ಮೆನೋಪಾಸ್ (Menopause) ಅಂದ ತಕ್ಷಣ ಇದು ಮಹಿಳೆಯರಿಗೆ ಸಂಬಂಧಿಸಿದ್ದು ಅಂದುಕೊಳ್ಳುವುದು ಸಹಜ. ಯಾಕೆಂದರೆ ಮೆನೋಪಾಸ್ ಅಥವಾ ಋತುಬಂಧ ಮಹಿಳೆಯರಿಗೆ ಒಂದು ವಯಸ್ಸಿನ ನಂತರ ಆಗುವ ಸಹಜ ಕ್ರಿಯೆ ಹೌದೇ ಆದರೂ ಪುರುಷರಿಗೂ ಮೆನೋಪಾಸ್ ಆಗುತ್ತದೆ ಎಂದರೆ ನಂಬುತ್ತೀರಾ? ಹೌದು. ನಂಬಲೇಬೇಕು. ಪುರುಷರಿಗೂ ಈ ಪ್ರಕ್ರಿಯೆ ಆಗಿಯೇ ಆಗುತ್ತದೆ. ಆದರೆ, ಪುರುಷರ ಮೆನೋಪಾಸ್‌ಗೆ ಆಂಡ್ರೋಪಾಸ್ ಎನ್ನುತ್ತಾರೆ.
ಏನಿದು ಆಂಡ್ರೋಪಾಸ್ ಅಂತೀರಾ? ಸುಮಾರು 40-55ರ ವಯಸ್ಸಿನ ಸಂದರ್ಭ ಪುರುಷರ ಟೆಸ್ಟೋಸ್ಟೀರಾನ್ ಹಾರ್ಮೋನಿನ ಮಟ್ಟವು ಕಡಿಮೆಯಾಗಲಾರಂಭಿಸುತ್ತದೆ. ಕೆಲವರಲ್ಲಿ ಇದು ಬೇಗ ಕಾಣಿಸಿಕೊಂಡರೆ, ಇನ್ನೂ ಕೆಲವರಲ್ಲಿ ನಿಧಾನ. ವಯಸ್ಸಾಗುತ್ತಾ ಆಗುತ್ತಾ ನಿಧಾನವಾಗಿ ಟೆಸ್ಟೋಸ್ಟೀರಾನ್ ಉತ್ಪತ್ತಿ ಕಡಿಮೆಯಾಗುತ್ತಾ ಬರುವುದೇ ಪುರುಷರಲ್ಲಾಗುವ ಮೆನೋಪಾಸ್. ಅರ್ಥಾತ್ ಆಂಡ್ರೋಪಾಸ್. ಹಾಗಾದರೆ, ಪುರುಷರು ಈ ಸಂದರ್ಭ ಮಾಡಬೇಕಾದ್ದೇನು? ಅವರಲ್ಲಿ ಈ ಪ್ರಕ್ರಿಯೆ ಆರಂಭವಾಗುವದು ಹೇಗೆ ತಿಳಿಯುತ್ತದೆ. ಇದರ ಪರಿಣಾಮಗಳೇನು ಎಂಬಿತ್ಯಾದಿ ವಿಚಾರಗಳನ್ನು ಪುರುಷರು ತಿಳಿದಿರಬೇಕು. ಜೊತೆಗೆ ಈ ಸಂದರ್ಭ ಪುರುಷರು ತಮ್ಮ ಆರೋಗ್ಯದ ವಿಚಾರದಲ್ಲಿ ಗಮನ ಕೊಡಬೇಕಾದ್ದೇನು ಎಂಬುದನ್ನು ನೋಡೋಣ.
ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಿ: ನಿಯಮಿತ ವ್ಯಾಯಾಮ, ಸಮತೋಲಿತ ಆಹಾರ, ಅತಿಯಾಗಿ ಆಲ್ಕೋಹಾಲ್ ಸೇವನೆ ಮಾಡದೆ ಇರುವುದು, ಸಿಗರೇಟು ಮತ್ತಿತರ ದುರಭ್ಯಾಸಗಳಿಂದ ದೂರ ಇರುವುದು ಒಳ್ಳೆಯದು. ಇವೆಲ್ಲವೂ ಆಂಡ್ರೋಪಾಸ್‌ಗೆ ಕಾಲಿಟ್ಟ ಮೇಲೆ ದೇಹದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಹಾರ್ಮೋನಿನ ಮಟ್ಟವನ್ನು ಆಗಾಗ ಗಮನ ಇಡಿ
ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಂಡು ಸಲಹೆ ಪಡೆಯಿರಿ. ಹಾರ್ಮೋನಿನ ಏರುಪೇರು ಹೆಚ್ಚು ಮಾನಸಿಕವಾಗಿಯೂ ಪರಿಣಾಮ ಬೀರುತ್ತದೆ: ಮಾನಸಿಕ ಏರುಪೇರುಗಳು, ಒತ್ತಡ, ಮಾನಸಿಕವಾಗಿ ಕುಗ್ಗುವುದು, ವೃತ್ತಿಜೀವನದ ಸಮಸ್ಯೆಗಳೂ ಜೊತೆಯಲ್ಲಿ ಸೇರಿ ಮಾನಸಿಕವಾಗಿ ಹೈರಾಣು ಮಾಡುವುದು ಇತ್ಯಾದಿಗಳು ಆಗುವುದು ಹೆಚ್ಚು. ಹೀಗಾಗಿ, ಈ ವಯಸ್ಸನಲ್ಲಿ ಆದಷ್ಟು ಮನಸ್ಸನ್ನು ಶಾಂತಿಯಿಂದ ಇಟ್ಟುಕೊಳ್ಳಲು ಧ್ಯಾನ, ಆಧ್ಯಾತ್ಮ ಅಥವಾ ತಮ್ಮ ಪ್ರೀತಿಪಾತ್ರರ ಜೊತೆಗೆ ಸಮಯ ಕಳೆಯುವುದು, ಗೆಳೆಯರ ಭೇಟಿ ಇತ್ಯಾದಿಗಳನ್ನು ಮಾಡುವ ಮೂಲಕ ಮಾನಸಿಕ ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವುದನ್ನು ಕಲಿಯಿರಿ.
ಸಂಗಾತಿಯೊಂದಿಗೆ ಪ್ರೀತಿಯಿಂದಿರಿ
ಲೈಂಗಿಕವಾಗಿ ಸಕ್ರಿಯರಾಗಿರಿ. ಈ ಕುರಿತು ಏನೇ ಸಮಸ್ಯೆಗಳಿದ್ದೂ ಇಬ್ಬರೂ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಿರಿ.
ಆಂಡ್ರೋಪಾಸ್ ಪರಿಣಾಮ?
ತಲೆಸುತ್ತುವಿಕೆ, ಸುಸ್ತು, ಲೈಂಗಿಕಾಸಕ್ತಿ ಇಲ್ಲದಿರುವುದು, ಲೈಂಗಿಕ ನಿಃಶಕ್ತಿ ಮತ್ತಿತರ ಸಮಸ್ಯೆಗಳು ಕಾಣಿಸಿಕೊಂಡಾಗ ವೈದ್ಯರ ನೆರವು ಪಡೆಯಿರಿ.
ಆರೋಗ್ಯ ತಪಾಸಣೆ ಮಾಡಿಕೊಳ್ಳಿ
ಈ ವಯಸ್ಸಿನಲ್ಲಿ ಆಗಾಗ ಆರೋಗ್ಯ ತಪಾಸಣೆ ಅತ್ಯಂತ ಅಗತ್ಯ. ಪೋಷಕಾಂಶಗಳ ಕೊರತೆಯಿದ್ದರೆ ವೈದ್ಯರ ಸಲಹೆಯ ಮೇರೆಗೆ ಅಗತ್ಯ ಪೋಷಕಾಂಶಗಳ ಸೇವನೆಗೆ ಸೂಕ್ತ ಔಷಧಿಗಳನ್ನು ಪಡೆಯಿರಿ.
ನಿಮ್ಮ ಕಾಳಜಿ ನೀವು ಮಾಡಿಕೊಳ್ಳಿ
ನಿಮ್ಮ ಮನೆಯ ನಿಮ್ಮ ಸಂಗಾತಿಯೂ ಕೂಡಾ ಇಂತಹ ಸಮಸ್ಯೆಗಳಿಗೆ ಒಳಗಾಗುವುದರಿಂದ ನಿಮ್ಮ ಕಾಳಜಿಯನ್ನೂ ಆಕೆ ಮಾಡಬೇಕೆಂಬ ನಿಯಮ ಹಾಕಿಕೊಳ್ಳಬೇಡಿ. ನಿಮ್ಮ ಸಂಗಾತಿಯ ಯೋಗ ಕ್ಷೇಮ ವಿಚಾರಿಸಿಕೊಳ್ಳುತ್ತಾ, ನಿಮ್ಮ ಆರೋಗ್ಯವನ್ನೂ ನೀವೇ ಹೆಚ್ಚಿಸುವ ಜೀವನ ಶೈಲಿ ರೂಪಿಸಿಕೊಳ್ಳಿ. ಪರಸ್ಪರ ಪ್ರೀತಿ- ಸಹಕಾರಗಳಿಂದ ಈ ವಯಸ್ಸನ್ನು ಸ್ವಾಗತಿಸಿ.
ಇದನ್ನೂ ಓದಿ: Sleep In The Winter: ಚಳಿಗಾಲದಲ್ಲಿ ನಿದ್ದೆ ಮುಗಿಯುವುದೇ ಇಲ್ಲವೇಕೆ?