕಟಗಳ ಜೊತೆಗೆ ತೂಕವೂ ಏರಿಬಿಟ್ಟರೆ…! ಹೀಗೇಕಾಗುತ್ತದೆ ಮತ್ತು ಈ ಹಠಮಾರಿ (Menopausal Weight Gain) ತೂಕವನ್ನು ಇಳಿಸುವುದಕ್ಕೆ ಏನು ಮಾಡಬೇಕು?

ಏಕೆ ಹೀಗೆ?

ದೇಹದ ಚಯಾಪಚಯ ಮತ್ತು ಕೊಬ್ಬು ಶೇಖರವಾಗುವುದನ್ನು ಈಸ್ಟ್ರೋಜನ್‌ ಚೋದಕ ನಿರ್ವಹಿಸುತ್ತದೆ. ಋತುಬಂಧದ ನಂತರ ದೇಹದಲ್ಲಿ ಈಸ್ಟ್ರೋಜನ್‌ ಚೋದಕ ಗಣನೀಯವಾಗಿ ಕಡಿಮೆ ಆಗುವುದರಿಂದ, ಶರೀರದಲ್ಲಿ ಕೊಬ್ಬು ಶೇಖರವಾಗುವ ಪ್ರಮಾಣ ಹೆಚ್ಚುತ್ತದೆ. ಅದರಲ್ಲೂ ಹೊಟ್ಟೆಯ ಸುತ್ತಲಿನ ಭಾಗದಲ್ಲಿ ಕೊಬ್ಬು ಸಾಂದ್ರವಾಗಿ ಕೂತು ಸಿಂಹಕಟಿಯೆಂಬುದು ಕುಂಬಳಕಾಯಿಯಂತಾಗುತ್ತದೆ. ಹಾಗಾಗಿ ಹಾರ್ಮೋನಿನ ಏರುಪೇರು ಇದಕ್ಕೆ ಮುಖ್ಯ ಕಾರಣ. ಇದೊಂದೇ ಕಾರಣವಲ್ಲ, ನಮ್ಮ ಪ್ರಾಯ ಹೆಚ್ಚಿದಂತೆ ಶರೀರದಲ್ಲಿರುವ ಸ್ನಾಯುಗಳು ನೈಸರ್ಗಿಕವಾಗಿಯೇ ಕಡಿಮೆಯಾಗುತ್ತವೆ. ಇದರ ಬದಲಿಗೆ ಕೊಬ್ಬು ತುಂಬಿಕೊಳ್ಳಬಹುದು. ಆದರೆ ಕ್ಯಾಲರಿಗಳನ್ನು ಕರಗಿಸುವ ವಿಚಾರಕ್ಕೆ ಬಂದರೆ, ಕೊಬ್ಬಿಗಿಂತ ಸ್ನಾಯುಗಳು ಹೆಚ್ಚು ಶಕ್ತಿಯನ್ನು ವ್ಯಯಿಸುತ್ತವೆ. ಹಾಗಾಗಿ ಚಯಾಪಚಯ ನಿಧಾನವಾಗಬಹುದು. ಇದಕ್ಕೆ ಸರಿಯಾಗಿ, ವ್ಯಾಯಾಮ ಮಾಡುವುದಕ್ಕೆ ಸಮಯ ಇಲ್ಲದಿದ್ದರೆ ಅಥವಾ ಜೀವನಶೈಲಿಯಲ್ಲಿ ದೋಷವಿದ್ದರೆ ತೂಕ ಇರುತ್ತದೆ ಮತ್ತು ಇಳಿಯಲು ನಿರಾಕರಿಸುತ್ತದೆ!

ಇದನ್ನು ತಡೆಯಬಹುದೇ?

ಋತುಬಂಧದ ಸಮಯದಲ್ಲಿ ಮಹಿಳೆಯರ ತೂಕ ಹೆಚ್ಚುವುದನ್ನು ತಡೆಯಬಹುದೇ? ಇದಕ್ಕೆ ಉತ್ತರವೆಂದರೆ, ತಡೆಯಬಹುದು. ಒಂದು ಅಂದಾಜಿನ ಪ್ರಕಾರ, ರಜೋನಿವೃತ್ತಿಯ ನಂತರ, ಮಹಿಳೆಯರು ವರ್ಷದಿಂದ ವರ್ಷಕ್ಕೆ 0.7 ಕೆ.ಜಿ.ಯಷ್ಟು ತೂಕ ಹೆಚ್ಚುತ್ತಾ ಹೋಗುತ್ತಾರೆ. ಇದಕ್ಕೆ ಕಡಿಮೆಯಾಗುವ ಸ್ನಾಯುಬಲ ಮತ್ತು ಹೆಚ್ಚುವ ಕೊಬ್ಬಿನಂಶಗಳೇ ಮುಖ್ಯ ಕಾರಣ. ಜೊತೆಗೆ ಹಾರ್ಮೋನಿನ ವ್ಯತ್ಯಾಸದಿಂದಾಗಿ ಸೊಂಟ, ಹೊಟ್ಟೆಗಳ ಸುತ್ತಳತೆ ಏರುತ್ತದೆ. ಆದರೆ ಸರಿಯಾದ ಆಹಾರ, ವ್ಯಾಯಾಮ ಮತ್ತು ಉಳಿದ ಜೀವನಶೈಲಿಯ ಬದಲಾವಣೆಗಳ ನೆರವಿನಿಂದ ಆರೋಗ್ಯಕರ ತೂಕದ ಮಟ್ಟದಲ್ಲೇ ಇರಬಹುದು ಎನ್ನುತ್ತಾರೆ ಸ್ತ್ರೀರೋಗ ತಜ್ಞರು.

