ಬದಲಾದ ಜೀವನಕ್ರಮ, ಬದಲಾದ ವಾತಾವರಣ, ನಗರ ಜೀವನ, ಒತ್ತಡ ಇವೆಲ್ಲವೂ ಇಂದು ಮನುಷ್ಯನ ದೇಹ ಪ್ರಕೃತಿಯ ಮೇಲೂ ಪರಿಣಾಮ ಬೀರುತ್ತಿವೆ. ಮಹಿಳೆಯ ಮೆನೋಪಾಸ್ ಅಥವಾ ಋತುಬಂಧವೂ ಕೂಡಾ ಇಂದು ಇಂತಹ ಅನೇಕ ಕಾರಣಗಳಿಂದಾಗಿ ಬಹುಬೇಗನೆ ಆಗುತ್ತಿದೆ. ಹಲವರಲ್ಲಿ ನಲವತ್ತನ್ನು ತಲುಪುವ ಮೊದಲೇ ಮೆನೋಪಾಸ್ ಪೂರ್ವ ಲಕ್ಷಣಗಳು ಗೋಚರಿಸುತ್ತಿವೆ. ಮೆನೋಪಾಸ್ ಮಹಿಳೆಯ ಆರೋಗ್ಯದ ಸಾಮಾನ್ಯ ಘಟ್ಟವೇ ಆಗಿದ್ದರೂ ಈ ಸಂದರ್ಭ ಬಹಳಷ್ಟು ಸಾರಿ ವೈದ್ಯರ ನೆರವು, ಸುತ್ತಲಿನವರ ಕಾಳಜಿ ಪ್ರೀತಿಯೂ ಬೇಕಾಗುತ್ತದೆ. ಯಾವೆಲ್ಲ ಲಕ್ಷಣಗಳ ಮೂಲಕ, ಪ್ರತಿ ಮಹಿಳೆ ತನ್ನ ಮೆನೋಪಾಸ್ ಸಮೀಪಿಸುತ್ತಿದೆ ಎಂಬುದನ್ನು ಹೇಗೆ ತಿಳಿದುಕೊಳ್ಳಬಹುದು (Menopause) ಎಂಬುದನ್ನು ನೋಡೋಣ.
ಸಮತೋಲನ ತಪ್ಪಿದ ಋತುಚಕ್ರ
ಪೀರಿಯಡ್ಸ್ ಅಥವಾ ಮಾಸಿಕ ಋತುಚಕ್ರದ ಕ್ರಮ ಬದಲಾಗಬಹುದು. ಪೀರಿಯಡ್ ನಡುವಿನ ಅಂತರ ಕಡಿಮೆಯಾಗಬಹುದು. ರಕ್ತಸ್ರಾವದಲ್ಲಿ ಏರಿಳಿತವಾಗಬಹುದು ಅಥವಾ, ಕಡಿಮೆ ರಕ್ತಸ್ರಾವವಾಗಬಹುದು, ಹೆಚ್ಚಾಗಬಹುದು. ಅಥವಾ ಮಾಸಿಕ ಋತುಸ್ರಾವ ತಪ್ಪಬಹುದು. ಹಾಗಾಗಿ, ಇಂತಹ ಸಮಸ್ಯೆ ನಿಮ್ಮ ಗಮನಕ್ಕೆ ಬರುತ್ತಿದೆ ಎಂದಾದಲ್ಲಿ, ಇವೆಲ್ಲವನ್ನೂ ಒಂದು ಡೈರಿಯಲ್ಲಿ ಬರೆದಿಟ್ಟುಕೊಂಡು ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಸೆಖೆಯೋ ಸೆಖೆ
ವಾತಾವರಣ ತಂಪಾಗಿದ್ದರೂ, ನಿಮಗೆ ಮಾತ್ರ ಇದ್ದಕ್ಕಿದ್ದಂತೆ ಸೆಖೆಯಾಗಬಹುದು. ಬೆವರಿಳಿಯಬಹುದು. ರಾತ್ರಿ ಮಲಗಿದ ಸಂದರ್ಭ ಇದ್ದಕ್ಕಿಂದ್ದಂತೆ ವಿಪರೀತ ಸೆಖೆಯಾಗಿ ನಿದ್ದೆಗೆಡಬಹುದು. ಇದಕ್ಕಾಗಿ, ನಿಮ್ಮ ಮಲಗುವ ಕೋಣೆಯನ್ನು ತಂಪಾಗಿಡಿ. ಜೊತೆಗೆ ಮಸಾಲೆ ಪದಾರ್ಥಗಳು ಹಾಗೂ ಕೆಫಿನ್‌ಯುಕ್ತ ಆಹಾರದಿಂದ ದೂರವಿರಿ.
ನಿದ್ದೆಯ ಸಮಸ್ಯೆ
ಮಲಗಿದ ಮೇಲೆ ನಿದ್ದೆಗೆ ಜಾರಲು ಬಹಳ ಸಮಯ ಬೇಕಾಗಬಹುದು. ನಿದ್ದೆ ಬರುತ್ತಿದೆ ಎನಿಸಿದರೂ ಬಹಳ ಹೊತ್ತಿನವರೆಗೆ ನಿದ್ದೆ ಹತ್ತಿರ ಸುಳಿಯದು. ಹೀಗಾಗುತ್ತಿದ್ದರೆ, ಒಂದು ನಿಗದಿತ ಸಮಯಕ್ಕೆ ನಿದ್ದೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಕೆಫಿನ್ ಹಾಗೂ ಗ್ಯಾಜೆಟ್‌ಗಳಿಂದ ದೂರವಿರಿ.
ಮೂಡ್ ಬದಲಾವಣೆ
ಇದ್ದಕ್ಕಿದ್ದಂತೆ ಅನಗತ್ಯವಾಗಿ ಉದ್ವೇಗ, ಸಿಟ್ಟು, ಹತಾಶೆ, ಬೇಸರ ಇತ್ಯಾದಿ ಭಾವನೆಗಳು ಕೆಲವೊಮ್ಮೆ ಒತ್ತಾಗಿ ಬರಬಹುದು. ಕಾರಣವಿಲ್ಲದೆ ಬೇಸರದ ಛಾಯೆ ಕವಿದಿರಬಹುದು. ಅನಗತ್ಯವಾಗಿ ನಿಮ್ಮ ಪ್ರೀತಿಪಾತ್ರರ ಸಣ್ಣ ನಡೆಯೂ ಸಿಟ್ಟು ತರಿಸಬಹುದು. ಇದ್ದಕ್ಕಿದ್ದಂತೆ ಬೇರೊಬ್ಬರ ಮೇಲೆ ರೇಗುವುದು ಇತ್ಯಾದಿ ಮೂಡ್ ಬದಲಾವಣೆಯೂ ಮೆನೋಪಾಸ್ ಹತ್ತಿರ ಬರುತ್ತಿರುವುದರ ಕಾರಣಗಳೇ ಆಗಿವೆ. ನಿಮ್ಮ ಪ್ರೀತಿಪಾತ್ರರ ಬಳಿಯಲ್ಲಿ ಈ ಬಗ್ಗೆ ಚರ್ಚಿಸಿ, ವೈದ್ಯರಿಂದ ಸರಿಯಾದ ಸಲಹೆ ಮಾರ್ಗದರ್ಶನ ಪಡೆಯಿರಿ.
ಲೈಂಗಿಕ ನಿರಾಸಕ್ತಿ
ಸಂಗಾತಿಯ ಜೊತೆಗೆ ಸರಸ ಸಲ್ಲಾಪದಲ್ಲಿ ಆಸಕ್ತಿ ಇಲ್ಲದಿರುವುದು, ಅವರ ಕೋರಿಕೆ ಕಿರಿಕಿರಿಯಾಗುವುದು, ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಸಂಪೂರ್ಣವಾಗಿ ಕಡಿಮೆಯಾಗುವುದು ಇತ್ಯಾದಿಗಳೂ ಕೂಡಾ ಮೆನೋಪಾಸ್ ಪೂರ್ವ ಲಕ್ಷಣಗಳೇ ಆಗಿವೆ.
ಯೋನಿಯಲ್ಲಿ ತುರಿಕೆ
ಯೋನಿ ಒಣಗಿದಂತಾಗುವುದು, ಆ ಭಾಗದಲ್ಲಿ ತುರಿಕೆ ಇತ್ಯಾದಿ ಸಮಸ್ಯೆಗಳೂ ಮೆನೋಪಾಸ್ ಸಂದರ್ಭದಲ್ಲಿ ಆಗುವ ಸಂಭವ ಹೆಚ್ಚು. ಯೋನಿಗೆ ಹಚ್ಚಬಹುದಾದ ಲುಬ್ರಿಕೆಂಟ್‌ಗಳು, ಮುಲಾಮುಗಳು, ಮಾಯ್‌ಶ್ಚರೈಸರ್‌ಗಳನ್ನು ವೈದ್ಯರಿಂದ ಕೇಳಿ ಪಡೆಯುವ ಮೂಲಕ ಸಮಸ್ಯೆಯಿಂದ ಪಾರಾಗಬಹುದು. ರಾಸಾಯನಿಕಯುಕ್ತ ಸಾಬೂನುಗಳಿಂದ ಆ ಭಾಗವನ್ನು ಅತಿಯಾಗಿ ತೊಳೆಯುವುದು ಇತ್ಯಾದಿ ಮಾಡಬೇಡಿ. ಹೆಚ್ಚು ನೀರು ಕುಡಿಯುವುದು ಬಹಳ ಮುಖ್ಯ.