ಇದನ್ನೂ ಓದಿ: Health Tips: ನೀವು ಕುಡಿಯುವ ಹಾಲಿನಲ್ಲಿ ಕಲಬೆರಕೆಯೇ? ಹೀಗೆ ಸುಲಭವಾಗಿ ಪತ್ತೆ ಹಚ್ಚಿ!

ಏನು ಮಾಡಬಹುದು?

ಎಲ್ಲಕ್ಕಿಂತ ಮೊದಲು, ತಿನ್ನುವ ಆಹಾರದತ್ತ ಗಮನಕೊಡಿ. ನಿಮ್ಮ ದೇಹಕ್ಕೆ 2000 ಕ್ಯಾಲರಿ ಬೇಕಿದ್ದರೆ, 1800 ಕ್ಯಾಲರಿಯ ಆಹಾರವನ್ನೇ ಸೇವಿಸಿ. ಅಂದರೆ ಕ್ಯಾಲರಿ ಖೋತಾ ಆಗುವಂತೆ ನೋಡಿಕೊಳ್ಳಿ. ಜೊತೆಗೆ, ಆರೋಗ್ಯಕರ ಕ್ಯಾಲರಿಗಳನ್ನು ಮಾತ್ರವೇ ದೇಹಕ್ಕೆ ನೀಡಿ. ಸಕ್ಕರೆ ಮತ್ತು ಜಿಡ್ಡು ಭರಿತ, ಸಂಸ್ಕರಿಸಿದ ಆಹಾರಗಳನ್ನು ದೇಹಕ್ಕೆ ನೀಡಿದಷ್ಟೂ ಸಮಸ್ಯೆ ಏರುತ್ತದೆ.

ವ್ಯಾಯಾಮ

ಇದಕ್ಕೂ ಇಷ್ಟೇ ಗಮನವನ್ನು ನೀಡಬೇಕು. ಜಿಮ್‌ಗೆ ಹೋಗಿ ಬಿಂದಿಗೆಗಟ್ಟಲೆ ಬೆವರಿಳಿಸಬೇಕು ಅಥವಾ ಹಿಮಾಲಯ ಹತ್ತುವುದಕ್ಕೆ ತರಬೇತಿ ಪಡೆಯಬೇಕು ಎಂದಲ್ಲ; ವಾರಕ್ಕೆ ೧೫೦ ನಿಮಿಷಗಳ ಮಧ್ಯಮ ಗತಿಯ ವ್ಯಾಯಾಮ ಸಾಕಾಗುತ್ತದೆ. ಇದರಲ್ಲಿ ವಾಕಿಂಗ್‌, ಜಾಗಿಂಗ್‌, ಸೈಕಲ್‌ ಹೊಡೆಯುವುದು, ಏರೋಬಿಕ್ಸ್‌, ಪಿಲಾಟೆ, ಯೋಗ, ಈಜು ಮುಂತಾದ ಯಾವುದೂ ಆಗುತ್ತದೆ. ಅಂತೂ ಪ್ರತಿ ದಿನ 30 ನಿಮಿಷ ಕಡ್ಡಾಯವಾಗಿ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ.

ನಿದ್ದೆ

ಪ್ರತಿ ದಿನ 7-8 ತಾಸಿನ ನಿದ್ದೆ ದೊರೆಯುವುದಕ್ಕೆ ಸಾಧ್ಯವೇ ನೋಡಿ. ನಿದ್ದೆಗೆಡುವುದರಿಂದ ಹಾರ್ಮೋನುಗಳ ಮಟ್ಟ ಇನ್ನಷ್ಟು ಏರುಪೇರು ಆಗುತ್ತದೆ. ಜೊತೆಗೆ ಹಸಿವನ್ನು ನಿಯಂತ್ರಿಸಿಕೊಳ್ಳುವುದಕ್ಕೂ ಕಣ್ತುಂಬ ನಿದ್ರಿಸುವುದಕ್ಕೂ ನೇರ ಸಂಬಂಧವಿದೆ. ಹಾಗಾಗಿ ತೂಕ ನಿಯಂತ್ರಿಸಬೇಕು ಎಂದರೆ ನಿದ್ದೆಗೆಡುವುದನ್ನೂ ನಿಯಂತ್ರಿಸಬೇಕು.

Exit mobile version