ಸ್ಮರಣ ಶಕ್ತಿ ಕುಂಠಿತ
ಸ್ಮರಣ ಶಕ್ತಿ ಕಡಿಮೆಯಾಘುವುದು, ತಾನು ಮಾಡಬೇಕಾದ ಕೆಸ ಕೆಲವೊಮ್ಮೆ ಮರೆತು ಹೋಗುವುದು ಇತ್ಯಾದಿಗಳೂ ಕೂಡಾ ಮೆನೋಪಾಸ್ ಪೂರ್ವ ಲಕ್ಷಣಗಳೇ. ಹೀಗಾಗಿ, ಮಾಡಬೇಕಾದ ಕೆಲಸಗಳು ಹಾಗೂ ಮರೆತು ಹೋಗಬಹುದು ಎಂಬುದನ್ನು ಡೈರಿಯಲ್ಲಿ ಬರೆದಿಟ್ಟುಕೊಂಡು ಕ್ರಮಬದ್ಧವಾಗಿ ಕೆಲಸ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ.
ತೂಕ ಹೆಚ್ಚಾಗುವುದು
ಮೆನೋಪಾಸ್ ಹತ್ತಿರ ಬರುತ್ತಿದ್ದಂತೆ ಬಹಳಷ್ಟು ಮಹಿಳೆಯಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಎಂದರೆ ತೂಕ ಹೆಚ್ಚಾಗುವುದು. ಹೊಟ್ಟೆಯ ಹಾಗೂ ಸೊಂಟದ ಭಾಗದಲ್ಲಿ ತೂಕ ಏರುವುದು ಸಮಸ್ಯೆಯ ಭಾಗ. ಆರೋಗ್ಯಕರ ಆಹಾರ ಶೈಲಿ, ಹಣ್ಣು ತರಕಾರಿ ಸೊಪ್ಪು ಮೊಳಕೆ ಕಾಳುಗಳೂ ಸೇರಿದಂತೆ ಕ್ಯಾಲ್ಶಿಯಂಯುಕ್ತ ಆಹಾರವನ್ನು ಸೇವಿಸಿ. ವ್ಯಾಯಾಮವೂ ಬಹಳ ಮುಖ್ಯ.
ದೇಹದಲ್ಲಿ ಬಿಗು, ಮಾಂಸಖಂಡಗಳ ನೋವು
ಮಾಂಸಖಂಡಗಳ ಸೆಳೆತ, ನೋವು, ಗಂಟುಗಳಲ್ಲಿ ಬಿಗುತನ, ಸುಸ್ತಾಗುವಿಕೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಯಮಿತ ವ್ಯಾಯಾಮ, ಚುರುಕಾಗಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಸರಿಯಾದ ಆಹಾರ ಕ್ರಮ ಇತ್ಯಾದಿಗಳ ಅಭ್ಯಾಸ ಬಿಡಬೇಡಿ. ವಿಟಮಿನ್ ಡಿ, ಕ್ಯಾಲ್ಶಿಯಂ, ಹಾಗೂ ಇತರ ಪೋಷಕಾಂಶಗಳ ಕೊರತೆಯಿದೆಯೇ ಎಂಬ ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಸೂಕ್ತ ನೆರವಿನೊಂದಿಗೆ ಮುಂದುವರಿಯಿರಿ.
ಇದನ್ನೂ ಓದಿ: Personality Development: ಈ 10 ಸೂತ್ರ ಪಾಲಿಸಿದರೆ ನೆಮ್ಮದಿಯ ಬದುಕು ಗ್ಯಾರಂಟಿ!
ಕೂದಲು, ಚರ್ಮದ ಸಮಸ್ಯೆ
ಕೂದಲು ಉದುರುವಿಕೆ, ಸರ್ಮ ಒಣಕಲಾಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಚರ್ಮ ಹಾಗೂ ಕೂದಲಲ್ಲಿ ನಿಮಗೆ ಗಣನೀಯ ಬದಲಾವಣೆ ಗೋಚರಿಸಬಹುದು. ಚೆನ್ನಾಗಿ ನೀರು ಕುಡಿಯಿರಿ. ಸೂರ್ಯನ ಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಿ. ವ್ಯಾಯಾಮ, ನಿದ್ದೆ ಇವು ಸರಿಯಾಗಿ ಮಾಡಿ. ಕೂದಲು ಹಾಗೂ ಚರ್ಮದ ಪೋಷಣೆಯ ಕಾಳಜಿ ಮಾಡಿಕೊಳ್ಳಿ.